ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿಯ ಮಿನಿ ಜಲಪಾತಗಳು

By Suvarna News  |  First Published Jul 5, 2022, 8:18 PM IST

* ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿಯ ಮಿನಿ ಜಲಪಾತಗಳು..
* ಉತ್ತಮ ಮಳೆಯಿಂದ ನಿರ್ಮಾಣವಾಗಿರುವ ಜಲಪಾತ ವೀಕ್ಷಣೆಗೆ ಮುಗಿಬಿದ್ದಿರುವ ಪ್ರವಾಸಿಗರು
* ಪ್ರಕೃತಿ ಸೌಂದರ್ಯ ಸವಿಯುವ ನೆಪದಲ್ಲಿ ಟ್ರಾಫಿಕ್ ಜಾಮ್
* ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್ ರಸ್ತೆ 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಜುಲೈ.05)
: ಮುಂಗಾರು ಮಳೆ ಆರಂಭಗೊಳ್ಳುತ್ತಿದ್ದಂತೆಯೇ ಮಲೆನಾಡಲೀಗ ದೃಶ್ಯ ಕಾವ್ಯವೇ ಮೇಳೈಸಿದೆ. ಅದರಲ್ಲೂ ಪಶ್ಚಿಮಘಟ್ಟದಲ್ಲಿರೋ ಚಾರ್ಮಾಡಿ ಘಾಟಿಯಲ್ಲಂತೂ ಪ್ರಕೃತಿ ಮಾತೆಯ ನೈಜ ಸೊಬಗು ಅನಾವರಣಗೊಂಡಿದೆ. ಮುಂಗಾರು ಮಳೆಯಲ್ಲಿ ಮಿಂದೆದ್ದ ಚಾರ್ಮಾಡಿ ಘಾಟಿ ನೋಡಲು ಎರಡು ಕಣ್ಣು ಸಾಲದು ಎನ್ನುವಷ್ಟರ ಮಟ್ಟಿಗೆ ಸೌಂದರ್ಯ ಇಮ್ಮಡಿಗೊಂಡಿದೆ.  

ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿಯ ಮಿನಿ ಜಲಪಾತಗಳು
.
ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿನ ನೆಚ್ಚಿನತಾಣ. ಇಲ್ಲಿನ ಪಶ್ಚಿಮ ಘಟ್ಟದಲ್ಲಿರೋ ಮಳೆಕಾಡುಗಳು ಮುಂಗಾರು ಮಳೆಯಲ್ಲಿ ವಿಶಿಷ್ಟ ಸೌಂದರ್ಯವನ್ನು ಪಡೆಯುತ್ತವೆ. ಮಲೆನಾಡಿನ ದಟ್ಟಕಾನನದಲ್ಲಿ ಸುರಿಯೋ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ನೂರಾರು ಜಲಪಾತಗಳು ಬೋರ್ಗರೆಯತ್ತವೆ. ಚಿಕ್ಕಮಗಳೂರು ನಗರದಿಂದ 60 ಕಿ.ಮೀ. ದೂರದಲ್ಲಿರೋ ಚಾರ್ಮಾಡಿ ಘಾಟಿ ಮೂಡಿಗೆರೆ ಮಾರ್ಗವಾಗಿ ಸಾಗಿದ್ರೆ ಸಿಗುತ್ತೇದೆ. ಕೊಟ್ಟಿಗೆಹಾರವನ್ನು ಬಿಟ್ಟು ಮುಂದೆಕ್ಕೆ ಚಾರ್ಮಾಡಿ ಘಾಟಿಯಲ್ಲಿ ಸಾಗಿದ್ರೆ ಸಾಕು ಪ್ರಕೃತಿ ಮಾತೆಯ ನಾನಾ ಅವತಾರಗಳು ಕಣ್ಣಿಗೆ ಕಾಣುತ್ತವೆ.

Tap to resize

Latest Videos

ಚಾರ್ಮಾಡಿ ಘಾಟಿಯ ಜಾರುವ ಬಂಡೆಗಳ ಮೇಲೆ ಪ್ರವಾಸಿಗರ ಹುಚ್ಚಾಟ

ಮಲೆನಾಡಿನ ನಿಜವಾದ ಸೌಂದರ್ಯವಿರುವುದೇ ಮುಂಗಾರು ಮಳೆಯಲ್ಲಿ. ಹೌದು, ಮುಂಗಾರು ಮಳೆ ಆರಂಭವಾದ್ರೆ ಸಾಕು ಚಾರ್ಮಾಡಿ ಘಾಟಿಯ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗುತ್ತೆ. ಕಿರಿದಾದ ರಸ್ತೆಯುದ್ದಕ್ಕೂ ಚಾಚಿರೋ ದಟ್ಟ ಮಂಜು ಪ್ರವಾಸಿಗರಿಗೆ, ಪ್ರಯಾಣಿಕರಿಗೆ ಭಯಾನಕತೆಯಲ್ಲೂ ರೋಚಕತೆಯನ್ನು ಸೃಷ್ಟಿಸುತ್ತೆ. ಹಚ್ಚ ಹಸಿರಿನ ವನರಾಶಿಯ ನಡುವಲ್ಲಿ ಧುಮ್ಮಿಕ್ಕೋ ಜಲಪಾತಗಳು ಪ್ರವಾಸಿಗರಿಗೆ ಕಣ್ಮನ ತಣಿಸುತ್ತಿವೆ.ಮುಂಗಾರಿನ ಸಿಂಚನಕ್ಕೆ ಚಾರ್ಮಾಡಿ ಘಾಟಿ ನಿಜಕ್ಕೂ ನಯನಮನೊಹರ ಲೋಕವನ್ನೇ ತೆರೆದಿಟ್ಟಿದೆ. ಬಾನೆತ್ತರದ ಶಿಖರಗಳಿಂದ ರಭಸವಾಗಿ ಚಿಮ್ಮುವ ಜಲಪಾತಗಳು ರಮಣೀಯ ನೋಟವನ್ನು ಸೃಷ್ಟಿಸಿದರೆ, ಮೈ ಕೊರೆಯುವ ಕುಳಿರ್ಗಾಳಿ, ಎದೆ ಝಲ್ ಎನಿಸುವ ಕಡಿದಾದ ರಸ್ತೆಯ ತಳದಲ್ಲೇ ಇರುವ ಪ್ರಪಾತ ಈ ಮಾರ್ಗದಲ್ಲಿ ಸಾಗೋ ಪ್ರಯಾಣಿಕರ ಮನಕ್ಕೆ ಮುದವನ್ನು ನೀಡುತ್ತಿವೆ.  

ಮಂಜು ಕವಿದ ಹಾದಿಯಲ್ಲಿ ಚಾರ್ಮಾಡಿ ಘಾಟ್ 

 ಮಳೆಗಾಲ ಆರಂಭವಾದ್ರೆ ಸಾಕು ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನಿಗೆ ಬಿಡುವೇ ಇರೋದಿಲ್ಲ. ಅದರಲ್ಲೂ ಚಿಕ್ಕಮಗಳೂರು – ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕಕೊಂಡಿಯಂತಿರೊ ಚಾರ್ಮಾಡಿ ಘಾಟಿಗೆ ಹೊಂದಿಕೊಂಡಿರೋ ಕೊಟ್ಟಿಗೆಹಾರದಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತೆ. ಹೀಗಾಗಿ ಚಾರ್ಮಾಡಿಯ ರಸ್ತೆಯ ತುಂಬೆಲ್ಲಾ ಸದಾ ದಟ್ಟ ಮಂಜು ಆಚರಿಸಿಕೊಂಡಿರುತ್ತೆ. ಇಳೆಗೆ ಮಳೆಯ ಸಿಂಚನವಾಗುತ್ತಿದಂತೆಯೇ ಚಾರ್ಮಾಡಿ ಘಾಟಿಯಲ್ಲಿರೋ ನಿತ್ಯ ಹರಿಧ್ವರ್ಣದ ಕಾಡುಗಳಲ್ಲಿರೋ ಮರಗಳಲ್ಲಿ ಚಿಗುರೊಡೆಯುತ್ತೆ. ಎಲೆಗಳ ಮೇಲೆ ಬಿದ್ದ ಮಳೆಯ ಹನಿ ಇಳಿಗೆ ಹೋಗೋದನ್ನೇ ಮರೆತು ಬಿಡುತ್ತೆ. 

ಚಾರ್ಮಾಡಿ ಘಾಟಿಯಲ್ಲಿ ಜಲಪಾತಗಳು ಮನಕ್ಕೆ ಮುದನೀಡಿದಂತೆ, ಚುಮುಚುಮು ಚಳಿ, ದಟ್ಟ ಮಂಜು ಎಲ್ಲರನ್ನೂ ಅರೆಕ್ಷಣ ಹೊಸತೊಂದು ಲೋಕಕ್ಕೆ ಕೊಂಡೊಯ್ಯುತ್ತೆ.ಭಾರತದ ಪುಣ್ಯ ಕ್ಷೇತ್ರಗಳಾಗಿರೋ ಹೊರನಾಡು, ಕಳಸ, ಧರ್ಮಸ್ಥಳ, ಸುಬ್ರಹ್ಮಣ್ಯಗಳಿಗೆ ತೆರಳೋ ಭಕ್ತರು ಚಾರ್ಮಾಡಿ ಘಾಟಿಯ ಮಾರ್ಗದಲ್ಲಿಯೇ ಸಾಗುತ್ತಾರೆ. ಹೀಗೆ ಸಾಗೋ ಪ್ರವಾಸಿಗರು ಅರೆ ಕ್ಷಣ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಂಡು ಮುಂದೆ ಸಾಗ್ತಾರೆ. ಪ್ರಮುಖವಾಗಿ ಚಾರ್ಮಾಡಿ ಘಾಟಿಯ ವಿಶೇಷತೆಯೇ ಇಲ್ಲಿನ ವಿಶಿಷ್ಟವಾಗಿರೋ ಹವಾಗುಣ. ಮಳೆಗಾಲದಲ್ಲಿ ಕಾಶ್ಮೀರದಂತೆ ಬಾಸವಾಗೋ ಚಾರ್ಮಾಡಿ ಘಾಟಿಯಲ್ಲಿ ಬಿಸಿಲು, ಚಳಿ, ಮಳೆ, ಮಂಜು ಹೀಗೆ ಘಾಟಿಯಲ್ಲಿ ಸಾಗುತ್ತಿದ್ದರೆ ಎಲ್ಲಾ ರೀತಿಯ ಅನುಭವವೂ ಪ್ರಯಾಣಿಕರದ್ದಾಗುತ್ತೆ. ಆಗೊಮ್ಮೆ ಈಗೋಮ್ಮೆ ಮೋಡಗಳ ಎಡೆಯಿಂದ ಹೊರ ಸೂಸೋ ದಿನಕರನ ಚಿತ್ತಾರದಿಂದಾಗಿ ಎಲ್ಲೆಲ್ಲೂ ಹಚ್ಚ ಹಸಿರಿನ ವನರಾಶಿ ಕಂಡುಬಂದ್ರೆ, ಕ್ಷಣದಲ್ಲೇ ದಟ್ಟ ಮಂಜು ಎಲ್ಲೆಡೆಯೂ ಆವರಿಸಿಕೊಂಡು ಬಿಡುತ್ತೆ. ಹೀಗಾಗಿ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಸಾಗೋ ಹವಾಗುಣ ಮೈ ಮನ ರೋಮಾಂಚನಗೊಳಿಸುತ್ತೆ.

ಪ್ರಕೃತಿ ಸೌಂದರ್ಯ ಸವಿಯುವ ನೆಪದಲ್ಲಿ ಟ್ರಾಫಿಕ್ ಜಾಮ್
ಮಳೆಯಿಂದ ಅನಾವರಣಗೊಂಡಿರುವ ಮಿನಿಜಲಪಾತಗಳನ್ನು ಸವಿಯುವ ನಿಟ್ಟಿನಲ್ಲಿ ಪ್ರವಾಸಿಗರು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮುಗಿಬಿದ್ದಿದ್ದಾರೆ. ಇದರಿಂದಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರಿಂದ ಟ್ರಾಫಿಕ್ ಜಾಮ್  ಉಂಟಾಗುತ್ತಿದೆ.  ಜಲಪಾತ ವೀಕ್ಷಣೆಗೆ ಮುಗಿಬಿದ್ದಿರುವ ಪ್ರವಾಸಿಗರು, ಪ್ರಯಾಣಿಕರಿಂದಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು ತುರ್ತು ಕೆಲಸದ ನಿಮಿತ್ತ ತೆರಳುವ ಇತರೆ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಫಾಲ್ಸ್  ಸೌಂದರ್ಯ ಸವಿಯ ಜೊತೆಗೆ ಸೆಲ್ಫಿ ಗಿಳಿಗೆ ಪ್ರವಾಸಿಗರು, ಪ್ರಯಾಣಿಕರು ಬಿದ್ದಿದ್ದಾರೆ. ಫಾಲ್ಸ್ ಮುಂದೆ ಕೆಲ ಪ್ರವಾಸಿಗರಿಂದ ಪೋಟೋ ,ಟಿಕ್ ಟಾಕ್ ವಿಡಿಯೋ ಮಾಡುವ ನಿಟ್ಟಿನಲ್ಲಿ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಿ ಇತರೆ ಸವಾರರಿಗೆ ತೊಂದರೆ ನೀಡುತ್ತಿದ್ದಾರೆ.

click me!