
ಮೂಢನಂಬಿಕೆಗಳು, ಅದಕ್ಕೆ ಪುಷ್ಠಿ ನೀಡುವ ನಿಗೂಢತೆಗಳು, ಮನುಷ್ಯ ಮಾತ್ರರಿಗೆ ನಿಲುಕದ ಅಚ್ಚರಿಗಳು, ಸೃಷ್ಟಿ ವೈಚಿತ್ರ್ಯಗಳು- ಇವೆಲ್ಲಕ್ಕೂ ಭಾರತದಲ್ಲಿ ಕೊರತೆ ಇರಲು ಸಾಧ್ಯವೇ ಇಲ್ಲ. ಇಲ್ಲಿ ನೂರಾರು ಹಕ್ಕಿಗಳು ಒಮ್ಮೆಗೇ ಆತ್ಮಹತ್ಯೆ ಮಾಡಿಕೊಂಡು ಅಪನಂಬಿಕೆಗೆ ಕಾರಣವಾಗುತ್ತವೆ, ಆತ್ಮಗಳು ಬಂದು ಕೆನ್ನೆಗೆ ಹೊಡೆದ ಕತೆಗಳು ಊರೂರಲ್ಲೂ ಸಿಗುತ್ತವೆ, ಮೂಳೆಗಳನ್ನೇ ಮೈತುಂಬಾ ಹೇರಿಕೊಂಡ ಕೆರೆಯಿದೆ... ಭೂತ ದೆವ್ವದ ಕತೆಗಳಿಗೆ, ನಿಗೂಢತೆಗಳಿಗೆ ಮಿತಿಯೇ ಇಲ್ಲ. ಇಷ್ಟೊಂದು ಹಾರರ್ ಸ್ಟೋರಿಗಳಲ್ಲಿ ಕಾಲಾಂತರದಲ್ಲಿ ಕೆಲವೊಂದು ಬೇಧಿಸಲ್ಪಟ್ಟಿವೆ, ಮತ್ತೆ ಕೆಲವು ಹಾಗೇ ಉಳಿದು ಕುತೂಹಲ ಕಾಯ್ದುಕೊಂಡಿವೆ. ಅಂಥ ಕುತೂಹಲ ಉಳಿಸಿಕೊಂಡ ಕೆಲ ಸ್ಥಳಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.
ಕುಲಧಾರಾ, ರಾಜಸ್ಥಾನ
ಸುಮಾರು 200 ವರ್ಷಗಳ ಹಿಂದೆ ಕುಲಧಾರಾದಲ್ಲಿ 1500ಕ್ಕೂ ಹೆಚ್ಚು ಪಲಿವಾಲ್ ಬ್ರಾಹ್ಮಣರು ವಾಸಿಸುತ್ತಿದ್ದರು. ಅವರು ಕುಲಧಾರಾವನ್ನು ತಮ್ಮ ನೆಲೆಯಾಗಿಸಿಕೊಂಡು 500ಕ್ಕೂ ಹೆಚ್ಚು ವರ್ಷಗಳೇ ಕಳೆದಿದ್ದವು. ಆದರೆ, ಒಂದು ದಿನ ಸಡನ್ ಆಗಿ, ಕುಲಧಾರಾ ಸೇರಿದಂತೆ ಸುತ್ತಮುತ್ತಲಿನ 85 ಹಳ್ಳಿಗಳ ಜನರು ರಾತ್ರೋರಾತ್ರಿ ಜಾಗ ಖಾಲಿ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಹಳ್ಳಿಯನ್ನು ಶಾಪಗ್ರಸ್ತವಾಗಿಸಿ ಹೋಗಿದ್ದಾರೆ. ಹಾಗಾಗಿಯೇ ಇಂದಿಗೂ ಕುಲಧಾರ ಮನುಷ್ಯರಿಲ್ಲದ ಪಾಳು ಮನೆಗಳು, ದೇವಾಲಯದಿಂದ ಬೋಳು ಬೋಳಾಗಿ ನಿಂತಿದೆ. ಈ ಅಚಾನಕ್ ವಲಸೆಗೆ ಇಂದಿಗೂ ನಿಖರ ಕಾರಣ ತಿಳಿದುಬಂದಿಲ್ಲ.
12 ಪವಿತ್ರ ಜ್ಯೋತಿರ್ಲಿಂಗಗಳ ದರ್ಶನ ನಿಮಗಾಗಿ ಇಲ್ಲಿ!...
ಕೊಡಿನ್ಹಿ, ಕೇರಳ
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಕೊಡಿನ್ಹಿ ಎಂಬ ಪುಟ್ಟ ಹಳ್ಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲೊಂದು ಅಚ್ಚರಿಯ ಕಾರಣವಿದೆ. ಅದೇನೆಂದರೆ ಇಲ್ಲಿ ಇತರೆಡೆಗಳೆಲ್ಲಕ್ಕಿಂತ ಹೆಚ್ಚು ಅವಳಿ ಜವಳಿಗಳ ಜನನವಾಗುತ್ತದೆ. ಈ ಪುಟ್ಟ ಹಲ್ಳಿಯಲ್ಲಿ 200 ಕ್ಕೂ ಹೆಚ್ಚು ಜೋಡಿ ಅವಳಿಜವಳಿ ಮಕ್ಕಳಿದ್ದಾರೆ, ಅಷ್ಟೇ ಅಲ್ಲ, ಎರಡು ಸೆಟ್ ತ್ರಿವಳಿಗಳೂ ಇದ್ದಾರೆ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ ಕೊಡಿನ್ಙಿಯಿಂದ ವಿವಾಹವಾಗಿ ಬೇರೆ ಊರುಗಳಿಗೆ ಹೋದ ಬಹಳಷ್ಟು ಮಹಿಳೆಯರಿಗೂ ಅವಳಿಜವಳಿ ಮಕ್ಕಳಾಗಿವೆ. ಈ ವೈಶಿಷ್ಠ್ಯಕ್ಕೆ ಸಂಶೋಧಕರು ಕಾರಣ ಕಂಡು ಹಿಡಿಯಲು ವಿಫಲರಾಗಿದ್ದರೂ, ಕೆಲ ವೈದ್ಯರ ಪ್ರಕಾರ ಇದಕ್ಕೆ ಈ ಪ್ರದೇಶದ ನೀರೇ ಕಾರಣ.
ಲೇಹ್, ಲಡಾಕ್
ಲೇಹ್ ಲಡಾಕ್ ಸೌಂದರ್ಯಕ್ಕೆ ವಿಶ್ವಪ್ರಸಿದ್ಧಿ ಪಡೆದಿವೆ. ಆದರೆ ಇಲ್ಲಿ ಸುದ್ದಿಯಾಗಲು ಇನ್ನೂ ಸಾಕಷ್ಟು ಸಂಗತಿಗಳಿವೆ. ಇಲ್ಲಿ ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿರುವ ಮ್ಯಾಗ್ನೆಟಿಕ್ ಹಿಲ್ ಎಂಬುದು ಭಾರತದಲ್ಲೇ ಅತಿ ವಿಶಿಷ್ಠ ಸ್ಥಳ. ಇಲ್ಲಿನ ನಿಗೂಢತೆ ಎಂದರೆ ಗುಡ್ಡದ ಬುಡಕ್ಕೆ ಕಾರ್ ಓಡಿಸಿಕೊಂಡು ಹೋದರೆ ಗುಡ್ಡವೇ ತನಗಿಚ್ಛೆ ಬಂದಂತೆ ಕಾರನ್ನು ಎಳೆದುಕೊಳ್ಳುತ್ತದೆ. ಕೆಲ ಕಾರ್‌ಗಳು ಆನ್ ಮಾಡದೆಯೇ ಗುಡ್ಡದತ್ತ ಸೆಳೆದು ಹೋದ ನಿದರ್ಶನಗಳೂ ಇವೆ.
ಹನಿಮೂನ್ ಹಳೆಯದಾಯ್ತು, ಈಗೇನಿದ್ರು ಫ್ರೆಂಡ್‍ಮೂನ್ ಹವಾ!...
ಜತಿಂಗಾ, ಅಸ್ಸಾಂ
ಹಚ್ಚಹಸಿರು ಹಾಗೂ ಪರ್ವತಗಳ ಬೀಡಾದ ಅಸ್ಸಾಂನ ಜತಿಂಗಾ ತನ್ನ ಸೌಂದರ್ಯದ ಬದಲಿಗೆ, ಇಲ್ಲಿ ಪ್ರತಿ ವರ್ಷ ನಡೆವ ಒಂದು ವಿಚಿತ್ರ ಘಟನೆಗಾಗಿ ಹೆಸರಾಗಿದೆ. ಹೌದು, ಪ್ರತಿ ವರ್ಷ ಮಳೆಗಾಲದ ಕೊನೆಯ ತಿಂಗಳುಗಳಲ್ಲಿ ಸೂರ್ಯ ಮುಳುಗಿದ ಬಳಿಕ, ನೂರಾರು ವಲಸೆ ಪಕ್ಷಿಗಳು ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಇದು ಪ್ರತೀ ದಿನ ನಡೆವ ವಿದ್ಯಮಾನ. ಸ್ಥಳೀಯರು ಇದಕ್ಕಾಗಿ ದುರಾತ್ಮಗಳನ್ನು ಹೊಣೆ ಮಾಡಿದರೆ ಪಕ್ಷಿ ತಜ್ಞರು- ಮಳೆಗಾಲದ ಅತಿಯಾದ ಮಂಜು ಕವಿದ ವಾತಾವರಣ ಹಾಗೂ ಹೈ ಆಲ್ಟಿಟ್ಯೂಡ್‌ನಿಂದಾಗಿ ಪಕ್ಷಿಗಳಿಗೆ ಸರಿ ಕಣ್ಣು ಕಾಣಿಸದಂತಾಗಿ ಹಳ್ಳಿಗಳ ಲೈಟ್ ಬೆಳಕಿನತ್ತ ಹಾರತೊಡಗುತ್ತವೆ. ಈ ಸಂದರ್ಭದಲ್ಲಿ ಮನೆಗಳ ಗೋಡೆ, ಮರಗಳಿಗೆ ಗುಜ್ಜಿ ಬಿದ್ದು ಸಾಯುತ್ತವೆ, ಮತ್ತೆ ಕೆಲವು ಗಾಯಗೊಳ್ಳುತ್ತವೆ ಎಂದು. ಆದರೆ, ರಾತ್ರಿಯ ಹೊತ್ತು ಹಕ್ಕಿಗಳೇಕೆ ಹಾರುತ್ತವೆ, ಅವೇಕೆ ಪ್ರತಿ ವರ್ಷ ಇದೇ ಜಾಗದಲ್ಲಿ ಸಾಯುತ್ತವೆ ಎಂಬ ವಿವರಣೆ ನೀಡಲು ಇದುವರೆಗೂ ಯಾರೂ ಶಕ್ತರಾಗಿಲ್ಲ.
ವಿಜಯ ವಿಠ್ಠಲ ದೇವಾಲಯ, ಹಂಪಿ
15ನೇ ಶತಮಾನದಲ್ಲಿ ನಿರ್ಮಾಣವಾದ ಹಂಪಿಯ ವಿಜಯ ವಿಠ್ಠಲ ದೇವಾಲಯದಲ್ಲಿ ಕಣ್ಸೆಳೆಯಲು ವಾಸ್ತುಕಲೆಯೇ ಸಾಕು. ಆದರೆ, ಅವೆಲ್ಲಕ್ಕಿಂತ ಅಚ್ಚರಿಯಾಗಿ ನಿಲ್ಲುವುದು ಅಲ್ಲಿರುವ 56 ಸಂಗೀತ ಕಂಬಗಳು. ಈ ಕಂಬಗಳನ್ನು ಬಡಿದಾಗ ಸಂಗೀತದ ನಾದ ಹೊರಹೊಮ್ಮುತ್ತದೆ. ಇದನ್ನು ನೋಡಿ ಕುತೂಹಲದಿಂದ ಬ್ರಿಟಿಷರು ಖಾಲಿಯಾಗಿ ಕಾಣುವ ಕಂಬದೊಳಗೆ ಏನಾದರೂ ಇಡಲಾಗಿದೆಯೇ ಎಂದು ಪರೀಕ್ಷಿಸಲು ಕಂಬವೊಂದನ್ನು ಇಬ್ಬಾಗವಾಗಿಸಿ ನೋಡಿದ್ದರು. ಆ ಖಾಲಿ ಕಂಬಗಳನ್ನು ಇಂದಿಗೂ ಕಾಣಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.