ರಕ್ತದಾನವನ್ನು ಮಹಾದಾನವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ತಜ್ಞರು ಆರೋಗ್ಯವಂತ ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ರಕ್ತದಾನಿಗಳಾಗಿ ಸೈನ್ ಅಪ್ ಮಾಡಲು ಸಲಹೆ ನೀಡುತ್ತಾರೆ. ಆದರೆ ಇಲ್ಲೊಬ್ಬ 80 ವರ್ಷ ವಯಸ್ಸಿನ ಅಜ್ಜಿ 203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.
ರಕ್ತದಾನವು ಒಬ್ಬ ವ್ಯಕ್ತಿಯು ಮಾಡಬಹುದಾದ ಅತ್ಯಂತ ಪವಿತ್ರ ಕಾರ್ಯವಾಗಿದೆ. ಯಾಕೆಂದರೆ ಇದು ವ್ಯಕ್ತಿಯ ಜೀವವನ್ನು ಉಳಿಸಲು ಸಹಾಯ ಮಾಡುತ್ತದೆ. ರಕ್ತದಾನವನ್ನು ಮನುಕುಲಕ್ಕೆ ಅತ್ಯಂತ ಮೌಲ್ಯಯುತವಾದ ಸೇವೆ ಎಂದು ಪರಿಗಣಿಸಲಾಗಿದೆ, ಕೇವಲ ಒಂದು ರಕ್ತದಾನವು ಒಂದಕ್ಕಿಂತ ಹೆಚ್ಚು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಯಾಕೆಂದರೆ ರಕ್ತವನ್ನು ಅದರ ವಿಭಿನ್ನ ಘಟಕಗಳಾಗಿ ವಿಂಗಡಿಸಬಹುದು ಮತ್ತು ಅಗತ್ಯವಿರುವ ರೋಗಿಗಳಿಗೆ ಸಹಾಯ ಮಾಡಲು ವಿವಿಧ ರೀತಿಯಲ್ಲಿ ಬಳಸಬಹುದು. ಅದಕ್ಕಾಗಿಯೇ ತಜ್ಞರು ಆರೋಗ್ಯವಂತ ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ರಕ್ತದಾನಿಗಳಾಗಿ ಸೈನ್ ಅಪ್ ಮಾಡಲು ಸಲಹೆ ನೀಡುತ್ತಾರೆ.
ಜೀವ ಉಳಿಸಲು ನಾವು ಒಂದಕ್ಕಿಂತ ಹೆಚ್ಚು ಬಾರಿ ರಕ್ತದಾನ (Blood donation) ಮಾಡಿದ್ದೇವೆ ಎಂದು ಹೇಳುವ ಮೂಲಕ ನಮ್ಮಲ್ಲಿ ಹಲವರು ಹೆಮ್ಮೆಪಡಬಹುದು. ಆದರೆ 80 ವರ್ಷದ ಜೋಸೆಫೀನ್ ಮಿಚಾಲುಕ್ ಎಂಬ ವೃದ್ಧೆ ತನ್ನ ಜೀವಮಾನವಿಡೀ ರಕ್ತದಾನ ಮಾಡುತ್ತಲೇ ಬಂದಿದ್ದಾರೆ. ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು (Guinness World Record) ಗಳಿಸಿದ್ದಾರೆ.
ರಕ್ತದಾನವು ರೋಗಿಗೆ ಮಾತ್ರವಲ್ಲ ನಿಮ್ಮ ಆರೋಗ್ಯಕ್ಕೂ ಹಿತ
22ನೇ ವಯಸ್ಸಿನಿಂದಲೇ ರಕ್ತದಾನ ಮಾಡಲು ಆರಂಭಿಸಿದ್ದ ವೃದ್ಧೆ
ಜೋಸೆಫೀನ್ 1965ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ರಕ್ತದಾನ ಮಾಡಲು ಪ್ರಾರಂಭಿಸಿದರು. ಅಂದಿನಿಂದ, ಅವರು ಅಸಂಖ್ಯಾತ ಜನರ ಜೀವಗಳನ್ನು ಉಳಿಸಲು ಒಟ್ಟು 203 ಘಟಕಗಳನ್ನು ದಾನ ಮಾಡಿದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಡಾಟ್ ಕಾಮ್ ಪ್ರಕಾರ, ಹೆಚ್ಚು ಸಂಪೂರ್ಣ ರಕ್ತದಾನ ಮಾಡಿದ (ಮಹಿಳೆ) ಹಿಂದಿನ ದಾಖಲೆಯನ್ನು ಭಾರತದ ಮಧುರಾ ಅಶೋಕ್ ಕುಮಾರ್ ಹೊಂದಿದ್ದಾರೆ. ಅವರು ತಮ್ಮ ಜೀವನದಲ್ಲಿ 117 ಯುನಿಟ್ ದಾನ ಮಾಡಿದ್ದರು. ಜೋಸೆಫೀನ್ 1965 ರಲ್ಲಿ ರಕ್ತದಾನದ ಅಪಾಯಿಂಟ್‌ಮೆಂಟ್ ಅನ್ನು ಹೊಂದಿದ್ದ ತನ್ನ ಅಕ್ಕನಿಂದ ದಾನಿಯಾಗಿ ಸೇರಿಕೊಂಡರು. ಅಂದಿನಿಂದ, ಅವರು ಎಂದಿಗೂ ರಕ್ತದಾನ ಮಾಡುವುದನ್ನು ನಿಲ್ಲಿಸಲಿಲ್ಲ.
O+ ಬ್ಲಡ್ ಗ್ರೂಪ್‌ನ ಜೋಸೆಫೀನ್
'ಬಹಳಷ್ಟು ಜನರು ರಕ್ತದ ಕೊರತೆಯನ್ನು ಎದುರಿಸುತ್ತಿದ್ದಾರೆ. ಗರ್ಭಧಾರಣೆ, ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು ಸೇರಿದಂತೆ ನಾನಾ ಸಂದರ್ಭಗಳಲ್ಲಿ ಬಹಳಷ್ಟು ಮಂದಿಗೆ ರಕ್ತ ಬಹಳ ಅತ್ಯಗತ್ಯವಾಗಿದೆ. ಆದರೆ ಇಂದು ಅಗತ್ಯ ಇರುವ ಎಲ್ಲರಿಗೂ ರಕ್ತ ದೊರೆಯುತ್ತಿಲ್ಲ. ರಕ್ತ ನೀಡಲು ನನ್ನಲ್ಲಿ ಇದೆ ಎಂದು ನಾನು ಭಾವಿಸುತ್ತೇನೆ. ಅಗತ್ಯವಿರುವ ಜನರಿಗೆ ನಾನು ಅದನ್ನು ನೀಡಲು ಬಯಸುತ್ತೇನೆ' ಎಂದು O+ ಬ್ಲಡ್ ಗ್ರೂಪ್‌ನ ಜೋಸೆಫೀನ್ ಗಿನ್ನೆಸ್ ವಿಶ್ವ ದಾಖಲೆಗಳಿಗೆ ತಿಳಿಸಿದರು. O+ ಸಾಮಾನ್ಯವಾಗಿ ಪ್ರಪಂಚದಾದ್ಯಂತದ ಆಸ್ಪತ್ರೆಗಲಲ್ಲಿ ಯಾವಾಗಲೂ ಹೆಚ್ಚಿನ ಬೇಡಿಕೆಯಲ್ಲಿರುವ ಬ್ಲಡ್ ಗ್ರೂಪ್ ಆಗಿದೆ. ಏಕೆಂದರೆ ಇದು ಅತ್ಯಂತ ಸಾಮಾನ್ಯ ವಿಧವಾಗಿದೆ. ಅಮೆರಿಕನ್ ರೆಡ್ ಕ್ರಾಸ್ ಪ್ರಕಾರ, USA ದ ಜನಸಂಖ್ಯೆಯ 37% ರಷ್ಟು ಮಂದಿಯ ಬ್ಲಡ್ ಗ್ರೂಪ್ ಮಾತ್ರ O+ ಆಗಿದೆ.
ಒಬ್ಬ ಮನುಷ್ಯನ ರಕ್ತದಿಂದ ಮೂರು ಜೀವ ಉಳಿಸಲು ಸಾಧ್ಯ
ಜೋಸೆಫೀನ್ ಅವರು ಹಿರಿಯ ವಯಸ್ಸಿನಲ್ಲೂ ದಾನಿಯಾಗಿ ಮುಂದುವರಿಯಲು ಸಮರ್ಥರಾಗಿದ್ದಾರೆ. ಏಕೆಂದರೆ USನಲ್ಲಿ ದಾನಿಯು ಉತ್ತಮ ಆರೋಗ್ಯದಲ್ಲಿದ್ದರೆ ರಕ್ತದಾನ ಮಾಡಲು ಯಾವುದೇ ಅಡ್ಡಿಯಿಲ್ಲ. ರಕ್ತದಾನಕ್ಕೆ ಇಲ್ಲಿ ವಯಸ್ಸಿನ ಮಿತಿಯಿಲ್ಲ. ಆದರೆ ಆಕೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು, ಪ್ರತಿ ಬ್ಲಡ್ ಡೊನೇಷನ್‌ಗೂ ಮೊದಲು ತಪಾಸಣೆ ಮತ್ತು ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಪ್ರಯೋಜನವಿದೆ
ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಕಡಿಮೆಯಾಗುತ್ತದೆ ಎಂದು ಅನೇಕರು ರಕ್ತ ನೀಡುತ್ತಿಲ್ಲ. ಇದು ತಪ್ಪು ಕಲ್ಪನೆ. ರಕ್ತದಾನ ಮಾಡುವುದರಿಂದ ನಮಗೆ ಸಾಕಷ್ಟು ಪ್ರಯೋಜನಗಳಿವೆ. ರಕ್ತದಾನದಿಂದ ಹೃದಯಾಘಾತ, ಕ್ಯಾನ್ಸರ್ ಸೇರಿ ಹಲವು ಮಾರಾಣಾಂತಿಕ ಕಾಯಿಲೆಗಳು ಕಾಡುವ ಸಾಧ್ಯತೆ ಬಹಳ ಕಡಿಮೆ. ರಕ್ತದಾನ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ರಕ್ತದಾನದಿಂದ ನಮ್ಮ ಒತ್ತಡ ಕಡಿಮೆ ಆಗುತ್ತದೆ. ನಮ್ಮ ದೇಹಕ್ಕೆ ಉತ್ತಮ ಆರೋಗ್ಯ ಸಿಗುತ್ತದೆ.