
ಪ್ರಯಾಣ ಇಷ್ಟಪಡುವ ಅನೇಕ ಯುವಕರು ಸಾಹಸವನ್ನು ಇಷ್ಟಪಡುತ್ತಾರೆ. ಪ್ರಯಾಣವು ರೋಮಾಂಚನಕಾರಿಯಾಗಿರಬೇಕೆಂದು ಬಯಸ್ತಾರೆ. ಅನೇಕರಿಗೆ ದೆವ್ವ – ಭೂತಗಳ ಭಯವಿಲ್ಲ. ದೆವ್ವ, ಭೂತದ ಹೆಸರಿನಲ್ಲಿ ಪ್ರಸಿದ್ಧಿಯಾಗಿರುವ ಪ್ರದೇಶಗಳಿಗೆ ಹೋಗುವ ಪ್ಲಾನ್ ಮಾಡ್ತಾರೆ. ಭಾರತದಲ್ಲಿ ಇಂಥ ಅನೇಕ ಸ್ಥಳಗಳಿವೆ. ಕೆಲ ಸ್ಥಳಗಳು ಭಯ ಹುಟ್ಟಿಸುತ್ತವೆ. ಕೆಲ ಸ್ಥಳಗಳ ಕಥೆಗಳೇ ರೋಮಾಂಚನವಾಗಿವೆ. ಕೆಲವು ಸ್ಥಳಗಳನ್ನು ದೆವ್ವದ ಸ್ಥಳ ಎಂದು ಸರ್ಕಾರವೇ ಘೋಷಣೆ ಮಾಡಿದೆ. ಸರ್ಕಾರ ಆ ಸ್ಥಳಗಳಿಗೆ ಸಂಜೆ ಭೇಟಿ ಮಾಡುವುದನ್ನು ನಿಷೇಧಿಸಿದೆ. ಇನ್ನು ಕೆಲ ಸ್ಥಳಗಳನ್ನು ಶಾಪಗ್ರಸ್ಥ ಸ್ಥಳ ಎಂದು ಗುರುತಿಸಲಾಗಿದೆ. ಕೆಲ ಸ್ಥಳಗಳಲ್ಲಿ ಆತ್ಮಗಳು ಓಡಾಡ್ತವೆ, ಭೂತಗಳಿವೆ ಎಂಬ ಸುದ್ದಿಯೂ ಆಗಾಗ ಕೇಳ್ತಿರುತ್ತದೆ. ಆದ್ರೆ ಈ ದೆವ್ವ – ಭೂತ ಎಷ್ಟು ನಿಜ, ಎಷ್ಟು ಸುಳ್ಳು ಎಂಬುದು ಅನುಭವಿಸಿದವರಿಗೆ ಗೊತ್ತು. ಕೆಲ ಯುವಕರಿಗೆ ಈ ಸ್ಥಳಗಳನ್ನು ನೋಡಬೇಕೆಂಬ ಹುಚ್ಚು ಹೆಚ್ಚಿರುತ್ತದೆ. ಸದಾ ದೆವ್ವದ ಸಿನಿಮಾ ನೋಡುವ ಯುವಕರು, ಆ ಪ್ರದೇಶಗಳಿಗೆ ಹೋಗುವ ಸಾಹಸ ಮಾಡ್ತಾರೆ. ಅಲ್ಲಿಗೆ ಹೋಗೋದು ತಪ್ಪಲ್ಲ. ಆದ್ರೆ ಭಯಾನಕ ಪ್ರದೇಶಗಳಿಗೆ ಹೋಗುವ ಮೊದಲು ಕೆಲ ಎಚ್ಚರಿಕೆ ತೆಗೆದುಕೊಳ್ಳಬೇಕು. ಭಯಾನಕ ಪ್ರದೇಶಕ್ಕೆ ಪ್ರವಾಸ ಹೋಗುವ ಮುನ್ನ ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ : ನೀವು ದೆವ್ವ (Devil) – ಭೂತಕ್ಕೆ ಪ್ರಸಿದ್ಧಿಯಾಗಿರುವ ಸ್ಥಳಕ್ಕೆ ಹೋಗ್ತೀರಾ ಎಂದಾದ್ರೆ ಮೊದಲು ಆ ಸ್ಥಳದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಆ ಪ್ರದೇಶದ ವಾತಾವರಣ ಹೇಗಿದೆ? ಆ ಜಾಗಕ್ಕೆ ಎಂದು ಹೋಗುವುದು ಸೂಕ್ತ ? ರಾತ್ರಿ (night) ಅಲ್ಲಿ ಉಳಿಯಲು ಅವಕಾಶವಿದೆಯೇ ? ಅಲ್ಲಿನ ನಿಯಮಗಳೇನು ಎಂಬುದನ್ನು ಮೊದಲು ತಿಳಿಯಬೇಕು. ನಂತ್ರ ಆ ನಿಯಮದಂತೆ ನಡೆಯಬೇಕು. ಕೆಲ ಸ್ಥಳಗಳಲ್ಲಿ ರಾತ್ರಿ ಕಳೆಯಲು ಅವಕಾಶವಿರುವುದಿಲ್ಲ. ಅಂಥ ಸ್ಥಳದಲ್ಲಿ ರಾತ್ರಿ ಕಳೆಯುವ ಸಾಹಸ ಮಾಡಬಾರದು. ನಿಯಮಗಳನ್ನು ಮೀರಿ ನಡೆದುಕೊಂಡರೆ ಕೊನೆಗೆ ಪಶ್ಚಾತ್ತಾಪಪಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.
ಅಗತ್ಯ ವಸ್ತುಗಳು : ಪ್ರವಾಸ (Trip) ಕ್ಕೆ ಹೋಗುವ ಮೊದಲು ಅಗತ್ಯ ವಸ್ತುಗಳು ಬ್ಯಾಗ್ ನಲ್ಲಿರಬೇಕು. ಅದರಲ್ಲೂ ಭಯಾನಕ ಪ್ರದೇಶಗಳಿಗೆ ಹೋಗುವ ಮೊದಲು ಅತ್ಯಗತ್ಯ ವಸ್ತುಗಳು ಬ್ಯಾಗ್ ನಲ್ಲಿ ಇರುವಂತೆ ನೋಡಿಕೊಳ್ಳಿ. ಹೋಗ್ತಿರುವ ಜಾಗದ ಹವಾಮಾನ ಗಮನಿಸಿ ಅದಕ್ಕೆ ತಕ್ಕಂತೆ ಬಟ್ಟೆ ತೆಗೆದುಕೊಳ್ಳಿ. ಶೀತ ಮತ್ತು ಪರ್ವತ ಪ್ರದೇಶಗಳಿಗೆ ಹೋಗುತ್ತಿದ್ದರೆ ಬೆಚ್ಚಗಿನ ಬಟ್ಟೆ ಇರಲಿ. ನೀವು ಟ್ರೆಕ್ಕಿಂಗ್ ಮಾಡಬೇಕಾದ ಸ್ಥಳಕ್ಕೆ ಹೋಗುತ್ತಿದ್ದರೆ ನಂತರ ಶೂ, ಟ್ರ್ಯಾಕ್ ಪ್ಯಾಂಟ್ ಇರಲಿ. ಅಗತ್ಯ ಔಷದಿ, ನೀರು ನಿಮ್ಮ ಬಳಿ ಇರಲಿ. ಹಾಗೆಯೇ ಕತ್ತಲೆಯಲ್ಲಿ ಸಮಯ ಕಳೆಯಬೇಕಾಗಬಹುದು. ಹಾಗಾಗಿ ಟಾರ್ಚ್ ನಿಮ್ಮ ಬಳಿ ಇಟ್ಟುಕೊಂಡರೆ ಒಳ್ಳೆಯದು. ಭಯಾನಕ ಪ್ರದೇಶಗಳಿಗೆ ಹೋಗುವಾಗ ನಿಮಗೆ ಧೈರ್ಯಕ್ಕೆನ್ನುವಂತೆ ಚೂಪಾದ ಆಯುಧವನ್ನಿಟ್ಟುಕೊಂಡಿರಿ.
ಇದನ್ನೂ ಓದಿ: ಚಿತ್ರದುರ್ಗ: ಮಧ್ಯ ಕರ್ನಾಟಕದ ಮಿನಿ ಊಟಿ ಜೋಗಿಮಟ್ಟಿ
ಆರೋಗ್ಯದ ಬಗ್ಗೆ ಗಮನ : ಪ್ರವಾಸಕ್ಕೆ ಹೋಗ್ತೇವೆಂಬ ಖುಷಿಯಲ್ಲಿ ಆರೋಗ್ಯ ಮರೆತಿರುತ್ತೇವೆ. ಆದ್ರೆ ಪ್ರವಾಸಕ್ಕೆ ಹೋಗುವ ಮೊದಲು ಆರೋಗ್ಯ ತಪಾಸಣೆ ಮಾಡಿಸ್ಬೇಕು. ಕೆಲವರಿಗೆ ಕತ್ತಲು, ಭಯ ಹುಟ್ಟಿಸುವ ಪ್ರದೇಶಕ್ಕೆ ಹೋಗ್ತಿದ್ದಂತೆ ಹೃದಯಬಡಿತ ಹೆಚ್ಚಾಗುತ್ತದೆ. ಕೆಲವೊಮ್ಮೆ ಹೃದಯಾಘಾತಕ್ಕೂ ಕಾರಣವಾಗಿತ್ತದೆ. ನಿಮ್ಮ ಹೃದಯ ಗಟ್ಟಿಯಿದ್ರೂ ನಿಮ್ಮ ಸಂಗಾತಿ, ಸ್ನೇಹಿತರ ಹೃದಯದ ಬಗ್ಗೆಯೂ ನೀವು ಕಾಳಜಿವಹಿಸಬೇಕು. ಹಾಗಾಗಿ ಮೊದಲು ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ನಂತ್ರ ಪ್ರಯಾಣ ಬೆಳೆಸಿ.
ಇದನ್ನೂ ಓದಿ: ಕಡಿಮೆ ಬಜೆಟ್ ನಲ್ಲಿ ವಿದೇಶ ಸುತ್ತೋ ಆಸೇನಾ? ಹೀಗ್ ಪ್ಲ್ಯಾನ್ ಮಾಡಿ
ಮಾನಸಿಕ ಸಿದ್ಧತೆ : ಅನೇಕರು ಗುಂಪಿನಲ್ಲಿ ಗೋವಿಂದ ಆಗ್ತಾರೆ. ಅವರು ಭಯಾನಕ ಪ್ರದೇಶಕ್ಕೆ ಹೋಗಲು ಸಿದ್ಧರಿರುವುದಿಲ್ಲ. ಆದ್ರೆ ಗ್ರೂಪ್ ನಿರ್ಧಾರಕ್ಕೆ ಯಸ್ ಎಂದಿರುತ್ತಾರೆ. ಆ ಪ್ರದೇಶಕ್ಕೆ ಹೋದಾಗ ಭಯ ಶುರುವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರ ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಮಾನಸಿಕವಾಗಿ ಸಿದ್ಧರಿಲ್ಲವೆಂದ್ರೆ ಪ್ರವಾಸದಿಂದ ಹಿಂದೆ ಸರಿಯುವುದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.