
ಭಾರತದಲ್ಲಿ ಕೆಲವು ವಿಚಿತ್ರ ಸಂಪ್ರದಾಯ ಆಚರಿಸುವ ಹಳ್ಳಿಗಳಿವೆ. ಕಾಲು ಆಧುನಿಕವಾಗುತ್ತ ಹೋದರೂ, ಜನ ಆಧುನಿಕರಾಗುತ್ತಾ ಹೋದರೂ ಅಲ್ಲಿನ ಸಂಪ್ರದಾಯಗಳು ತೀರಾ ವ್ಯತ್ಯಾಸವಾಗಿಲ್ಲ. ಅಂಥ ಒಂದು ವಿಚಿತ್ರ ರೂಢಿ ಇರುವ ಹಳ್ಳಿ ಇದು. ಕಾನೂನಿನ ಪ್ರಕಾರ ಭಾರತದಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗುವಂತಿಲ್ಲ. ಆಗುವುದಿದ್ದರೂ ಕಾನೂನಿನ ಮೂಲಕ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಬಳಿಕ ಎರಡನೇ ಮದುವೆ ಆಗಬಹುದು. ಆದರೆ ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನೂ ಎರಡು ಮದುವೆ ಆಗಲೇಬೇಕಂತೆ!
ಇನ್ನೂ ವಿಚಿತ್ರ ಅಂದರೆ, ಒಂದು ವೇಳೆ ಆತ ಎರಡನೇ ಮದುವೆಯಾಗದಿದ್ದರೆ ಆತನನ್ನು ಊರಿನಿಂದಲೇ ಹೊರಗೆ ಹಾಕುತ್ತಾರಂತೆ. ಇದಕ್ಕೆ ಯಾವುದೇ ಕಾನೂನಿನ ಅಡೆತಡೆಗಳೂ ಇಲ್ಲ. ಈ ಸಂಪ್ರದಾಯ ಅನಾದಿ ಕಾಲದಿಂದಲೂ ಇಂದಿಗೂ ನಡೆದುಕೊಂಡು ಬಂದಿದೆ. ಭಾರತ - ಪಾಕಿಸ್ತಾನ ಗಡಿಯ ಸಮೀಪದಲ್ಲಿರುವ ರಾಜಸ್ಥಾನದ ಬರ್ಮೇದ್ ಜಿಲ್ಲೆಯಲ್ಲಿ ದೇರಸರ್ ಎಂಬ ಪುಟ್ಟ ಹಳ್ಳಿ ಇದೆ. ಇದಕ್ಕೆ ರಾಮದೇವ್ ಕಿ ಬಸ್ತಿ ಎಂದೂ ಕೂಡ ಕರೆಯುತ್ತಾರೆ. ಈ ಹಳ್ಳಿ ಸುಮಾರು ಆರು ನೂರು ಮಂದಿಯನ್ನು ಹೊಂದಿದೆ. 70 ಕುಟುಂಬಗಳು ವಾಸವಾಗಿದೆ.
ಇಲ್ಲಿ ವಾಸಿಸುವ ಹಿರಿಯರು ಪ್ರತಿಯೊಬ್ಬರೂ ಎರಡೆರಡು ಮದುವೆಯಾಗಿದ್ದರಂತೆ. ಪ್ರತಿ ಕುಟುಂಬವೂ ಸಾಂಪ್ರದಾಯಿಕವಾಗಿ ಮದುವೆ ಮಾಡುವ ಮೂಲಕ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಇದರ ಹಿಂದೆ ವಿಶೇಷವಾದ ಕಾರಣವೂ ಇದೆ. ರಾಮದೇವರ ಕಾಲೋನಿಯಲ್ಲಿರುವ ಪ್ರತಿಯೊಬ್ಬ ಪುರುಷನೂ ಎರಡು ಬಾರಿ ಮದುವೆಯಾಗಿರುತ್ತಾನೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಮದುವೆಯಾದ ಇಬ್ಬರೂ ಪತ್ನಿಯರು ಪರಸ್ಪರ ಸಹೋದರಿಯರಂತೆ ಅನ್ಯೋನ್ಯವಾಗಿ ಬಾಳುತ್ತಾರಂತೆ.
ಈ ಊರಿನಲ್ಲಿ ಪುರುಷರು ಎರಡು ಮದುವೆಯಾಗಲು ಕಾರಣವೂ ಇದೆ ಎಂದು ಈ ಊರಿನ ಜನ ಹೇಳುತ್ತಾರೆ. ಅದೇನೆಂದರೆ ಮೊದಲು ಮದುವೆಯಾದ ಹೆಂಡತಿ ಗರ್ಭಿಣಿಯಾಗುವುದಿಲ್ಲ, ಸಂತಾನ ಭಾಗ್ಯ ಸಿಗಬೇಕಾದರೆ ಎರಡನೇ ಮದುವೆ ಆಗಬೇಕು ಎಂಬುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಮೊದಲ ಮದುವೆಯಾದ ಕೆಲವೇ ಸಮಯದಲ್ಲಿ ಪುರುಷ ಎರಡನೇ ಮದುವೆಯಾಗುತ್ತಾನಂತೆ. ಇದಕ್ಕೆ ಇಂಬು ನೀಡುವಂತೆ ಮೊದಲ ಪತ್ನಿಯಲ್ಲಿ ಮಗುವಾಗದ ದಂಪತಿಗಳು ಇಲ್ಲಿ ತುಂಬಾ ಇದ್ದಾರೆ. ಹಾಗೇ ಎರಡನೇ ಪತ್ನಿಯಲ್ಲಿ ಮಗುವಾದ ದಂಪತಿಗಳೂ ಸಾಕಷ್ಟು ಮಂದಿ. ಹೀಗಾಗಿ ಊರಿನ ಜನರಿಗೆ ಈ ನಂಬಿಕೆ ಬೇರೂರಿದೆ. ಈ ಊರಿನ ಜನ ಎರಡು ಮದುವೆಯಾದರೆ 'ಮಂಗಳಕರ' ಇದರಿಂದ ಕುಟುಂಬಕ್ಕೆ ಸಂತಾನ ಭಾಗ್ಯ ದೊರಕುತ್ತದೆ ಎಂಬುದು ಅವರ ನಂಬಿಕೆಯಾಗಿದೆ.
ಎರಡು ಮದುವೆಯಾಗುವ ವಿಷಯದಲ್ಲಿ ಈ ಊರಿನ ಜನರು ನಂಬಿರುವ ನಂಬಿಕೆಯ ಹಿಂದೆ ಇನ್ನೊಂದು ಕಾರಣವೂ ಇದೆಯಂತೆ, ಅದೇನೆಂದರೆ ಈ ಊರಿನಲ್ಲಿ ಮೊದಲಿನಿಂದಲೂ ನೀರಿನ ಸಮಸ್ಯೆ ಇದೆಯಂತೆ ಅಲ್ಲದೆ ನೀರಿಗಾಗಿ ಇಲ್ಲಿಯ ಜನ ಸುಮಾರು ಐದರಿಂದ ಆರು ಕಿಲೋಮೀಟರ್ ದೂರದವರೆಗೆ ನಡೆದು ಹೋಗಬೇಕಿತ್ತಂತೆ. ಇಷ್ಟು ದೂರದಿಂದ ನೀರು ತರುವುದು ಗರ್ಭಿಣಿಯರಿಗೆ ಕಷ್ಟ ಸಾಧ್ಯ ಹಾಗಾಗಿ ಇದೇ ಕಾರಣಕ್ಕೆ ಪುರುಷರು ಮತ್ತೊಂದು ಮದುವೆಯಾಗುತ್ತಿದ್ದರು ಎಂದೂ ಕೂಡ ಹೇಳಲಾಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.