ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ
ಸಿಲಿಕಾನ್ ಸಿಟಿಯ ಪ್ರವಾಸಿ ಪ್ರಿಯರಿಗೆ ಭಾರಿ ನಿರಾಸೆ
ನಂದಿ ಬೆಟ್ಟ, ತುಮಕೂರು ಜಿಲ್ಲೆಯ, ಮೈಸೂರು ಜಿಲ್ಲೆಗಳಲ್ಲಿ ಪ್ರವಾಸಿಗರಿಗಿಲ್ಲ ಪ್ರವೇಶ
ಬೆಂಗಳೂರು (ಡಿ.29): ಹೊಸ ವರ್ಷದ ಸಂಭ್ರಮಾಚರಣೆ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ಸುತ್ತಲಿನ ಬಹುತೇಕ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಇನ್ನು ಡಿಸೆಂಬರ್ 31 ಮತ್ತು ಜನವರಿ 1ರಂದು ಈ ಸ್ಥಳಗಳಿಗೆ ಪ್ರವಾಸ ಹೋಗುವುದಕ್ಕೆ ಪ್ಲಾನ್ ಮಾಡಿದ್ದರೆ, ಈ ಸ್ಟೋರಿಯನ್ನೊಮ್ಮೆ ಓದಿಕೊಂಡು ಯಾವ ಸ್ಥಳಗಳು ತೆರೆದಿರುತ್ತವೆ ಎನ್ನುವ ಮಾಹಿತಿ ಪಡೆದುಕೊಳ್ಳುವುದು ಅನುಕೂಲ ಆಗಲಿದೆ.
ಈಗಾಗಲೇ ಹೊಸ ವರ್ಷದ ಸಂಭ್ರಮಾಚರಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಯುವಜನತೆ ಹಾಗೂ ಪ್ರವಾಸಿ ಪ್ರಿಯರು ವಿವಿಧ ಸ್ಥಳಗಳಿಗೆ ಹೋಗಲು ಯೋಜನೆ ರೂಪಿಸಿಕೊಂಡಿರುತ್ತಾರೆ. ಆದರೆ, ಸರ್ಕಾರ ಕೆಲವು ಸ್ಥಳಗಳಲ್ಲಿ ಭಾರಿ ಜನದಟ್ಟಣೆ ಉಂಟಾಗಲಿರುವುದನ್ನು ತಡೆಗಟ್ಟುವ ಉದ್ದೇಶದಿಂದಲೇ ಪ್ರವಾಸಿ ತಾಣಗಳನ್ನು ಎರಡು ದಿನಗಳ ಕಾಲ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಬಂದ್ ಮಾಡಿದೆ. ಈ ಕುರಿತಂತೆ ಆಯಾ ಜಿಲ್ಲಾಡಳಿತದ ಮುಖ್ಯಸ್ಥರಾದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಯಾವ್ಯಾವ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಕೊರೊನಾ ಆತಂಕ, ಹೊಸ ವರ್ಷ ಸಂಭ್ರಮಾಚರಣೆ ಕೌಂಟ್ ಡೌನ್ ನಡುವೆ ಜನರಲ್ಲಿ ಲಾಕ್‌ಡೌನ್ ಭೀತಿ
ನಂದಿನೆಟ್ಟಕ್ಕೆ ಪ್ರವಾಸಿಗರಿಗೆ ಅವಕಾಶವಿಲ್ಲ: ಬೆಂಗಳೂರಿನಿಂದ ಅನತಿ ದೂರದಲ್ಲಿರುವ ನಿಸರ್ಗ ಪ್ರಿಯರ ಮತ್ತು ಚಾರಣಿಗರ ಪ್ರೀತಿಯ ಪ್ರವಾಸಿ ತಾಣ ನಂದಿ ಬೆಟ್ಟವನ್ನು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ. ಡಿಸೆಂಬರ್ 31 ರ ಸಂಜೆಯಿಂದ ಜನವರಿ 1 ಬೆಳಿಗ್ಗೆವರೆಗೂ ಪ್ರವೇಶ ನಿಷೇಧಿಸಲಾಗಿದೆ. ನಂದಿಬೆಟ್ಟದ ಮೇಲೆ ಕೊಠಡಿಗಳಲ್ಲಿ ತಂಗಲು ಅವಕಾಶವಿಲ್ಲ. ಡಿಸೆಂಬರ್ 31 ರಂದು ರೂಂ ಬುಕಿಂಗ್ ಗೆ ಅವಕಾಶವಿಲ್ಲ. ಸಂಜೆ ಅಥವಾ ನಾಳೆ ಅಧಿಕೃತ ಅದೇಶ ಹೊರಬೀಳಲಿದೆ. ಈ ಬಗ್ಗೆ ಪ್ರವೇಶ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು ಬಂದ್: ಇನ್ನು ಬೆಂಗಳೂರಿನ ನೆರೆಹೊರೆ ಜಿಲ್ಲೆಯಾಗಿರುವ ತುಮಕೂರು ಜಿಲ್ಲೆಯಲ್ಲಿ ಹಲವು ಚಾರಣ, ನೈಸರ್ಗಿಕ ಮತ್ತು ಧಾರ್ಮಿಕ ಪ್ರವಾಸಿ ತಾಣಗಳಿವೆ. ಇಂತಹ ಪ್ರದೇಶಗಳಿಗೆ ಎರಡು ದಿನ ಜಿಲ್ಲಾಡಳಿತ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ತುಮಕೂರು ಜಿಲ್ಲೆಯ ದೇವರಾಯನದುರ್ಗ, ನಾಮದ ಚಿಲುಮೆ, ಬಸದಿ ಬೆಟ್ಟದಲ್ಲಿ ಪ್ರವೇಶ ನಿರ್ಬಂಧ ಮಾಡಲಾಗಿದೆ. ಡಿ.31 ಬೆಳಗ್ಗೆ 8 ಗಂಟೆಯಿಂದ ಜನವರಿ 2 ತಾರೀಕು ಬೆಳಗ್ಗೆ 8 ಗಂಟೆವರೆಗೂ ನಿರ್ಬಂಧ ಮುಂದುವರಿಯಲಿದೆ.
ಸ್ಥಳೀಯ ನಿವಾಸಿಗಳಿಗೆ ತೊಂದರೆಯಿಲ್ಲ: ಹೊಸ ವರ್ಷಾಚರಣೆ ಹಿನ್ನೆಲೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ದೇವರಾಯನದುರ್ಗದಲ್ಲಿ ತಿರುವಿನ ರಸ್ತೆ ಇರುವುದರಿಂದ ಅಪಘಾತ ಸಂಭವಿಸಲಿದೆ. ಜನರು ಗುಂಪು ಗುಂಪಾಗಿ ಸೇರುವುದರಿಂದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ. ಪ್ರವಾಸಿ ತಾಣಗಳ ಜಾಲಿ ರೇಡ್ ಗೆ ತುಮಕೂರು ಜಿಲ್ಲಾಢಳಿತ ತಂದಿದೆ. ಹೊಸ ವರ್ಷಾಚರಣೆ ನೆಪದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುವ ಸಾಧ್ಯತೆಯೂ ಹೆಚ್ಚಾಗಿರುತ್ತವೆ. ಈ ಹಿನ್ನೆಲೆಯಲ್ಲಿ ದೇವರಾಯನದುರ್ಗ ಹಾಗೂ ನಾಮದ ಚಿಲುಮೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಮಾಡಲಾಗಿದೆ. ಎಂದಿನಂತೆ ದಿನನಿತ್ಯ ಸಂಚರಿಸುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ತುಮಕೂರು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಪ್ರಯಾಣದಲ್ಲಿ ಆರೋಗ್ಯ ಚೆನ್ನಾಗಿರಬೇಕೆಂದರೆ ಹೀಗೆ ಮಾಡಿ
ಚಾಮುಂಡಿ ಬೆಟ್ಟಕ್ಕೆ ರಾತ್ರಿ ಪ್ರವೇಶ ನಿಷೇಧ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಡಿ. 31ರ ರಾತ್ರಿ 9 ಗಂಟೆ ನಂತರ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ ಮಾಡಲಾಗುತ್ತದೆ. ನಂತರ ಜನವರಿ 1ರ ಬೆಳಗ್ಗೆ 6 ಗಂಟೆ ನಂತರ ಸಾರ್ವಜನಿಕರು ಮತ್ತು ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೈಸೂರು ಸಿಟಿ ಪೊಲೀಸ್ ಕಮಿಷನರ್ ರಮೇಶ್ ಆದೇಶ ಹೊರಡಿಸಿದ್ದಾರೆ.
ವಿವಿಧೆಡೆ ಪ್ರವಾಸಿ ತಾಣಗಳ ಪ್ರವೇಶ ಮಾಹಿತಿ: