ಲಡಾಖ್ ಅಮೃತ ಯಾತ್ರೆ – 2022 ಭಾಗ-5: ಜನ್ಸ್ಕಾರ್ ರೈಡ್ - ಏಕಾಗ್ರತೆ, ಕೌಶಲ್ಯ, ಮನೋಬಲ, ಸಾಮರ್ಥ್ಯ ಪರೀಕ್ಷೆ!

By Suvarna News  |  First Published Aug 16, 2022, 11:51 AM IST

Road trip to Ladakh: ನಾನು ಇದುವರೆಗೆ ಬರೆದ ನಾಲ್ಕು ಕಂತುಗಳ ಕತೆ ಒಂದು ತೆರನಾದರೆ, ಈಗ ಬರೆಯಲಿರುವ ಅನುಭವ ಬೇರೆಯೇ ಮಜಲಿನದು. ಈವರೆಗೆ ನಡೆದದ್ದು ಸಾಮಾನ್ಯ ಬೈಕ್ ರೈಡ್. ಅದನ್ನು ಒಂದು ಲಾಂಗ್ ಡ್ರೈವ್ ಗೆ ಹೋಲಿಸಬಹುದೇನೋ. ಆದರೆ, ಇನ್ನು ಮುಂದಿನದು ನಿಜವಾದ ಸಾಹಸ ಯಾತ್ರೆ


ರವಿಶಂಕರ್‌ ಭಟ್‌

ಅದು ಕೇವಲ 139 ಕಿ.ಮೀ. ದೂರ. ಆ ಪ್ರಯಾಣಕ್ಕೆ ತಗುಲಿದ್ದು ಎರಡು ಭರ್ತಿ ದಿನ. ರಸ್ತೆ ಉಂಟು, ಆದರೆ ರಸ್ತೆಯಲ್ಲ. ಮಳೆಯಿಲ್ಲ, ಆದರೆ ಪ್ರವಾಹ ಉಂಟು. ನೋಡಲು ಸಣ್ಣ ಗುಡ್ಡ, ಆದರೆ ಏರಲು ವಾಹನಕ್ಕೇ ಏದುಸಿರು. ಇಳಿಯುವಾಗ ಮುಗ್ಗರಿಸುವ ಭೀತಿ. ಕಡಿದಾದ ತಿರುವುಗಳು, ಅಗಾಧ ಬೆಟ್ಟ-ಪರ್ವತ ನೋಡುತ್ತ ಸ್ವಲ್ಪ ಎಚ್ಚರ ತಪ್ಪಿದರೂ ಅಲ್ಲೇ ಮಣ್ಣಾಗುವ ಅಪಾಯ. ಎಲ್ಲಕ್ಕಿಂತ ಕಠಿಣ ಅಂದರೆ ಬೆಟ್ಟದ ಮೇಲಿನ ನೀರ್ಗಲ್ಲು ಕರಗಿ ರಸ್ತೆಯ ಮೇಲೆಯೇ ರಭಸವಾಗಿ ಹರಿಯುವ ಜಲದಾಟುಗಳನ್ನು (Water Crossings) ಹಾದು ಸಾಗುವ ಸವಾಲು. ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಮುಂದೆ ಓದಿ...

Tap to resize

Latest Videos

2 ಲಕ್ಷ ಕಿ,ಮೀ. ಬೈಕ್ ಓಡಿಸಿದವನ ಜತೆ ಅನನುಭವಿ ನಾನು!
ನಾನು ಇದುವರೆಗೆ ಬರೆದ ನಾಲ್ಕು ಕಂತುಗಳ ಕತೆ ಒಂದು ತೆರನಾದರೆ, ಈಗ ಬರೆಯಲಿರುವ ಅನುಭವ ಬೇರೆಯೇ ಮಜಲಿನದು. ಈವರೆಗೆ ನಡೆದದ್ದು ಸಾಮಾನ್ಯ ಬೈಕ್ ರೈಡ್. ಅದನ್ನು ಒಂದು ಲಾಂಗ್ ಡ್ರೈವ್ ಗೆ ಹೋಲಿಸಬಹುದೇನೋ. ಆದರೆ, ಇನ್ನು ಮುಂದಿನದು ನಿಜವಾದ ಸಾಹಸ ಯಾತ್ರೆ. ಅಂದ ಹಾಗೆ, ನಾನು ಮೊದಲೇ ಹೇಳಿಬಿಡುತ್ತೇನೆ. ಈ ಎಲ್ಲ ಅನುಭವ ಕಥನಗಳು ಹೊಸದಾಗಿ ಅಥವಾ ಅಪರೂಪಕ್ಕೆ ಬೈಕ್ ಸವಾರಿ ಮಾಡುವವರಿಗಾಗಿ. ಅಥವಾ ಹಿಮಾಲಯನ್ ಬೈಕ್ ಸಂಚಾರ ಎಂಬ ಬಗ್ಗೆ ಏನೂ ಗೊತ್ತಿರದ ಕುತೂಹಲಿಗಳಿಗಾಗಿ. ವೃತ್ತಿಪರ ಬೈಕ್ ಸವಾರರು ಅಥವಾ ಅನುಭವಿ ಬೈಕ್ ಸವಾರರು ಇದನ್ನೋದಿದರೆ ಖಂಡಿತ ಬೋರ್ ಆದೀತು. ಇರಲಿ, ವಿಷಯಕ್ಕೆ ಬರುತ್ತೇನೆ. ನಾವು ಆರು ಜನ 1 ಮಹೀಂದ್ರಾ ಥಾರ್ ಹಾಗೂ 2 ರಾಯಲ್ ಎನ್ ಫೀಲ್ಡ್ ಬೈಕಲ್ಲಿ ಚಂಡೀಗಢದಿಂದ ಲಡಾಖ್ ಯಾತ್ರೆ ಹೊರಟ ವಿವರ ಗೊತ್ತಲ್ಲ. ಅದರಲ್ಲಿ ಬೈಕ್ ಓಡಿಸುತ್ತಿದ್ದುದು ನಾನು ಮತ್ತು ದಿಲೀಪ್. ಅವನೋ, ಅರುಣಾಚಲಪ್ರದೇಶದಿಂದ ಹಿಡಿದು ರಷ್ಯಾದ ಸೈಬೀರಿಯಾದಂಥ ಸ್ಥಳಗಳೂ ಸೇರಿದಂತೆ ಅಜಮಾಸು 2 ಲಕ್ಷ ಕಿ.ಮೀ. ಸಾಹಸ ಬೈಕ್ ಯಾತ್ರೆ ಮಾಡಿದ ಅನುಭವಿ. ನಾನು ಬೈಕಿನಲ್ಲಿ ಲಾಂಗ್ ಡ್ರೈವ್ ಹೋಗಿಯೇ 20 ವರ್ಷದ ಮೇಲಾಯಿತು. ಇನ್ನು ಆಫ್ ರೋಡಿಂಗ್ ಅಂತ ಮಾಡಿದ್ದರೆ ಕೊಡಗಿನಲ್ಲಿದ್ದಾಗ ಟ್ರೆಷರ್ ಹಂಟ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾಗ ಮಾತ್ರ. ಹಾಗಾಗಿ, ರೋಡ್ ಟ್ರಿಪ್ ಎಂಬುದು ನನಗೆ ಬಲು ಹೊಸ ಸಂಗತಿ. ಇಂಥ ಅನನುಭವಿಯಾಗಿ ನಾನು ಈ ಸವಾಲಿನ ಬೈಕ್ ಪ್ರಯಾಣಕ್ಕೆ ಹೊರಟದ್ದು.

ಸುಲಭದ ಹೆದ್ದಾರಿಯನ್ನು ಬಿಟ್ಟು ಕಷ್ಟದ ಹಾದಿಯ ಆಯ್ಕೆ:
ಆಗಸ್ಟ್ 11ರಂದು ಚಂಡೀಗಢದಿಂದ ಹೊರಟು ಆಗಸ್ಟ್ 12ರ ರಾತ್ರಿಗೆ ಹಿಮಾಚಲ ಪ್ರದೇಶದ ಜಿಸ್ಪಾಗೆ ತಲುಪಿದ್ದೆವಲ್ಲ? ನಮ್ಮ ಮುಂದಿನ ಗುರಿ ಲಡಾಖ್ ಆಗಿತ್ತು. ಲೇಹ್ ಅದರ ಕೇಂದ್ರ ಸ್ಥಾನ. ಮನಾಲಿ-ಲೇಹ್ ಹೆದ್ದಾರಿ ಹಾದು ಹೋಗುವುದು ಇದೇ ಜಿಸ್ಪಾ ಮುಖಾಂತರವೇ. ಆದರೆ, ಆ ಹೆದ್ದಾರಿಯಲ್ಲೇ ಸಾಗಿ ಲೇಹ್ ತಲುಪುವುದು ನಮ್ಮ ಯೋಜನೆ ಆಗಿರಲಿಲ್ಲ. ನಮಗೆ ಸವಾಲಿನ ಹಾದಿ ಬೇಕಿತ್ತು. ಹೆದ್ದಾರಿ ಬಿಟ್ಟು ಹಿಮಾಲಯನ್ ಕಚ್ಚಾರಸ್ತೆಯಲ್ಲಿ ಸಂಚರಿಸಬೇಕಿತ್ತು. ಅದಕ್ಕೆಂದೇ ಲಡಾಖ್ ಪ್ರಾಂತ್ಯವನ್ನು ನೈಋತ್ಯ ದಿಕ್ಕಿನಿಂದ ಪ್ರವೇಶಿಸಿ ಪುರ್ನೆ ಎಂಬ ಊರಿನಲ್ಲಿ ತಂಗಿ, ಅಲ್ಲಿಂದ ಪದುಮ್ ಎಂಬಲ್ಲಿಗೆ ತೆರಳಿ, ಅದಕ್ಕಿಂತ ಮುಂದೆ ಉತ್ತರ ದಿಕ್ಕಿನ ಲಿಂಗ್ ಶೆಡ್ ಮೂಲಕ ಲಡಾಖ್ ಪ್ರಾಂತ್ಯಕ್ಕೆ ಪ್ರವೇಶಿಸಿ ಲಮಾಯೂರು ಎಂಬ ಊರಿನ ಮೂಲಕ ಲೇಹ್ ತಲುಪುವುದು ನಮ್ಮ ಯೋಜನೆ ಆಗಿತ್ತು. ಇದು ಸುಮಾರು 300 ಕಿ.ಮೀ. ಹಾದಿ. ಒಂದು ದಿನದಲ್ಲಿ ಆಗಿ ಹೋಗುವಂಥದ್ದಲ್ಲ. ಕನಿಷ್ಠ 2 ಅಥವಾ 3 ದಿನ ಬೇಕೇಬೇಕು. ಯಾಕೆಂದರೆ ಆ ಪ್ರದೇಶವೇ ಹಾಗೆ. ರಸ್ತೆಯಷ್ಟೇ ಅಲ್ಲ, ವಾತಾವರಣ ಇತ್ಯಾದಿ ಎಲ್ಲವೂ ಸವಾಲು.

ಲೇಹ್ ಹೈವೇ ಪ್ರಯಾಣಕ್ಕೆ ದಾರ್ಚಾದಲ್ಲಿ ಗುಡ್‌ಬೈ:
ಆ.13ರ ಬೆಳಗ್ಗೆ ಜಿಸ್ಪಾದಿಂದ ಹೊರಟವರು ಅಲ್ಲಿಂದ ಸುಮಾರು 7 ಕಿ.ಮೀ. ಸಾಗಿದಾಗ ದೊರಕುವ ದಾರ್ಚಾ ಎಂಬಲ್ಲಿ ತಿಂಡಿ ತಿಂದೆವು. ಸ್ವಲ್ಪ ಮುಂದೆ ಹೋದಾಗ ಕವಲು ದಾರಿ ಸಿಗುತ್ತದೆ. ಬಲಕ್ಕೆ ಸಾಗಿದರೆ ಲೇಹ್ ಕಡೆಗೆ. ನೇರ ಸಾಗಿದರೆ ಶಿಂಕು ಲಾ, ಪುರ್ನೆ ಕಡೆಗೆ. ನಾವು ಯೋಜನೆಯಂತೆ ಪುರ್ನೆ ಕಡೆಗೆ ತಿರುಗಿದೆವು. ಕಚ್ಚಾ ರಸ್ತೆಯ ನಿರೀಕ್ಷೆಯಲ್ಲಿದ್ದ ನಮ್ಮನ್ನು ನುಣುಪಾದ ಟಾರು ಹಾಕಿದ ಹೆದ್ದಾರಿ ಸ್ವಾಗತಿಸಿತು. ವಾವ್ ಅಂದುಕೊಂಡು ಸಾಗಿದರೆ, 5-6 ಕಿ.ಮೀ. ಬಳಿಕ ಜನವಸತಿ ಬಹುತೇಕ ಇಲ್ಲವಾಗುತ್ತಾ ಬಂತು. ಹೊಸದಾಗಿ ಆಗುತ್ತಿರುವ ಹೆದ್ದಾರಿಯಾದ ಕಾರಣ ಅಲ್ಲಲ್ಲಿ ಯಂತ್ರಗಳು, ಅವುಗಳನ್ನು ಚಲಾಯಿಸುವ ಕೆಲಸಗಾರರು, ಕೂಲಿ ಕಾರ್ಮಿಕರು ಇತ್ಯಾದಿ ಜನರು ಕಂಡು ಬಂದರು. ಅವರಿಗೆ ಹಾಯ್ ಹಾಯ್ ಅನ್ನುತ್ತಾ, ಎದುರಿಂದ ಬರುವ ಬೈಕರುಗಳಿಗೆ ಥಮ್ಸ್ ಅಪ್ ತೋರಿಸುತ್ತಾ ಪರ್ವತ ಶ್ರೇಣಿಯ ತಪ್ಪಲಿನ ರಸ್ತೆಗಳಲ್ಲಿ ನಮ್ಮ ಪ್ರಯಾಣ ಸಾಗಿತ್ತು. ದಾರ್ಚಾದಿಂದ ಸುಮಾರು 40  ಕಿ.ಮೀ. ಸಾಗಿರಬಹುದು. ದಾರಿಯುದ್ದಕ್ಕೂ ನೀರ್ಗಲ್ಲಿನ ಟೊಪ್ಪಿಗೆಗಳನ್ನು ಹೊದ್ದು ನಿಂತ ಪರ್ವತಗಳನ್ನು ನೋಡುತ್ತ ಬಂದಿದ್ದ ನಮಗೆ ಇದ್ದಕ್ಕಿದ್ದಂತೆ ಕಣ್ಣ ಮುಂದೆ ಒಂದು ಅಂತಹ ಪರ್ವತದ ದರ್ಶನವಾಯಿತು. ರಸ್ತೆಯ ಮಗ್ಗುಲಲ್ಲಿ ಒಂದು ನಾಮಫಲಕ ಇತ್ತು.

16580 ಅಡಿ ಎತ್ತರದ ಶಿಂಕು ಲಾ ಪಾಸ್!
ಶಿಂಕು ಲಾ ಪಾಸ್. ಸಮುದ್ರ ಮಟ್ಟದಿಂದ 16580 ಅಡಿ ಎತ್ತರ. ಸುಮಾರು 3000 ಅಡಿ ಎತ್ತರದಲ್ಲಿರುವ ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿಗಿಂತ ಅಂದಾಜು ಐದೂವರೆ ಪಟ್ಟು ಎತ್ತರದ ಪ್ರದೇಶ ಅದು. ಸಮುದ್ರ ಮಟ್ಟದಿಂದ ಎತ್ತರ ಹೆಚ್ಚುತ್ತ ಸಾಗಿದಂತೆ ಮಾನವನ ಬದುಕು ದುಸ್ತರವಾಗುತ್ತದೆ. ಅದಕ್ಕೆ ಪ್ರಮುಖ ಕಾರಣ ಪ್ರಾಣವಾಯು ಆಮ್ಲಜನಕದ ಸಾಂದ್ರತೆ ಕ್ಷೀಣವಾಗುವುದು. ಇಂತಹ ಪ್ರದೇಶದಲ್ಲಿ ಏಕಾಏಕಿ ದೈಹಿಕ ಶ್ರಮದ ಕೆಲಸ ಮಾಡಿದರೆ ಪ್ರಾಣಕ್ಕೇ ಅಪಾಯ. ಅಂತಹದೊಂದು ಎತ್ತರಕ್ಕೆ ಏರಿದ ಖುಷಿ ನಮಗೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸುತ್ತಿರುವ ಸಂದರ್ಭ ಬೇರೆ. ಶಿಂಕು ಲಾ ಪಾಸ್ ನಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸಿದೆವು. ಜತೆಗೆ, ಒಂದಷ್ಟು ಫೋಟೋಗ್ರಫಿ, ವಿಡಿಯೋಗ್ರಫಿ ಎಲ್ಲ ಆಯ್ತು. ಆದರೆ, ಯಾರಿಗೂ ಕಳಿಸುವಂತಿಲ್ಲ. ಯಾಕೆಂದರೆ, ಅಲ್ಲಿ ಯಾವುದೇ ನೆಟ್ ವರ್ಕ್ ಇಲ್ಲ. ಅನಂತ್, ಅನಿಲ್ ಅವರ ಇಂಡಿಯಾ @ 75 ಯಾತ್ರೆಯ ವಿವರ ಪ್ರತಿನಿತ್ಯ ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿತ್ತಲ್ಲ, ಅದಕ್ಕಾದರೂ ಒಂದೆರಡು ಫೋಟೋ ಕಳುಹಿಸಿ, ಸಣ್ಣ ಟಿಪ್ಪಣಿ ಬರೆದು ಕಳಿಸೋಣ ಎಂದರೆ ಯಾರ ಮೊಬೈಲಲ್ಲಿ ನೆಟ್ ವರ್ಕ್ ಇಲ್ಲ. ನಿರ್ವಸಿತ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಆದರೂ ಯಾಕೆ ಇದ್ದೀತು, ಹೇಳಿ!

ಇದನ್ನೂ ಓದಿ: ಲಡಾಖ್ ಅಮೃತ ಯಾತ್ರೆ–2022 ಭಾಗ-4: ಥ್ಯಾಂಕ್ಯೂ ಬ್ರೋ ಥ್ಯಾಂಕ್ಯೂ!

ದುರ್ಗಮ ಮಾರ್ಗ ಜನ್ಸ್ಕಾರ್ ರೈಡ್:
ಅದು ಹಿಮಾಚಲ ಪ್ರದೇಶದ ಕೊನೆಯ ಭಾಗ. ಅಲ್ಲಿಂದ ಲಡಾಖ್ ಸರಹದ್ದು ಪ್ರಾರಂಭ. ಒಂದೊಮ್ಮೆ ಜನ್ಸ್ಕಾರ್ ಸಾಮ್ರಾಜ್ಯದ ಭಾಗವಾಗಿದ್ದ ಪ್ರದೇಶವದು. ಈಗಲೂ ಜನ್ಸ್ಕಾರ್ ಪ್ರದೇಶ ಎಂದೇ ಪ್ರಖ್ಯಾತಿ. ಹಾಗಂತ, ಅದಕ್ಕೆ ಫಲಕವಾಗಲಿ, ಮೈಲಿಗಲ್ಲುಗಳಾಗಲಿ ಇರಲಿಲ್ಲ. ಟಾರು ರಸ್ತೆ ಶಿಂಕು ಲಾ ಪ್ರದೇಶಕ್ಕೇ ಕೊನೆ. ನಂತರ ಪೂರ್ತಿ ಕಚ್ಚಾ ರಸ್ತೆ. ಕಚ್ಚಾ ರಸ್ತೆ ಅಂದರೆ ನಮ್ಮ ಕಡೆ ಇರುವಂತೆ ಮಣ್ಣಿನ ರಸ್ತೆಗಳಲ್ಲ. ನಿರಂತರ ಉಬ್ಬು-ತಗ್ಗಿನ, ಹರಳು ಕಲ್ಲು-ಧೂಳಿನಿಂದ ಕೂಡಿದ, ನೀರು ಹರಿದ ಅನೇಕ ಕಡೆ ನುಣ್ಣನೆಯ ಕೆಸರು ತುಂಬಿಕೊಂಡ, ಬೆಟ್ಟಗಳನ್ನೇ ಏರುತ್ತ ಇಳಿಯುತ್ತ ಸಾಗುವ ರಸ್ತೆಗಳು ಇಲ್ಲಿಯವು. ಇಂತಹ ರಸ್ತೆಗಳಲ್ಲಿ ಬೇಗ ಬೇಗ ಕ್ರಮಿಸಬೇಕು. ಮಧ್ಯಾಹ್ನ ಬಹಳ ತಡ ಮಾಡದೆ ಗಮ್ಯ ತಲುಪಿಕೊಂಡರೆ ಕ್ಷೇಮ. ಯಾಕೆಂದರೆ, ನಮ್ಮ ಪ್ರಯಾಣ ಸಾಗುವುದು ಪರ್ವತಗಳ ತಪ್ಪಲಿನ ಕಚ್ಚಾ ರಸ್ತೆಗಳಲ್ಲಿ. ಎಡ ಅಥವಾ ಬಲಬದಿಯಲ್ಲಿ ಪರ್ವತ. ಅದರ ಮಗ್ಗುಲಿನಲ್ಲಿ ಪ್ರಪಾತ. ಕೆಳಗೆ ನದಿಯೋ, ಉಪನದಿಯೋ ಹರಿಯುತ್ತಿರುತ್ತದೆ. ಈ ಪರ್ವತಗಳ ತುದಿಯಲ್ಲಿ ನೀರ್ಗಲ್ಲುಗಳಿರುತ್ತವೆ. ಇವು ಬಿಸಿಲಿಗೆ ಕರಗುತ್ತವೆ. ಮಧ್ಯಾಹ್ನ ಆಗುತ್ತಿದ್ದಂತೆ ನೀರ್ಗಲ್ಲು ಕರಗಿ ಹರಿಯುವ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಮಧ್ಯಾಹ್ನ ನಂತರ ಪರ್ವತದಿಂದ ಇಳಿದು ಬರುವ ನೀರು ರಸ್ತೆ ನಡುವೆಯೇ ಹರಿದು ಪ್ರವಾಹದಂತೆ ಭಾಸವಾಗುತ್ತದೆ. ತುಸುವೇ ಆಯತಪ್ಪಿದರೂ ಏನಾದೀತು ಎಂದು ಹೇಳಲು ಅಸಾಧ್ಯ. ಹಾಗಾಗಿ, ಇಂತಹ ಪ್ರದೇಶಗಳಲ್ಲಿ ಮಧ್ಯಾಹ್ನ ನಂತರ ಪ್ರಯಾಣ ಸಾಧ್ಯವಾದಷ್ಟು ಮಾಡದಿರುವುದು ಒಳಿತು. ನಾವು ಆ ದಿನ ತಲುಪಬೇಕಿದ್ದ ಪುರ್ನೆ ಎಂಬ ಜಾಗ ಇನ್ನೂ 45-50 ಕಿ.ಮೀ. ದೂರವಿತ್ತು. ಯಾವುದೇ ಮಾರ್ಗದರ್ಶಕ ಇಲ್ಲದೆ, ನಮ್ಮಂತೆ ಹೋಗುವ-ಬರುವ ವಾಹನಗಳನ್ನು ಅವಲಂಬಿಸಿ ಸಾಗಬೇಕಿದ್ದ ಮಾರ್ಗ. ಶಿಂಕು ಲಾದಿಂದ ಇಳಿಯಲಾರಂಭಿಸಿದಂತೆ ಕಚ್ಚಾ ರಸ್ತೆ ಆರಂಭವಾಯಿತು. ಅರ್ಧ ಕಿ.ಮೀ. ಕೂಡ ಸಾಗಿರಲಿಲ್ಲ. ಆಗಲೇ, ಮೊದಲ ಜಲ ದಾಟು (Water Passing) ಎದುರಾಯಿತು. ನನಗೋ, ಅದು ಮೊದಲ ಅನುಭವ. ಮೇಲೆ ಬೆಟ್ಟದಿಂದ ಹರಿದು ರಸ್ತೆ ದಾಟಿ ಕೆಳಗೆ ಪ್ರಪಾತದತ್ತ ಹರಿಯುವ ನೀರಿನ ಆಳ ಎಷ್ಟಿದೆ, ಅದರ ತಳದಲ್ಲಿ ಕೆಸರಿದೆಯಾ, ಕಲ್ಲುಗಳಿವೆಯಾ... ಇತ್ಯಾದಿ ಪ್ರಶ್ನೆಗಳು. ಮೊದಲು ಹೋಗಲು ಧೈರ್ಯ ಬರಲಿಲ್ಲ. ಒಂದೆರಡು ವಾಹನ ದಾಟಿದ ಮೇಲೆ ತುಸು ಧೈರ್ಯ ಮಾಡಿ ಬೈಕಿನ ಹ್ಯಾಂಡಲ್ ಗಟ್ಟಿ ಹಿಡಿದು ಹಾಗೂ ಹೀಗೂ ದಾಟಿದೆ. ಸದ್ಯ ಅಷ್ಟೊಂದು ಆಳ, ಸೆಳೆತ ಏನೂ ಇರಲಿಲ್ಲ. ಜತೆಗೆ ಕಾಲಲ್ಲಿದ್ದ ಶೂ ಒದ್ದೆ ಆದರೆ, ನೀರು ಒಳಗೆ ಹೋದರೆ ಕಷ್ಟ ಎಂದು ದಿಲೀಪ ಬೇರೆ ಎಚ್ಚರಿಸಿದ್ದರಿಂದ ಅದರ ಕಡೆಗೂ ಗಮನ ಹರಿಸುತ್ತಿದ್ದೆ. ಒಟ್ಟಾರೆ, ಒಂದು ರೀತಿಯಲ್ಲಿ ವಿಚಿತ್ರ ಅನುಭವ. ಹಾಗೆ, ಮುಂದೆ ಸಾಗುತ್ತಿದ್ದಂತೆ ಇಂಥದೇ ಒಂದೆರಡು ಜಲ ದಾಟುಗಳು ಬಂದವು. ಅನುಭವ ಹೆಚ್ಚಿದಂತೆಲ್ಲ ಧೈರ್ಯವೂ ಹೆಚ್ಚಿತು.

ಇದನ್ನೂ ಓದಿ: ಲಡಾಖ್ ಅಮೃತ ಯಾತ್ರೆ–2022 ಭಾಗ-3: ಹೆದ್ದಾರಿ ಬಂದ್, 200ಕ್ಕೂ ಹೆಚ್ಚು ಭೂಕುಸಿತ !

ಕುರ್ಗಿಯಾಕ್ ನದಿಯಲ್ಲಿ ಕೊಚ್ಚಿ ಹೋದೆವು‌ ಅನಿಸಿಬಿಟ್ಟಿತ್ತು!
ಒಂದೈದು ಕಿ.ಮೀ. ಹೋಗಿರಬಹುದು. ಇದ್ದಕ್ಕಿದ್ದಂತೆ ರಸ್ತೆಯ ಮೇಲೆ ನದಿಯೇ ಹರಿಯುವುದು ಕಂಡು ಬಂತು. ಅದು, ಕುರ್ಗಿಯಾಕ್ ನದಿ. ಮುಂದೆ ಹೋಗಿ ಜನ್ಸ್ಕಾರ್ ನದಿ ಆಗುವುದು ಇದೇ. ಅದಂತೂ ರಭಸವಾಗಿ ರಸ್ತೆ ದಾಟುತ್ತಿತ್ತು. ಕನಿಷ್ಠ 200-250 ಮೀ. ಅಗಲವಿತ್ತು. ಅದನ್ನು ದಾಟುವುದು ಸಾಧ್ಯವೇ ಇಲ್ಲ ಅನಿಸಿತು ನನಗೆ. ಅನಂತ ಅದು ಹೇಗೋ ಜೀಪು ದಾಟಿಸಿಬಿಟ್ಟ. ನಾನು ದಿಲೀಪನನ್ನು ಮುಂದೆ ಹೋಗಗೊಟ್ಟೆ. ಆತ ಅನುಭವಿ ಎಂಬ ಕಾರಣಕ್ಕೆ. ಆತ ನೀರಿಗೆ ಬೈಕು ಇಳಿಸುತ್ತಿದ್ದಂತೆ ಅದು ಅರ್ಧ ಮುಳುಗಿತು. ಬಹುಶಃ ತಳದಲ್ಲಿ ಕಲ್ಲುಗಳ ರಾಶಿ ಇತ್ತು ಅನಿಸುತ್ತೆ. ಭೋರೆಂದು ಹರಿಯುತ್ತಿದ್ದ ನೀರಲ್ಲೇ ಅವನ ಬೈಕು ಸಿಲುಕಿಕೊಂಡಿತು. ನಾನು ಇಳಿದು ಹೋಗಿ ತಳ್ಳೋಣ ಅಂದರೆ ನನ್ನ ಬೈಕನ್ನು ಏನು ಮಾಡುವುದು? ಅವನ ಬೈಕು ನಡು ನೀರಲ್ಲಿ ಆಫ್ ಆದರೆ ಮತ್ತಷ್ಟು ಅಪಾಯ. ನಮ್ಮ ಅದೃಷ್ಟ ಚೆನ್ನಾಗಿತ್ತು. ಅಲ್ಲೊಬ್ಬ ಸ್ಥಳೀಯನಿದ್ದ. ಆತನಿಗೆ ಮನವಿ ಮಾಡಿದೆ. ಆತ ಆ ಹರಿಯುವ ನೀರಲ್ಲೂ ಅಂಜದೆ ಹೋಗಿ ದಿಲೀಪನ ಬೈಕನ್ನು ತಳ್ಳಿ ಕೊಟ್ಟ. ಹಾಗೂ ಹೀಗೂ ದಿಲೀಪ ದಾಟಿದ. ಇದೆಲ್ಲ ನೋಡುತ್ತಿದ್ದ ನಾನು ಅಧೀರನಾಗಿಬಿಟ್ಟಿದ್ದೆ. ಆದರೇನು ಮಾಡುವುದು? ಹಿಂದೆ ಹೋಗುವಂತಿರಲಿಲ್ಲ. ಮುಂದೆ ಸಂಚರಿಸದೆ ವಿಧಿಯಿರಲಿಲ್ಲ. ಆಗಿದ್ದಾಗಲಿ ಎಂದು ನೀರಿಗಿಳಿಸಿಯೇ ಬಿಟ್ಟೆ. ನನ್ನ 35 ವರ್ಷಗಳ ದ್ವಿಚಕ್ರ ವಾಹನ ಚಾಲನೆ ಅನುಭವವನ್ನೆಲ್ಲ ಧಾರೆ ಎರೆದು ಆಕ್ಸಿಲೇಟರ್ ತಿರುವಿದೆ. ಯಾವುದೇ ಕಾರಣಕ್ಕೂ ಬೈಕ್ ಆಫ್ ಆಗಬಾರದೆಂಬ ಎಚ್ಚರದಲ್ಲಿ ಫಸ್ಟ್ ಗೇರಿನಲ್ಲೇ ಡುರ್ ಎನಿಸುತ್ತ ನೆಲಕ್ಕೆ ಕಾಲೂರುತ್ತ ಹಾಗೂ ಹೀಗೂ ಬೈಕನ್ನು ಆಚೆಯ ಬದಿಗೊಯ್ದೆ. ಅಷ್ಟರಲ್ಲಿ ಎದುರಿಂದ ಬಂದ ಮೋಟೋಕ್ರಾಸ್ ವೃತ್ತಿಪರ ಬೈಕರುಗಳು ರೊಯ್ಯನೆ ಅದೇನೂ ಅಲ್ಲವೆಂಬಂತೆ ದಾಟಿ ಹೋದರು. ನನಗೋ ಅವರು ಸಮತೋಲನ ಕಾಪಾಡಿಕೊಂಡ ಬಗೆ ಕಂಡು ಅಚ್ಚರಿಯೋ ಅಚ್ಚರಿ.

ಇದನ್ನೂ ಓದಿ: ಲಡಾಖ್ ಅಮೃತ ಯಾತ್ರೆ - 2022 ಭಾಗ-2: ಮೂರು ವಾಹನ, ಆರು ಜನ, ಹದಿಮೂರು ದಿನ

ಅಂತೂ ಪುರ್ನೆ ಬಂತು:
ಆಗಲೇ ಮಧ್ಯಾಹ್ನ ಆಗಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು. ಅಲ್ಲೆಲ್ಲೂ ಏನೂ ಸಿಗುವ ಬಗೆ ಕಾಣಲಿಲ್ಲ. ಮುಂದೆ ಸಾಗುತ್ತಲೇ ಇದ್ದೆವು. ಒಂದು ಬಟ್ಟಸ ಬಯಲು ಪ್ರದೇಶ ಬಂತು. ಅದರ ನಡುವೆ ಚೂಪಾದ, ಎತ್ತರದ ಆಕರ್ಷಕ ಬೆಟ್ಟ. ಅದರ ಹೆಸರು ಗೊನ್ಬೋ ರಂಗ್ಜನ್ ಅಂತೆ. ಬೌದ್ಧರಿಗೆ ಪವಿತ್ರ ಅದು. ಆ ಬೆಟ್ಟದಿಂದ ಅನತಿ ದೂರದಲ್ಲಿ ಒಂದಷ್ಟು ಟೆಂಟುಗಳು ಕಾಣಿಸಿಕೊಂಡವು. ಒಂದೆರಡು ಸಣ್ಣ ಸಣ್ಣ ಚಹಾ ಅಂಗಡಿಗಳು. ಅವುಗಳ ಪೈಕಿ ಗೊಂಬಾ ಕ್ಯಾಂಪ್ ಎಂಬಲ್ಲಿ ಮ್ಯಾಗಿ ತಿಂದು ಚಹಾ ಕುಡಿದು ಹೊಟ್ಟೆಯ ಹಸಿವಿಗೆ ತುಸು ವಿಶ್ರಾಂತಿ ನೀಡಿದೆವು. ಮೊದಲೇ ಎತ್ತರದ ಪ್ರದೇಶ. ಆಮ್ಲಜನಕ ಕಡಿಮೆ ಬೇರೆ. ಬೈಕು ಓಡಿಸಿದ ಶ್ರಮ, ಒತ್ತಡದಿಂದ ತಲೆನೋವು ಕಾಣಿಸಿಕೊಂಡಿತ್ತು. ಬೈಕೂ ಏದುಸಿರು ಬಿಡುತ್ತಿತ್ತು. ತಲುಪಬೇಕಾದ ಪುರ್ನೆ ಎಷ್ಟು ದೂರ ಎಂದು ಕೇಳಿದರೆ ದಾರಿಯಲ್ಲಿ ಸಿಕ್ಕವರು ತಲೆಗೊಂದು ದೂರ ಹೇಳುತ್ತಿದ್ದರು. ನಮ್ಮ ಹಿಂದೆ ಬಂದ ಕೆಲ ಬೈಕರುಗಳು 15 ಕಿ.ಮೀ. ಅಂದರೆ, ಕೆಲವರು 50 ಕಿ.ಮೀ. ಅಂದು ಆತಂಕ ಹೆಚ್ಚಿಸಿದರು. ಗೊಂಬಾ ಕ್ಯಾಂಪಿನಲ್ಲೇ ಟೆಂಟ್ ಬಾಡಿಗೆ ಪಡೆಯೋಣ ಎಂದರೆ ನಮ್ಮ ಪ್ರವಾಸ ದಿಕ್ಕೆಡುತ್ತದೆ. ಆಗಿದ್ದಾಗಲೆಂದು ಮುಂದೆ ಸಾಗಿದೆವು. ಕುರ್ಗಿಯಾಕ್ ಗ್ರಾಮ ಎದುರಾಯಿತು. ಅಲ್ಲೂ ಉಳಿದುಕೊಳ್ಳಲು ಸಾಧ್ಯವಿತ್ತು. ಬಿಡದೆ ಮುಂದೆ ಸಾಗಿದೆವು. ಸುಮಾರು 35 ಕಿ.ಮೀ. ಪ್ರಯಾಣದ ಬಳಿಕ ಅಂತೂ ಪುರ್ನೆ ಬಂತು. ಸಂಜೆ 6 ಗಂಟೆ ಕಳೆದಿತ್ತು. ಅಲ್ಲಿ ಹುಡುಕಾಡಿದರೆ ತಂಗಲು 5-6 ಆಯ್ಕೆಗಳು ಸಿಗುತ್ತಿದ್ದವೇನೋ. ಆದರೆ, ನಾವು ದಣಿದಿದ್ದೆವು. ರಾತ್ರಿ ಕಳೆಯಲು ಬೇಗನೆ ಜಾಗ ಹುಡುಕಬೇಕಿತ್ತು. ಎದುರಾದ ಡೋಲ್ಮಾ ಕ್ಯಾಂಪ್ ಎಂಬಲ್ಲಿಗೆ ಹೋದರೆ, ಅಲ್ಲಿ ರೂಮುಗಳಿಲ್ಲ. ಟೆಂಟ್ ಮಾತ್ರ ಲಭ್ಯ. ಸರಿ, ಅಲ್ಲೇ ಇರುವುದು ಎಂದು ನಿರ್ಧರಿಸಿದೆವು.

ಮುಂದಿನ ಕಂತಿನಲ್ಲಿ: ಕೈಕೊಟ್ಟ ಆರೋಗ್ಯ. ಮುಂದಿನ ಪ್ರಯಾಣ ಸುಸೂತ್ರ ಆಯ್ತಾ? ಮಧ್ಯದಲ್ಲೇನಾದರೂ ತೊಂದರೆ ಆಯ್ತಾ?

click me!