Nov 9, 2023, 11:03 PM IST
ಬೆಂಗಳೂರು (ನ.9): ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಅನುದಾನದ ಸಮರವನ್ನು ಬಿಜೆಪಿ ಸಾರಿದೆ. ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಸರ್ಕಾರದ ವಿರುದ್ಧ ಮೂರು ದಿನದ ಹೋರಾಟಕ್ಕೆ ಕರೆ ನೀಡಿದ್ದಾರೆ. ತಿಂಗಳಾಂತ್ಯದಲ್ಲಿ ವಿಧಾನಸೌಧ ಇಲ್ಲವೇ ಫ್ರೀಡಮ್ ಪಾರ್ಕ್‌ನಲ್ಲಿ ಹೋರಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.
ಗುರುವಾರ ಆರ್‌ಆರ್ ನಗರದಲ್ಲಿ ಯಡಿಯೂರಪ್ಪ ಸುತ್ತಾಡಿದ್ದಾರೆ. ಸರ್ಕಾರ ವೈಫಲ್ಯ, ಅನುದಾನ ತಡೆ ಖಂಡಿಸಿ ಪ್ರತಿಭಟನೆ ಮಾಡಲು ಕರೆ ನೀಡಿದ್ದಾರೆ. R.R ನಗರದಲ್ಲಿ ಅಭಿವೃದ್ಧಿ ಕೆಲಸ ವೀಕ್ಷಿಸಿದ ಬಿಎಸ್‌ವೈ, 126 ಕೋಟಿ ವಾಪಸ್ ಕೊಡಿಸುವ ಭರವಸೆ ನೀಡಿದ್ದಾರೆ. ಹಣ ಬಿಡುಗಡೆಯಾಗದಿದ್ದರೆ ಹೋರಾಟ ಅನಿವಾರ್ಯ ಎಂದಿರುವ ಅವರು, ಮುನಿರತ್ನ ವಿರುದ್ಧ ದ್ವೇಷ ರಾಜಕಾರಣ ಬಿಡಿ ಎಂದು ಸಲಹೆ ನೀಡಿದ್ದಾರೆ.
ಒಂದು ಕೈಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ರಾವಣರೂಪಿ ಕಾಂಗ್ರೆಸ್: ಕುಮಾರಸ್ವಾಮಿ ಕಿಡಿ
ರಿಂಗ್ ರಸ್ತೆಯ ಪಿ.ಇ.ಎಸ್. ಕಾಲೇಜು ಹತ್ತಿರ ಕೆರೆಕೋಡಿ ಜಂಕ್ಷನ್‌ನಲ್ಲಿ ಅರ್ಧಕ್ಕೆ ನಿಂತಿರುವ ಗ್ರೇಡ್- ಸಪರೇಟರ್ ನಿರ್ಮಾಣ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದು ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯಡಿ ಕತ್ರಿಗುಪ್ಪೆಯಿಂದ ಬರುವ ರಿಂಗ್ ರಸ್ತೆಯಾಗಿದೆ ಆದರೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಹೊಸಕೆರೆಹಳ್ಳಿ ಕೆರೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ, ಕೆರೆ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ ಎಂದು ಮುನಿರತ್ನ ಮಾಹಿತಿ ನೀಡಿದ್ದಾರೆ.