
ರೈಲಲ್ಲಿ ಕೊಡುವ ಬಿಳಿ ಬೆಡ್‌ಶೀಟ್, ದಿಂಬಿನ ಕವರ್ ನೋಡಿ ಕೆಲವರು, "ಏನಪ್ಪಾ ಇದು... ಎಸಿ ಕೋಚ್ ನೋಡೋಕೆ ಆಸ್ಪತ್ರೆ ಶವಾಗಾರದ ಹಾಗೆ ಇದೆ" ಎಂದು ತಮಾಷೆಯಾಗಿ ಕಾಮೆಂಟ್ ಮಾಡುತ್ತಾರೆ. ಮೇಲ್ನೋಟಕ್ಕೆ ಇದು ತಮಾಷೆಯಾಗಿ ಕಂಡರೂ, ಭಾರತೀಯ ರೈಲ್ವೆ (Indian Railways) ಎಲ್ಲಾ ರೈಲುಗಳಲ್ಲಿ ಬೆಡ್‌ಶೀಟ್‌ಗಳಿಗೆ 'ಬಿಳಿ' ಬಣ್ಣವನ್ನೇ ಆಯ್ಕೆ ಮಾಡಿಕೊಳ್ಳಲು ಬಲವಾದ ವೈಜ್ಞಾನಿಕ, ನೈರ್ಮಲ್ಯ ಮತ್ತು ನಿರ್ವಹಣಾ ಕಾರಣಗಳಿವೆ. ಅವು ಯಾವುವು?
ರೈಲು ಪ್ರಯಾಣ ಹಲವು ಗಂಟೆಗಳ ಕಾಲ ಇರುತ್ತದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಈ ಬೆಡ್‌ಶೀಟ್‌ಗಳನ್ನು ಬಳಸುತ್ತಾರೆ. ರೈಲ್ವೆ ಇಲಾಖೆ ಬಟ್ಟೆಗಳನ್ನು ಸರಿಯಾಗಿ ತೊಳೆದಿದೆಯೇ ಇಲ್ಲವೇ ಎಂಬುದನ್ನು ಪ್ರಯಾಣಿಕರು ನೋಡಿದ ತಕ್ಷಣವೇ ಖಚಿತಪಡಿಸಿಕೊಳ್ಳಲು ಈ ಬಿಳಿ ಬಣ್ಣ ಸಹಾಯ ಮಾಡುತ್ತದೆ. ಬಿಳಿ ಬಟ್ಟೆಯ ಮೇಲೆ ಸಣ್ಣ ಕಲೆ ಇದ್ದರೂ ಅದು ಸ್ಪಷ್ಟವಾಗಿ ಕಾಣಿಸುತ್ತದೆ. ಅದೇ ಬಣ್ಣದ ಬಟ್ಟೆಗಳಾಗಿದ್ದರೆ, ಕೊಳೆಯನ್ನು ಸುಲಭವಾಗಿ ಮರೆಮಾಚಬಹುದಿತ್ತು.
ಪ್ರಯಾಣಿಕರಿಗೆ ಸ್ವಚ್ಛವಾದ ಬಟ್ಟೆಗಳನ್ನೇ ನೀಡಲಾಗುತ್ತಿದೆ ಎಂಬ ನಂಬಿಕೆ ಮೂಡಿಸಲು ಈ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ, ಬೇರೆ ಬೇರೆ ಜನರು ಬಳಸುವುದರಿಂದ, ಈ ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಕ್ರಿಮಿ ಕೀಟಗಳು ಹರಡುವ ಸಾಧ್ಯತೆ ಹೆಚ್ಚು. ಇದನ್ನು ತಡೆಯಲು, ರೈಲ್ವೆಯ ಆಧುನಿಕ ಲಾಂಡ್ರಿಗಳಲ್ಲಿ ಈ ಬಟ್ಟೆಗಳನ್ನು ಅತಿ ಹೆಚ್ಚು ಉಷ್ಣಾಂಶದಲ್ಲಿ (ಬಿಸಿ ನೀರಿನಲ್ಲಿ)ಟ್ಟು ತೊಳೆಯಲಾಗುತ್ತದೆ. ಬಣ್ಣದ ಬಟ್ಟೆಗಳನ್ನು ಹೀಗೆ ಮಾಡಿದರೆ ಅದರ ಬಣ್ಣ ಮಾಸಿ, ಬಟ್ಟೆ ಹಾಳಾಗುತ್ತದೆ. ಆದರೆ, ಬಿಳಿ ಬಟ್ಟೆಗೆ ಹಾಗೆ ಆಗುವುದಿಲ್ಲ.
ಬಟ್ಟೆಗಳಲ್ಲಿರುವ ಮೊಂಡು ಕಲೆಗಳನ್ನು ಮತ್ತು ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳನ್ನು ನಾಶಮಾಡಲು 'ಕ್ಲೋರಿನ್ ಬ್ಲೀಚ್' ನಂತಹ ಶಕ್ತಿಯುತ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಬಣ್ಣದ ಬಟ್ಟೆಗಳ ಮೇಲೆ ಬ್ಲೀಚಿಂಗ್ ಮಾಡಿದರೆ, ಬಣ್ಣ ಮಾಸಿ ಬಟ್ಟೆ ನೋಡಲು ಅಸಹ್ಯವಾಗಿ ಕಾಣುತ್ತದೆ. ಆದರೆ ಬಿಳಿ ಬಟ್ಟೆಯನ್ನು ಎಷ್ಟೇ ಬ್ಲೀಚ್ ಮಾಡಿದರೂ, ಅದು ಮತ್ತಷ್ಟು ಬಿಳುಪಾಗುತ್ತದೆಯೇ ಹೊರತು ಅದರ ಗುಣಮಟ್ಟ ಕೆಡುವುದಿಲ್ಲ.
ರೈಲ್ವೆ ಇಲಾಖೆಗೆ ಪ್ರತಿದಿನ ಲಕ್ಷಾಂತರ ಬೆಡ್‌ಶೀಟ್‌ಗಳನ್ನು ತೊಳೆಯಬೇಕಾಗುತ್ತದೆ. ಬಣ್ಣದ ಬಟ್ಟೆಗಳಾಗಿದ್ದರೆ, "ಕೆಂಪು ಬಟ್ಟೆಯೊಂದಿಗೆ ನೀಲಿ ಬಟ್ಟೆಯನ್ನು ಹಾಕಬಾರದು, ಬಣ್ಣ ಅಂಟಿಕೊಳ್ಳುತ್ತದೆ" ಎಂದು ಪ್ರತ್ಯೇಕಿಸಿ ಸಮಯ ವ್ಯರ್ಥ ಮಾಡಬೇಕಾಗುತ್ತದೆ. ಆದರೆ, ಎಲ್ಲವೂ ಬಿಳಿ ಬಣ್ಣದ್ದಾಗಿರುವುದರಿಂದ, ಎಲ್ಲವನ್ನೂ ಒಟ್ಟಿಗೆ ವಾಷಿಂಗ್ ಮೆಷಿನ್‌ಗೆ ಹಾಕಬಹುದು. ಇದು ರೈಲ್ವೆ ಸಿಬ್ಬಂದಿಯ ಸಮಯ ಮತ್ತು ಶ್ರಮವನ್ನು ದೊಡ್ಡ ಪ್ರಮಾಣದಲ್ಲಿ ಉಳಿಸುತ್ತದೆ.
ಬಣ್ಣಗಳ ವಿಜ್ಞಾನದ ಪ್ರಕಾರ, ಬಿಳಿ ಬಣ್ಣವು ಶಾಂತಿ, ಸ್ವಚ್ಛತೆ ಮತ್ತು ನೆಮ್ಮದಿಯ ಸಂಕೇತವಾಗಿದೆ. ವಿಶ್ವದ ಪ್ರಮುಖ ಪಂಚತಾರಾ ಹೋಟೆಲ್‌ಗಳಲ್ಲಿಯೂ ಇದೇ ಕಾರಣಕ್ಕಾಗಿ ಬಿಳಿ ಬಣ್ಣದ ಬೆಡ್‌ಶೀಟ್‌ಗಳನ್ನು ಬಳಸುತ್ತಾರೆ. ರೈಲು ಹತ್ತಿದ ತಕ್ಷಣ ಸ್ವಚ್ಛವಾದ ಬಿಳಿ ಬಟ್ಟೆಗಳನ್ನು ನೋಡಿದಾಗ, ಪ್ರಯಾಣಿಕರಿಗೆ ಮಾನಸಿಕವಾಗಿ ಒಂದು ಸಮಾಧಾನ ಮತ್ತು ಸುರಕ್ಷಿತ ಭಾವನೆ ಸಿಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.