ನಾವು ನೀವೆಲ್ಲ ಲಾಕ್‌ಡೌನ್‌ನಲ್ಲಿರುವುದರಿಂದ ಭೂತಾಯಿ, ಪ್ರಾಣಿ ಪಕ್ಷಿಗಳು, ಸಮುದ್ರಜೀವಿಗಳು, ಈ ಪ್ರಕೃತಿ ಎಲ್ಲವೂ ಸ್ವಚ್ಛಂದವಾಗಿ ವಿಹರಿಸುತ್ತಾ ಸುಖವಾಗಿವೆ. ಬದುಕನ್ನು ಕೊಟ್ಟ ಜಗತ್ತನ್ನು ಹಾಳು ಮಾಡುವುದು ನಮ್ಮಿಂದ ಮಾತ್ರ ಸಾಧ್ಯವೇನೋ ?!
ಎಬೋಲಾ, ಸಾರ್ಸ್, ನಿಫಾ, ಸಾರ್ಸ್, ಕೊರೋನಾ ಎಲ್ಲವೂ ಪ್ರಾಣಿಯಿಂದ ಮನುಷ್ಯರಿಗೆ ಬಂದು ನಂತರ ಮನುಷ್ಯರಿಂದ ಮನುಷ್ಯರಿಗೆ ಹಬ್ಬಿದಂಥವೇ. ಮನುಷ್ಯರನ್ನು ಮನೆಯೊಳಗೆ ಕೂರಿಸಲು ಪ್ರಕೃತಿ ಹಾಗೂ ಪ್ರಾಣಿಗಳು ಮಾಡಿದ ಸಂಚು ಅಂತೂ ಈ ಬಾರಿ ಸಫಲವಾಗಿದೆ. ಈ ಲಾಕ್‌ಡೌನ್ ಸಂದರ್ಭದಲ್ಲಿ ಮನುಷ್ಯನಿಂದ ಹಾಳಾಗಿದ್ದ ಪ್ರಕೃತಿಯ ಆರೋಗ್ಯ ಸಾಕಷ್ಟು ಸುಧಾರಿಸಿದೆ. ಇದೊಂತರಾ ಮನುಷ್ಯಜೀವಿ ಹೊರತುಪಡಿಸಿ ಉಳಿದೆಲ್ಲವಕ್ಕೂ ಉಸಿರಾಡಲು, ಹಾಳಾಗಿದ್ದನ್ನು ಗುಣಪಡಿಸಿಕೊಳ್ಳಲು, ಸ್ವಾತಂತ್ರ್ಯದ ರುಚಿಯನ್ನು ನಿರ್ಭಿಡೆಯಿಂದ ನೋಡಲು ಅವಕಾಶ ಮಾಡಿಕೊಟ್ಟಿದೆ. ಮನುಷ್ಯನೊಬ್ಬ ತೆಪ್ಪಗಿದ್ದರೆ ಈ ಗ್ರಹ ಯಾವುದೇ ಹಾನಿಯಿಲ್ಲದೆ ಅದೆಷ್ಟು ಸ್ವಚ್ಛಂದ ಸುಂದರವಾಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ಸಂದರ್ಭ ಅವಕಾಶ ಮಾಡಿಕೊಟ್ಟಿದೆ.
ಈ ಗೃಹಬಂಧನದ ಸಂದರ್ಭದಲ್ಲಿ ಪ್ರಕೃತಿಯಲ್ಲಿ ಎಷ್ಟೆಲ್ಲ ಪಾಸಿಟಿವ್ ಬದಲಾವಣೆಗಳಾಗಿವೆ ಗೊತ್ತಾ? ಬಹುಷಃ ಈ ಕೊರೋನಾಗೆ ಔಷಧ ಅಥವಾ ವ್ಯಾಕ್ಸಿನೇಶನ್ ಸಿಗುವುದೇ ಬೇಡವೆಂದು ಪ್ರಾಣಿಪಕ್ಷಿಗಳು, ಗಿಡಮರ ನದಿಗಳು ಬೇಡಿಕೊಳ್ಳುತ್ತಿರಬಹುದು.
undefined
ಗಂಗಾ ಯಮುನ ನದಿ
ಒಮ್ಮೆ ಕೊಳಕಾಗಿದ್ದ, ಕಸಕಡ್ಡಿಗಳಿಂದ ತುಂಬಿ ನೊರೆನೊರೆಯಾಗಿ ಬಳಸಲು ಅಯೋಗ್ಯ ಎನಿಸಿಕೊಂಡಿದ್ದ ಯಮುನಾ ನದಿಯ ನೀರು ಹಲವು ದಶಕಗಳಲ್ಲೇ ಕಾಣದಷ್ಟು ಸ್ವಚ್ಛವಾಗಿದೆ. ಕೆಸರಿನಂತಾಗಿದ್ದ ನೀರು ತನ್ನ ನೀಲಿ ಸೌಂದರ್ಯವನ್ನು ಮರಳಿ ಗಳಿಸಿಕೊಳ್ಳುತ್ತಿದೆ. ಗಂಗೆಯ ಸ್ವಚ್ಛತೆಗೆ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿದಾಗಲೂ ಸಾಧ್ಯವಾಗದ ಬದಲಾವಣೆ ಈಗ ಕಾಣಿಸತೊಡಗಿದೆ. ಹರಿದ್ವಾರ, ಹೃಷಿಕೇಶದಲ್ಲಂತೂ ಗಂಗೆಯ ನೀರು ಆಚಮನ ಕೂಡಾ ಮಾಡಬಹುದಾದಷ್ಟು ಯೋಗ್ಯವಾಗಿದೆ. ಕಾರ್ಖಾನೆಗಳ, ಊರುಗಳ ತ್ಯಾಜ್ಯವಿಲ್ಲದೆ, ಹೆಣಗಳ ಭಾರವಿಲ್ಲದೆ, ಮನುಷ್ಯರ ಹಸ್ತಕ್ಷೇಪವಿಲ್ಲದೆ ಗಂಗೆಯಮುನೆಯರು ಸೌಂದರ್ಯ ಕಾಂತಿಯನ್ನು ಮೈದುಂಬಿಕೊಳ್ಳುತ್ತಿದ್ದಾರೆ.
ಆಮೆಗಳ ಮೇಳ
ಕೆಲವೊಂದು ಅಪರೂಪದ, ಅಳಿವಿನಂಚಿನಲ್ಲಿರುವ ಜೀವಿಗಳನ್ನು ಉಳಿಸಿ ಬೆಳೆಸಲು ನಾವು ದೊಡ್ಡ ಸರ್ಕಸ್ಸೇ ಮಾಡುತ್ತಿದ್ದೆವು. ಆದರೆ ಈಗ ಮನುಷ್ಯರ ಭಯವಿಲ್ಲದ ಕಾರಣ ಅವುಗಳು ಆರಾಮಾಗಿ ಸಂತಾನಭಿವೃದ್ದಿಯಲ್ಲಿ ತೊಡಗಿವೆ. ಅವುಗಳ ಉಳಿವಿಗೆ ನಮ್ಮ ನಾವು ಪ್ರಯತ್ನ ಹಾಕುವುದಕ್ಕಿಂತ ಅವುಗಳ ವಸತಿ ಸ್ಥಳಗಳನ್ನು ಅವಕ್ಕಾಗಿಯೇ ಬಿಟ್ಟುಕೊಡುವುದೇ ದೊಡ್ಡ ಉಪಕಾರ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಒಡಿಶಾದ ತೀರಗಳಲ್ಲಿ ಹಿಂದಿನ ವರ್ಷಗಳಲ್ಲೆಂದೂ ಕಾಣದಂತೆ 8 ಲಕ್ಷ ಆಲಿವ್ ರಿಡ್ಲಿ ಆಮೆಗಳು ಮೊಟ್ಟೆ ಇಡಲು ದೌಡಾಯಿಸಿರುವುದೇ ಇದಕ್ಕೆ ಉದಾಹರಣೆ.
ಹಿಮಚಿರತೆ
ವೈಟ್ ಗೋಸ್ಟ್ ಎಂದೇ ಕರೆಸಿಕೊಳ್ಳುವ ಹಿಮಚಿರತೆಗಳು ಬಹಳ ಅಪರೂಪದ ಜೀವಿಗಳು. ಅವು ಮನುಷ್ಯನ ಕಣ್ಣಿಗೆ ಕಾಣಿಸಿಕೊಳ್ಳುವುದೇ ವಿರಳ. ಆದರೆ ಈ ವರ್ಷ ಮಾತ್ರ ಪ್ರವಾಸಿಗರು ಹಾಗೂ ಮನುಷ್ಯರ ಸುಳಿವಿಲ್ಲದ ಕಾರಣ ಉತ್ತರಾಖಂಡದ ನಂದಾದೇವಿ ರಾಷ್ಟ್ರೀಯ ಉದ್ಯಾನದಲ್ಲಿ ಹಲವಾರು ಬಾರಿ ಸ್ನೋ ಲಿಯೋಪರ್ಡ್‌ಗಳು ಕಾಣಿಸಿಕೊಂಡಿವೆ.
ಪಂಜಾಬ್‌ನಿಂದ ಕಾಣತ್ತೆ ಹಿಮಾಲಯ
ಪಂಜಾಬ್‌ನ ಜಲಂಧರ್‌ನಿಂದ ಧೌಲಾಧರ್ ಹಿಮಾಲಯ ಶ್ರೇಣಿಗಳಿಗೆ ಇರುವ ದೂರ ಹತ್ತಲ್ಲ, ಇಪ್ಪತ್ತಲ್ಲ ಬರೋಬ್ಬರಿ 213 ಕಿಲೋಮೀಟರ್‌ಗಳು. ಆದರೆ, ಇದೇ ಮೊದಲ ಬಾರಿಗೆ ಜಲಂಧರ್‌ನ ಜನರು ಹಿಮಾಲಯ ಶ್ರೇಣಿಯನ್ನು ನೋಡಲು ಸಾಧ್ಯವಾಗುತ್ತಿದೆ. ಇಷ್ಟು ಬಾರಿ ಮಾಲಿನ್ಯ ನಮ್ಮ ಕಣ್ಣುಗಳನ್ನು ಕುರುಡಾಗಿಸಿತ್ತು ಎಂಬುದೇ ನಮ್ಮ ಅರಿವಿಗೆ ಬಂದಿರಲಿಲ್ಲ! ಜನರು ಮನೆಯೊಳಗಿದ್ದರೆ ವಾಯುಮಾಲಿನ್ಯ, ಜಲಮಾಲಿನ್ಯ ಮುಂತಾದವೆಲ್ಲ ಅರ್ಥರಹಿತ ಪದವಾಗುವುದರಲ್ಲಿ ಶಂಕೆಯಿಲ್ಲ.
ವನ್ಯಜೀವಿಗಳು
ಗಂಗೆಯಲ್ಲಿ, ಮುಂಬೈನ ತೀರಪ್ರದೇಶಗಳಲ್ಲಿ ಡಾಲ್ಫಿನ್‌ಗಳು, ಪಿಂಕ್ ಫ್ಲೆಮಿಂಗೋಗಳು, ಉತ್ತರಾಖಂಡದ ರಸ್ತೆಗಳಲ್ಲಿ ಆರಾಮಾಗಿ ಓಡಾಡಿಕೊಂಡಿರುವ ಆನೆಗಳು, ಚಂಡೀಗಢ ಸೇರಿದಂತೆ ಹಲವೆಡೆ ರಸ್ತೆಗಿಳಿದಿರುವ ಜಿಂಕೆ ನವಿಲುಗಳು, ಕ್ರುಗೆರ್ ರಾಷ್ಟ್ರೀಯ ಉದ್ಯಾನದಲ್ಲಿ ಸಿಂಹಗಳು... ಹೀಗೆ ಪ್ರಾಣಿಗಳೆಲ್ಲ ಅರಣ್ಯ ಬಿಟ್ಟು ನಿರ್ಭಿಡೆಯಿಂದ ಹೊರಬರುತ್ತಿವೆ. ಈಗ ಮನುಷ್ಯರನ್ನು ಪಂಜರದೊಳಗೆ ಹಾಕಿ, ಪ್ರಾಣಿಗಳು ಓಡಾಡಿಕೊಂಡು ಹಾಯಾಗಿವೆ.
ನಕ್ಷತ್ರ, ಗ್ರಹಗಳು
ಒಮ್ಮೆ ರಾತ್ರಿ ಹೊತ್ತಿನಲ್ಲಿ ಆಕಾಶ ನೋಡಿ. ಹಿಂದೆಂದೂ ಕಾಣದಷ್ಟು ಹೊಳಪಿನಲ್ಲಿ ನಕ್ಷತ್ರವೊಂದು ದೊಡ್ಡದಾಗಿ ವಜ್ರದಂತೆ ತೋರುತ್ತದೆ. ನಿಜದಲ್ಲಿ ಅದು ನಕ್ಷತ್ರವಲ್ಲ, ಶುಕ್ರಗ್ರಹ. ವಾಯುಮಾಲಿನ್ಯ ಕಡಿಮೆಯಾಗಿರುವುದರಿಂದ ಶುಕ್ರಗ್ರಹವನ್ನು ಹೆಚ್ಚು ಹೊಳಪಿನಲ್ಲಿ ಕಾಣಬಹುದಾಗಿದೆ. ಅಷ್ಟೇ ಅಲ್ಲ, ನಗರಗಳಲ್ಲಿ ಕಣ್ಣಿಗೇ ಕಾಣಿಸದಿದ್ದ ನಕ್ಷತ್ರಗಳೆಲ್ಲ ಈಗ ಸಂತಸದಿಂದ ಮಿಂಚುತ್ತಿವೆ.
ವಾಯುಮಾಲಿನ್ಯ
ವಾರ್ಷಿಕವಾಗಿ ಕೋಟ್ಯಂತರ ಜನರ ಸಾವು ಹಾಗೂ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದ ವಾಯುಮಾಲಿನ್ಯ ಮಹಾನಗರಗಳಲ್ಲಿ ವಾಹನ ಹಾಗೂ ಕಾರ್ಖಾನೆಗಳ ಆರ್ಭಟವಿಲ್ಲದೆ ಶೇ.60ರಷ್ಟು ತಗ್ಗಿದೆ. ಹಳ್ಳಿಗಳ ಗಾಳಿಯಂತೂ ಸ್ವಚ್ಛವಾಗಿದೆ. ಇವೆಲ್ಲವೂ ಕೇವಲ ಭಾರತದ ಮಟ್ಟಿಗಲ್ಲ. ಜಗತ್ತಿನ ಎಲ್ಲ ದೇಶಗಳಲ್ಲೂ ಇಂಥ ಬದಲಾವಣೆಗಳು ಕಂಡುಬರುತ್ತಿದೆ.