
ಈ ದ್ವೀಪರಾಷ್ಟ್ರದ ವಿಸ್ತೀರ್ಣ ಸುಮಾರು 8 ಚದರ ಮೈಲುಗಳಷ್ಟು. ಪೆಸಿಫಿಕ್ ಸಮುದ್ರದ ಶಾಂತವಾದ ಪ್ರದೇಶದಲ್ಲಿ ಈ ದ್ವೀಪ ದೇಶ ಇದೆ. ಇದರ ಹೆಸರು ನೌರು. ಆಸ್ಟ್ರೇಲಿಯಾದ ಈಶಾನ್ಯದಲ್ಲಿರುವ ಮೈಕ್ರೋನೇಷಿಯಾದಲ್ಲಿರುವ ಈ ಪುಟ್ಟ ದ್ವೀಪ ರಾಷ್ಟ್ರ ಇದೀಗ ತನ್ನ ಪೌರತ್ವವನ್ನು ಬಿಕರಿಗಿಟ್ಟಿದೆ. ಅಂದರೆ ದುಡ್ಡು ಕೊಟ್ಟರೆ ನೀವೂ ಈ ದೇಶದ ಪ್ರಜೆ ಆಗಬಹುದು. ಪೌರತ್ವದ ವೆಚ್ಚವೂ ಹೆಚ್ಚೇನಿಲ್ಲ. 105,000 ಡಾಲರ್ ಅಥವಾ ಸುಮಾರು 91.5 ಲಕ್ಷ ರೂಪಾಯಿ.
ಆದರೆ ಈ ಪುಟ್ಟ ದ್ವೀಪದ ಪೌರತ್ವ ಪಡೆಯುವ ಮೊದಲು ನೀವು ಒಂದು ವಿಷಯ ನೆನಪಿಟ್ಟುಕೊಳ್ಳಿ- ಅದೇನು ಎಂದರೆ ಈ ದ್ವೀಪ ದೇಶ ಹೆಚ್ಚು ವರ್ಷಗಳೇನೂ ಉಳಿಯೋದಿಲ್ಲ. ವಿಜ್ಞಾನಿಗಳು ಹಾಗೂ ಪರಿಸರ ತಜ್ಞರು ಹೇಳೋ ಪ್ರಕಾರ ಇದು ಇನ್ನೊಂದಷ್ಟು ದಶಕಗಳಲ್ಲಿ ಸಮುದ್ರದ ನೀರಿನಲ್ಲಿ ಮುಳುಗುವ ಸಾಧ್ಯತೆಯೇ ಹೆಚ್ಚು. 21 ಚದರ ಕಿಲೋಮೀಟರ್ ವಿಸ್ತೀರ್ಣದ ಈ ದ್ವೀಪ ಅಳಿವು ಉಳಿವಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಭೂಗ್ರಹದ ತಾಪಮಾನ ಬೆಚ್ಚಗಾಗುತ್ತಿರುವಂತೆ ಸಮುದ್ರದ ಮಟ್ಟ ಏರಿಕೆಯಾಗುತ್ತಿದೆ. ಆಗ ದ್ವೀಪ ಮುಳುಗಬಹುದು. ಕರಾವಳಿ ಸವೆತ ಮತ್ತು ಚಂಡಮಾರುತದ ಉಲ್ಬಣಗಳ ಬೆದರಿಕೆಯನ್ನೂ ದ್ವೀಪ ಎದುರಿಸುತ್ತಿದೆ.
ಹಾಗಾದರೆ ನೀವು ಯಾಕೆ ಈ ದೇಶದ ಪೌರತ್ವ ಖರೀದಿಸಬೇಕು? ಅದು ಈ ದ್ವೀಪವನ್ನು ಹಾಗೂ ದ್ವೀಪವಾಸಿಗಳನ್ನು ಉಳಿಸುವುದಕ್ಕಾಗಿಯಂತೆ. ಐರ್ಲೆಂಡ್, ಹಾಂಗ್ ಕಾಂಗ್, ಯುಎಇ, ಸಿಂಗಾಪುರ ಮತ್ತು ಯುಕೆ ಸೇರಿದಂತೆ 89 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೌರು ನೀಡುತ್ತದೆ. ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ದೇಶದ ಹೋರಾಟವನ್ನು ಹೆಚ್ಚಿಸಲು ತನ್ನ 'ಗೋಲ್ಡನ್ ಪಾಸ್‌ಪೋರ್ಟ್'ಗಳನ್ನು ಖರೀದಿಸಲು ಜನರನ್ನು ಇಲ್ಲಿನ ಸರಕಾರ ಹುಡುಕುತ್ತಿದೆ.
ಗ್ಲೋಬಲ್ ಮೊಬಿಲಿಟಿ ಫಾರ್ ಮಿಲಿಯನೇರ್ಸ್‌ನ ಲೇಖಕ ಕಿರ್ಸ್ಟಿನ್ ಸುರಾಕ್ ಪ್ರಕಾರ, ಪೌರತ್ವವನ್ನು ಮಾರಾಟ ಮಾಡುವುದು ನೌರುನಂತಹ ಸೂಕ್ಷ್ಮ ದೇಶಗಳಿಗೆ ಸಂಪೂರ್ಣವಾಗಿ ಅಗಾಧವಾದ ಆರ್ಥಿಕ ಬಲ ತಂದುಕೊಡಬಹುದು. ಇಂಥ ದ್ವೀಪಗಳ ಪೌರತ್ವ ಬಯಸುವ ಬಿಲಿಯನೇರ್‌ಗಳು ಇದ್ದಾರೆ. ಸುಮಾರು 12,500 ನಿವಾಸಿಗಳನ್ನು ಹೊಂದಿರುವ ಈ ತಗ್ಗು ಪ್ರದೇಶದ ಬಡ ರಾಷ್ಟ್ರ ಹವಾಮಾನ ಬಿಕ್ಕಟ್ಟಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಂಪನ್ಮೂಲಗಳ ಕೊರತೆಯನ್ನು ಹೊಂದಿದೆ. ರಾಷ್ಟ್ರವು ತನ್ನ ನಿವಾಸಿಗಳನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಿ ಹೊಸ ಸಮುದಾಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದಕ್ಕೆ ಸುಮಾರು 545 ಕೋಟಿ ರೂ. ವೆಚ್ಚವಾಗಲಿದೆ.
ನೌರುವಿನ ಆರ್ಥಿಕ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವ ಪೌರತ್ವ ಕಾರ್ಯಕ್ರಮದ ಮುಖ್ಯಸ್ಥ ಎಡ್ವರ್ಡ್ ಕ್ಲಾರ್ಕ್ ಪ್ರಕಾರ, ಕಳೆದ ವರ್ಷ ಪ್ರಾರಂಭಿಸಲಾದ ಈ ಉಪಕ್ರಮದಲ್ಲಿ ಈಗಾಗಲೇ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆಯಂತೆ. ಈ ವರ್ಷ ದೇಶ 66 ಅರ್ಜಿಗಳನ್ನು ಸ್ವೀಕರಿಸಿದೆ. "ಈ ಕಾರ್ಯಕ್ರಮದ ಮೂಲಕ 500 ಅರ್ಜಿದಾರರನ್ನು ನಾವು ಪಡೆಯಲು ಬಯಸುತ್ತೇವೆ. ಒಟ್ಟು ಸುಮಾರು 50 ಮಿಲಿಯನ್ ಯುರೋಗಳು (ಸರಿಸುಮಾರು 453 ಕೋಟಿ ರೂ.) ದೊರೆಯಲಿವೆ" ಎಂದು ಕ್ಲಾರ್ಕ್ ಹೇಳುತ್ತಾರೆ. ದೇಶದ ಸ್ಥಳಾಂತರ ಯೋಜನೆಗಳಿಗೆ ಈ ಹಣ ವಿನಿಯೋಗವಾಗುತ್ತದೆ. ಇದು ನೌರುವಿನ ಒಟ್ಟಾರೆ ಸರ್ಕಾರಿ ಆದಾಯದ ಸುಮಾರು 20 ಪ್ರತಿಶತದಷ್ಟು.
ನೌರುವಿನ ಅಧ್ಯಕ್ಷ ಡೇವಿಡ್ ಅಡಿಯಾಂಗ್, "ಇದು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವುದು ಮಾತ್ರವಲ್ಲ, ಮುಂಬರುವ ಪೀಳಿಗೆಗೆ ಸುಸ್ಥಿರ ಮತ್ತು ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವುದು. ಇದು ಬದುಕುಳಿಯುವುದಕ್ಕಿಂತ ಹೆಚ್ಚಿನದು. ಭವಿಷ್ಯದ ಪೀಳಿಗೆಗೆ ಸುರಕ್ಷಿತ, ಸುಸ್ಥಿರ ಮನೆ ಇದೆ ಎಂದು ಖಚಿತಪಡಿಸಿಕೊಳ್ಳುವುದು" ಎನ್ನುತ್ತಾರೆ.
ನೌರು ದೇಶವು 'ಗೋಲ್ಡನ್ ಪಾಸ್‌ಪೋರ್ಟ್' ಕಲ್ಪನೆಯೊಂದಿಗೆ ಬಂದಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2003ರಲ್ಲಿ ಈ ದೇಶ ಇಬ್ಬರು ಅಲ್-ಖೈದಾ ಸದಸ್ಯರಿಗೆ ಪೌರತ್ವವನ್ನು ನೀಡಿದ್ದರಿಂದ ಈ ಯೋಜನೆ ವಿಫಲವಾಯಿತು. ನಂತರ ಅವರನ್ನು ಮಲೇಷ್ಯಾದಲ್ಲಿ ಬಂಧಿಸಲಾಯಿತು. ಈ ಬಾರಿ, ನೌರು ಕಟ್ಟುನಿಟ್ಟಾದ ಪರಿಶೀಲನಾ ಮಾನದಂಡಗಳನ್ನು ವಿಧಿಸುವುದಾಗಿ ಹೇಳಿದೆ. ಅತ್ಯಂತ ವಿವರವಾದ ಹಿನ್ನೆಲೆ ಪರಿಶೀಲನೆಗಳಲ್ಲಿ ಉತ್ತೀರ್ಣರಾದ ಹೂಡಿಕೆದಾರರಿಗೆ ಮಾತ್ರ ಪಾಸ್‌ಪೋರ್ಟ್‌ಗಳನ್ನು ನೀಡುವುದಾಗಿ ಹೇಳಿದೆ.
ವಿದೇಶಕ್ಕೆ ಹೋಗುವಾಗ ಗಂಡಸರು, ಹೆಂಗಸರು ಎಷ್ಟು ಚಿನ್ನ ಕೊಂಡೊಯ್ಯಬಹುದು? ನಿಯಮಗಳೇನು?
1900ರ ದಶಕದ ಆರಂಭದಿಂದಲೂ ನೌರುವಿನಲ್ಲಿ ಫಾಸ್ಫೇಟ್‌ಗಾಗಿ ತೀವ್ರವಾಗಿ ಗಣಿಗಾರಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಅದರ ಹೆಚ್ಚಿನ ಭೂಮಿ ಹಾಳಾಗಿದೆ ಮತ್ತು ವಾಸಯೋಗ್ಯವಾಗಿಲ್ಲ. ಹೆಚ್ಚುತ್ತಿರುವ ಸಮುದ್ರ ಮಟ್ಟ ಪ್ರಮುಖ ಅಪಾಯ. ಕರಾವಳಿಯಲ್ಲಿಯೇ ಜನರು ವಾಸಿಸಬೇಕು. ಏಕೆಂದರೆ ದ್ವೀಪದ ಒಳಗಿನ ಸರಿಸುಮಾರು 80 ಪ್ರತಿಶತ ಜಾಗ ವಾಸಯೋಗ್ಯವಿಲ್ಲ.
ಫಾಸ್ಫೇಟ್ ಗಣಿಗಾರಿಕೆಯ ನಂತರ ನೌರು ಪರ್ಯಾಯ ಆದಾಯದ ಮೂಲಗಳನ್ನು ಹುಡುಕಿತು. 2000ರ ದಶಕದ ಆರಂಭದಿಂದಲೂ ಆಸ್ಟ್ರೇಲಿಯಾದ ಬಂಧಿಸಲ್ಪಟ್ಟು ಗಡಿಪಾರಾಗಿ ಬರುವ ಕೈದಿಗಳಿಗೆ ಜೈಲುಗಳನ್ನು ಇದು ಹೊಂದಿದೆ. ಆದರೆ ಸುಮಾರು ಕೈದಿಗಳ ಸಾವಿನ ನಂತರ ಇದನ್ನು ನಿಲ್ಲಿಸಲಾಗಿದೆ. ವಿಶ್ವಬ್ಯಾಂಕ್‌ನ ಪ್ರಕಾರ ನೌರುವಿನ ಹವಾಮಾನ ಅಪಾಯದ ಮಟ್ಟ ಅತ್ಯಂತ ಹೆಚ್ಚಿದೆ. 2050ರ ವೇಳೆಗೆ ಸಮುದ್ರದ ಮಟ್ಟಗಳು 15ರಿಂದ 30 ಸೆಂ.ಮೀ.ಗಳಷ್ಟು ಹೆಚ್ಚಾಗಬಹುದಂತೆ. ಅಲ್ಲಿಗೆ ನೌರುವಿನ ಕರಾವಳಿಯ ಬಹಳ ಭಾಗ ಮುಳುಗುತ್ತದೆ.
ವಿದೇಶದಿಂದ ಬರ್ತಾರೆ, 'ಶುದ್ಧ ಆರ್ಯ'ರಿಂದ ಗರ್ಭ ಧರಿಸಿ ಹೋಗ್ತಾರೆ... ಗರ್ಭಧಾರಣೆ ಪ್ರವಾಸೋದ್ಯಮದ ಕೌತುಕ ಇಲ್ಲಿದೆ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.