ಫೆಬ್ರವರಿ 17 ರಿಂದ 19 ರವರೆಗೆ ಐತಿಹಾಸಿಕ ಸ್ಮಾರಕಕ್ಕೆ ಭೇಟಿ ನೀಡಲು ಯಾವುದೇ ಪ್ರವೇಶ ಶುಲ್ಕ ಇಲ್ಲ ಎಂದು ವರದಿಯಾಗಿದೆ.
ಆಗ್ರಾ (ಫೆಬ್ರವರಿ 16, 2023): ಉತ್ತರ ಪ್ರದೇಶದಲ್ಲಿರುವ ಐತಿಹಾಸಿಕ ಹಾಗೂ ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದು ತಾಜ್ ಮಹಲ್. ನಿತ್ಯವೂ ಸಹಸ್ರ ಸಹಸ್ರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರೇಮಿಗಳು, ದಂಪತಿ ಮಾತ್ರವಲ್ಲದೆ ಅನೇಕರು ತಾಜ್ ಮಹಲ್‌ಗೆ ಹೋಗುತ್ತಾರೆ. ಅಲ್ಲದೆ, ದೇಶದ ಪ್ರವಾಸಿಗರು ಮಾತ್ರವಲ್ಲದೆ ವಿದೇಶದಿಂದಲೂ ಸಾಕಷ್ಟು ಜನ ಬರುತ್ತಾರೆ. ಈ ತಾಜ್ ಮಹಲ್‌ಗೆ ನಾಳೆಯಿಂದ 3 ದಿನಗಳ ಕಾಲ ಉಚಿತವಾಗಿ ಪ್ರವೇಶ ಇದೆ ನೋಡಿ. ಇದಕ್ಕೆ ಕಾರಣ ಮೊಘಲ್ ಸಾಮ್ರಾಜ್ಯದ ಐದನೇ ಚಕ್ರವರ್ತಿ ಷಹಜಹಾನ್ ಅವರ ಮರಣದ ವಾರ್ಷಿಕೋತ್ಸವದಂದು, ತಾಜ್ ಮಹಲ್‌ನಲ್ಲಿ 3 ದಿನಗಳವರೆಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ ಎಂದು ತಿಳಿದುಬಂದಿದೆ.
ಫೆಬ್ರವರಿ 17 ರಿಂದ 19 ರವರೆಗೆ ಐತಿಹಾಸಿಕ ಸ್ಮಾರಕಕ್ಕೆ ಭೇಟಿ ನೀಡಲು ಯಾವುದೇ ಪ್ರವೇಶ ಶುಲ್ಕ ಇಲ್ಲ ಎಂದು ವರದಿಯಾಗಿದೆ. ಮತ್ತು ಷಹಜಹಾನ್ ಹಾಗೂ ಮುಮ್ತಾಜ್ ಮಹಲ್ ಅವರ ಸಮಾಧಿ ನೋಡಲು ಸಹ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಅವಕಾಶ ಇದೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ, ಜನರು ಉರುಸ್‌ನಲ್ಲಿ ಭಾಗಿಯಾಗಲು ಮತ್ತು ಮೊಘಲ್ ಚಕ್ರವರ್ತಿ ಷಹಜಹಾನ್ ಹಾಗೂ ಪತ್ನಿಯ ಮೂಲ ಸಮಾಧಿಗಳನ್ನು ನೋಡಲು ನೆಲಮಾಳಿಗೆಯನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.
ಇದನ್ನು ಓದಿ: ಕೋವಿಡ್ ಪಾಸಿಟಿವ್ ಬಳಿಕ ನಾಪತ್ತೆಯಾದ ಅರ್ಜೆಂಟೀನಾ ಪ್ರವಾಸಿಗ
ಇನ್ನು, ಉಚಿತ ಪ್ರವೇಶ ಹಾಗೂ ಷಹಜಹಾನ್ ಪುಣ್ಯ ತಿಥಿ ಹಿನ್ನೆಲೆ ಈ ದಿನಗಳಂದು ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆ ಐತಿಹಾಸಿಕ ಸ್ಮಾರಕ ಮತ್ತು ಸುತ್ತಮುತ್ತ ಅಗತ್ಯ ವ್ಯವಸ್ಥೆಗಳನ್ನು ಸರ್ಕಾರ ಮಾಡಲಾಗುವುದು ಎಂದು ತಿಳಿದುಬಂದಿದೆ.
ಷಹಜಹಾನ್ ಯಾರು..? ತಾಜ್ ಮಹಲ್‌ನಲ್ಲಿ ಇವರ ಸಮಾಧಿ ಯಾಕಿದೆ..?
ನಾಲ್ಕನೇ ಮೊಘಲ್ ಚಕ್ರವರ್ತಿ ಜಹಾಂಗೀರನ ಮೂರನೇ ಮಗ, ಷಹಜಹಾನ್ ಐದನೇ ಮೊಘಲ್ ಚಕ್ರವರ್ತಿಯಾಗಿದ್ದು, ಜನವರಿ 1628 ರಿಂದ ಜುಲೈ 1658 ರವರೆಗೆ ಆಳ್ವಿಕೆ ನಡೆಸಿದ್ದರು. .ಅವರು ಚಕ್ರವರ್ತಿಯಾಗಿದ್ದ ಅವಧಿಯಲ್ಲಿ, ಅನೇಕ ಸ್ಮಾರಕಗಳನ್ನು ನಿರ್ಮಿಸಿದ್ದು, ಈ ಪೈಕಿ ಷಹಜಹಾನ್ ಪತ್ನಿ ಮುಮ್ತಾಜ್ ಮಹಲ್ ಮೇಲಿನ ಪ್ರೀತಿಯಿಂದ ಪ್ರಸಿದ್ಧ ತಾಜ್ ಮಹಲ್ ಅನ್ನು ಕಟ್ಟಲಾಗಿದೆ.
ಇದನ್ನೂ ಓದಿ: ಇದು 'ಪಬ್ಲಿಸಿಟಿ ಇಂಟ್ರಸ್ಟ್ ಲಿಟಿಗೇಷನ್', ತಾಜ್‌ಮಹಲ್ ಕುರಿತಾದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್!
ಇನ್ನು, ಜನವರಿ 22, 1666 ರಂದು ಷಹಜಹಾನ್ ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಉತ್ತರ ಪ್ರದೇಶದಲ್ಲಿರುವ ಆಗ್ರಾದ ತಾಜ್ ಮಹಲ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಈ ಕಾರಣದಿಂದ ಪ್ರತಿ ವರ್ಷ, ಅವರ ಉರುಸ್ ಸಂದರ್ಭದಲ್ಲಿ, ಐತಿಹಾಸಿಕ ಸ್ಮಾರಕ ತಾಜ್ ಮಹಲ್‌ನ ಪ್ರವೇಶವನ್ನು ಮೂರು ದಿನಗಳ ಕಾಲ ಪ್ರವಾಸಿಗರಿಗೆ ಉಚಿತವಾಗಿ ನೀಡಲಾಗುತ್ತದೆ.
ತಾಜ್ ಮಹಲ್ ಪ್ರವೇಶ ಶುಲ್ಕ ಎಷ್ಟು..?
ಸಾಮಾನ್ಯ ದಿನಗಳಲ್ಲಿ, ಭಾರತೀಯರು ಮತ್ತು OCI ಕಾರ್ಡುದಾರರಿಗೆ ತಾಜ್ ಮಹಲ್‌ನಲ್ಲಿ ಪ್ರವೇಶ ಶುಲ್ಕ ರೂ. 50 ಇದೆ. ಇನ್ನು, ಸಾರ್ಕ್ ಮತ್ತು ಬಿಮ್ಸ್‌ಟೆಕ್ ರಾಷ್ಟ್ರಗಳ ನಾಗರಿಕರಿಗೆ 540 ರೂ. ಶುಲ್ಕ ವಿಧಿಸಲಾಗುತ್ತದೆ. ಈ ದೇಶಗಳನ್ನು ಹೊರತುಪಡಿಸಿ ಇತರ ದೇಶಗಳ ನಾಗರಿಕರಿಗೆ, ಒಬ್ಬರು ಪ್ರವಾಸಿಗರಿಗೆ ಪ್ರವೇಶ ಶುಲ್ಕ 1100 ರೂ. ಎಂದು ತಿಳಿದುಬಂದಿದೆ.
ಇನ್ನು, ಈ ಪ್ರವೇಶ ಶುಲ್ಕದ ಹೊರತಾಗಿ, ತಾಜ್ ಮಹಲ್‌ನಲ್ಲಿರುವ ಮುಖ್ಯ ಸಮಾಧಿಗೆ ಭೇಟಿ ನೀಡಲು ಪ್ರವಾಸಿಗರು ತಲಾ 200 ರೂ. ನೀಡಬೇಕಾಗುತ್ತದೆ. ಆದರೆ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಪ್ರವೇಶ ಶುಲ್ಕ ವಿಧಿಸುವುದಿಲ್ಲ. ಭಾರತೀಯರು ಸೇರಿ ಯಾವುದೇ ದೇಶದವರಾದರೂ 15 ಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರವೇಶ ಶುಲ್ಕ ಇಲ್ಲ.
ಇದನ್ನೂ ಓದಿ: ಪತ್ನಿಗಾಗಿ ತಾಜ್ ಮಹಲ್‌ನಂತೆ ಮನೆ ಕಟ್ಟಿಸಿದ ಪತಿ..!