Travel Guide : ಟ್ರಾನ್ಸ್ಜೆಂಡರ್ಸ್ ನಡೆಸೋ ಈ ರೆಸ್ಟೋರೆಂಟಿನಲ್ಲಿ ಸಿಗುತ್ತೆ ರುಚಿ ರುಚಿ ಆಹಾರ

By Suvarna News  |  First Published Jun 13, 2023, 6:11 PM IST

ಟ್ರಾನ್ಸ್ಜೆಂಡರ್ ಅಂದ್ರೆ ಮೂಗು ಮುರಿಯೋರೇ ಹೆಚ್ಚು. ನಿತ್ಯದ ಜೀವನಕ್ಕಾಗಿ ಅವರು ಸಾಕಷ್ಟು ಕಷ್ಟಪಡ್ತಾರೆ. ಅವರಿಗೆ ಆಸರೆಯಾಗಲೆಂದು, ಅವರಿಂದಲೇ ಶುರುವಾದ ಕೆಫೆಯೊಂದು ಈಗ ಪ್ರಸಿದ್ಧಿ ಪಡೆದಿದೆ. ಅಲ್ಲಿನ ನೋಟ, ಆಹಾರ ಗ್ರಾಹಕರನ್ನು ಸೆಳೆಯುತ್ತಿದೆ.
 


ಎಲ್ ಜಿಬಿಟಿಕ್ಯೂಐಎ ಪ್ಲಸ್ ಸಮುದಾಯಕ್ಕೆ ಸೇರಿದ ಜನರು ಈಗ್ಲೂ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ವಿದ್ಯಾಭ್ಯಾಸ, ನೌಕರಿ ಮರೀಚಿಕೆಯಾಗಿದೆ. ಅರ್ಹತೆ ಹೊಂದಿದ್ರೂ ಅನೇಕ ಕಡೆ ಇವರಿಗೆ ಉದ್ಯೋಗ ಸಿಗೋದಿಲ್ಲ. ಆದ್ರೆ ಮುಂಬೈನ ಕೆಫೆಯೊಂದು ಇವರಿಗೆ ಆಸರೆಯಾಗಿದೆ. ಎಲ್ ಜಿಬಿಟಿಕ್ಯೂಐಎ ಪ್ಲಸ್ ಸಮುದಾಯದ ಜನರಿಗೆ ಉದ್ಯೋಗ ನೀಡುತ್ತಿದೆ. ನಾವಿಂದು ಆ ಕೆಫೆ ಎಲ್ಲಿದೆ ಹಾಗೆ ಅದ್ರ ವಿಶೇಷತೆ ಏನು ಎಂಬುದನ್ನು ತಿಳಿಯೋಣ.

ಎಲ್ ಜಿಬಿಟಿಕ್ಯೂಐಎ ಪ್ಲಸ್ (LGBTQIA+) ಸಮುದಾಯಕ್ಕಾಗಿ ನಿರ್ಮಿಸಿದ ಕೆಫೆ ಎಲ್ಲಿದೆ? : ಮುಂಬೈ (Mumbai) ನ ಅಂಧೇರಿಯಲ್ಲಿ ಈ ಕೆಫೆಯನ್ನು ಕಳೆದ ವರ್ಷ ಶುರು ಮಾಡಲಾಗಿದೆ. ಅದ್ರ ಹೆಸರು ಬಾಂಬೆ ನಜರಿಯಾ (Bombay Nazriya). ನಿಮ್ಮ ದೃಷ್ಟಿಕೋನವನ್ನು ಬದಲಿಸಿ, ದೃಷ್ಟಿ ತಾನಾಗಿಯೇ ಬದಲಾಗುತ್ತದೆ ಎನ್ನುವ ಸ್ಲೋಗನ್ ಮೂಲಕ ಈ ಕೆಫೆ ಕಾರ್ಯಾರಂಭ ಮಾಡಿದೆ. 

Latest Videos

undefined

Travel Tips: ವಿದೇಶಿ ಪ್ರಯಾಣದ ವೇಳೆ ಎಷ್ಟು ಕ್ಯಾಶ್ ಕೈಯಲ್ಲಿರ್ಬೇಕು?

ಕೆಫೆ ಶುರು ಮಾಡಿದ್ದು ಯಾರು? : ಈ ಕೆಫೆಯನ್ನು ಡಿಯಾಗೋ ಮಿರಾಂಡಾ ಶುರು ಮಾಡಿದ್ರು. ಈ ಕೆಫೆ ಶುರು ಮಾಡಲು ಹಾಗೂ ಅದನ್ನು ನಡೆಸಲು ಟ್ರಾನ್ಸ್ಜೆಂಡರ್ ಕಾರಣ. ಈಗ ಈ ಕೆಫೆಯಲ್ಲಿ ಅವರೇ ಕೆಲಸ ಮಾಡ್ತಿದ್ದಾರೆ. 
ಡಿಯಾಗೋ ತಂದೆ ಈ ಕೆಫೆ ತೆರೆಯುವ ಕನಸು ಕಂಡಿದ್ದರಂತೆ. ಅವರ ತಂದೆ ತೃತೀಯಲಿಂಗಿ ಸಮುದಾಯಕ್ಕಾಗಿ ಏನಾದರೂ ಕೆಲಸ ಮಾಡಲು  ಬಯಸಿದ್ದರಂತೆ. ಡಿಯಾಗೋ ಈ ಕನಸನ್ನು ನನಸು ಮಾಡಿದ್ದಾರೆ.  ಡಿಯಾಗೋ ತನ್ನ ಪಾಲುದಾರರೊಂದಿಗೆ ಈ ಕೆಫೆ ಆರಂಭಿಸಿದ್ದಾರೆ.   ಕೆಫೆ ತುಂಬಾ ಆಕರ್ಷಣೀಯವಾಗಿದೆ. ಒಮ್ಮೆ ಬಂದವರು ಮತ್ತೆ ಮತ್ತೆ ಬರಲು ಆಸಕ್ತಿ ತೋರುತ್ತಾರೆ . 

ಬಾಂಬೆ ನಜಾರಿಯಾ ಎಂದು ಹೆಸರಿಡಲು ಕಾರಣವೇನು? : ಈ ಕೆಫೆಗೆ ಬಾಂಬೆ ನಜಾರಿಯಾ ಎಂದು ನಾಮಕರಣ ಮಾಡಲಾಗಿದೆ. ಅದಕ್ಕೆ ಕಾರಣವೇನು ಎಂಬುದನ್ನು ಡಿಯಾಗೋ ಹೇಳಿದ್ದಾರೆ. ಬಾಂಬೆ ಎಂದು ಹೆಸರಿಡಲು ಕಾರಣ, ಹಳೆ ಬಾಂಬೆಯನ್ನು ನೆನಪಿಸುವುದಾಗಿದೆ. ಹಾಗೆಯೇ ಜನರು ತಮ್ಮ ಮನೋಭಾವ ಬದಲಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಬಾಂಬೆ ನಜಾರಿಯಾ ಎಂದು ನಾಮಕರಣ ಮಾಡಲಾಗಿದೆ.

ಈ ದೇವಾಲಯದಲ್ಲಿ ಬೆಳ್ಳಿಯ ನಾಣ್ಯ ಮಂತ್ರಿಸಿ ತಂದರೆ ನೀವು ಶ್ರೀಮಂತರಾದಿರೆಂದೇ ಲೆಕ್ಕ!

ನಿಮ್ಮ ಮೂಡ್ (Mood) ಫ್ರೆಶ್ ಮಾಡುತ್ತೆ ಈ ಕೆಫೆ : ಮೂಡ್ ಹಾಳಾಗಿದ್ದರೆ ನೀವು ಫ್ರೆಶ್ ಆಗಲು ಬಾಂಬೆ ನಜಾರಿಯಾ ಕೆಫೆ ಆಯ್ಕೆ ಮಾಡಿಕೊಳ್ಳಬಹುದು. ಅಪರೂಪಕ್ಕೆ ಮುಂಬೈಗೆ ಹೋಗ್ತಿದ್ದೇನೆ ಎನ್ನುವವರು ಕೂಡ ಒಮ್ಮೆ ಅಲ್ಲಿಗೆ ಭೇಟಿ ನೀಡಿ. ಕೆಫೆಯ ಒಳಭಾಗವು ತುಂಬಾ ಸುಂದರ ಮತ್ತು ರೋಮಾಂಚಕವಾಗಿದೆ. ತಮಾಷೆಯ ಹಾಗೂ ಅರ್ಥಪೂರ್ಣ ಫೋಟೋಗಳನ್ನು ಕೆಫೆಯಲ್ಲಿ ನೋಡ್ಬಹುದು. ಕೆಲ ಸಿನಿಮಾ ಪೋಸ್ಟರ್ ಗಳನ್ನು ಕೂಡ ಹಾಕಲಾಗಿದೆ. ಒಂದು ಮನೆಯನ್ನು ಕೆಫೆಯಾಗಿ ಪರಿವರ್ತನೆ ಮಾಡಲಾಗಿದ್ದು, ರೋಮಾಂಚನಕಾರಿ ಥೀಮನ್ನು ಇದು ಒಳಗೊಂಡಿದೆ.

ಬಾಂಬೆ ನಜರಿಯಾ ಕೆಫೆಯ ಮೆನು : ಇರಾನಿ ಬನ್ ಮಸ್ಕ್ ನಿಂದ ಬಾಂಬೆ ಪಾವ್ ಬಾಜಿ, ಕೀಮಾ ಪಾವ್ ವರೆಗೆ ಎಲ್ಲ ರೀತಿಯ ಆಹಾರ ಸಿಗುತ್ತದೆ. ಸಸ್ಯಹಾರಿ ಮತ್ತು ಮಾಂಸಹಾರಿ ಇಬ್ಬರಿಗೂ ಇಷ್ಟವಾಗುವ ಪ್ರದೇಶ ಇದು. ಪಿಂಕ್ ಟೀ ಜೊತೆ ಫ್ರೆಂಚ್ ಕ್ರೋಸೆಂಟ್ (Croissant) ಕೂಡ ಇಲ್ಲಿ ಲಭ್ಯವಿದೆ. ಕಾಶ್ಮೀರಿ ಗುಲಾಬಿ ಚಹಾ ಮತ್ತು ಬಾಂಬೆ ಚೀಸ್ ಸ್ಯಾಂಡ್‌ವಿಚ್ ಟೇಸ್ಟ್ ನೋಡಲು ನೀವು ಮರೆಯಬೇಡಿ. ಕಳೆದ ವರ್ಷ ಶುರುವಾದ ಈ ಕೆಫೆ ಗ್ರಾಹಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಕೇವಲ ಟ್ರಾನ್ಸ್ಜೆಂಡರ್ ಮತ್ತು ನಾನ್ ಬೈನರಿ ಜನರಿಗೆ ಮಾತ್ರ ಉದ್ಯೋಗ ನೀಡಲಾಗುತ್ತದೆ. ಉದ್ಯೋಗ ನೀಡುವ ಮೂಲಕ ಅವರ ಜೀವನಕ್ಕೆ ದಾರಿ ಮಾಡುವುದು ಈ ಕೆಫೆಯ ಉದ್ದೇಶವಾಗಿದೆ.

click me!