
ಸಾಮಾನ್ಯವಾಗಿ ಜನ ಊರು ಸುತ್ತೋಕಂಥ ಮನೆ ಬಿಟ್ಟು ಹೋಗ್ತಾರೆ. ಆದರೆ, ಈ ಮನೆ ತನ್ನ ಯಜಮಾನರ ಜೊತೆಗೆ ತಾನೂ ಊರು ಸುತ್ತುತ್ತಾ ಕಾಲ ಕಳೆಯುತ್ತಿದೆ. ಎಂಥ ಅದೃಷ್ಟ ನೋಡಿ ಇದರದ್ದು. ಒಂದು ದಿನ ಹಿಮಚ್ಛಾದಿತ ಪರ್ವತದ ಎದಿರು ನಿಂತರೆ ಮತ್ತೊಂದು ದಿನ ಸುಂದರ ಅರಣ್ಯವನ್ನೇ ಹಿತ್ತಲಾಗಿಸಿಕೊಂಡು ಮಾಲೀಕರ ಮನಸ್ಸಿಗೆ ಹಿತ ನೀಡುತ್ತದೆ. ಮಗದೊಂದು ದಿನ ನಗರವೊಂದರ ವಾತಾವರಣದಲ್ಲಿ ತನ್ನನ್ನು ತಾನು ಫಿಟ್ ಮಾಡಿಕೊಳ್ಳುತ್ತದೆ.
ಇದೇನು ಬಸ್ ಅಥವಾ ಕಾರ್‍ಗೆ ಬದಲಾವಣೆ ತಂದುಕೊಂಡು ಮನೆಯಂಥ ಸೌಕರ್ಯಗಳನ್ನು ಸೃಷ್ಟಿಸಿಕೊಂಡದ್ದಲ್ಲ. ಅಂಥದ್ದನ್ನು ನೀವು ಬೇಕಾದಷ್ಟು ನೋಡಿರಬಹುದು. ಆದರೆ, ಇದು ಮನೆಗೇ ನಾಲ್ಕು ಚಕ್ರ ಜೋಡಿಸಿ ತಿರುಗಾಟಕ್ಕೆ ಸಜ್ಜುಗೊಳಿಸಿರುವುದು.
ಈ 130 ಅಡಿ ಅಗಲದ ಪುಟಾಣಿ ಸುಂದರ ಮನೆ, ಜಗತ್ತಲ್ಲೇ ಹೆಚ್ಚು ಸುತ್ತಾಡಿದ ಮನೆ ಎಂದು ದಾಖಲೆ ಮಾಡಿದೆ. ಪುಟ್ಟದಾದರೂ ಕನಸಿನ ಮನೆಯಂತೆ ಕಂಗೊಳಿಸುವ ಈ ಮನೆ ಅಮೆರಿಕದ ದಂಪತಿ ಕ್ರಿಶ್ಚಿಯನ್ ಪಾರ್ಸನ್ಸ್ ಹಾಗೂ ಅಲೆಕ್ಸಿಸ್ ಸ್ಟೀಫನ್ಸ್‌ಗೆ ಸೇರಿದ್ದು. ಈ ಜೋಡಿಯು ಇದೇ ಮನೆಯೊಳಗೆ ಕುಳಿತು ಅಮೆರಿಕದಾದ್ಯಂತ ಸುತ್ತಾಟದಲ್ಲಿ ತೊಡಗಿದೆ.
ಮರದ ಮನೆ
ವಿದೇಶದ ಬಹುತೇಕ ಸುಂದರ ಮನೆಗಳಂತೆ ಈ ಮನೆ ಕೂಡಾ ಮರದ ಫರ್ನಿಶಿಂಗ್ ಹೊಂದಿದ್ದು, 2 ಕೋಣೆಗಳು, 1 ವರ್ಕ್‌ಪ್ಲೇಸ್, 1 ಶೂ ರ್ಯಾಕ್ ಹೊಂದಿದೆ. ಕಿಚನ್ ಬಹಳ ಸುಂದರವಾಗಿದೆ. ಫ್ರಿಡ್ಜ್, ವಾಷಿಂಗ್ ಮೆಷಿನ್, 1 ಕಿಂಗ್ ಸೈಜ್ ಕಾಟ್, 2 ಸಿಂಗಲ್ ಕಾಟ್ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳು ಇದರಲ್ಲಿವೆ. ಅವೆಲ್ಲದರ ಜೊತೆಗೆ ಎಕ್ಸ್ಟ್ರಾ ನಾಲ್ಕು ಚಕ್ರಗಳನ್ನು ಹೊಂದಿರುವುದು ಈ ಮನೆಯನ್ನೊಂದು ವಾಹನವನ್ನಾಗಿಸಿದೆ. ಈ ಮನೆಯ ಜೊತೆಗೆ ಇದರ ಮಾಲೀಕ ದಂಪತಿಯು ಅಮೆರಿಕದ 37 ಸ್ಟೇಟ್‌ಗಳು ಹಾಗೂ 16 ರಾಷ್ಟ್ರೀಯ ಉದ್ಯಾನಗಳಿಗೆ ಭೇಟಿ ನೀಡಿದ್ದಾರೆ.
ಇದೆಲ್ಲಾ ಶುರುವಾಗಿದ್ದು ಹೀಗೆ...
ಲೇಕ್ ಮಿಶಿಗನ್‌ಗೆ ಹೋಗಿ ಬಂದ ನಂತರ ದಂಪತಿಗೆ ತಮಗಿಬ್ಬರಿಗೂ ಪ್ರವಾಸದಲ್ಲಿ, ತಿರುಗಾಟದಲ್ಲಿ ಸಂತೋಷ ಸಿಗುತ್ತದೆ ಎಂಬುದು ಅರಿವಾಗಿದೆ. ಆ ಬಳಿಕ ದೇಶ ಸುತ್ತಲು ಏನೇನು ಮಾಡಬಹುದು ಎಂದೆಲ್ಲ ಯೋಚಿಸುತ್ತಿದ್ದಾಗ ಈ ತಿರುಗಾಡುವ ಮನೆಯ ಐಡಿಯಾ ಹೊಳೆದಿದೆ. ನಂತರದ ಪ್ರತಿ ಹೆಜ್ಜೆಯನ್ನೂ ಅವರು ದಾಖಲಿಸಿಟ್ಟಿದ್ದಾರೆ.
ಈ ಐಡಿಯಾ ಬಂದ ಬಳಿಕ ಸ್ಟೀಫನ್ ತನ್ನ ಮಾರ್ಕೆಟಿಂಗ್ ವೃತ್ತಿಗೆ ವಿದಾಯ ಹೇಳಿ ಮುಂಚಿನ ಫಿಲ್ಮ್ ಮೇಕಿಂಗ್ ಕೆಲಸದತ್ತ ಗಮನ ಹರಿಸುತ್ತಾರೆ. ಅವರ ತಿರುಗಾಟದ ಕನಸನ್ನು ಈಡೇರಿಸಿಕೊಳ್ಳಲು ಜೋಡಿಯು ಚಕ್ರಗಳ ಮೇಲೆ ಮನೆ ನಿರ್ಮಿಸುವ ಕಾರ್ಯಕ್ಕೆ ಇಳಿದರು. ಒಂಬತ್ತು ತಿಂಗಳ ಕಾಲ ಇಬ್ಬರೂ ಇದಕ್ಕಾಗಿ ಕೆಲಸ ಮಾಡಿದ ಬಳಿಕ ಅವರ ಕನಸಿನ ಮನೆ ಸಿದ್ಧವಾಯಿತು.
ಪುನರ್ ಸಂಸ್ಕರಿತ ವಸ್ತುಗಳ ಬಳಕೆ
ಈ ಮನೆಯ ನಿರ್ಮಾಣಕ್ಕೆ ಜೋಡಿಯು 15000 ಡಾಲರ್ ವೆಚ್ಚ ಮಾಡಿದ್ದು, ಸೋಲಾರ್ ಪ್ಯಾನೆಲ್ ಅಳವಡಿಸಿದೆ. ಮನೆಗಾಗಿ ಬಳಸಿದ ಹೆಚ್ಚಿನ ವಸ್ತುಗಳು ಮರುಬಳಕೆಯವು ಹಾಗೂ ಪುನರ್‌ಸಂಸ್ಕರಣೆ ಕಂಡವು ಆಗಿರುವುದರಿಂದ ಮನೆಗೆ ಹೆಚ್ಚು ವೆಚ್ಚವಾಗಿಲ್ಲ. ಬಿರುಗಾಳಿಗೆ ಬಿದ್ದ ಮರಗಳನ್ನೇ ಬಳಸಿಕೊಂಡು ಅಡುಗೆಮನೆ ನಿರ್ಮಿಸಿದ್ದಾರೆ. ಈ ಮನೆಯನ್ನು ಸಣ್ಣ ಆಟೋದಂಥದಕ್ಕೆ ಕಟ್ಟಿಕೊಂಡು ಡ್ರೈವ್ ಮಾಡಲಾಗುತ್ತದೆ. ಬೇಕೆಂದಲ್ಲಿ ನಿಲ್ಲಿಸಿಕೊಳ್ಳಬಹುದು.
ಕಾಸ್ಟ್ ಆಫ್ ಲಿವಿಂಗ್
ಈ ಜೋಡಿಯ ಕಾಸ್ಟ್ ಆಫ್ ಲಿವಿಂಗ್ ಸ್ಥಳ ಬದಲಾದಂತೆಲ್ಲ ಬದಲಾಗುವುದರಿಂದ ತಿಂಗಳಿಗೊಂದೊಂದು ರೀತಿಯ ಖರ್ಚಾಗುತ್ತದಂತೆ. ಒಂದೇ ಬದಿ ತಿಂಗಳ ಕಾಲ ನಿಂತರೆ ಕಾಸ್ಟ್ ಆಫ್ ಲಿವಿಂಗ್ ಕಡಿಮೆಯಾಗುತ್ತದೆ. ಹಾಗೆಯೇ ಹೆಚ್ಚು ತಿರುಗಾಟ ಮಾಡಿದರೆ ಖರ್ಚು ಹೆಚ್ಚುತ್ತದೆ ಎನ್ನುತ್ತದೆ ಜೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.