ರಸ್ತೆ ಬದಿ ಲೆಂಬೆ ಜ್ಯೂಸ್ ಮಾರುತ್ತಿದ್ದ ಊರಲ್ಲೇ ಈಕೆ ಈಗ SI

By Suvarna NewsFirst Published Jun 29, 2021, 10:18 AM IST
Highlights

ತುಂಬಾ ಚೆನ್ನಾಗಿ ಓದಿ, ಫಿಸಿಕಲ್ ಟೆಸ್ಟ್ ಪಾಸ್ ಮಾಡಿ, ಎಕ್ಸಾಮ್ ಬರೆದು ಜನ ಸಾಮಾನ್ಯರೇ ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಸುಲಭದ ಮಾತಲ್ಲ. ಆದರೆ ಈ ಯುವತಿ ರಸ್ತೆ ಬದಿ ಜ್ಯೂಸ್ ಮಾರುತ್ತಿದ್ದಾಕೆ, ಈಗ ಅದೇ ಸ್ಥಳದಲ್ಲಿ ಎಸ್‌ಐ. ಈಕೆಯ ಜರ್ನಿ ಇಂಟ್ರೆಸ್ಟಿಂಗ್

ತಿರುವನಂತಪುರಂ(ಜೂ.29): ಬಾಳು ಕೊಡಬೇಕಿದ್ದ ಪತಿ, ಕುಟುಂಬದಿಂದ ತ್ಯಜಿಸಲ್ಪಟ್ಟಾಗ ಆಕೆಯ ತೋಳಲ್ಲಿ 6 ತಿಂಗಳ ಕಂದಮ್ಮನೂ ಇತ್ತು. ಇನ್ನೇನು ಓದುತ್ತಿರಬೇಕಾದ 18 ವರ್ಷ ವಯಸ್ಸಿನಲ್ಲಿ ಮಗುವಿನೊಂದಿಗೆ ಬೀದಿಗೆ ಬಿದ್ದಾಕೆ ಈ ಗಟ್ಟಿಗಿತ್ತಿ. ಆದರೆ ಈಗ ಅದೇ ಜಾಗದಲ್ಲಿ ಮತ್ತೆ ಎದ್ದು ನಿಂತಿದ್ದಾರೆ. ಅದೇ ಸ್ಥಳದ ಸಬ್‌ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.

ಶಕ್ತಿ ಮತ್ತು ಆಶ್ಮವಿಶ್ವಾಸಕ್ಕೆ ಸ್ಪಷ್ಟ ನಿದರ್ಶನವಾಗಿರೋ ಕಂಜೀರಾಮಕುಳಂನ ನಿವಾಸ ಅನಿ ಶಿವ 14 ವರ್ಷದೊಳಗಾಗಿ ತನ್ನ ಬದುಕನ್ನು ಕಟ್ಟಿಕೊಂಡಿದ್ದಾರೆ.

ಬಂಟ್ವಾಳ; ಹೋಮ-ಹವನ ನಡೆಸುವ ಪಿಯು ವಿದ್ಯಾರ್ಥಿನಿ

ಕಂಜೀರಕುಳಂನ ಕೆಎನ್‌ಎಂ ಸರ್ಕಾರಿ ಕಾಲೇಜಿನಲ್ಲಿ ಮೊದಲ ವರ್ಷದ ಡಿಗ್ರಿ ಓದುತ್ತಿದ್ದಾಗ ಅನಿ ಶಿವ ಕುಟುಂಬ ವಿರೋಧಿಸಿದ್ದಕ್ಕೆ ತನ್ನ ಬಾಯ್‌ಫ್ರೆಂಡ್ ಜೊತೆ ವಾಸಿಸಲಾರಂಭಿಸಿದ್ದರು. ಆದರೆ ಮಗುವಾದ ಕೂಡಲೇ ಆತ ಆಕೆಯನ್ನು ತ್ಯಜಿಸಿದ್ದ. ಇಷ್ಟೆಲ್ಲ ದುರಂತ ಎದುರಿಸಿ ಮನೆಗೆ ಬಂದರೆ ಆಕೆಯನ್ನು ಯಾರೂ ಮನೆಯೊಳಗೂ ಸೇರಿಸಿಕೊಳ್ಳಲಿಲ್ಲ.

ಹೀಗಾಗಿ ಅನಿ ತನ್ನ ಅಜ್ಜಿ ಮನೆಯ ಹಿಂದಿದ್ದ ಒಂದು ಶೆಡ್‌ನಲ್ಲಿ ಮಗನೊಂದಿಗೆ ವಾಸಿಸಲು ಆರಂಭಿಸಿದರು. ಸಾಂಬಾರು ಪುಡಿ, ಸಾಬೂನಿನಂತಹ ಸಾಮಾನುಗಳನ್ನು ಮನೆ ಮನೆಗೆ ಮಾರಲಾರಂಭಿಸಿದರು. ಇನ್ಶೂರೆನ್ಸ್ ಏಜೆಂಟ್ ಆಗಿಯೂ ಕೆಲಸ ಮಾಡಿದರು. ಮನೆಗಳಿಗೆ ಅಗತ್ಯ ವಸ್ತು ತಲುಪಿಸುತ್ತಿದ್ದರು, ಮಕ್ಕಳಿಗೆ ಪ್ರಾಜೆಕ್ಟ್, ರೆಕಾರ್ಡ್‌ಗಳನ್ನು ಮಾಡಿಕೊಡುತ್ತಿದ್ದರು. ಹಬ್ಬದ ಸಂದರ್ಭ ಲಿಂಬೆ ಶರಬತ್ತನ್ನೂ ಮಾರುತ್ತಿದ್ದರು.

ಯುದ್ಧ ವಿಮಾನ ಏರಿದ ಕಣಿವೆ ರಾಜ್ಯದ ಮೊದಲ ಮಹಿಳಾ ಫೈಟರ್ ಪೈಲಟ್..!

ಈ ಬ್ಯುಸಿ ಲೈಫ್ ಮಧ್ಯೆ ಅನಿ ಸೋಷಿಯಾಲಜಿಯಲ್ಲಿ ಡಿಗ್ರಿ ಮುಗಿಸಿದರು. ತನ್ನ ಪುಟ್ಟ ಮಗ ಶಿವಸೂರ್ಯನ ಜೊತೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಶಿಫ್ಟ್ ಆಗುತ್ತಲೇ ಇದ್ದರು. ತನ್ನ ತಲೆಗೂದಲನ್ನು ಕತ್ತರಿಸಿ ಹುಡುಗನಂತೆ ಕಾಣಿಸಿಕೊಳ್ಳುತ್ತಿದ್ದರು. ಈ ಮೂಲಕ ತಾನು ತನ್ನ ಮಗನ ಸಹೋದರ ಅಥವಾ ತಂದೆ ಎಂದು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.

2014ರಲ್ಲಿ ಅನಿ ತನ್ನ ಸ್ನೇಹಿತರ ಸಲಹೆಯಂತೆ ತಿರುವನಂತಪುರಂನ ಮಹಿಳಾ ಎಸ್‌ಐ ಪೋಸ್ಟ್‌ಗೆ ಕೋಚಿಂಗ್ ಸೆಂಟರ್‌ಗೆ ಸೇರಿದರು.  ಮಹಿಳಾ ಪೊಲೀಸ್ ಪರೀಕ್ಷೆಯನ್ನೂ ಬರೆದರು. 2016ರಲ್ಲಿ ಪೊಲೀಸ್ ಆಗಿ ಸೇರಿಕೊಂಡ ಅನಿ 2019ರಲ್ಲಿ ಎಸ್‌ಐ ಪರೀಕ್ಷೆಯನ್ನೂ ಪಾಸ್ ಮಾಡಿದ್ದರು. ಆಕೆಯ ಜೀವನ ಎಲ್ಲಿ ಮುರಿದುಬಿದ್ದಿತ್ತೋ ಅದೇ ಜಾಗದಲ್ಲಿ ವರ್ಕಲ ಸ್ಟೇಷನ್‌ನ ಎಸ್‌ಐ ಆಗಿ 2021 ಜೂ.25ರಂದು ಆಕೆ ನೇಮಕಗೊಂಡಿದ್ದಾರೆ.

ಇಸ್ರೇಲ್‌ ಸೈನ್ಯದಲ್ಲಿ ಧೂಳೆಬ್ಬಿಸುತ್ತಿರುವ ಗುಜರಾತಿ ಯುವತಿ!

ನಾನು ಮಾನಸಿಕವಾಗಿ ಕುಸಿಯದೆ, ಕುಗ್ಗದೆ ಉಳಿಯುವಲ್ಲಿ ಸಕ್ಸಸ್ ಆದೆ. ಇಷ್ಟು ಕಷ್ಟಪಟ್ಟು, ಸವಾಲುಗಳನ್ನೆದುರಿಸಿ ಒಬ್ಬ ಮಹಿಳೆ ತನ್ನ ಬದುಕನ್ನು ಟ್ರ್ಯಾಕ್‌ಗೆ ತಂದು ನಿಲ್ಲಿಸಿದಾಗ ಜನ ಆಕೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಅನುಕಂಪ ತೋರಿಸುತ್ತಾರೆ. ಹಾಗಾಗಿ ನಾನು ಮತ್ತು ನನ್ನ ಮಗ ಇಲ್ಲಿ ಅಣ್ಣ, ತಮ್ಮನಾಗಿ ಇದ್ದೇವೆ ಎನ್ನುತ್ತಾರೆ ಆಕೆ.

click me!