
ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಬಿಗ್ ಬಾಸ್ ಮನೆ ಬ್ಯಾಡ್ ಬಾಯ್ಸ್ ಪರಪ್ಪನ ಅಗ್ರಹಾರ ಸೇರಿದ್ರು. ಕೊನೆಗೂ ಇವರಿಗೆ ಬೇಲ್ ಮಂಜೂರಾಗಿದ್ದು ವಿನಯ್, ರಜತ್ ಹೊರಬಂದಿದ್ದಾರೆ. ಹೊರಬಂದ ಮಚ್ಚೇಶ್ವರರು ಈ ಕಿರಿಕ್ ಬಗ್ಗೆ ಹೇಳಿದ್ದೇನು..? ನೋಡೋಣ ಬನ್ನಿ.
ಮಚ್ಚು ಹಿಡಿದು ಹುಚ್ಚು ಹುಚ್ಚಾಗಿ ರೀಲ್ಸ್ ಮಾಡಿದ್ದ ರಜತ್, ವಿನಯ್ ಪೊಲೀಸರ ಅತಿಥಿಯಾಗಿದ್ರು. ಅರೆಸ್ಟ್ ಆದ ಮೇಲೆ ಅಸಲಿ ಮಚ್ಚು ಮುಚ್ಚಿಟ್ಟು ಫೈಬರ್ ಮಚ್ಚನ್ನ ತೋರಿಸಿ ಬಚಾವ್ ಆಗ್ಲಿಕ್ಕೆ ಹೋಗಿ ಮತ್ತಷ್ಟು ಎಡವಟ್ಟು ಮಾಡಿಕೊಂಡಿದ್ರು. ಸಾಲದಕ್ಕೆ ಗುಂಡಿ ತೆಗಡದುಕೊಂಡು, ಕಾಲರ್ ಏರಿಸಿಕೊಂಡು ರೌಡಿಗಳಂತೆ ಪೋಸ್ ಕೊಡ್ತಾ ಇದ್ದ ಇವರಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. ಕೋರ್ಟ್ ಮುಂದೆ ಹಾಜರು ಪಡಿಸಿ ಮೂರು ದಿನ ಕಸ್ಟಡಿಗೆ ಪಡೆದಿದ್ದ ಬಸವೇಶ್ವರ ನಗರ ಠಾಣೆ ಪೊಲೀಸರು ಬಳಿಕ ಪರಪ್ಪನ ಅಗ್ರಹರಕ್ಕೆ ಬಿಟ್ಟುಬಂದಿದ್ರು. ಶುಕ್ರವಾರ ಇವರಿಗೆ ಬೇಲ್ ಮಂಜೂರಾಗಿದ್ದು ಕೊನೆಗೂ ಬ್ಯಾಡ್ ಬಾಯ್ಸ್ ಹೊರಬಂದಿದ್ದಾರೆ. ಇನ್ಮುಂದೆ ನಮ್ಮಪ್ಪರಾಣೆ ರೀಲ್ಸ್ ಮಾಡಲ್ಲ.. ಎಳನೀರು ಕತ್ತರಿಸೋದಕ್ಕೂ ಮಚ್ಚು ಎತ್ತಲ್ಲ ಅಂತ ವಾಗ್ದಾನ ಮಾಡಿ ಜೈಲಿಂದ ಹೊರಬಂದಿದ್ದಾರೆ ರಜತ್ , ವಿನಯ್. ಈ ವಿಚಾರವಾಗಿ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಕೂಡ ಹಂಚಿಕೊಂಡಿರೋ ರಜತ್ ಌಂಡ್ ವಿನಯ್ ಗೊತ್ತಿಲ್ಲದೇ ತಪ್ಪು ಮಾಡಿದ್ವಿ. ಕ್ಷಮೆ ಇರಲಿ ಅಂತ ಕೇಳಿಕೊಂಡಿದ್ದಾರೆ.