ಅಮ್ಮನನ್ನು ಖುಷಿಪಡಿಸಲು ಮದರ್ಸ್ ಡೇವರೆಗೆ ಕಾಯಬೇಕಿಲ್ಲ. ಆಕೆ ನಿಮ್ಮ ಕಾಳಜಿ ವಹಿಸಲು, ನಿಮ್ಮ ಒಳಿತಿಗಾಗಿ ಪ್ರಾರ್ಥಿಸಲು, ನಿಮ್ಮ ಸಂತೋಷಕ್ಕಾಗಿ ಒದ್ದಾಡಲು, ನಿಮಗೆ ಸುಲಭವಾಗಲೆಂದು ಕೆಲಸ ಮಾಡಿಕೊಡಲು ಎಂದಾದರೂ ಮಕ್ಕಳ ದಿನಾಚರಣೆ ಬರಲಿ ಎಂದು ಕಾದಿದ್ದಾಳೆಯೇ?
ಅಮ್ಮ ಎಂದರೇ ಹಾಗೆ, ಮಕ್ಕಳಿಗಾಗಿ ಬದುಕನ್ನೇ ತೇಯುವವಳು, ಹಗಲಿರುಳೂ ಗೇಯುವವಳು, ಪ್ರೀತಿಯ ಮಳೆಯನ್ನೇ ಭೋರ್ಗರೆಸುವವಳು, ಕಾಳಜಿಗೆ ಮಿತಿ ಹಾಕಿಕೊಳ್ಳದವಳು, ಮಕ್ಕಳ ಸಂತೋಷದಲ್ಲಿ ತನ್ನ ಸಂತೋಷ ಹುಡುಕುವವಳು... ಅವಳೊಂದು ಎಷ್ಟು ಮಗೆದರೂ ಮುಗಿಯದ ಒಲುಮೆ. ಎಷ್ಟು ಬಗೆದರೂ ಬಗೆಹರಿಯದ ಪ್ರೀತಿಯ ಚಿಲುಮೆ. ಅಮ್ಮನ ಬಗ್ಗೆ ಯಾರಿಂದಲಾದರೂ ಬರೆದು ಮುಗಿಸಲಾಗುವುದೇ... ಇಂಥ ಅಮ್ಮನ ಸಂತೋಷಕ್ಕಾಗಿ ನಾವೇನು ಮಾಡುತ್ತೇವೆ? ವಿಮೆನ್ಸ್ ಡೇಗೊಂದು ಗಿಫ್ಟು, ಮದರ್ಸ್ ಡೇಗೊಂದು ಮುತ್ತು ಕೊಟ್ಟು ಸುಮ್ಮನಾಗುತ್ತೇವೆ. ಆದರೆ, ಅಷ್ಟು ಮಾಡಿದರೆ ಸಾಕೆ? ಅವಳು ನಿರೀಕ್ಷಿಸುವುದಿಲ್ಲ ಸರಿ, ಆದರೆ, ಅನಿರೀಕ್ಷಿತವಾಗಿದ್ದಾಗಲೇ ಅದನ್ನು ಸರ್ಪ್ರೈಸ್ ಎನ್ನುವುದು. ಹಾಗಾಗಿ, ಅಮ್ಮನ ಕಣ್ಣಿನಲ್ಲಿ ಮಿನುಗುವ ಖುಷಿ ನೋಡಲು ಕಾಯಬೇಡಿ. ಆಗಾಗ ಆಕೆಗೆ ಜೊತೆಯಾಗಿ, ಅವಳಿಗೆ ನಿಮ್ಮ ಪ್ರೀತಿ ವ್ಯಕ್ತಪಡಿಸಿ,
ಸಾರ್ವಜನಿಕ ಸ್ಥಳಗಳಲ್ಲಿ ಹಾಲುಣಿಸಿ ಬೇಷ್ ಎಂದೆನಿಸಿಕೊಂಡ ತಾಯಂದಿರು
ಆಕೆಯ ಸಲಹೆಗಳು ನಿಮಗೆ ಸಹಾಯಕ್ಕೆ ಬಂದವೇ?
ಯಾವಾಗಲಾದರೂ ಅಮ್ಮನ ಸಲಹೆಗಳು ಸಹಾಯಕ್ಕೆ ಬಂದಾಗ ಆಕೆಗೆ ಅದನ್ನು ತಿಳಿಸಿ. ಅಷ್ಟೇ ಅಲ್ಲ, ಅಮ್ಮಂದಿರ ಅನುಭವ, ಅವರು ಬದುಕುವ ರೀತಿ ನಿಮಗೆ ನಿದರ್ಶನದಂತೆ ಕಾಣಿಸಬಹುದು. ಅವರು ಹೇಳುವ ಮಾತುಗಳಲ್ಲಿ ಹಾಗೂ ಹೇಳದೆ ಬದುಕುವ ರೀತಿಯಲ್ಲಿ ನಿಮ್ಮ ಬದುಕಿಗೆ ಹಲವಷ್ಟು ಸಿಗಬಹುದು. ಬದುಕಿನಲ್ಲಿ ಕೆಲವು ಸಂದರ್ಭಗಳಲ್ಲಿ ಇಂಥ ಸಂದರ್ಭ ಅಮ್ಮನಿಗೆ ಬಂದಿದ್ದರೆ ಆಕೆ ಏನು ಮಾಡುತ್ತಿದ್ದಳು ಎಂದು ಯೋಚಿಸಿ ಅಂತೆಯೇ ನೀವು ಮಾಡಿದಾಗ, ಅದನ್ನು ಅಮ್ಮನಿಗೆ ತಿಳಿಸಿ. ಅವರ ಮಾತುಗಳಿಗೆ, ಅವರ ಬದುಕಿಗೆ ನೀವು ಬೆಲೆ ಕೊಡುತ್ತೀರೆಂಬುದನ್ನು ತಿಳಿದಾಗ ಖಂಡಿತಾ ಅವರು ಸಂತೋಷ ಪಡುತ್ತಾರೆ.
ಕೆಲಸದಲ್ಲಿ ಸಹಾಯ ಮಾಡಿ
ಅದೆಷ್ಟು ಬಾರಿ ನಿಮಗೆ ಹೇಳಿ ಹೇಳಿ ಸಾಕಾಗಿ ಅಮ್ಮನೇ ನಿಮ್ಮ ಪುಸ್ತಕಗಳನ್ನು, ಬಟ್ಟೆಗಳನ್ನು ಜೋಡಿಸಿದ್ದಿದೆ? ಅದೆಷ್ಟು ಬಾರಿ ನಿಮ್ಮ ಬಟ್ಟೆ ಒಗೆದು ಐರನ್ ಮಾಡಿಟ್ಟಿದ್ದಾಳೆ? ನಿಮಗೆ ಕೆಲಸವಿದೆಯೆಂದು ನಿಮ್ಮ ತಟ್ಟೆಲೋಟ ತೊಳೆದಿದ್ದಾಳೆ? ಈಗಲಾದರೂ ಆಕೆ ನಿಮಗಾಗಿ ಮಾಡಿದ್ದನ್ನೆಲ್ಲ ಒಮ್ಮೆ ನೆನೆದು ಅವಳಿಗೆ ಸಣ್ಣಪುಟ್ಟ ಸಹಾಯ ಮಾಡಿ. ಸಮಯ ಸಿಕ್ಕಾಗಲೊಮ್ಮೆ ಕಿಚನ್‌ಗೆ ಹೋಗಿ ತರಕಾರಿಗಳನ್ನು ಹೆಚ್ಚಿ ಕೊಡುವುದು, ಸ್ಟೋರ್ ರೂಂ ಸ್ವಚ್ಛ ಮಾಡಿಕೊಡುವುದು, ಅವಳ ತಲೆಗೆ ಹೆನ್ನಾ ಹಚ್ಚಿಕೊಡುವುದು, ಫ್ರಿಡ್ಜ್ ಕ್ಲೀನ್ ಮಾಡುವುದು, ಅಡುಗೆ ಮಾಡುವುದು ಇತ್ಯಾದಿಯನ್ನು ಮಾಡಿಕೊಡಿ.
ಲೆಟರ್ ಬರೆಯಿರಿ
ಅಮ್ಮನಿಗೊಂದು ಲವ್ ಲೆಟರ್ ಬರೆಯಿರಿ. ಆಕೆಯ ಬಗ್ಗೆ ನೀವೆಷ್ಟೊಂದು ಪ್ರೀತಿ ಇರಿಸಿಕೊಂಡಿದ್ದೀರಾ ಎಂಬುದನ್ನು, ಆಕೆ ನಿಮಗಾಗಿ ಮಾಡಿದ್ದೆಲ್ಲದಕ್ಕೊಂದು ಮೆಚ್ಚುಗೆ, ಆಕೆಯ ಬಗ್ಗೆ ನಿಮಗೇನೇನಿಷ್ಟ, ಆಕೆಗಾಗಿ ನೀವೇನು ಮಾಡಬಲ್ಲಿರಿ ಎಂಬುದನ್ನೆಲ್ಲ ಬರೆಯಿರಿ. ನೀವು ಚಿಕ್ಕವರಿರುವಾಗ ಬಿಡಿಸಿದ ಆ ಚಿತ್ರಗಳನ್ನು ಆಕೆ ಕಾಪಾಡಿಕೊಂಡಷ್ಟೇ ಜತನದಿಂದ ಈ ಲೆಟರನ್ನು ಕೂಡಾ ಕಾಪಾಡಿಕೊಳ್ಳದಿದ್ದರೆ ಕೇಳಿ... ನೀವು ಕೊಡಿಸಬಹುದಾದ ಒಡವೆಗಳಿಗಿಂತ ಇದು ಆಕೆಗೆ ಹೆಚ್ಚು ಆಪ್ತವಾಗುತ್ತದೆ.
ಟ್ರಿಪ್ ಕರೆದುಕೊಂಡು ಹೋಗಿ
ಮಕ್ಕಳು ಹಾಗೂ ಗಂಡನ ಸೇವೆ ಮಾಡುತ್ತಾ ಮನೆಯಿಂದ ಹೊರ ಹೋಗದ ಅಮ್ಮನನ್ನು ಎಲ್ಲಿಗಾದರೂ ಟ್ರಿಪ್‌ಗೆ ಕರೆದುಕೊಂಡು ಹೋಗಿ. ಎರಡು ಮೂರು ದಿನಗಳ ಕಾಲ ರೆಸಾರ್ಟಿಗೋ ಅಥವಾ ಬೀಚ್ ಬದಿಯ ತಾಣಕ್ಕೋ ಕರೆದುಕೊಂಡು ಹೋಗಿ ಚೆನ್ನಾಗಿ ಸುತ್ತಾಡಿಸಿ. ಈ ಸಂದರ್ಭದಲ್ಲಿ ಅವಳ ಬೇಕುಬೇಡಗಳನ್ನು ಸರಿಯಾಗಿ ಗಮನಿಸಿಕೊಳ್ಳಿ.
ಫುಲ್ ಬಾಡಿ ಚೆಕಪ್
ಅಮ್ಮ ಇನ್ನೂ ಯಂಗ್ ಅಲ್ಲ. ಆಕೆ 40 ವರ್ಷ ದಾಟಿಯೇ ಹಲವು ವರ್ಷಗಳಾಯಿತು. ಎಲ್ಲರ ಆರೋಗ್ಯ ವಿಚಾರಿಸುವ, ಯಾರಿಗಾದರೂ ಸ್ವಲ್ಪ ಶೀತವಾದರೂ ಅದಕ್ಕೆ ಮನೆಮದ್ದುಗಳನ್ನು ಮಾಡಿ ಸರಿ ಮಾಡುವ ಅಮ್ಮನ ಯೋಗಕ್ಷೇಮ ವಿಚಾರಿಸುವವರ್ಯಾರು? ಆಕೆಯ ಆರೋಗ್ಯ ನೋಡಿಕೊಳ್ಳುವವರಾರು? ಹಾಗಾಗಿ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಫುಲ್ ಬಾಡಿ ಚೆಕಪ್ ಮಾಡಿಸಿ. ಅವಳು ಆರೋಗ್ಯವಾಗಿದ್ದರೆ, ಕಳೆಕಳೆಯಾಗಿದ್ದರೆ ಮಾತ್ರ ಮನೆ ಕಳೆಯಿಂದಿದ್ದೀತು ಎಂಬುದು ನೆನಪಿರಲಿ.
ಏಡ್ಸ್ ಮಕ್ಕಳಿಗೆ ತಾಯಿಯ ಆರೈಕೆ ಮಾಡೋ ತಬಸಮ್
ಶಾಪಿಂಗ್
ಅಮ್ಮ ಎಂದೂ ಅದು ಬೇಕು, ಇದು ಬೇಕು ಎಂದು ಕೇಳುವವಳಲ್ಲ. ಹೊರ ಕರೆದುಕೊಂಡು ಹೋದರೂ ಮನೆಗೆ ಬೇಕಾದ ಡೋರ್ ಮ್ಯಾಟ್, ಬೆಡ್‌ಶೀಟ್‌ಗಳನ್ನು ಕೊಳ್ಳುತ್ತಾಳೆ ಹೊರತು ತನಗಾಗಿ ಏನನ್ನೂ ಕೊಳ್ಳುವವಳಲ್ಲ. ಹಾಗಂಥ ಆಕೆಗೆ ಆಸೆಗಳೇ ಇಲ್ಲವೆಂದೇನಲ್ಲ. ಗಂಡಮಕ್ಕಳಿಗೆ ಕಷ್ಟವಾಗಬಾರದು ಎಂಬುದವಳ ನಿಲುವು. ಹಾಗಾಗಿ, ಅಮ್ಮನನ್ನು ಆಗೊಮ್ಮೆ ಈಗೊಮ್ಮೆ ಹೊರಗೆ ಕರೆದುಕೊಂಡು ಹೋಗಿ ಆಕೆಗೆ ಬಟ್ಟೆಬರೆ, ಬಳೆ, ಚಪ್ಪಲಿ ಮುಂತಾದವುಗಳನ್ನು ಕೊಡಿಸಿ.