ನಾಗರಹೊಳೆಯಲ್ಲಿ ಒಂದು ಮುಂಜಾನೆ;ದಿಟ್ಟ ಅಮ್ಮ ಹುಲಿ,ಸಂಕೋಚದ ಮಗಳು ಹುಲಿ!

By Suvarna NewsFirst Published Dec 16, 2019, 9:19 AM IST
Highlights

ಕಬಿನಿ ಹಿನ್ನೀರಿಗೆ ಒತ್ತಿಕೊಂಡಂತಿರುವ ಕಾಡನ್ನು ಹಿಂದೆ ಕಾಕನಕೋಟೆ ಅಂತ ಕರೆಯುತ್ತಿದ್ದರು. ಆಮೇಲೆ ಅದು ನಾಗರಹೊಳೆ ಎಂದಾಯಿತು. ಅಲ್ಲಿ ಹರಿದುಹೋಗುವ ಅಡ್ಡಾದಿಡ್ಡಿ ನದಿಯಿಂದಾಗಿ ಆ ಹೆಸರು ಬಂತು ಅಂತಾರೆ ಮಂದಿ.

ಅಲ್ಲಿಗೆ ಹೋದವನಿಗೆ ಒಂದೆರಡು ಹುಲಿಗಳನ್ನಾದರೂ ನೋಡುವ ಆಸೆಯಿತ್ತು. ಸುಮಾರು ಸಲ ಕಾಡಿಗೆ ಹೋದರೂ ಹುಲಿಯನ್ನು ಸರಿಯಾಗಿ ನೋಡಿರಲಿಲ್ಲ. ಈಗ ಹೋಯ್ತು.. ಅಗೋ ಬಾಲ ಕಾಣುತ್ತಿದೆ. ನಿನ್ನೆ ಇಲ್ಲೇ ಸಿಕ್ಕಿತ್ತು ಅಂತ ಹೇಳುವವರನ್ನು ನೋಡಿದ್ದೆನೇ ಹೊರತು, ನಾನಂತೂ ಹುಲಿ ಕಂಡಿರಲಿಲ್ಲ. ಈ ಸಲವೂ ಅದೇ ಅಪನಂಬಿಕೆಯಲ್ಲೇ ಹೊರಟೆ. ಮೊದಲ ದಿನ ಕಾಡಿಗೆ ಕಾಲಿಟ್ಟದ್ದೇ ನಮ್ಮ ಜೀಪಿನ ಮುಂದೆಯೇ ಒಂದು ಗಂಡು ಹುಲಿ ನಿಧಾನಕ್ಕೆ ನಡೆದು ಹೋಯಿತು. ಇನ್ನೊಂದಷ್ಟು ಹೊತ್ತು ನೋಡಬೇಕಿತ್ತು ಅಂದುಕೊಳ್ಳುತ್ತಿದ್ದಂತೆಯೇ ಅದು ಲಂಟಾನ ಪೊದೆಗಳಲ್ಲಿ ಮರೆಯಾಯಿತು. ಬೇಸರದಿಂದ ಎಡಕ್ಕೆ ತಿರುಗಿ ನೋಡ ದರೆ ಅಲ್ಲೊಂದು ಹುಲಿ ಕುಕ್ಕರಗಾಲಲ್ಲಿ ಕೂತು ನಮ್ಮನ್ನೇ ದಿಟ್ಟಿಸುತ್ತಿತ್ತು. ನಾವು ಮನೆಯಲ್ಲಿಟ್ಟ ಹುಲಿಯ ಗೊಂಬೆಯಂತೆ ನಿಶ್ಚಲವಾಗಿ ಕೂತಿತ್ತು. ಕಣ್ಣು ಕೂಡ ಒಂದಿಂಚೂ ಅಲ್ಲಾಡುತ್ತಿರಲಿಲ್ಲ. ನಾವೆಲ್ಲ ಒಂದು ಕ್ಷಣ ಬೆಚ್ಚಿಬಿದ್ದೆವು. ಡ್ರೈವರ್ ಪ್ರೇಮ್ ಜೀಪಿನ ಇಂಜಿನ್ ಆಫ್ ಮಾಡಿ, ಮಾತಾಡಬೇಡಿ ಅಂತ ಸನ್ನೆ ಮಾಡಿದ.

ಅರಣ್ಯದಲ್ಲಿ ನಟಿ ಹುಟ್ಟುಹಬ್ಬ; ಗಾರ್ಡ್‌ಗಳಿಗೆ ಸ್ಪೆಶಲ್ ಉಡುಗೊರೆ!

ನಾವೋ ಹುಲಿಯೋ ಎಂದು ನೋಡುತ್ತಾ ಕೂತೆವು. ಸುಮಾರು ಹತ್ತು ನಿಮಿಷ ಹಾಗೇ ಕೂತಿದ್ದ ಹುಲಿ ನಂತರ ಎದ್ದು ಹೋಯಿತು.

ಆ ರಾತ್ರಿ ಹುಲಿ ಕಂಡ ಸಂತೋಷಕ್ಕೆ ಭರ್ಜರಿ ಪಾರ್ಟಿ ಮಾಡಿದೆವು. ಮತ್ತೊಂದು ತಂಡಕ್ಕೂ ಒಂದು ಹುಲಿ,ಮತ್ತೊಂದು ಚಿರತೆ ಕಂಡಿತ್ತು. ರಾತ್ರಿ ಮಲಗಿದಾಗ ಎರಡೂವರೆ. ಬೆಳಗ್ಗೆ ಯಾರೆಲ್ಲ ಸಫಾರಿಗೆ ಬರುತ್ತೀರಿ ಅಂತ ಕೇಳಿದ್ದಕ್ಕೆ ನಾವು ನಾವು ಅಂತ ಕೈಯೆತ್ತಿದವರೆಲ್ಲ ಬೆಳಗ್ಗೆ ಐದು ಗಂಟೆಗೆ ಬಾಗಿಲು ತಟ್ಟಿದರೆ ಮಿಸುಕಾಡಲಿಲ್ಲ. ನಾವೊಂದೈದು ಮಂದಿ ಜೀಪು ಹತ್ತಿದೆವು. ಜೀಪು ಸ್ವಲ್ಪ ದೂರ ಹೋಗಿ ಮಾನಂದವಾಡಿ ರಸ್ತೆಯಲ್ಲಿ ಸಾಗುತ್ತಿದ್ದಂತೆ ನಮ್ಮ ಜೀಪಿನ ಡ್ರೈವರ್ ರಘು ಇದ್ದಕ್ಕಿದ್ದಂತೆ ಜೀಪು ನಿಲ್ಲಿಸಿದ. ಪಕ್ಕದಲ್ಲಿ ಸ್ಟಿಲ್ ಆಗಿ ನಿಂತ ಜಿಂಕೆಗಳನ್ನು ತೋರಿಸುತ್ತಾ, ಇಲ್ಲೆಲ್ಲೋ ಹುಲಿಯಿದೆ ಅಂದ. ಅದಕ್ಕೆ ಸರಿಯಾಗಿ ಕೊಂಚ ಹಿಂದೆಲ್ಲೋ ಒಂದು ಲಂಗೂರ್ ವಿಚಿತ್ರವಾಗಿ ಕೂಗಿತು. ಇದ್ದಕ್ಕಿದ್ದಂತೆ ಇಡೀ ಪರಿಸರ ಸ್ತಬ್ಧವಾಯಿತು. ಒಂದು ಸರ್ಪೆಂಟ್ ಈಗಲ್ ಒಣಗಿದ ಮರದ ಗೆಲ್ಲಿನಿಂದ ವಿಕಾರವಾಗಿ ಕೂಗುತ್ತಾ ಹಾರಿಹೋಯಿತು. ನಮ್ಮ ಜೀಪು ಸ್ತಬ್ದವಾಯಿತು. ಒಂದೈದು ನಿಮಿಷ ನಾವೂ ಆ ಮೌನದಲ್ಲಿ ಒಂದಾಗಿ ಬಿಟ್ಟಿದ್ದೆವು. ಅಷ್ಟು ಹೊತ್ತಿಗೆ ರಘು ಅಲ್ಲಿ... ಅಲ್ಲಿ ಹುಲಿ ಸಾರ್... ಅಂತ ಸಣ್ಣನೆಯ ದನಿಯಲ್ಲಿ ಕಿರುಚಿಕೊಂಡ. ನೋಡಿದರೆ ಹುಲಿಯೊಂದು ರಸ್ತೆ ದಾಟುತ್ತಿತ್ತು. ರಘು ಜೀಪು ಸ್ಟಾರ್ಟ್ ಮಾಡಿ ಅತ್ತ ಸಾಗಿದ. ಅರೆಕ್ಷಣದಲ್ಲಿ ಮತ್ತೊಂದು ಹುಲಿಯೂ ಅದರ ಹಿಂದೆಯೇ ರಸ್ತೆಗೆ ಬಂತು. ಸ್ವಲ್ಪ ಹೊತ್ತಿಗೆ ಮತ್ತೊಂದು ಹುಲಿಯೂ ಸೇರಿಕೊಂಡಿತು. ನಾವಿಬ್ಬರೂ ನಮಗಿಬ್ಬರು ಸಂಸಾರದಲ್ಲಿ ಅಪ್ಪನನ್ನು ಹುಡುಕುತ್ತಾ ಹೊರಟ ಅಮ್ಮ ಮಕ್ಕಳಂತೆ ಮೂರು ಹುಲಿಗಳು ರಸ್ತೆ ಗುಂಟ ನಡೆಯತೊಡಗಿದವು. ನಾವು ಜೀಪಲ್ಲೇ ಅದನ್ನು ಹಿಂಬಾಲಿಸಿದೆವು.

ಸಿಂಹಳೀಯರ ನಾಡಲ್ಲಿ ಭಾರತೀಯ ಪತ್ರಕರ್ತರು!

ಸ್ವಲ್ಪ ಹೊತ್ತಿಗೆಲ್ಲ ಅವು ಪಕ್ಕದ ಪೊದೆಯೊಳಗೆ ಹೊಕ್ಕು ಮರೆಯಾದವು. ರಘು ನಮ್ಮನ್ನು ನೋಡಿ, ಅವು ಟೆಂಪಲ್ ಲೇಕ್ ಗೇ ಹೊರಟಿವೆ. ನೀರು ಕುಡಿಯಲಿಕ್ಕೇ ಹೋಗುತ್ತಿವೆ. ಅಲ್ಲಿಗೆ ಹೋಗೋಣ ಅಂತ ಜೀಪು ಎಡಕ್ಕೆ ತಿರುಗಿಸಿದ. ಅಂಕುಡೊಂಕು ರಸ್ತೆಯಲ್ಲಿ ಆರೆಂಟು ಕಿಲೋಮೀಟರ್ ಸಾಗಿ ಗೋಪಾಲದೇವರ ಗುಡಿ ಕೆರಯತ್ತ ಬಂದರೆ ಹುಲಿಗಳೂ ಆಗಷ್ಟೇ ಮರೆಯಿಂದ ಬಂದು ಕೆರೆಯ ದಂಡೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದವು. ನಮ್ಮ ಜೀಪು ನೋಡುತ್ತಿದ್ದಂತೆ ಮೂರು ಹುಲಿಗಳ ಪೈಕಿ ಒಂದು ಪೊದೆಯ ಮರೆಗೆ ಸರಿಯಿತು.

ಮಗಳು ಬರಲಿ ಅಂತ ಅಮ್ಮ ಹುಲಿ ಅಲ್ಲೇ ಅರ್ಧ ಗಂಟೆ ಕಾದು ಕೂತಿತು. ಮಗಳು ಬಾರದೇ ಇದ್ದದ್ದು ನೋಡಿ ಅಲ್ಲೇ ಅಡ್ಡಾಡಿತು. ನಿದ್ದೆ ಹೋದಂತೆ ನಟಿಸಿತು. ನಂತರ ಮಗನತ್ತ ನೋಡಿ ಹೋಗೋಣ ನಡಿ ಅಂತ ಹೊರಟಂತೆ ನಾಟಕ ಮಾಡಿತು. ಮಗಳು ಪೊದೆಗಳ ಮರೆಯಿಂದಲೇ ಅಮ್ಮನನ್ನು ಹಿಂಬಾಲಿಸಿಕೊಂಡು ಬಂದಳೇ ಹೊರತು ನಮ್ಮ ಕಣ್ಣಿಗೆ ಬೀಳಲಿಲ್ಲ. ಮಗಳು ನೀರು ಕುಡಿಯಲಿಲ್ಲ ಅಂತ ಸಂಕಟಪಡುತ್ತಾ ಅಮ್ಮ ಮತ್ತೆ ನೀರು ಕುಡಿದಳು. ಸಣ್ಣಗೆ ದನಿ ಮಾಡಿ ಕರೆದಳು. ಮಗಳು ಬರಲಿಲ್ಲ. ಅವಳನ್ನು ಕರೆದು ಪ್ರಯೋಜನ ಇಲ್ಲವೆಂಬಂತೆ ಗಂಭೀರವಾಗಿ ನಡೆಯುತ್ತಾ ರಸ್ತೆ ದಾಟಿದಳು. ಮಗ ಅಂಜಿಕೊಂಡು ರಸ್ತೆಯ ಮತ್ತೊಂದು ಬದಿಯಲ್ಲೇ ನಿಂತಿದ್ದ. ಒಂದೆರಡು ಸಲ ರಸ್ತೆ ದಾಟಲು ಯತ್ನಿಸಿದ. ಧೈರ್ಯ ಬರಲಿಲ್ಲ. ಒಂಚೂರು ಮುಂದೆ ಬಂದು ಹಿಂದಕ್ಕೆ ಓಡುತ್ತಿದ್ದ. ಕೊನೆಗೆ ಸಣ್ಣ ದನಿಯಲ್ಲಿ ಬೆಕ್ಕಿನಂತೆ ಕೂಗಿ ಅಮ್ಮನನ್ನು ಕರೆದ. ಅಮ್ಮ ರಸ್ತೆಯಾಚಿಗೆ ಕಾಯುತ್ತಿದ್ದಳು. ನಾಲ್ಕನೆಯ ಪ್ರಯತ್ನಕ್ಕೆ ಮಗ ಮೊದಲು ನಿಧಾನಕ್ಕೆ, ನಂತರ ವೇಗವಾಗಿ ಓಡಿ ಹೋಗಿ ರಸ್ತೆ ದಾಟಿ ಅಮ್ಮನನ್ನು ಸೇರಿಕೊಂಡ. ಮಗಳು ಮಾತ್ರ ಪೊದೆಯಲ್ಲೇ ಅವಿತು ಕೂತಿದ್ದಳು. ನಾವು ಹೋಗುವ ತನಕ ಆಚೆ ಬರಲಾರೆ ಎಂಬ ನಿರ್ಧಾರ
ಮಾಡಿದಂತಿತ್ತು. ಆ ನಾಚಿಕೆಯ ಮಗಳಿಗೆ ಸಂಕೋಚ ಮಾಡಬಾರದೆಂದು ನಾವು ಹೊರಟು ಬಂದೆವು.

50 ವರ್ಷಗಳ ಹಿಂದೆ ಮರದಲ್ಲಿ ಸಿಲುಕಿದ ನಾಯಿ ಕೊಳೆತಿಲ್ಲ ಹೇಗೆ?

click me!