ಭೂಮಿಯ ಮೇಲಿನ ಹಾವುಗಳ ಲೋಕವು ಎಷ್ಟು ವಿಶಾಲವಾಗಿದೆಯೋ ಅಷ್ಟೇ ನಿಗೂಢವೂ ಆಗಿದೆ. ಹಾವುಗಳಿಗೆ ಕಿವಿಗಳಿಲ್ಲ, ಆದರೆ ಅವು ನೆಲದ ಕಂಪನಗಳನ್ನು ಅನುಭವಿಸಬಲ್ಲವು. ಹಾಗೆಯೇ ಹಾವುಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗಲೆಂದು ಆಗಾಗ್ಗೆ ತಮ್ಮ ನಾಲಿಗೆಯನ್ನು ಹೊರಹಾಕುತ್ತವೆ. ಪ್ರಪಂಚದಾದ್ಯಂತ 3000 ಕ್ಕೂ ಹೆಚ್ಚು ಜಾತಿಯ ಹಾವುಗಳು ಕಂಡುಬರುತ್ತವೆ, ಅವುಗಳಲ್ಲಿ ಕೆಲವು ಅತ್ಯಂತ ವಿಷಕಾರಿ ಮತ್ತು ಅಪಾಯಕಾರಿ. ಹಾವುಗಳ ಬಗ್ಗೆ ಕೇಳಿರದ ಅನೇಕ ವಿಷಯಗಳಿವೆ, ಅದು ನಮ್ಮನ್ನು ಬೆರಗುಗೊಳಿಸುತ್ತದೆ. ಸದ್ಯಕ್ಕೆ ಒಂದು ಹಾವು ಎಲ್ಲರ ಗಮನಸೆಳೆದಿದೆ. ಆ ವಿಶಿಷ್ಟ ಹಾವಿನ ಹೆಸರು ಗ್ಯಾಬೂನ್ ವೈಪರ್ (Gaboon viper).
ಹೇಗೋ ಮಾಯವಾಗುತ್ತೆ!
ಗ್ಯಾಬೂನ್ ವೈಪರ್ ಉಪ-ಸಹಾರನ್ ಆಫ್ರಿಕಾದ ಕಾಡುಗಳು ಮತ್ತು ಸವನ್ನಾಗಳಲ್ಲಿ ಕಂಡುಬರುತ್ತದೆ. ಇದು ಮಾರಕ ಪರಭಕ್ಷಕ ಎಂದು ತಿಳಿದುಬಂದಿದೆ. ಗ್ಯಾಬೂನ್ ವೈಪರ್ ಕಾಡಿನಲ್ಲಿ ಎಲ್ಲೋ ಕುಳಿತಿರುವ ಒಂದು ಹಾವು. ನಿಜ ಹೇಳಬೇಕೆಂದರೆ ನೀವು ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಅದು ಹೇಗೋ ಮಾಯವಾಗುತ್ತದೆ. ಈ ಹಾವುಗಳು ತಮ್ಮ ವೇಗ ಮತ್ತು ಪವರ್ ಫುಲ್ ವಿಷಕ್ಕೆ ಹೆಸರುವಾಸಿಯಾಗಿವೆ. ಆಫ್ರಿಕಾದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದೆಂದು ಪರಿಗಣಿಸಲಾದ ಈ ಜೀವಿ 6 ಅಡಿ ಉದ್ದವಿರುತ್ತದೆ.
ಈ ಹಾವು ವಂಚನೆಯ ಕಲೆಯಲ್ಲಿ ಬಹಳ ನೈಪುಣ್ಯವನ್ನು ಹೊಂದಿದೆ. ಗ್ಯಾಬೂನ್ ವೈಪರ್ ತನ್ನ ಬೇಟೆಯು ಬಹಳ ಹತ್ತಿರ ಬರಲು ಗಂಟೆಗಟ್ಟಲೆ, ಇಡೀ ದಿನವೂ ಕಾಯುತ್ತದೆ ಮತ್ತು ಮೊದಲ ಅವಕಾಶದಲ್ಲೇ ಅದರ ಮೇಲೆ ದಾಳಿ ಮಾಡುತ್ತದೆ. ಈ ಹಾವಿನಲ್ಲಿರುವ ವಿಷದ ಪ್ರಮಾಣವು ಇತರ ಹಾವುಗಳಿಗಿಂತ ಹೆಚ್ಚಾಗಿದೆ ಮತ್ತು ಇದರ ಮೊನಚಾದ ಹಲ್ಲುಗಳು ವಿಶ್ವದಲ್ಲೇ ಅತಿ ಉದ್ದವಾಗಿವೆ. ಅರಣ್ಯನಾಶ ಮತ್ತು ಅಭಿವೃದ್ಧಿಯಿಂದಾಗಿ, ಈ ಹಾವನ್ನು ಈಗ IUCN ದುರ್ಬಲ ಪ್ರಭೇದಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಅಡಗಿ ಕೂರುವುದು ಯಾರಿಗೂ ಗೊತ್ತಾಗಲ್ಲ
ಈ ಹಾವು ದಟ್ಟವಾದ ಕಾಡುಗಳಲ್ಲಿ ಮತ್ತು ಬದಲಾಗುತ್ತಿರುವ ನೆರಳಿನಲ್ಲಿ ಬಹಳ ಕೌಶಲ್ಯದಿಂದ ಅಡಗಿಕೊಳ್ಳಬಲ್ಲದು . ಅದು ಮೌನವಾಗಿ ಅಡಗಿಕೊಂಡು ತನ್ನ ಬೇಟೆಗಾಗಿ ಕದಲದೆ ಕಾಯುತ್ತದೆ. ಇದರ ರಚನೆ ಹೇಗಿದೆಯೆಂದರೆ, ಅದರ ಮೂಲಕ ಹಾದುಹೋಗುವ ಹೆಚ್ಚಿನ ಜನರಿಗೆ ಇಲ್ಲಿ ಗ್ಯಾಬೂನ್ ವೈಪರ್ ಅಡಗಿಕೊಂಡಿದೆ ಎಂದು ಸಹ ತಿಳಿದಿರುವುದಿಲ್ಲ. ಅದು ಪತ್ತೆಯಾಗುವ ಹೊತ್ತಿಗೆ ತುಂಬಾ ತಡವಾಗಿರುತ್ತದೆ.
ಇದರ ತಲೆ ಅಗಲವಾಗಿದ್ದು, ಎಲೆಯ ಆಕಾರದಲ್ಲಿದೆ ಮತ್ತು ನೋಡಲು ಒಣಗಿದ ಎಲೆಗಳು ಮತ್ತು ತೊಗಟೆಯಂತೆ ಕಾಣುತ್ತದೆ. ಇದೇ ಕಾರಣದಿಂದಾಗಿ ಹಾವು ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಬಹುತೇಕ ಕಣ್ಮರೆಯಾಗುತ್ತದೆ. ಈ ಹಾವು ಯಾರನ್ನಾದರೂ ಕಚ್ಚಿದಾಗ, ಅದರ ದಾಳಿ ಎಷ್ಟಿರುತ್ತದೆಯೆಂದರೆ, ಕೆಲವೇ ಪ್ರಾಣಿಗಳು ಮಾತ್ರ ಅದನ್ನು ಎದುರಿಸಲು ಶಕ್ತವಾಗಿರುತ್ತವೆ. ಪುಣ್ಯಕ್ಕೆ ಮನುಷ್ಯರು ಟಾರ್ಗೆಟ್ ಅಲ್ಲ.
ಎರಡು ಇಂಚುಗಳಷ್ಟು ಉದ್ದವಿರುತ್ತವೆ ಹಲ್ಲುಗಳು
ಕಂದು, ಹಳದಿ ಮತ್ತು ನೇರಳೆ ಬಣ್ಣದ ಹಾವಿನ ಮಾದರಿ ಕಾಡಿನ ನೆಲದಲ್ಲಿ ಚೆನ್ನಾಗಿ ಬೆರೆಯುವಂತೆ ಮಾಡುತ್ತವೆ. ಎಷ್ಟರ ಮಟ್ಟಿಗೆ ಅಂದರೆ ತರಬೇತಿ ಪಡೆದ ಹರ್ಪಿಟಾಲಜಿಸ್ಟ್‌ಗಳು ಸಹ ಇದನ್ನು ಗುರುತಿಸಲು ಶ್ರಮಿಸಬೇಕಾಗುತ್ತದೆ. ವಿಶೇಷವಾಗಿ ಅದು ಎಲೆಗಳ ನಡುವೆ ಅಡಗಿರುವಾಗ. ಇದರ ವಿಷವು ಹೆಚ್ಚು ವಿಷಕಾರಿಯಲ್ಲ, ಆದರೆ ಗ್ಯಾಬೂನ್ ವೈಪರ್ ಅನ್ನು ಪ್ರತ್ಯೇಕಿಸುವುದು ಅದು ಬಿಡುಗಡೆ ಮಾಡುವ ಪ್ರಮಾಣದಿಂದ.
ಫೋರ್ಬ್ಸ್ ಪ್ರಕಾರ, ಈ ಹಾವು ಪ್ರತಿ ಕಚ್ಚುವಿಕೆಯೊಂದಿಗೆ 200 ರಿಂದ 1000 ಮಿಲಿಗ್ರಾಂ ವಿಷವನ್ನು ಚುಚ್ಚಬಹುದು , ಇದು ತೈಪಾನ್ ಮತ್ತು ರಸೆಲ್‌ನ ವೈಪರ್‌ಗಿಂತ ಹೆಚ್ಚು. ಗ್ಯಾಬೂನ್ ವೈಪರ್ ತನ್ನ ಕೋರೆಹಲ್ಲಿನ ಮೂಲಕ ಮತ್ತೊಂದು ಭಯಾನಕ ದಾಖಲೆಯನ್ನು ಹೊಂದಿದೆ. ಅಂದರೆ ಅವು ಜಗತ್ತಿನ ಯಾವುದೇ ಹಾವುಗಳಿಗಿಂತ ಅತಿ ಉದ್ದ ಕೋರೆ ಹೊಂದಿವೆ. ಹೌದು, ಅವುಗಳ ಕೋರೆಹಲ್ಲುಗಳು ಎರಡು ಇಂಚುಗಳಷ್ಟು ಉದ್ದವಿರುತ್ತವೆ ಮತ್ತು ತುಂಬಾ ದೊಡ್ಡದಾಗಿರುತ್ತವೆ, ಹಾವು ಬಾಯಿ ಮುಚ್ಚಿದಾಗ ಅವು ಹಿಂದಕ್ಕೆ ಸುರುಳಿಯಾಗಿರುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.