
ಪ್ರತಿಯೊಬ್ಬ ಹೆಣ್ಣು ಹೆತ್ತ ತಂದೆತಾಯಿಗೂ ಪ್ರತಿದಿನ ಮಗಳು ಹೊರ ಹೋದಾಗಲೂ ಮನೆಗೆ ಬರುವವರೆಗೆ ಚಡಪಡಿಕೆ ತಪ್ಪಿದ್ದಲ್ಲ. ಆಕೆ ಸೀರೆ ಉಟ್ಟು ಹೊರ ಹೋಗಿರಲಿ, ಅಥವಾ ಜೀನ್ಸ್ ಧರಿಸಿರಲಿ ಇಲ್ಲವೇ ಬುರ್ಖಾವನ್ನೇ ಧರಿಸಿದ್ದರೂ ಸರಿ, ಹೆಣ್ಮಕ್ಕಳು ಹಾಗೂ ಅವರ ಪೋಷಕರು ನಿರಂತರವಾಗಿ ಒಂದು ರೀತಿಯ ಭಯದಲ್ಲೇ ಬದುಕುತ್ತಿರುತ್ತಾರೆ. ಎಲ್ಲರಿಗೂ ಅಪರಿಚಿತ ರೇಪಿಸ್ಟ್ ಆಗಿರಬಹುದೆಂಬ ಭಯ.
ಬಸ್ಸು ಹತ್ತುವಾಗಲೂ ಅದರೊಳಗೆ ರೇಪಿಸ್ಟ್ ಇರಬಹುದು, ತಡರಾತ್ರಿಯಲ್ಲಿ ಕ್ಯಾಬ್ ಬುಕ್ ಮಾಡಲು ಬರುವ ಡ್ರೈವರ್ ರೇಪಿಸ್ಟ್ ಆಗಿದ್ದರೆ ಎಂಬ ಹೆದರಿಕೆ, ರಸ್ತೆಯಲ್ಲಿ ನಡೆದುಕೊಂಡು ಹೋಗಲು ಅಕ್ಕಪಕ್ಕ ಎಲ್ಲಿಂದಲಾದರೂ ಆತ ಬಂದುಬಿಡಬಹುದೆನ್ನುವ ಭಯ, ಕಚೇರಿಯ ವಾಚ್‌ಮನ್ ಮೇಲೆ ಕೂಡಾ ಅನುಮಾನ, ನಿರಂತರ ತನ್ನನ್ನೇ ಗುರಾಯಿಸುವ ಆ ಹುಡುಗ ರೇಪಿಸ್ಟ್ ಇರಬಹುದೇ ಎಂಬ ಆತಂಕ... ಈ ರೇಪಿಸ್ಟ್ ಎನ್ನುವವನನ್ನು ನೋಡಿದ ಕೂಡಲೇ ಗುರುತಿಸುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೇ ?
ಬಸ್ ಸ್ಟಾಪ್ ನಿಂದ ಮನೆಗೆ ಡ್ರಾಪ್ : ಮಹಿಳೆಯರಿಗೆ ಪೊಲೀಸರಿಂದ ಹೊಸ ಸೇವೆ !
ರೇಪಿಸ್ಟ್ ಆಗಿರುವವನು ನೋಡಲು ಹೇಗಿರುತ್ತಾನೆ? ಆತನ ಚಲನವಲನ ಹೇಗಿರುತ್ತದೆ? ಆತ ಸೈಕೋಪಾತ್ ಆಗಿರುತ್ತಾನಾ? ಆತ ಜೈಲಿಗೆ ಹೋಗಿ ಬಂದಿರುತ್ತಾನಾ? ಇಂಥದೆಲ್ಲ ಪ್ರಶ್ನೆಗಳಿಗೆ
ನಿಖರ ಉತ್ತರ ಸಿಕ್ಕುವಂತಿದ್ದರೆ....
ವೆಲ್, ನಿಖರವಾಗಿ ಅಲ್ಲದಿದ್ದರೂ ತಜ್ಞರು ರೇಪಿಸ್ಟ್ ಕುರಿತು ಕೆಲ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅವರೇನಂತಾರೆ, ಅರ ಅಧ್ಯಯನಗಳು ಏನೆನ್ನುತ್ತವೆ ನೋಡೋಣ ಬನ್ನಿ...
ವಿಕೃತ, ಕೋಪಿಷ್ಠ
ಈ ರೇಪಿಸ್ಟ್ ಎನ್ನುವವ ಸುತ್ತಲಿನ ಸಮಾಜದೊಂದಿಗೆ ಚೆನ್ನಾಗಿ ಹೊಂದಿಕೊಂಡಿರಬಹುದು. ಆದರೂ ಆತ ಅದರ ಮಧ್ಯೆಯೂ ಸ್ವಲ್ಪ ತೀವ್ರಗಾಮಿಯೇ. ಇದರ ವಿವರ ನೋಡಿದರೆ ಸುತ್ತಮುತ್ತ ಇರುವ ಹಲವು ಗಂಡಸರನ್ನು ಸ್ಕ್ಯಾನರ್‌ನಡಿಗೆ ಇಡೋಣವೆನಿಸುತ್ತದೆ. ರಾರಿಟಾನ್ ಬೇ ಮೆಡಿಕಲ್ ಕೇಂದ್ರದ ಡಾ. ಶುವೇಂದು ಸೇನ್ ಪ್ರಕಾರ, "ರೇಪಿಸ್ಟ್‌ಗಳಲ್ಲಿ ಬಹುತೇಕರು ಆ್ಯಂಟಿ ಸೋಷ್ಯಲ್ ಹಾಗೂ ನಾರ್ಸಿಸ್ಟಿಕ್ ಪರ್ಸನಾಲಿಟಿ ಡಿಸಾರ್ಡರ್ ಹೊಂದಿರುತ್ತಾರೆ. ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರು ಹಾಗೂ ಅತ್ಯಾಚಾರಿಗಳು ಸ್ವಲ್ಪ ಅಸ್ಪಷ್ಟ ಮಾನಸಿಕ ಸ್ಥಿತಿ ಹೊಂದಿ ಬಳಿಕ ಅದೇ ಕಾಯಿಲೆಯಂತಾದವರು. ಅವರ ಈ ದುರ್ಗಣಗಳೆಲ್ಲ ಸಾಮಾನ್ಯವಾಗಿ ಬಾಲ್ಯ ಹಾಗೂ ಟೀನೇಜ್‌ನಲ್ಲಿಯೇ ಆರಂಭವಾಗುತ್ತದೆ. ಇಂಥ ಲಕ್ಷಣಗಳು ಕಂಡುಬಂದಾಗ ಆರಂಭದಲ್ಲೇ ಮೆಡಿಸಿನ್, ವರ್ತನಾ ಆಪ್ತಸಲಹೆ, ಮನೋಸಾಮಾಜಿಕ ಬೆಂಬಲ ಹಾಗೂ ಕೆಲ ಥೆರಪಿಗಳನ್ನು ನೀಡಿ ಅವನ್ನು ಸರಿಹಾದಿಗೆ ತರಬೇಕು," ಎನ್ನುತ್ತಾರೆ ಅವರು.
ಅಧ್ಯಯನವೊಂದರ ಪ್ರಕಾರ, ರೇಪಿಸ್ಟ್‌ಗಳು ಇತರರಿಗಿಂತ ಗಣನೀಯವಾಗಿ ಹೆಚ್ಚು ಮಟ್ಟದ ಕೋಪ, ಜಗಳಕ್ಕಿಳಿಯುವುದು, ನೆಗೆಟಿವಿಸಂ, ಕೆಟ್ಟ ಮಾತುಗಳನ್ನಾಡುವುದು ಮುಂತಾದ ವರ್ತನೆಗಳನ್ನು ಹೊಂದಿರುತ್ತಾರೆ. ಮತ್ತೊಂದು ಅಧ್ಯಯನ ವರದಿಯಂತೆ, ರೇಪಿಸ್ಟ್‌ಗಳು ಸ್ಕೀಜಾಯ್ಡ್, ವಿಕೃತ ಮನಸ್ಥಿತಿ ಹಾಗೂ ಅಗ್ರೆಸಿವ್ ವರ್ತನೆಗಳನ್ನು ಹೊಂದಿರುತ್ತಾರೆ.
ಆಲ್ಕೋಹಾಲ್ ಅಥವಾ ಡ್ರಗ್ ತೆಗೆದುಕೊಳ್ಳದೆಯೂ, ಕೇವಲ ತನ್ನ ಮನಸ್ಥಿತಿಯ ಕಾರಣದಿಂದ ಅತ್ಯಾಚಾರಿಯೂ ಅಂಥ ಕೃತ್ಯವನ್ನೆಸಗಬಲ್ಲ ಎನ್ನುವುದು ಸೇನ್ ಮಾತು.
ಸುರಕ್ಷಾ ಆ್ಯಪ್: 9 ನಿಮಿಷದಲ್ಲಿ ನೆರವು ನೀಡದ ಪೊಲೀಸರ ವಿರುದ್ಧ ಕ್ರಮ ...
ಅಧಿಕಾರಕ್ಕಾಗಿ ರೇಪ್
ಕೆಲ ಥಿಯರಿಗಳ ಪ್ರಕಾರ, ತಮ್ಮ ಅಧಿಕಾರ ಹಾಗೂ ಪ್ರಾಬಲ್ಯ ತೋರಿಸಲು ಕೂಡಾ ಪುರುಷರು ಅತ್ಯಾಚಾರ ಎಸಗುತ್ತಾರೆ. ಮಹಿಳೆಯನ್ನು ಶಿಕ್ಷಿಸುವ ಮೂಲಕ ''ಅವರು ಎಲ್ಲಿರಬೇಕೋ ಅಲ್ಲಿಡುತ್ತೇನೆ'' ಎನ್ನುವಂಥಾ ಯೋಚನೆ ಇವರದು.
"ಸಾವಿರಾರು ವರ್ಷಗಳಿಂದಲೂ ನಾಗರೀಕತೆಯು ಪುರುಷ ಪ್ರಧಾನವಾಗಿಯೇ ಬೆಳೆದು ಬಂದಿದೆ. ಇತ್ತೀಚೆಗೆ ಲಿಂಗ ಸಮಾನತೆಯತ್ತ ಸಾಗುತ್ತಿದೆ. ಆದರೆ, ಇದನ್ನು ಕೆಲ ಪುರುಷರಿಗೆ ಒಪ್ಪಿಕೊಳ್ಳಲಾಗುವುದಿಲ್ಲ. ಅವರ ಜೀನ್ಸ್‌ನಲ್ಲಿ ಇನ್ನೂ ಹಳೆಯ ಪುರುಷ ಪ್ರಧಾನ ಅಹಂಕಾರವೇ ಮನೆ ಮಾಡಿರುತ್ತದೆ. ಹಾಗಾಗಿ, ಮಹಿಳೆಯನ್ನು ಶಿಕ್ಷಿಸುವುದು, ಆಕೆಗೆ ತಾನು ಪುರುಷನನ್ನು ಮೀರಲಾರೆ ಎಂದು ಮನದಟ್ಟು ಮಾಡಿಸುವುದಕ್ಕಾಗಿ ಅತ್ಯಾಚಾರ ಮಾಡುವುದು, ಇದರಿಂದ ಆಕೆ ಜೀವನದಲ್ಲಿ ಮತ್ತೆ ಮೇಲೇಳಬಾರದು ಎನ್ನುವಂಥ ಹೊಡೆತ ಕೊಡುವೆ ಎಂಬಂಥ ಚಿಂತನೆಗಳಿಂದಾಗಿ ಅತ್ಯಾಚಾರ ಮಾಡುತ್ತಾರೆ. ಈ ಯೋಚನೆಗಳು ಅವರ ಕಾನ್ಷಿಯಸ್ ಮೈಂಡ್‌ನಲ್ಲಿ ಇಲ್ಲದಿರಬಹುದು. ಆದರೆ, ಅಪ್ರಜ್ಞಾಪೂರಕ ಮನಸ್ಥಿತಿ ಇದೇ ಆಗಿದೆ" ಎನ್ನುತ್ತಾರೆ ಜಿಟಿಬಿ ಆಸ್ಪತ್ರೆಯ ಮನೋತಜ್ಞ ಡಾ. ರೋಹನ್ ಬೋಕ್ಡಾವಾಲಾ.
ಬಾಲ್ಯದಲ್ಲಿ ದೌರ್ಜನ್ಯ
ಕೆಲ ಕೇಸ್‌ಗಳಲ್ಲಿ ಅತ್ಯಾಚಾರಿಗಳು ಬಾಲ್ಯದಲ್ಲಿ ಪಡೆದ ಕೆಟ್ಟ ಅನುಭವದ ಪರಿಣಾಮವಾಗಿ ಇಂಥ ಕಾಮುಕ ಮನಸ್ಥಿತಿ ತೋರುತ್ತಾರೆ. ಕ್ಲಿನಿಕಲ್ ಸೈಕೋಥೆರಪಿಸ್ಟ್ ಡಾ. ತೃಪ್ತಿ ಜಯಿನ್ ಪ್ರಕಾರ, "ಪೋಷಕರಿಂದ ಬಾಲ್ಯದಲ್ಲಿ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ನಡೆದಿದ್ದರೆ, ಕೆಲ ಮಕ್ಕಳು ಆಗ ಆ ಸಿಟ್ಟನ್ನು ತೋರಿಸಲಾಗದೇ ಒಳಗೇ ಬಚ್ಚಿಟ್ಟುಕೊಂಡಿರುತ್ತಾರೆ. ಜೊತೆಗೆ, ಕುಟುಂಬ ಸದಸ್ಯರ ವಿರುದ್ಧ ದ್ವೇಷ ಹುಟ್ಟಿಸಿಕೊಂಡಿರುತ್ತಾರೆ. ಆಗ ಅವರಲ್ಲಿ ತಾವು ಪ್ರೀತಿ ಪಡೆಯಲು ಅರ್ಹರಲ್ಲ ಎಂಬ ಭಾವನೆ ಹುಟ್ಟಿಕೊಂಡಿರುತ್ತಾರೆ. ಹಾಗಾಗಿ ಅವರು, ಪ್ರೀತಿ ಪಡೆಯಬೇಕೆಂದರೆ ಬಲ ಬಳಸುವುದು ಮಾತ್ರ ತಮಗಿರುವ ದಾರಿ ಎಂಬುದಾಗಿ ಯೋಚಿಸುತ್ತಾರೆ. ಆಗ ಬಲವಂತವಾಗಿ ಬಲಪ್ರಯೋಗದಿಂದ ಅತ್ಯಾಚಾರದಂಥ ದುಷ್ಕೃತ್ಯಕ್ಕಿಳಿಯುತ್ತಾರೆ".
ಗಂಡುಮಕ್ಕಳಿಗೆ ಗಮನ ಕೊಡಿ
ಸಮಾಜದಲ್ಲಿ ಅತ್ಯಾಚಾರಿಗಳ ಸಂಖ್ಯೆ ಕಡಿಮೆ ಮಾಡಲು ಇರುವ ಮೊದಲ ಹಾಗೂ ಪರಿಣಾಮಕಾರಿ ದಾರಿ ಎಂದರೆ ಗಂಡುಮಕ್ಕಳಿಗೆ ಬಾಲ್ಯದಿಂದಲೇ ಹೆಣ್ಣನ್ನು ಸಮಾನವಾಗಿ ಕಾಣುವಂತೆ, ಗೌರವಿಸುವಂತೆ ತಿಳಿ ಹೇಳಿ ಬೆಳೆಸುವುದು. ಹೆಣ್ಣಿನ ಬಳಿ ಹೇಗೆ ನಡೆದುಕೊಳ್ಳಬೇಕು ಎಂದು ಪ್ರೀತಿಯಿಂದ ತಿಳಿಸಿಕೊಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.