
ಸಾರ್ವಜನಿಕ ಸ್ಥಳಗಳಲ್ಲಿ ಮಗುವಿಗೆ ಹಾಲುಣಿಸುವುದು ಮಹಿಳೆಗೆ ದೊಡ್ಡ ಸವಾಲೇ ಸರಿ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯವಿಲ್ಲದಿದ್ದರೆ ಆಕೆಯ ಕಷ್ಟ ಹೇಳೋದೆ ಬೇಡ. ಎಲ್ಲಿಯಾದರೂ ಕದ್ದು ಮುಚ್ಚಿ ಕುಳಿತುಕೊಂಡು ಕಷ್ಟಪಟ್ಟು ಮಗುವಿಗೆ ಹಾಲುಣಿಸಬೇಕಾದ ಪರಿಸ್ಥಿತಿ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತಾಯಿ ತನ್ನ ಮಗುವಿಗೆ ಸಾರ್ವಜನಿಕವಾಗಿ ಸ್ತನಪಾನ ಮಾಡುವುದು ನೈಸರ್ಗಿಕ ಹಾಗೂ ಸಹಜ ಪ್ರಕ್ರಿಯೆ ಆಗಿದ್ದರೂ ಭಾರತದಲ್ಲಿ ಇನ್ನೂ ಅಂಥ ವಾತಾವರಣ ಸೃಷ್ಟಿಯಾಗಿಲ್ಲ. ಮಹಿಳೆಯರು ಸಾರ್ವಜನಿಕ ಪ್ರದೇಶದಲ್ಲಿ ಮುಜುಗರಪಡುತ್ತಲೇ ಮಗುವಿಗೆ ಹಾಲುಣಿಸುತ್ತಾರೆ. ಸಾರ್ವಜನಿಕವಾಗಿ ತಾಯಿ ಮಗುವಿಗೆ ಸ್ತನಪಾನ ಮಾಡುವುದನ್ನು ಲೈಂಗಿಕತೆಯ ದೃಷ್ಟಿಕೋನದಿಂದ ಹೊರಗಿಡಬೇಕು ಎಂಬ ಉದ್ದೇಶದಿಂದ ನಮ್ಮ ದೇಶದಲ್ಲಿ ಕೈಗೊಂಡ ಎಲ್ಲ ಪ್ರಗತಿಪರ ಪ್ರಯತ್ನಗಳು ಬಹುತೇಕ ಸಂದರ್ಭಗಳಲ್ಲಿ ಟೀಕೆಗೆ ಗುರಿಯಾಗಿವೆ.
ಭಾರತೀಯ ಮಹಿಳೆಯರು ಸಾರ್ವಜನಿಕವಾಗಿ ಸ್ತನಪಾನ (Breastfeeding) ಮಾಡಲು ಹಿಂಜರಿಯುತ್ತಾರೆ. ಬಸ್, ಟ್ರೈನ್ ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಅಥವಾ ದೇವಾಲಯ, ಹೋಟೆಲ್, ಶಾಪಿಂಗ್ ಮಾಲ್‌ಗಳಿಗೆ ಭೇಟಿ ನೀಡಬೇಕಾದ ಸಂದರ್ಭಗಳಲ್ಲಿ ಹಸಿವಿನಿಂದ ರಚ್ಚೆ ಹಿಡಿದು ಅಳುವ ಪುಟ್ಟ ಕಂದಮ್ಮಗಳನ್ನು (Children) ಸುಮ್ಮನಿರಿಸಲು ತಾಯಂದಿರು ಎದೆಹಾಲುಣಿಸುವುದು ಅನಿವಾರ್ಯ. ಆದರೆ, ಹಾಲುಣಿಸುವಾಗ ಯಾರಾದರೂ ನೋಡಿದರೆ ಎಂಬ ಭಯ, ಮುಜುಗರ ಕಾಡುತ್ತದೆ. ಹೀಗಿರುವಾಗ ಇಲ್ಲೊಬ್ಬ ಮಹಿಳೆ (Woman) ಮಗುವಿಗೆ ಹಾಲುಣಿಸುವುದು ನಾರ್ಮಲ್, ಮುಜುಗರ ಪಡುವ ವಿಷಯವಲ್ಲ ಎಂದು ಸಂದೇಶ ಸಾರಿದ್ದು ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ವೀಡಿಯೋಗೆ 40 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ.
ಎದೆಹಾಲುಣಿಸುವ ಕಷ್ಟ ಸುಖ;ಬ್ರೆಸ್ಟ್ ಫೀಡಿಂಗ್ ಅಂದ್ರೆ ಸುಮ್ಮನೆ ಅಲ್ಲ!
ಸಾರ್ವಜನಿಕ ಸ್ಥಳದಲ್ಲಿ ಮಗುವಿಗೆ ಹಾಲುಣಿಸಲು ಮುಜುಗರ ಯಾಕೆ?
ಇನ್ಸ್ಟಾಗ್ರಾಂನಲ್ಲಿ ಮಾಡಿರೋ ಪೋಸ್ಟ್‌ನಲ್ಲಿ ಮಹಿಳೆ, 'ನಾನು ಒಮ್ಮೆ ರೆಸ್ಟೋರೆಂಟ್‌ಗೆ ಹೋಗಿದ್ದೆ. ಇಲ್ಲಿ ನನ್ನ ಮಗು ಹಸಿವಿನಿಂದ ರಚ್ಚೆ ಹಿಡಿದು ಅಳಲು ಪ್ರಾರಂಭಿಸಿತು. ನಾನು ಅವಳಿಗೆ ಅಲ್ಲಿಯೇ ಹಾಲುಣಿಸಲು ಮುಂದಾದೆ. ಆದರೆ ರೆಸ್ಟೋರೆಂಟ್ ಸಿಬ್ಬಂದಿ, ನಾನು ವಾಶ್‌ರೂಮ್‌ಗೆ ಹೋಗಿ ಮಗುವಿಗೆ ಹಾಲುಣಿಸುವಂತೆ ಸೂಚಿಸಿದರು. ಆದರೆ ವಾಶ್‌ರೂಮ್‌ನಲ್ಲಿ ನಾನು ಹೇಗೆ ಮಗುವಿಗೆ ಹಾಲುಣಿಸುವುದು ಎಂದು ಚಿಂತಿತಳಾದೆ. ನಾನು ಹಾಗೆ ಮಾಡಲ್ಲಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ (Public places) ಸ್ತನ್ಯಪಾನ ಮಾಡುವುದು ಹೇಗೆ ಕೆಟ್ಟದಾಗಿದೆ ಎಂದು ನನಗೆ ಅರ್ಥವಾಗಲ್ಲಿಲ್ಲ. ಆ ನಂತರ ನಾನು ಸಾರ್ವಜನಿಕವಾಗಿ ಬ್ರೆಸ್ಟ್ ಫೀಡ್ ಮಾಡಲು ತೀರ್ಮಾನಿಸಿದೆ' ಎಂದು ಹೇಳಿದ್ದಾರೆ.
'ನಾನು ನನ್ನ ಎರಡೂ ಮಕ್ಕಳಿಗೆ ಜೊತೆಯಲ್ಲೇ ಸ್ತನ್ಯಪಾನ ಮಾಡುತ್ತೇನೆ. ನನ್ನ 11 ತಿಂಗಳ ಮಗನ ಜೊತೆಗೆ ನಾನು ನನ್ನ 3 ವರ್ಷದ ಮಗಳಿಗೂ ಜೊತೆಗೆ ಹಾಲುಣಿಸುತ್ತೇನೆ. ಹೆಚ್ಚಿನ ಜನರು ಇದನ್ನು ವಿಚಿತ್ರ ಎಂದು ಹೆಳುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಮಗುವಿಗೆ ಹಾಲುಣಿಸುವಾಗ ನೀವು ಹಾಗ್ಯಾಕೆ ಮಾಡುತ್ತೀರಿ ಅವಮಾನವಲ್ಲವೇ ಎನ್ನುತ್ತಾರೆ. ಆದರೆ ನಾನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಈ ವಿಷಯದಲ್ಲಿ ತುಂಬಾ ತೊಂದರೆ ಅನುಭವಿಸಿದ್ದೇನೆ. ಹೀಗಾಗ ಯಾರು ಮಾತು ಸಹ ನನಗೆ ನೋವುಂಟು ಮಾಡುವುದಿಲ್ಲ' ಎಂದು ಮಹಿಳೆ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಹಾಲುಣಿಸಿ ಭೇಷ್ ಎಂದೆನಿಸಿಕೊಂಡ ತಾಯಂದಿರು!
'ನಾನು ನನ್ನ ಸ್ತನ್ಯಪಾನದ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದೆ. ನಾನು ಅದನ್ನು ಎಲ್ಲರ ಗಮನ ಸೆಳೆಯಲು ಮಾಡುತ್ತಿದ್ದೇನೆ ಎಂದೇ ಎಲ್ಲರು ಭಾವಿಸಿದ್ದರು. ಆದರೆ, ನಾನು ಸಾರ್ವಜನಿಕವಾಗಿ ಎದೆಹಾಲುಣಿಸುವ ಬಗ್ಗೆ ಜಾಗೃತಿ (Awareness) ಮೂಡಿಸಲು ಮಾತ್ರ ಬಯಸುತ್ತೇನೆ. ನಾನು ಅನುಭವಿಸಿದ ನೋವು ಮತ್ತು ಸಮಸ್ಯೆಯ ಬಗ್ಗೆ ಮಾತನಾಡಲು ಬಯಸುತ್ತೇನೆ' ಎಂದು ಮಹಿಳೆ ಹೇಳಿದ್ದಾರೆ.
ಬಹಳಷ್ಟು ಜನ ನನ್ನನ್ನು ಟ್ರೋಲ್ ಮಾಡಿದರು ಆದರೆ ಇನ್ನೂ ಕೆಲವರು ನನ್ನ ಮಾತಿನಲ್ಲಿ ಸಾಂತ್ವನ ಕಂಡಿದ್ದಾರೆ. ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿಗೆ ಹಾಲುಣಿಸುವುದು ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಇದು 2023. ಹೀಗಿದ್ದೂ ನಾವಿನ್ನೂ ನಮ್ಮ ಆಲೋಚನೆಗಳಲ್ಲಿ ತುಂಬಾ ಹಿಂದೆಯಿದ್ದೇವೆ. ಇನ್ನಾದರೂ ಸ್ತನ್ಯಪಾನವನ್ನು ನಾರ್ಮಲ್‌ಗೊಳಿಸಬೇಕು' ಎಂದು ಮಹಿಳೆ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.