
ಅದ್ಯಾಕೋ ಗೊತ್ತಿಲ್ಲ, ಪೀರಿಯಡ್ಸ್ ಸಂದರ್ಭದಲ್ಲಿ ಬಟ್ಟೆ ಟೈಟ್ ಎನಿಸುತ್ತದೆ, ದೇಹ ಭಾರವೆನಿಸುತ್ತದೆ ಅಲ್ಲವೇ? ಬರೀ ಈ ನಾಲ್ಕೈದು ದಿನಗಳಿಗೆ ತೂಕ ಹೆಚ್ಚಾಗುವುದು ನಿಜನಾ ಅಥವಾ ತೂಕದ ಮೆಷಿನ್ ಮೋಸ ಮಾಡುತ್ತಾ ಎಂಬೆಲ್ಲ ಗೊಂದಲಗಳು ನಿಮ್ಮನ್ನು ಕಾಡಿರಬಹುದು. ಆದರೆ ಹಲವು ಮಹಿಳೆಯರಿಗೆ ಹೀಗಾಗುತ್ತದೆ. ಆ ದಿನಗಳಲ್ಲಿ ತೂಕ ಏರುತ್ತದೆ.
ಇದು ಪಿಎಂಎಸ್(ಋತುಚಕ್ರಕ್ಕೂ ಮುನ್ನದ ಲಕ್ಷಣ)ನ ದೈಹಿಕ ಸೂಚನೆ. ಅಂದರೆ, ಪಿಎಂಎಸ್ ಸಮಯದಲ್ಲಿ ದೈಹಿಕವಾಗಿ, ಭಾವನಾತ್ಮಕವಾಗಿ, ವರ್ತನಾತ್ಮಕವಾಗಿ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ತೂಕ ಹೆಚ್ಚಳ ಕೂಡಾ ಒಂದು. ಪೀರಿಯಡ್ಸ್ ಅನುಭವಿಸುವ ಶೇ.90ರಷ್ಟು ಮಹಿಳೆಯರಲ್ಲಿ ಈ ಪಿಎಂಎಸ್ ಬಹಳ ಸಾಮಾನ್ಯವಾದುದು.
ಪಿರಿಯಡ್ಸ್ ಈ ಕಾರಣಕ್ಕೆ ಮಿಸ್ ಆಗ್ಬಹುದು
ನೀರಿನ ತೂಕ
ಆದರೆ, ಈ ತೂಕ ಏರುವಿಕೆಗೆ ಮುಖ್ಯ ಕಾರಣ ನೀರು. ಪೀರಿಯಡ್ಸ್ ಸಂದರ್ಭದಲ್ಲಿ ದೇಹವು ಬಹಳಷ್ಟು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ, ಪೀರಿಯಡ್ಸ್ ಮುಗಿದ ಬಳಿಕ ಇದನ್ನು ಹೊರಬಿಡುತ್ತದೆ. ಅಂದರೆ ನಿಮ್ಮ ತೂಕ ನೀರಿನ ತೂಕದಿಂದಾಗಿ ಹೆಚ್ಚಾಗಿದ್ದು, ಇದು ಕೇವಲ ತಾತ್ಕಾಲಿಕ ವಿದ್ಯಮಾನವಷ್ಟೇ. ಆದರೂ ಕೂಡಾ ಇದು ಬಹಳ ಕಿರಿಕಿರಿ ಉಂಟು ಮಾಡುವಂಥದ್ದೇ. ಮುಂದಿನ ಬಾರಿ ಆ ದಿನಗಳಲ್ಲಿ ತೂಕ ಚೆಕ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ನಿಮ್ಮ ಹಾರ್ಮೋನ್‌ಗಳೇ ವಿಲನ್ ಆಗಿರಬಹುದು
ಫೀಮೇಲ್ ಸೆಕ್ಸ್ ಹಾರ್ಮೋನ್ ಈಸ್ಟ್ರೋಜನ್ ಹಾಗೂ ಪೀರಿಯಡ್ಸ್ ಆರಂಭಕ್ಕೂ ಮುನ್ನಿನ ಸಂದರ್ಭದಲ್ಲಿ ಇಳಿಕೆಯಾಗುತ್ತದೆ. ಜೊತೆಗೆ, ಪ್ರೊಜೆಸ್ಟೆರಾನ್ ಹಾರ್ಮೋನ್ ಕೂಡಾ ಈ ಸಂದರ್ಭದಲ್ಲಿ ಕಡಿಮೆಯಾಗುತ್ತದೆ. ಇವೆರಡೂ ಹಾರ್ಮೋನ್‌ಗಳು ದೇಹದಲ್ಲಿ ದ್ರವಪದಾರ್ಥವನ್ನು ನಿಯಂತ್ರಿಸುತ್ತಿರುತ್ತವೆ. ಇವುಗಳ ಮಟ್ಟ ಕಡಿಮೆಯಾದಾಗ ದೇಹದ ಟಿಶ್ಯೂಗಳು ಹೆಚ್ಚು ನೀರನ್ನು ಸಂಗ್ರಹಿಸುತ್ತವೆ. ಹೀಗೆ ನೀರು ಹೆಚ್ಚುವುದರಿಂದ ಎದೆ ಹಿಗ್ಗಬಹುದು. ಹೊಟ್ಟೆ ಕೂಡಾ ಬಾತುಕೊಂಡಂತೆನಿಸಬಹುದು. ಇದೇ ಕಾರಣದಿಂದ ನೀವು 5 ಪೌಂಡ್‌ಗಳವರೆಗೆ ತೂಕ ಹೆಚ್ಚಬಹುದು. ಅಂದರೆ ತೂಕಕ್ಕೆ ಕಾರಣ ಫ್ಯಾಟ್ ಅಲ್ಲವೆಂದಾಯಿತು. ಹಾಗಿದ್ದಾಗ ನೀವು ಖಂಡಿತಾ ನಿಟ್ಟುಸಿರು ಬಿಟ್ಟು ಸಮಾಧಾನ ಹೊಂದಬಹುದು.
ಶುಭ ಸುದ್ದಿ ಎಂದರೆ, ಪೀರಿಯಡ್ಸ್ ಶುರುವಾಗುತ್ತಿದ್ದಂತೆಯೇ ಈಸ್ಟ್ರೋಜನ್ ಹಾರ್ಮೋನ್ ಮಟ್ಟದಲ್ಲಿ ಏರಿಕೆಯಾಗುತ್ತದೆ. ಆಗ ನೀರು ದೇಹದಿಂದ ಹೊರ ಹೋಗುತ್ತದೆ.
ಅತಿಯಾದ ಕೊಲೆಸ್ಟೆರಾಲ್ ಆಹಾರ ಸೇವನೆ
ಪೀರಿಯಡ್ಸ್ ಕಾರಣದಿಂದಾಗಿ ತೂಕ ಏರಲು ಮತ್ತೊಂದು ಕಾರಣವೆಂದರೆ, ಹಾರ್ಮೋನ್ ವ್ಯತ್ಯಾಸದಿಂದಾಗಿ ಈ ಸಂದರ್ಭದಲ್ಲಿ ಉಪ್ಪು ಹಾಗೂ ಸಕ್ಕರೆ ಹೆಚ್ಚಿರುವ ಆಹಾರ ಪದಾರ್ಥಗಳನ್ನು ತಿನ್ನಬೇಕೆನಿಸುವುದು. ಕೆಲವೊಮ್ಮೆ ಎಷ್ಟು ತಿಂದರೂ ಮನಸ್ಸಿಗೆ ಸಮಾಧಾನವಾಗುವುದಿಲ್ಲ. ಹೀಗೆ ಉಪ್ಪು ಹೆಚ್ಚಿರುವ ಪದಾರ್ಥಗಳ ಸೇವನೆಯಿಂದ ಕೂಡಾ ದೇಹದಲ್ಲಿ ನೀರು ಸಂಗ್ರಹವಾಗುತ್ತದೆ. ಅಷ್ಟೇ ಅಲ್ಲ, ಐಸ್ ಕ್ರೀಮ್, ಪಿಜ್ಜಾ, ಕಾಫಿ, ಚಿಪ್ಸ್‌ನಂಥ ಆಹಾರಗಳನ್ನೇ ದೇಹ ಕೇಳುವುದರಿಂದ ನಿಜವಾಗಿಯೂ ನೀವು ಸ್ವಲ್ಪ ತೂಕ ಹೆಚ್ಚಬಹುದು. ಇನ್ನು ಪೀರಿಯಡ್ಸ್ ಸಂದರ್ಭದಲ್ಲಿ ದೇಹದಲ್ಲಿ ಮೆಗ್ನೀಶಿಯಂ ಮಟ್ಟ ಕುಸಿಯುತ್ತದೆ. ಇದು ಕೂಡಾ ಸಕ್ಕರೆ ಪದಾರ್ಥಗಳು ತಿನ್ನಬೇಕೆನಿಸುವಂತಾಗಲು ಕಾರಣ. ಹೀಗೆ ತಿಂದು ಗಳಿಸಿದ ತೂಕ ಮಾತ್ರ ಪೀರಿಯಡ್ಸ್ ಮುಗಿದ ಬಳಿಕ ಕಳೆದು ಹೋಗುವಂಥದಲ್ಲ.
ಇದೂ ಕಾರಣವೇ?
ಪೀರಿಯಡ್ಸ್ ಸಂದರ್ಭದಲ್ಲಿ ನೀವು ಜಿಮ್‌ಗೆ ಹೋಗಲು ಮನಸ್ಸು ಮಾಡುವುದಿಲ್ಲ. ಸುಸ್ತು, ಉದಾಸೀನತೆ, ಹೊಟ್ಟೆನೋವಿನ ಕಾರಣಗಳಿಂದಾಗಿ ಮಲಗಿದಲ್ಲೇ ಮಲಗಿರುತ್ತೀರಿ. ಈ ಕಾರಣಕ್ಕೆ ಕೂಡಾ ಕ್ಯಾಲೋರಿಗಳು ಶೇಖರವಾಗುತ್ತವೆ.
ಹೊಟ್ಟೆ ಉಬ್ಬರಿಸುವಿಕೆ
ಪೀರಿಯಡ್ಸ್ ಸಮಯದಲ್ಲಿ ಹೊಟ್ಟೆ ಉಬ್ಬರಿಸುವಿಕೆ ಬಹಳ ಸಾಮಾನ್ಯ. ಹಾರ್ಮೋನ್‌ಗಳ ಏರುಪೇರಿನಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ಆಗುತ್ತದೆ. ಇದರೊಂದಿಗೆ ಹೊಟ್ಟೆನೋವೂ ಸೇರಿಕೊಂಡು ಹೊಟ್ಟೆ ಟೈಟಾದಂತೆನಿಸುತ್ತದೆ. ಆಗಲೇ ನಿಮಗೆ ಬಟ್ಟೆಗಳೂ ಟೈಟಾದಂತೆನಿಸುವುದು. ಆದರೆ, ಇದು ಅನಿಸಿಕೆಯೇ ಹೊರತು ನಿಜವಾಗಿರುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.