ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭಯಾನಕ ಭೂಕುಸಿತ ಜಾಗವನ್ನು ಡಾರ್ಕ್ ಟೂರಿಸಂ ಸ್ಪಾಟ್ ಆಗಿಸಬೇಡಿ ಎಂದು ಕೇರಳ ಪೊಲೀಸರು ಸೂಚನೆ ನೀಡಿದ್ದಾರೆ. ಡಾರ್ಕ್ ಟೂರಿಂಸ ಅಂದರೇನು ಮತ್ತು ಅಂಥ ಜಾಗಗಳು ಯಾವುದು, ನಾವು ಅಲ್ಲಿಗೆ ಯಾಕೆ ಹೋಗುತ್ತೇವೆ ಎಂಬುದು ನಿಮಗೆ ಗೊತ್ತಿರಲಿ.
ಡಾರ್ಕ್ ಟೂರಿಸಂ (Dark Tourism) ಎಂದರೆ ಹೊಸ ಸಂಗತಿಯೇನಲ್ಲ. ಜನ ಯಾವಾಗಲೂ ದುರಂತ ಘಟನೆಗಳತ್ತ ಆಕರ್ಷಿತರಾಗುತ್ತಾರೆ ಎಂದು ಇತಿಹಾಸ ತೋರಿಸುತ್ತದೆ. ಡಾರ್ಕ್ ಪ್ರವಾಸೋದ್ಯಮದ ಸುತ್ತಲಿನ ಕುತೂಹಲವು ಬೆಳೆಯುತ್ತಿದೆ. ದುರಂತ ನಡೆದ ಜಾಗಗಳು ಕೆಲವು ವರ್ಷಗಳ ನಂತರ ಪ್ರವಾಸೋದ್ಯಮ ಸ್ಪಾಟ್ ಆಗುತ್ತವೆ. ಹವಾಮಾನ ವಿಪತ್ತುಗಳು, ಯುದ್ಧಗಳು, ಭಾರತದ ವಿಭಜನೆಯ ಅಪರೂಪದ ಸಂಗತಿಗಳು, ಸೆಲ್ಯುಲರ್ ಜೈಲು (Celular Jail), ರೂಪ್‌ಕುಂಡ್ ಸರೋವರದಂತಹ ಸ್ಥಳಗಳು ಇತಿಹಾಸದ ಕರಾಳ ಅಧ್ಯಾಯ ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಪ್ರವಾಸಿ ತಾಣಗಳಾಗಿವೆ.
ಇಂದು ಮುನ್ನೂರಕ್ಕೂ ಹೆಚ್ಚು ಜನ ಸತ್ತ ಈ ಜಾಗ ಬಹುಶಃ ಮುಂದಿನ ದಿನಗಳಲ್ಲಿ ನಿಧಾನವಾಗಿ ಚೇತರಿಸಿಕೊಳ್ಳಬಹುದು. ಅಳಿದುಳಿದವರು ಬದುಕು ಕಟ್ಟಿಕೊಳ್ಳಬಹುದು. ಕೆಲವು ಮನೆಗಳು, ಜಾಗಗಳು ಪಾಳು ಬೀಳಬಹುದು. ಹೊಸ ಕಟ್ಟಡಗಳು ಏಳಬಹುದು. ಆದರೆ ಕರಾಳ ನೆನಪೊಂದು ಆ ಜಾಗಕ್ಕೆ ಅಂಟಿಕೊಂಡೇ ಇರುತ್ತದೆ. ಅಲ್ಲಿಗೆ ಭೇಟಿ ನೀಡುವವರು ಆ ನೆನಪುಗಳಿಗಾಗಿಯೇ ಭೇಟಿ ಕೊಡುತ್ತಾರೆ.
ಡಾರ್ಕ್ ಟೂರಿಸಂ ಎಂಬ ಪದವು 1990ರ ದಶಕದ ಮಧ್ಯಭಾಗದಲ್ಲಿ ಜಾನ್ ಲೆನ್ನನ್ ಮತ್ತು ಮಾಲ್ಕಮ್ ಫೋಲೆ ಎಂಬವರಿಂದ ಕಾಯಿನ್ ಆಯ್ತು. ಸಾವು, ದುರಂತ ಮತ್ತು ಭೀಕರ ಘಟನೆಗಳಿಗೆ ಸಂಬಂಧಿಸಿದ ಜಾಗಗಳಿಗೆ ಭೇಟಿ ನೀಡುವ ಅಭ್ಯಾಸವನ್ನು ಇದು ಸೂಚಿಸುತ್ತದೆ. ಐತಿಹಾಸಿಕ ಯುದ್ಧಭೂಮಿಗಳು ಮತ್ತು ಸ್ಮಾರಕಗಳಿಂದ ಹಿಡಿದು ನೈಸರ್ಗಿಕ ವಿಪತ್ತುಗಳ ಸ್ಥಳಗಳು ಮತ್ತು ಕುಖ್ಯಾತ ಜೈಲುಗಳವರೆಗೆ, ಡಾರ್ಕ್ ಪ್ರವಾಸೋದ್ಯಮ ಹರಡಿದೆ. 20 ನೇ ಶತಮಾನದ ಉತ್ತರಾರ್ಧದಲ್ಲಿ ಜನರು ಈ ಜಾಗಗಳಿಗೆ ಏಕೆ ಆಕರ್ಷಿತರಾಗುತ್ತಾರೆ ಮತ್ತು ಅಲ್ಲಿನ ಅನುಭವದಿಂದ ಏನನ್ನು ಪಡೆಯುತ್ತಾರೆ ಎಂದು ಸಂಶೋಧಕರು ಅನ್ವೇಷಿಸಲು ಪ್ರಾರಂಭಿಸಿದರು.
ಡಾರ್ಕ್ ಪ್ರವಾಸೋದ್ಯಮದಲ್ಲಿ ಅಪಾಯಗಳೂ ಇವೆ. ಉತ್ತರ ಕೊರಿಯಾದಲ್ಲಿ ಹೀಗೆ ಹೋದ ಒಟ್ಟೊ ವಾರ್ಂಬಿಯರ್ ಎಂಬಾತ ಅಲ್ಲಿ ಬಂಧನಕ್ಕೊಳಗಾಗಿ ನಂತರ ಸಾವನ್ನಪ್ಪಿದ. ಇಂಥ ಅಪಾಯಗಳ ಹೊರತಾಗಿಯೂ, ಮಾನವ ಸಂಕಟ ಮತ್ತು ದುರಂತಗಳಿಗೆ ಸಂಬಂಧಿಸಿದ ತಾಣಗಳಿಗೆ ಭೇಟಿ ನೀಡುವ ಬಗ್ಗೆ ಜನಕ್ಕೆ ಕುತೂಹಲ ಅಧಿಕ. ಶಿಕ್ಷಣ ಮತ್ತು ಸ್ಮರಣೆಯಿಂದ ಹಿಡಿದು ಕುತೂಹಲ ಮತ್ತು ರೋಮಾಂಚನದವರೆಗೆ ವಿವಿಧ ಕಾರಣಗಳಿಗಾಗಿ ಜನರು ಡಾರ್ಕ್ ಪ್ರವಾಸೋದ್ಯಮದತ್ತ ಆಕರ್ಷಿತರಾಗುತ್ತಾರೆ.
ಅನೇಕ ಸಂದರ್ಶಕರು ಮಹತ್ವದ ಐತಿಹಾಸಿಕ ಘಟನೆಗಳು ಮತ್ತು ಮಾನವೀಯತೆಯ ಮೇಲೆ ಅವುಗಳ ಪ್ರಭಾವದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ದುರಂತದ ಸ್ಥಳಗಳಿಗೆ ಭೇಟಿ ನೀಡುವುದು ಬಲಿಪಶುಗಳನ್ನು ಗೌರವಿಸಲು ಮತ್ತು ನೆನಪಿಸಿಕೊಳ್ಳಲು ಒಂದು ಮಾರ್ಗ. ಭಯಾನಕ ಮತ್ತು ನಿಗೂಢದ ಬಗ್ಗೆ ಮಾನವ ಕುತೂಹಲವು ಡಾರ್ಕ್ ಪ್ರವಾಸೋದ್ಯಮ ತಾಣಗಳನ್ನು ಅನ್ವೇಷಿಸಲು ಅನೇಕರನ್ನು ಪ್ರೇರೇಪಿಸುತ್ತದೆ. ಕೆಲವರಿಗೆ ಡಾರ್ಕ್ ಟೂರಿಸಂ ತಮ್ಮ ಪರಂಪರೆ ಅಥವಾ ಕುಟುಂಬದ ಇತಿಹಾಸದೊಂದಿಗೆ ಸಂಪರ್ಕ ಸಾಧಿಸುವ ಸಾಧನ. ಇದು ಪೂರ್ವಜರ ನೆನಪಿಗೆ ಇರಬಹುದು. ಇನ್ನು ಹಲವರು ಸಾಹಸ ಮತ್ತು ಥ್ರಿಲ್-ಸೀಕಿಂಗ್ ಸ್ವಭಾವದವರು.
ಇಂಥಲ್ಲಿಗೆ ತೆರಳುವಾಗ ಕೆಲವು ನಿಯಮ ಪಾಲಿಸುವುದು ಮುಖ್ಯ. ಮುಖ್ಯವಾಗಿ ಬಲಿಪಶುಗಳು ಮತ್ತು ಅವರ ಕುಟುಂಬಗಳ ಬಗ್ಗೆ ಗೌರವ ಮತ್ತು ಸಂವೇದನಾಶೀಲತೆ. ಅಲ್ಲಿನ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಬೇಕು. ಸ್ಥಳೀಯ ಸಮುದಾಯಗಳ ಮೇಲೆ ಪ್ರವಾಸಿಗರ ಹರಿವಿನಿಂದ ಪರಿಣಾಮ ಏನು ಎಂದು ನೋಡಬೇಕು.
Pini Village: ಭಾರತದ ಈ ಹಳ್ಳಿಯಲ್ಲಿ ಬಟ್ಟೆ ಧರಿಸಲ್ಲ ಮಹಿಳೆಯರು!
ನಮ್ಮ ದೇಶದಲ್ಲಿ ಗಮನಾರ್ಹ ಡಾರ್ಕ್ ಟೂರಿಸಂ ಜಾಗಗಳು ಎಂದರೆ ಜಲಿಯನ್ ವಾಲಾಬಾಗ್, ರೂಪ್‌ಕುಂಡ್ ಮತ್ತು ಅಂಡಮಾನ್‌ನ ಸೆಲ್ಯುಲಾರ್ ಜೈಲು. ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟಿಷರು ನೂರಾರು ಮಂದಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಗೋಲಿಬಾರ್ ಮಾಡಿ ಕೊಂದು ಹಾಕಿದರು. ಇಂದು ಅಲ್ಲಿ ಸ್ಮಾರಕ ಕಟ್ಟಿದ್ದಾರೆ. ಹಿಮಾಲಯದಲ್ಲಿ ಇರುವ ರೂಪ್‌ಕುಂಡ್ ಕಣೀವೆಯಲ್ಲಿ ಯಾವುದೋ ಐತಿಹಾಸಿಕ ದುರಂತದ ಪರಿಣಾಮ ಉಂಟಾದ ದುರಂತದಲ್ಲಿ ಮಡಿದ ಜನರ ಸಾವಿರಾರು ತಲೆಬುರುಡೆಗಳು ಇಂದಿಗೂ ಕಾಣಸಿಗುತ್ತವೆ. ಅಂಡಮಾನ್‌ನ ಸೆಲ್ಯುಲಾರ್ ಜೈಲಿನಲ್ಲಿ ವೀರ ಸಾವರ್ಕರ್ ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರ ಕೈದಿಗಳು ಶಿಕ್ಷೆ ಅನುಭವಿಸಿದ ಕ್ರೂರ ಜೈಲು ಕೋಣೆಗಳಿವೆ. ಇಲ್ಲೆಲ್ಲ ಲಕ್ಷಾಂತರ ಜನ ಭೇಟಿ ನೀಡಿ ರೋಮಾಂಚನ ಅನುಭವಿಸುತ್ತಾರೆ.
ಹಾಗೆಯೇ ವಿದೇಶಗಳಲ್ಲಿ ಎರಡನೇ ಮಹಾಯುದ್ಧದ ದೌರ್ಜನ್ಯದ ತಾಣ ಆಶ್ವಿಟ್ಜ್-ಬಿರ್ಕೆನೌ ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್, ಪರಮಾಣು ದುರಂತದ ಸ್ಥಳ ಚೆರ್ನೋಬಿಲ್, ನ್ಯೂಯಾರ್ಕಿನ ಭಯೋತ್ಪಾದಕ ದಾಳಿಯ ಸ್ಥಳ ಗ್ರೌಂಡ್ ಝೀರೋ ಈಗ 9/11 ಸ್ಮಾರಕ, ಪರಮಾಣು ಬಾಂಬ್ ದಾಳಿಯ ತಾಣ ಹಿರೋಷಿಮಾ ಪೀಸ್ ಮೆಮೋರಿಯಲ್ ಪಾರ್ಕ್, ಮೌಂಟ್ ವೆಸುವಿಯಸ್ ಜ್ವಾಲಾಮುಖಿ ಸ್ಫೋಟದ ನಂತರ ಸಮಾಧಿಯಾದ ಪುರಾತನ ನಗರ ಇಟಲಿಯ ಪೊಂಪೈ ಇವೆಲ್ಲ ಇತಿಹಾಸದ ಕರಾಳ ಅಂಶಗಳನ್ನು ನೋಡುಗರಿಗೆ ಕಾಣಿಸುತ್ತವೆ.
Wayanad landslide: ಬದುಕಿನ ದಾರಿಗೆ ಅದೆಷ್ಟು ವಿಘ್ನ,ಇಡೀ ಊರೇ ನಿದ್ರಿಸುತ್ತಿದ್ದ ವೇಳೆ ಕುಸಿದ ಆ ಎರಡು ಬೆಟ್ಟ!