ಬಂಟ್ವಾಳ; ಹೋಮ-ಹವನ ನಡೆಸುವ ಪಿಯು ವಿದ್ಯಾರ್ಥಿನಿ

By Suvarna NewsFirst Published Jun 27, 2021, 6:37 PM IST
Highlights

* ಬಂಟ್ವಾಳ ತಾಲೂಕಿನ ಬಾಲಕಿಯ ಸಾಧನೆ
* ತಂದೆ ಜತೆ ಸಹಾಯಕ್ಕೆ ತೆರಳುವ ಬಾಲಕಿ
* ವಿದ್ಯಾರ್ಥಿನಿ ಕಾರ್ಯಕ್ಕೆ ಎಲ್ಲೆಡೆಯಿಂದ ಸಿಗುತ್ತಿದೆ ಶ್ಲಾಘನೆ

ಮೌನೇಶ ವಿಶ್ವಕರ್ಮ
ಬಂಟ್ವಾಳ(ಜೂ. 27)  ಅಂತರಿಕ್ಷದವರೆಗೂ ಇಂದು ಸ್ತ್ರೀಯರು ತಮ್ಮ ಸಾಮರ್ಥ್ಯ ಮೆರೆಯುತ್ತಿದ್ದರೆ, ಶಾಸ್ತ್ರಬದ್ಧವಾದ ವೇದಾಧ್ಯಯನ, ಪೌರೋಹಿತ್ಯದಲ್ಲಿ ಸ್ತ್ರೀಯರ ತೊಡಗಿಸಿಕೊಳ್ಳುವಿಕೆ ತೀರಾ ಅಪರೂಪ. ಆದರೆ, ಇಲ್ಲೋರ್ವ ಬಾಲಕಿ ಸ್ವ ಇಚ್ಛೆಯಿಂದ ಪೌರೋಹಿತ್ಯದಲ್ಲಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದಾಳೆ.

ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರಾಗಿರುವ ತಾಲೂಕಿನ ಕಶೆಕೋಡಿಯ ಸೂರ್ಯನಾರಾಯಣ ಭಟ್ಟರ ಪುತ್ರಿ ಅನಘಾ, ವೇದಾಧ್ಯಯನ ಮಾಡಿದ್ದು, ತಂದೆ ಜೊತೆ ಮದುವೆ ಸಮಾರಂಭಗಳಲ್ಲಿ ಸಹಾಯಕಳಾಗಿ ಪೌರೋಹಿತ್ಯ ಮಾಡುವಷ್ಟು ಸಮರ್ಥಳಾಗಿದ್ದಾಳೆ. ಈಕೆ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾಾರ್ಥಿನಿ.

ಬಂಟ್ವಾಳ ತಾಲೂಕಿನ ದಾಸಕೋಡಿ ಸಮೀಪ ಕಶೆಕೋಡಿಯ ಪುರೋಹಿತ, ವೈದಿಕ ಮನೆತನದ ಸೂರ್ಯನಾರಾಯಣ ಭಟ್ಟರ ಮನೆಯಲ್ಲಿ ನಿತ್ಯವೂ ವೇದಾಧ್ಯಯನ ನಡೆಯುತ್ತದೆ. ಜೊತೆಗೆ ಸಂಗೀತ, ಗೀತಾಧ್ಯಯನಕ್ಕೂ ಮಕ್ಕಳು ಬರುತ್ತಾರೆ. ಮನೆಯಲ್ಲಿ ದಿನನಿತ್ಯ ನಡೆಯುವ ವೇದಾಧ್ಯಯನ, ವೈದಿಕ ಪಠಣ ಅನಘಾಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟಿದೆ.

ಯಾವ ದಿನ ಯಾವ ದೇವರಿಗೆ ಉಪವಾಸ ಮಾಡಬೇಕು?

ಬಾಲ್ಯದಲ್ಲೇ ವೇದ ಪಾಠವನ್ನು ಆಸಕ್ತಿಯಿಂದ ಗಮನಿಸುತ್ತಿದ್ದ ಅನಘಾ, ತಂದೆಯ ಜೊತೆ ವೇದಾಭ್ಯಾಸ ಮಾಡುವ ಕುರಿತು ಕೇಳಿಕೊಂಡಾಗ, ಸಂತೋಷದಿಂದಲೇ ಮಗಳಿಗೆ ಪಾಠ ಹೇಳಲು ಆರಂಭಿಸಿದ್ದರು.  ಅನಘಾಳ ತಮ್ಮ ಆದಿತ್ಯಕೃಷ್ಣ ಈಗಾಗಲೇ ವೇದಾಭ್ಯಾಸ, ಪೌರೋಹಿತ್ಯದಲ್ಲಿ ಸಾಕಷ್ಟು ಆಸಕ್ತಿ ತೋರಿದ್ದು, ಅಭ್ಯಾಸದಲ್ಲಿ ತೊಡಗಿದ್ದಾನೆ.

ಹೋಮ-ಹವನದಲ್ಲೂ ಭಾಗಿಯಾಗುತ್ತಿರುವ ಅನಘಾ
ಪೌರೋಹಿತ್ಯ ನಡೆಸುವ ಪುರುಷ ಪುರೋಹಿತರ ಜೊತೆಗೆ ಭಾಗಿಯಾಗಿ ತಾನೇನು ಕಡಿಮೆ ಇಲ್ಲ ಎಂದು ಸಾರುತ್ತಿರುವ ಅನಘಾ, ಪೌರೋಹಿತ್ಯದಲ್ಲೂ ಹೊಸಪರಂಪರೆಯನ್ನು ಹುಟ್ಟು ಹಾಕಿದ್ದಾಳೆ. ಅನಘಾ ವೇದಾಧ್ಯಯನದಲ್ಲಿ ನಿರತಳಾಗಿರುವುದನ್ನು ಕಂಡು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಖುಷಿಪಟ್ಟಿದ್ದಾರೆ. ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿ ಇನ್ನಷ್ಟು ಅಧ್ಯಯನ ಮುಂದುವರಿಸಲು ಸಲಹೆ ನೀಡಿದ್ದಾರೆ. ಇದರಿಂದ ಅನಘಾಗೆ ಮತ್ತಷ್ಟು ಪ್ರೋತ್ಸಾಹ ದೊರಕಿತು ಎನ್ನುತ್ತಾರೆ ಅನಘಾಳ ತಂದೆ ಕಶೆಕೋಡಿ ಸೂರ್ಯನಾರಾಯಣ ಭಟ್.

ನನಗೆ ಮೊದಲೆ ಆಸಕ್ತಿ ಇತ್ತು, ಮನೆಯಲ್ಲಿನ ಪೂರಕ ವಾತಾವರಣ ನನ್ನ ಹಂಬಲಗಳಿಗೆ ಬೆಂಬಲ ನೀಡಿದೆ. ಹಾಗಾಗಿ ವೇದಾಧ್ಯಯನದಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಗಲಿಲ್ಲ. ಹೆಚ್ಚಿನ ಅಧ್ಯಯನದ ಜೊತೆಗೆ, ಇನ್ನಷ್ಟು ಸಂಸ್ಕೃತ ಭಾಷೆ, ವೇದಭ್ಯಾಸ ಕಲಿಕೆಯ ಅಗತ್ಯವಿದೆ ಎಂದು ವಿದ್ಯಾರ್ಥಿನಿ  ಅನಘಾ ಹೇಳುತ್ತಾರೆ. 

 

click me!