Abortion Law: ಈ ದೇಶದಲ್ಲಿ ಗರ್ಭಪಾತ ಮಾಡಿಸಿಕೊಂಡ್ರೆ ಕಠಿಣ ಶಿಕ್ಷೆ ತಪ್ಪಿದ್ದಲ್ಲ

By Suvarna News  |  First Published Feb 9, 2023, 4:09 PM IST

ಗರ್ಭಪಾತ ಪ್ರತಿಯೊಬ್ಬ ತಾಯಿಗೂ ನೋವಿನ ಸಂಗತಿ ಹೌದು. ಕೆಲವೊಂದು ಸಮಯದಲ್ಲಿ ಗರ್ಭಪಾತ ಅನಿವಾರ್ಯವಾಗುತ್ತದೆ. ಭಾರತದಲ್ಲಿ ಗರ್ಭಪಾತಕ್ಕೆ ಅನುಮತಿಯಿದೆ. ಆದ್ರೆ ಕೆಲ ದೇಶಗಳಲ್ಲಿ ಗರ್ಭಪಾತವನ್ನು ಸಂಪೂರ್ಣ ನಿಷೇಧಿಸಲಾಗಿದೆ.
 


ಗರ್ಭ ಧರಿಸುವುದು ಪ್ರತಿಯೊಬ್ಬ ಮಹಿಳೆಯ ಕನಸು. ಮಕ್ಕಳನ್ನು ಪಡೆಯುವುದು ಭಾಗ್ಯವೆಂದು ಮಹಿಳೆ ಭಾವಿಸ್ತಾಳೆ. ಆದ್ರೆ ನಾನಾ ಕಾರಣಕ್ಕೆ ಗರ್ಭಪಾತದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಾಯಿಯ ಜೀವಕ್ಕೆ ಅಪಾಯವಿದ್ದಾಗ, ಮಗು ಹಾಗೂ ತಾಯಿಯ ದೇಹಕ್ಕೆ ಹಾನಿಯನ್ನುಂಟಾಗುವ ಸಾಧ್ಯತೆಯಿದ್ದರೆ, ಮಗುವಿನ ಬೆಳವಣಿಗೆ ಸರಿಯಾಗಿ ಆಗದೆ ಇರುವ ಸಂದರ್ಭದಲ್ಲಿ, ತಾಯಿಯ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯಕ್ಕೆ ಧಕ್ಕೆ ತಂದರೆ, ಅತ್ಯಾಚಾರಕ್ಕೊಳಗಾದ ಮಹಿಳೆ, ಗರ್ಭ ಧರಿಸಿದ ಮಹಿಳೆ ಮಾನಸಿಕ ಹಾಗೂ ದೈಹಿಕವಾಗಿ ಅಸಮರ್ಥಳಾಗಿದ್ದರೆ ಈ ಪರಿಸ್ಥಿತಿಯಲ್ಲಿ ಗರ್ಭಪಾತ ಮಾಡುವುದು ಅನಿವಾರ್ಯವಾಗುತ್ತದೆ. ಆಗ ಮಹಿಳೆ ಗರ್ಭಪಾತಕ್ಕೆ ಮುಂದಾಗ್ತಾಳೆ. 

ಗರ್ಭಪಾತ (Miscarriage) ಕ್ಕೆ ಸಂಬಂಧಿಸಿದಂತೆ ಪ್ರತಿ ದೇಶ ಕೂಡ ತನ್ನದೆ ಕಾನೂನ (Law) ನ್ನು ಹೊಂದಿದೆ. ಕೆಲ ದೇಶಗಳಲ್ಲಿ ಗರ್ಭಪಾತವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್ ಕಳೆದ ವರ್ಷ ಗರ್ಭಪಾತಕ್ಕೆ ಸಂಬಂಧಿಸಿದಂತೆ ಕಠಿಣ ತೀರ್ಪು ನೀಡಿತು. ಸಂವಿಧಾನ (Constitution) ವು ಗರ್ಭಪಾತದ ಹಕ್ಕನ್ನು ಒದಗಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಯುನೈಟೆಡ್ ಸ್ಟೇಟ್ಸ್ ನಲ್ಲಿ ಗರ್ಭಪಾತಕ್ಕೆ ಎಲ್ಲೆಡೆ ಒಪ್ಪಿಗೆಯಿಲ್ಲ. ಕೆಲವು ರಾಜ್ಯಗಳು ಗರ್ಭಪಾತವನ್ನು ನಿಷೇಧಿಸಿವೆ. ಇನ್ನು ಕೆಲ ರಾಜ್ಯ ಕಾನೂನು ಅಥವಾ ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಗರ್ಭಪಾತದ ಹಕ್ಕನ್ನು ಖಾತರಿಪಡಿಸಿದೆ. ಈ ತೀರ್ಪಿನ ನಂತ್ರ ಅನೇಕ ರಾಜ್ಯಗಳಲ್ಲಿ ಹಾಗೂ ದೇಶಗಳಲ್ಲಿ ಗರ್ಭಪಾತ ನಿಷೇಧಕ್ಕೆ ಸಂಬಂಧಿಸಿದಂತೆ ಚಿಂತನೆ ನಡೆಯುತ್ತಿದೆ.

Tap to resize

Latest Videos

ಹೆರಿಗೆಯ ನಂತರ ಕೂದಲು ಉದುರೋದು ನಿಂತಿಲ್ವಾ? ಈ ಟಿಪ್ಸ್ ಟ್ರೈ ಮಾಡಿ

ಗರ್ಭಪಾತ ಕಾನೂನು ಬದ್ಧವಾಗಿರುವ ದೇಶಗಳು : ಮೊದಲೇ ಹೇಳಿದಂತೆ ವಿಶ್ವದ ಕೆಲ ದೇಶಗಳು ಗರ್ಭಪಾತವನ್ನು ಕಾನೂನು ಬದ್ಧಗೊಳಿಸಿವೆ. ಅಲ್ಬೇನಿಯಾ, ಆಸ್ಟ್ರೇಲಿಯಾ, ಅರ್ಜೆಂಟೀನಾ, ಬೆಲ್ಜಿಯಂ, ಬಲ್ಗೇರಿಯಾ, ಕಾಂಬೋಡಿಯಾ, ಕೆನಡಾ, ಚೀನಾ, ಕೊಲಂಬಿಯಾ, ಜೆಕ್ ರಿಪಬ್ಲಿಕ್, ಉತ್ತರ ಕೊರಿಯಾ, ಡೆನ್ಮಾರ್ಕ್, ಫ್ರಾನ್ಸ್, ಜಾರ್ಜಿಯಾ, ಗ್ರೀಸ್, ಜರ್ಮನಿ, ಹಂಗೇರಿ, ಇಟಲಿ, ಐರ್ಲೆಂಡ್, ಐಸ್ಲ್ಯಾಂಡ್, ಭಾರತ, ಕಝಾಕಿಸ್ತಾನ್, ಕೊಸೊವೊ, ಮಾಲ್ಡೀವ್ಸ್ ಮಂಗೋಲಿಯಾ, ನೇಪಾಳ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ನಾರ್ವೆ, ಪೋರ್ಚುಗಲ್, ಸಿಂಗಾಪುರ್, ದಕ್ಷಿಣ ಆಫ್ರಿಕಾ, ಸ್ಪೇನ್, ಥೈಲ್ಯಾಂಡ್, ತಜಕಿಸ್ತಾನ್, ಟರ್ಕಿ, ಉಕ್ರೇನ್, ವಿಯೆಟ್ನಾಂ, ಉಜ್ಬೇಕಿಸ್ತಾನ್ ನಲ್ಲಿ ಗರ್ಭಪಾತನಕ್ಕೆ ಅನುಮತಿಯಿದೆ. ಆದ್ರೆ ಗರ್ಭಧರಿಸಿದ ಅವಧಿಯನ್ನು ಆಧಾರಿಸಿ ಇದಕ್ಕೆ ಒಪ್ಪಿಗೆ ನೀಡಲಾಗುತ್ತದೆ.

ಗರ್ಭಪಾತ ಕಾನೂನು ಬಾಹಿರವಾಗಿರುವ ದೇಶಗಳು : ಕೆಲ ದೇಶಗಳಲ್ಲಿ ಗರ್ಭಪಾತಕ್ಕೆ ಅನುಮತಿಯಿಲ್ಲ. ಗರ್ಭಪಾತ ಮಾಡಿಸಿಕೊಂಡ್ರೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಅಂಡೋರಾ, ಅರುಬಾ, ಕಾಂಗೋ ಗಣರಾಜ್ಯ, ಕುರಾಕೊ, ಡೊಮಿನಿಕನ್ ರಿಪಬ್ಲಿಕ್, ಈಜಿಪ್ಟ್, ಎಲ್ ಸಾಲ್ವಡಾರ್, ಹೈಟಿ, ಹೊಂಡುರಾಸ್, ಇರಾಕ್, ಜಮೈಕಾ, ಲಾವೋಸ್, ಮಡಗಾಸ್ಕರ್, ಮಾಲ್ಟಾ, ಮಾರಿಟಾನಿಯಾ, ನಿಕರಾಗುವಾ, ಪಲಾವ್, ಫಿಲಿಪೈನ್ಸ್, ಸ್ಯಾನ್ ಮರಿನೋ, ಸೆನೆಗಲ್, ಸಿಯೆರಾ ಲಿಯೋನ್, ಸುರಿನಾಮ್, ಟೊಂಗಾ ಮತ್ತು ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಸ್ಟ್ರಿಪ್‌ನಲ್ಲಿ ಗರ್ಭಪಾತವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಭಾರತದಲ್ಲಿ ಗರ್ಭಪಾತಕ್ಕಿದೆಯೇ ಅನುಮತಿ : ಭಾರತದಲ್ಲಿ ಗರ್ಭಪಾತಕ್ಕೆ ಕಾನೂನು ಬದ್ಧ ಒಪ್ಪಿಗೆಯಿದೆ. ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (MTP) ಆಕ್ಟ್ 1971 ರ ಅಡಿಯಲ್ಲಿ ಒಪ್ಪಿಗೆ ನೀಡಲಾಗಿದೆ.  2003ರಲ್ಲಿ ಈ ಕಾಯಿದೆ ಅಡಿ  ಮಹಿಳೆಯರಿಗೆ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ವ್ಯವಸ್ಥೆ ಮಾಡಲಾಗಿದೆ.

ಈ ದೇಶದಲ್ಲಿ ಮೃತದೇಹದೊಂದಿಗೆ ನೃತ್ಯ ಮಾಡಿ ಸಂಭ್ರಮಾಚರಿಸ್ತಾರೆ ಜನ

ಗರ್ಭಪಾತಕ್ಕೆ ಸರಿಯಾದ ಅವಧಿ : ಗರ್ಭಪಾತವನ್ನು ಕಾನೂನು ಬದ್ಧಗೊಳಿಸಿದ ದೇಶಗಳಲ್ಲಿ ಕೂಡ ಕೆಲ ನಿಯಮಗಳಿವೆ. ಭಾರತದಲ್ಲಿ ಗರ್ಭಧಾರಣೆಯ 20ನೇ ವಾರದ ಮೊದಲು ಗರ್ಭಪಾತಕ್ಕೆ ಅನುಮತಿ ನೀಡಲಾಗುತ್ತದೆ. ಅವಧಿ ಹೆಚ್ಚಿದ್ದಲ್ಲಿ ಕಾನೂನಿನ ಅನುಮತಿ ಪಡೆಯಬೇಕಾಗುತ್ತದೆ. ನ್ಯಾಯಾಲಯದಲ್ಲಿ ಮಹಿಳೆ ಗರ್ಭಪಾತಕ್ಕೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಅತ್ಯಾಚಾರ, ವಿಕಲಾಂಗ ಹುಡುಗಿಗೆ 24ನೇ ವಾರದವರೆಗೆ ಗರ್ಭಪಾತ ಮಾಡಬಹುದು ಎಂದು ಕಾನೂನು ಹೇಳುತ್ತದೆ.  

click me!