ಗಲೀಜು ನೀರಿ​ನಿಂದ ಹೈರಾಣಾದ ವಿಜಯಪುರದ ಜನತೆ!

By Web Desk  |  First Published Nov 3, 2019, 12:52 PM IST

ಪಾಚಿಗಟ್ಟಿ ದುರ್ವಾ​ಸನೆ, ಸೊಳ್ಳೆ ಹಾವಳಿ| ಡೆಂಘೀ, ಚಿಕೂನ್‌ ಗುನ್ಯಾ, ಮಲೇ​ರಿಯಾ ಭೀತಿ| ಈಚೆಗೆ ಸುರಿದ ಭಾರೀ ಮಳೆ ಹಾಗೂ ಉಂಟಾದ ಪ್ರವಾ​ಹ​ದ ನೀರಿ​ನಿಂದ ಜನರು ಸಾಕಷ್ಟು ತೊಂದರೆ ಅನು​ಭ​ವಿ​ಸಿ​ದ್ದಾರೆ| ಈಗ ಮಳೆ ಹಾಗೂ ಪ್ರವಾಹ ಎರಡೂ ನಿಂತರು ಸಹ ಗಲೀಜು ನೀರಿನಿಂದ ಮಾತ್ರ ಜನರಿಗೆ ತೊಂದರೆ ತಪ್ಪುತ್ತಿಲ್ಲ| ಮಳೆ​ಯಿಂದಾಗಿ ಚರಂಡಿ​ಗಳಲ್ಲಿ ಹೂಳು ತುಂಬಿ​ಕೊಂಡಿ​ದೆ| ಮಳೆ ನೀರಿನ ಜತೆ​ಯಲ್ಲೇ ಚರಂಡಿ ನೀರೂ ನಿಂತು ಮತ್ತಷ್ಟು ಗಲೀಜು ಸೃಷ್ಟಿ​ಯಾಗಿ ನಿವಾ​ಸಿ​ಗ​ಳನ್ನು ಹೈರಾ​ಣಾ​ಗು​ವಂತೆ ಮಾಡು​ತ್ತಿದೆ|


ಖಾಜಾಮೈನುದ್ದೀನ್‌ ಪಟೇಲ್‌

ವಿಜಯಪುರ[ನ.3]: ಮಳೆ ನಿಂತು ಸುಮಾರು ದಿನಗಳೇ ಸಂದಿವೆ. ಆದರೆ ಈ ಬಡಾವಣೆಯಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರು ಮಾತ್ರ ಇನ್ನೂ ಸರಿದಿಲ್ಲ. ಮೇಲಾಗಿ ಗಬ್ಬೆದ್ದು ಹೋಗಿದೆ. ಪಾಚಿಗಟ್ಟಿ ಅನಾರೋಗ್ಯ ಹುಟ್ಟು ಹಾಕಲು ಕಾದು ಕುಳಿ​ತಿದೆ. ಇದಕ್ಕೆ ಗಟಾರ್‌ ನೀರು ಸಾಥ್‌ ಕೊಡು​ತ್ತಿದ್ದು ಜನ​ರನ್ನು ಹೈರಾ​ಣಾಗಿ​ಸಿದೆ.

Latest Videos

undefined

ನಗರದ ಐತಿಹಾಸಿಕ ಇಬ್ರಾಹಿಂ ರೋಜಾ ಹಿಂಭಾಗದಲ್ಲಿರುವ ಬಾಗವಾನ ಕಾಲೋನಿ, ಮುಜಾವರ ಮೊಹಲ್ಲಾ ಸೇರಿದಂತೆ ಅನೇಕ ಬಡಾವಣೆಗಳು ಇಂದಿಗೂ ನಡುಗಡ್ಡೆಯಾಗಿಯೇ ಉಳಿದಿವೆ. ಮಳೆ ನಿಂತು ಸುಮಾರು 12 ದಿನ ಕಳೆದರೂ ಈ ಮನೆಯ ಮುಂದೆ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿದೆ. ಇನ್ನೂ ಅನೇಕರ ಮನೆಗಳಲ್ಲಿ ನೀರು ನಿಂತು ಮನೆ ತೊರೆಯುವಂತಾಗಿದೆ. ಎಲ್ಲೂ ನೀರು ಹರಿದು ಹೋಗುವ ಅವಕಾಶವೇ ಇಲ್ಲ, ಹೀಗಾಗಿ ಅಲ್ಲಿರುವ ಬಡವರು ತಮ್ಮ ಕಷ್ಟ ನುಂಗಿ ನಿಂತ ನೀರಿನಲ್ಲೇ ನೆನೆದು ಮನೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಹಾಗೂ ಕಸ ಕಡ್ಡಿ, ಹೂಳು ತುಂಬಿ​ಕೊಂಡು ಚರಂಡಿ​ಗಳು ಮುಚ್ಚಿ​ಕೊಂಡು ನೀರು ಸರಾ​ಗ​ವಾಗಿ ಹರಿದು ಹೋಗದೆ ಈ ಸ್ಥಿತಿ ಉಂಟಾ​ಗಿದೆ. ಮಳೆ ನೀರಿ​ನೊಂದಿಗೆ ಚರಂಡಿಯ ಗಲೀಜು ನೀರೂ ಸೇರಿ​ಕೊಂಡು ಮತ್ತಷ್ಟು ಗಲೀಜು ಸೃಷ್ಟಿಸಿ ನಿವಾ​ಸಿ​ಗ​ಳನ್ನು ಸಂಕಷ್ಟ ಸಿಲು​ಕಿ​ಸಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

12 ದಿನ ಗತಿಸಿರುವುದರಿಂದ ನೀರು ಸಂಪೂರ್ಣ ಪಾಚಿಗಟ್ಟಿ ಗಬ್ಬು ವಾಸನೆ ಹೊಡೆ​ಯು​ತ್ತಿದೆ. ಒಂದು ತರಹ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣಗೊಂಡಿದೆ. ಚರಂಡಿ ನೀರು ನಿಂತಿದೆಯೋ ಏನೋ ಎಂಬಂತೆ ಭಾಸವಾಗುತ್ತದೆ. ನಿಂತ ನೀರಿನಲ್ಲಿ ಸೊಳ್ಳೆ, ನೊಣಗಳ ಹಾವಳಿ ಮಿತಿ​ಮೀ​ರಿದೆ. ಒಂದೆಡೆ ಸರ್ಕಾರ ನೀರು ನಿಲ್ಲದಂತೆ ನೋಡಿಕೊಳ್ಳಿ, ಟೈರ್‌ನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಜಾಗೃತಿ ಮೂಡಿಸುತ್ತಿದೆ. ಆದರೆ ಇಡೀ ಬಡಾವಣೆಯೇ ನೀರು ನಿಂತು ಪಾಚಿಗಟ್ಟಿ, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಆದರೂ ಇತ್ತ ಗಮನ ಹರಿ​ಸು​ವ​ವ​ರಿಲ್ಲ.

ರೋಗ​ಗಳ ಭೀತಿ:

ನೀರು ನಿಂತು ವಾತಾ​ವ​ರಣ ಹದ​ಗೆ​ಟ್ಟಿ​ದ್ದ​ರಿಂದ ಕೆಲವರು ಸಾಂಕ್ರಾಮಿಕ ರೋಗಗಳಿಗೂ ತುತ್ತಾಗಿದ್ದಾರೆ. ಇದನ್ನು ನೋಡಿ ಅನೇಕರು ಜಾಗ ಖಾಲಿ ಮಾಡಿದ್ದಾರೆ. ಆದರೆ ಅನೇಕರು ಬಡ ಕೂಲಿಕಾರ್ಮಿಕರು, ಪೌರಕಾರ್ಮಿಕರು ಬೇರೆಡೆ ಹೋಗಲು ಸಾಧ್ಯವೇ ಇಲ್ಲ. ಅಲ್ಲಿಯೇ ರಟ್ಟುಗಳಿಂದ ಮನೆ ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ಇದ್ದ ಅಲ್ಪಸೂರನ್ನು ಬಿಟ್ಟು ಹೋಗಲು ಆಗದೆ ನರಕ ಯಾತನೆಯಲ್ಲಿಯೇ ಕಾಲ ಕಳೆ​ಯು​ತ್ತಿ​ದ್ದಾರೆ.ಹೀಗಾಗಿ ಅಲ್ಲಿಯೇ ತಮ್ಮ ಕಷ್ಟವನ್ನು ನುಂಗಿ ಏನಾದರೂ ಇರಲಿ ಎಂದು ನೋವು ನುಂಗಿ ಬದುಕುತ್ತಿದ್ದಾರೆ. ಅವರು ಬದುಕುವ ಸ್ಥಿತಿ ನೋಡಿದರೆ ಕಣ್ಣೀರು ಜಿನುಗದೆ ಇರ​ಲಾ​ರದು.

ಸುತ್ತಲೂ ನೀರು, ಕೆಲವೊಬ್ಬರ ಮನೆಗಳಿಗೂ ನುಗ್ಗಿದೆ. ರಟ್ಟುಗಳಿಂದ ಕಟ್ಟಿಕೊಂಡ ಮನೆಯಂತೂ ಹಾಳಾಗಿ ಹೋಗಿವೆ. ಸಂಗ್ರಹಿಸಿಟ್ಟಿದ್ದ ಧಾನ್ಯಗಳು ನೀರು ಪಾಲಾಗಿವೆ. ಆ ಖರ್ಚು ಒಂದೆಡೆ, ಇನ್ನೊಂದೆಡೆ ಡೆಂಘೀ, ಚಿಕೂನ್‌ ಗುನ್ಯಾ, ಮಲೇ​ರಿಯಾ, ಕಾಲರಾ, ಟೈಫೈ​ಡ್‌ ಸೇರಿ​ದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಭೀತಿ ಕಾಡು​ತ್ತಿದೆ. ಮತ್ತೊಂದೆಡೆ ಮನೆಯೊಳಗೆ ನುಗ್ಗುತ್ತಿರುವ ನೀರು ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ.

ಮಳೆ ಬಂದಾಗಲಂತೂ ದೋಣಿ ತಂದು ಈ ನಿವಾಸಿಗಳನ್ನು ಪಾರು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಈಗ ನೀರು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ ಹೊರತು ಹಿಂಭಾಗದಲ್ಲಂತೂ ನದಿ ನೀರು ಹಾಗೆಯೇ ನಿಂತಿದೆ. ಈ ಸ್ಥಿತಿ ಇನ್ನೂ ಎಷ್ಟುದಿನ ಅನು​ಭ​ವಿ​ಸ​ಬೇಕೋ ದೇವರೇ ಎಂಬ ಈ ನಿವಾ​ಸಿ​ಗ​ಳ​ನ್ನು​ ಕಾ​ಡು​ತ್ತಿದೆ. ಇದಕ್ಕೆ ಸಂಬಂಧಿತ ಅಧಿ​ಕಾ​ರಿ​ಗಳು ಹಾಗೂ ಇಲಾಖೆ ಕ್ರಮ ಕೈಗೊಂಡು ಈ ಕಷ್ಟ​ದಿಂದ ನಿವಾ​ಸಿ​ಗ​ಳನ್ನು ಪಾರು ಮಾಡ​ಬೇ​ಕಾ​ಗಿದೆ ಎಂಬುದು ಪ್ರಜ್ಞಾ​ವಂತರ ಮನ​ವಿ​ಯಾ​ಗಿದೆ.

ಇಲ್ಲಿ ನೀರು ನಿಲ್ಲುವುದರಿಂದ ಗಬ್ಬು ವಾಸನೆ ಬೀರು​ತ್ತಿದೆ. ಊಟ ಮಾಡುವುದೂ ದುಸ್ತ​ರ​ವಾ​ಗಿದೆ. ನಮ್ಮ ಮಕ್ಕಳು ಅನಾರೋಗ್ಯದಿಂದ ಆಸ್ಪತ್ರೆ ಸೇರುವಂತಾಗಿದೆ. ಬೇರೆ ಕಡೆ ಹೋಗಿ ಬಾಡಿಗೆ ಮನೆ ಹಿಡಿಯಲು ಕಾಸಿಲ್ಲ. ಇದ್ದ ಇಂತಹ ಮನೆಯಲ್ಲಿ ಇರುವುದು ಅನಿವಾರ್ಯ ಆಗಿದೆ ಎಂದು ಸ್ಥಳೀಯ ನಿವಾಸಿ ನಿಲ್ಲವ್ವ ದೊಡ್ಡಮನಿ ಅವರು ಹೇಳಿದ್ದಾರೆ. 

ಪಾಪ ಇಲ್ಲಿನ ಜನರ ಜೀವನ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಮಳೆ ನೀರು, ಚರಂಡಿಯ ಕಲುಷಿತ ನೀರಿನಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸದೇ ಗಾಡ ನಿದ್ರೆಗೆ ಜಾರಿದ್ದಾರೆ. ಕೂಡಲೇ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿ​ಸ​ದಿ​ದ್ದರೆ ಉಗ್ರವಾಗಿ ಹೋರಾಟ ಮಾಡುತ್ತೇವೆ ಎಂದು ಅವಿಸ್ಕಾರ ಸೇವಾ ಸಂಸ್ಥೆಯ ಮುಖಂಡ ಹುಸೇನ್‌ ಬಾಗವಾನ ಅವರು ತಿಳಿಸಿದ್ದಾರೆ.

click me!