ಕೆ.ಎಂ.ಮಂಜುನಾಥ್
ಬಳ್ಳಾರಿ (ಡಿ.21) :\ ನಗರದಲ್ಲಿ ವ್ಯಾಪಾರ, ಉದ್ಯಮ ನಡೆಸುತ್ತಿದ್ದ ರಾಜಸ್ಥಾನ, ಗುಜರಾತ್ ಮೂಲದ ಉದ್ಯಮಿಗಳು ತಮ್ಮ ಮಕ್ಕಳಿಗೆ ವಧು ಸಿಗುತ್ತಿಲ್ಲವೆನ್ನುವ ಕಾರಣಕ್ಕೆ ತವರಿನತ್ತ ಮುಖ ಮಾಡಿದ್ದಾರೆ! ರಾಜಸ್ಥಾನ, ಗುಜರಾತ್‌ನ ಮಾರ್ವಾಡಿಗಳು, ಜೈನ್‌ರು ಮತ್ತು ಇತರರು ದೂರದ ಊರುಗಳಲ್ಲಿರುವ ತಮ್ಮವರಿಗೇ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರಂತೆ. ಈ ಮೊದಲಿನಿಂದಲೂ ನಿಧಾನವಾಗಿ ಇದು ಜಾರಿಯಲ್ಲಿದ್ದರೂ, ಕೊರೋನಾ ನಂತರ ಇನ್ನಷ್ಟುತೀವ್ರತೆ ಪಡೆದಿದೆ. ಇಲ್ಲಿ ಹೆಣ್ಣು ಸಿಗುತ್ತಿಲ್ಲ ಎಂಬ ಗಂಭೀರ ಸಮಸ್ಯೆಯಿಂದಾಗಿಯೇ ಊರು ತೊರೆಯುತ್ತಿದ್ದಾರೆ.
undefined
ಯಪ್ಪಾ..ಅತ್ತೆ ಮನೇಲಿ ಸಿಕ್ಕಾಪಟ್ಟೆ ನೊಣದ ಕಾಟ, ತವರು ಮನೆಗೆ ನವ ವಧು ರಿಟರ್ನ್ !
ಇಲ್ಲಿನ ವ್ಯಾಪಾರಿ ಮೂಲಗಳೇ ಹೇಳುವ ಪ್ರಕಾರ ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲಿಯೇ 15ಕ್ಕೂ ಹೆಚ್ಚು ಉದ್ಯಮಿಗಳು ಹಾಗೂ 100ಕ್ಕೂ ಹೆಚ್ಚು ವ್ಯಾಪಾರಿಗಳು ಬಳ್ಳಾರಿ ತೊರೆದು ಸ್ವಂತ ರಾಜ್ಯಗಳಿಗೆ ಮರಳಿದ್ದಾರೆ. ಇನ್ನು ಕೆಲ ಉದ್ಯಮಿಗಳು ಬೆಂಗಳೂರು, ಹೈದ್ರಾಬಾದ್ ಮತ್ತಿತರ ಕಡೆಗಳಿಗೆ ವಾಸಿಸಲು ನಿರ್ಧರಿಸಿದ್ದಾರೆ. ಸ್ವಂತ ರಾಜ್ಯಗಳಿಗೆ ಮರಳುತ್ತಿರುವವರ ಪೈಕಿ ಮಾರ್ವಾಡಿಗಳೇ ಹೆಚ್ಚು. ತೀರಾ ಸಣ್ಣಪುಟ್ಟಕೆಲಸಗಳನ್ನು ಮಾಡಿಕೊಂಡಿರುವವರು ಮಾತ್ರ ನಗರದಲ್ಲಿ ಉಳಿದುಕೊಳ್ಳುತ್ತಿದ್ದಾರೆ.
ಯುವಕರ ಆತಂಕ:
ಹುಡುಗ ಸ್ಫುರದ್ರೂಪಿ, ವಿದ್ಯಾವಂತ ಹಾಗೂ ಸ್ವಯಂ ಉದ್ಯೋಗದ ಮೂಲಕ ವಾರ್ಷಿಕ ಕೋಟ್ಯಂತರ ರು. ವಹಿವಾಟು ನಡೆಸುತ್ತಿದ್ದಾನೆ. ಇಷ್ಟೆಲ್ಲ ಅರ್ಹತೆ, ಯೋಗ್ಯತೆ ಇದ್ದರೂ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ. ಇದು ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರು ಹಾಗೂ ಹೈದ್ರಾಬಾದ್‌ನಲ್ಲಿ ನೆಲೆಸಿರುವವರು ಸಹ ಜಿಲ್ಲಾ ಕೇಂದ್ರಗಳಿಗೆ ಹೆಣ್ಣು ಮಕ್ಕಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಗಂಡು ಹೆತ್ತ ಪೋಷಕರಲ್ಲಿ ಆತಂಕ ಹುಟ್ಟಿಸಿದೆ. ಹಾಗಾಗಿ ಉದ್ಯಮವನ್ನು ಸ್ವಂತ ರಾಜ್ಯಗಳಿಗೆ ಶಿಫ್‌್ಟಮಾಡಿಕೊಳ್ಳುತ್ತಿದ್ದಾರೆ. ಜೈಪುರ, ಜೋಧಪುರ ಹಾಗೂ ಅಹಮದಾಬಾದ್‌ನತ್ತ ಹೆಚ್ಚು ದ್ಯಮಿಗಳು ಹೋಗುತ್ತಿದ್ದಾರೆ.
ಎಲ್ಲ ಸಮುದಾಯಗಳಲ್ಲಿ ಇರುವಂತೆ ರಾಜಸ್ಥಾನ ಹಾಗೂ ಗುಜರಾತ್ ಮೂಲದ ಜೈನ್ ಹಾಗೂ ಇತರೆ ಸಮುದಾಯಗಳಲ್ಲೂ ಹೆಣ್ಣಿನ ಅನುಪಾತದಲ್ಲಿ ಕುಸಿತವಿದೆ. ಬಳ್ಳಾರಿಯಲ್ಲಿ ಅನೇಕ ದಶಕಗಳಿಂದ ನೆಲೆಸಿರುವ ರಾಜಸ್ಥಾನ ಹಾಗೂ ಗುಜರಾತ್ ಮೂಲದವರು ಗಾರ್ಮೆಂಟ್ಸ್ ಮತ್ತಿತರ ಉದ್ಯಮದಲ್ಲಿ ಯಶಸ್ವಿಗೊಂಡು ನೂರಾರು ಕೋಟಿ ರು.ಗಳ ಒಡೆಯರಾಗಿದ್ದಾರೆ. ವಿದ್ಯಾವಂತ ಮಕ್ಕಳಿಗೆ ಸೂಕ್ತ ವಧು ಸಿಗುತ್ತಿಲ್ಲ. ಗುಜರಾತ್ ಹಾಗೂ ರಾಜಸ್ಥಾನದಲ್ಲಿರುವ ಉದ್ಯಮಿಗಳು ದೂರದ ಊರು ಎಂಬ ಕಾರಣಕ್ಕೆ ಈ ಭಾಗದವರಿಗೆ ಹೆಣ್ಣು ಕೊಡುವುದಿಲ್ಲ. ಇನ್ನು ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ಮಹಾನಗರಗಳಲ್ಲಿರುವ ಉದ್ಯಮಿಗಳು ಸಹ ಜಿಲ್ಲಾ ಕೇಂದ್ರಗಳಿಗೆ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡಲು ಹಿಂದೇಟು ಹಾಕುತ್ತಿದ್ದಾರೆ. ಮಹಾನಗರದ ಲೈಫ್‌ಸ್ಟೈಲ್‌ಗೆ ಒಗ್ಗಿಕೊಂಡಿರುವ ಹೆಣ್ಣು ಮಕ್ಕಳನ್ನು ಜಿಲ್ಲಾ ಕೇಂದ್ರಕ್ಕೆ ಮದುವೆ ಮಾಡಿಕೊಟ್ಟರೆ ಹೊಂದಿಕೊಳ್ಳುವುದಿಲ್ಲ. ಇದರಿಂದ ಕುಟುಂಬದಲ್ಲಿ ಇತರೆ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಹೆಣ್ಣು ಕೊಡಲು ಸುತಾರಾಂ ಒಪ್ಪುವುದಿಲ್ಲ. ಹೀಗಾಗಿ ಜಿಲ್ಲಾ ಕೇಂದ್ರಗಳಲ್ಲಿ ಎಷ್ಟೇ ದೊಡ್ಡ ಉದ್ಯಮಿಯಾಗಿದ್ದರೂ ಗಂಡು ಮಕ್ಕಳಿಗೆ ಮದುವೆ ಮಾಡಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಇದು ನಗರ ತೊರೆದು ಮಹಾನಗರಕ್ಕೆ ವಲಸೆ ಹೋಗಲು ಪ್ರಮುಖ ಕಾರಣವೂ ಆಗಿದೆ.
11 ಲಕ್ಷ ರೂ. ವರದಕ್ಷಿಣೆಯನ್ನು ವಧುವಿನ ಪೋಷಕರಿಗೇ ಹಿಂತಿರುಗಿಸಿದ ವರ !
ಮದುವೆಗೆ ವಧು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಬಹುತೇಕರು ಬಳ್ಳಾರಿ ತೊರೆಯುತ್ತಿರುವುದು ಭಾಗಶಃ ಸತ್ಯ. ಆದರೆ, ಇದರ ಜೊತೆಗೆ ಬಳ್ಳಾರಿಯಲ್ಲಿ ಗಾರ್ಮೆಂಟ್ಸ್ ಉದ್ಯಮ ಬಹುತೇಕ ನೆಲಕಚ್ಚಿದೆ. ಇದು ಸಹ ಇಲ್ಲಿನ ಉದ್ಯಮಿಗಳು ಹಾಗೂ ವ್ಯಾಪಾರಿಗಳು ಊರು ತೊರೆಯುವುದಕ್ಕೆ ಕಾರಣವಾಗಿದೆ.
ಸಂತೋಷ್ ಜೈನ್, ಉದ್ಯಮಿ, ಬಳ್ಳಾರಿ.
ಬಳ್ಳಾರಿಯಲ್ಲಿ ಜೈನ್ ಸಮುದಾಯ ಅನೇಕ ದಶಕಗಳಿಂದ ವಾಸಿಸುತ್ತಿದ್ದಾರೆ. ಇಲ್ಲಿನ ಉದ್ಯಮಿಗಳ ಮಕ್ಕಳು ವಿದೇಶದಲ್ಲಿ ಓದಿ ಬಂದು ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರಿಗೆ ತಕ್ಕ ವಧು ಸ್ಥಳೀಯವಾಗಿ ಸಿಗುವುದಿಲ್ಲ. ಅಹಮದಾಬಾದ್, ಬೆಂಗಳೂರುನಂತಹ ಊರುಗಳಿಂದ ಬಳ್ಳಾರಿಗೆ ಹೆಣ್ಣು ಕೊಡಲು ಯಾರೂ ಒಪ್ಪುವುದಿಲ್ಲ.
ರಾಹುಲ್‌ಜೈನ್, ವ್ಯಾಪಾರಿ, ಬಳ್ಳಾರಿ.