ಹಿಂದುಗಳ ಪವಿತ್ರ ಸ್ಥಳ ಕೈಲಾಶ ಪರ್ವತ. ಪ್ರತಿಯೊಬ್ಬರೂ ಅಲ್ಲಿಗೆ ಭೇಟಿ ನೀಡುವ ಬಯಕೆ ಹೊಂದಿರುತ್ತಾರೆ. ಆದ್ರೆ ಸುಲಭವಾಗಿ ಹೋಗಬಹುದಾದ ಜಾಗ ಅದಲ್ಲ. ಅನೇಕ ನಿಯಮ ಪಾಲಿಸುವ ಜೊತೆಗೆ ಹಣ ಹಾಗೂ ಆರೋಗ್ಯ ಎರಡೂ ಇಲ್ಲಿಗೆ ಹೋಗುವ ಭಕ್ತರ ಕೈನಲ್ಲಿರಬೇಕು.
ಕೈಲಾಸ ಪರ್ವತ ಶಿವನ ವಾಸಸ್ತಾನ. ಇದು ಟಿಬೆಟ್‌ನಲ್ಲಿರುವ ಗಾಂಗ್ ಡೈಸ್ ಪರ್ವತ ಶ್ರೇಣಿಯಾಗಿದೆ. ಬರೀ ಹಿಂದುಗಳು ಮಾತ್ರವಲ್ಲ ಜೈನ, ಬೌದ್ಧ ಹಾಗೂ ಸಿಖ್ ಧರ್ಮೀಯರ ಧಾರ್ಮಿಕ ಕೇಂದ್ರ ಕೈಲಾಸ ಪರ್ವತ. ಕೈಲಾಸ ಪರ್ವತಕ್ಕೆ ಹಿಂದೂ ಧರ್ಮದಲ್ಲಿ ಸಾಕಷ್ಟು ಮನ್ನಣೆ ಇದೆ. ಶಿವಪುರಾಣ, ಸ್ಕಂದ ಪುರಾಣ, ಮತ್ಸ್ಯ ಪುರಾಣ ಮುಂತಾದವುಗಳಲ್ಲಿ ಇದರ ಬಗ್ಗೆ ಪ್ರತ್ಯೇಕ ಅಧ್ಯಾಯವಿದೆ, ಕೈಲಾಸ ಪರ್ವತದ ಮಹಿಮೆಯನ್ನು ಈ ಪುರಾಣಗಳಲ್ಲಿ ವಿವರಿಸಲಾಗಿದೆ. ಪವಿತ್ರ ಗಂಗೆ ಭಗವಂತ ಶಿವನ ಕೂದಲಿನಿಂದ ಬಿದ್ದು ಶುದ್ಧವಾದ ನದಿಯ ರೂಪದಲ್ಲಿ ಭೂಮಿಯ ಮೇಲೆ ಹರಿಯಿತು. ಪ್ರತಿ ವರ್ಷ ಅನೇಕ ಹಿಂದೂಗಳು ಅಲ್ಲಿಗೆ ಭೇಟಿ ನೀಡುತ್ತಾರೆ.
ಧಾರ್ಮಿಕ ಮೌಲ್ಯ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಗೆ ಇದು ಹೆಸರುವಾಸಿಯಾಗಿದೆ. ಶಿವ (Shiva) ನಿರುವ ಕೈಲಾಸ (Kailash) ಪರ್ವತವನ್ನು ಜೀವನದಲ್ಲಿ ಒಮ್ಮೆ ಕಣ್ತುಂಬಿಕೊಂಡ್ರೆ ಸ್ವರ್ಗ ಪ್ರಾಪ್ತಿಯಾದಂತೆ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಕೈಲಾಸ ಪರ್ವತಕ್ಕೆ ಭೇಟಿ ನೀಡುವ ಬಯಕೆ ಹೊಂದಿರುತ್ತಾರೆ. ಕೈಲಾಸ ಪರ್ವತಕ್ಕೆ ಭೇಟಿ ನೀಡೋದು ಸುಲಭವಲ್ಲ. ಅದಕ್ಕೆ ಹೋಗುವ ಮುನ್ನ ಕೆಲವು ಅರ್ಹತೆಗಳ ಪರೀಕ್ಷೆ ನಡೆಯುತ್ತದೆ.
undefined
ಯಾವಾಗ ನಡೆಯುತ್ತೆ ಕೈಲಾಶ ಪರ್ವತ ಯಾತ್ರೆ : ಕೈಲಾಶ ಪರ್ವತ ಯಾತ್ರೆಯನ್ನು ವಿದೇಶಾಂಗ (Foreign) ವ್ಯವಹಾರಗಳ ಸಚಿವಾಲಯ ಆಯೋಜಿಸುತ್ತದೆ. ಪ್ರತಿ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಯಾತ್ರೆ ನಡೆಯುತ್ತದೆ. ಕೈಲಾಸ ಪರ್ವತಕ್ಕೆ ಹೋಗಿ ವಾಪಸ್ ಬರಲು 2 ರಿಂದ 3 ವಾರ ಬೇಕಾಗುತ್ತದೆ. ಕೈಲಾಶ ಪರ್ವತ ತಲುಪಲು ಎರಡು ವಿಭಿನ್ನ ಮಾರ್ಗಗಳಿವೆ. ಲಿಪುಲೇಖ್ ಪಾಸ್ (ಉತ್ತರಾಖಂಡ) ಮತ್ತು ನಾಥು ಲಾ ಪಾಸ್ (ಸಿಕ್ಕಿಂ). ಪ್ರಯಾಣ ಕಠಿಣವಾಗಿರುತ್ತದೆ. ಒರಟಾದ ಪ್ರದೇಶದ ಮೂಲಕ 19,500 ಅಡಿಗಳವರೆಗೆ ಏರಬೇಕಾಗುತ್ತದೆ. ಉತ್ತರಾಖಂಡ, ದೆಹಲಿ ಮತ್ತು ಸಿಕ್ಕಿಂ ರಾಜ್ಯ ಸರ್ಕಾರಗಳು ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಸಹಕಾರದೊಂದಿಗೆ ಈ ಯಾತ್ರೆಯನ್ನು ಆಯೋಜಿಸಲಾಗುತ್ತದೆ.
ಕೈಲಾಸ ಪರ್ವತಕ್ಕೆ ಹೋಗಲು ಯಾವೆಲ್ಲ ಅರ್ಹತೆ ಬೇಕು? : ನೂರಾರು ಭಕ್ತರು ಕೈಲಾಸ ಪರ್ವತಕ್ಕೆ ಭೇಟಿ ನೀಡಲು ಅರ್ಜಿ ಸಲ್ಲಿಸುತ್ತಾರೆ. ಆದ್ರೆ ಎಲ್ಲರಿಗೂ ಒಪ್ಪಿಗೆ ಸಿಗೋದಿಲ್ಲ. ಕೈಲಾಸ ಪರ್ವತದ ಯಾತ್ರೆ ನಡೆಸುವ ವ್ಯಕ್ತಿ ಭಾರತದ ಪ್ರಜೆಯಾಗಿರಬೇಕಾಗುತ್ತದೆ. ಭಕ್ತರ ವಯಸ್ಸು 70 ವರ್ಷಕ್ಕಿಂತ ಹೆಚ್ಚಿರಬಾರದು. ಬಾಡಿ ಮಾಸ್ ಇಂಡೆಕ್ಸ್ 25 ಅಥವಾ ಅದಕ್ಕಿಂತ ಕಡಿಮೆ ಇರಬೇಕಾಗುತ್ತದೆ. ಯಾತ್ರಿಕರು ದೈಹಿಕವಾಗಿ ಸದೃಢವಾಗಿರುವುದು ಬಹಳ ಮುಖ್ಯವಾಗುತ್ತದೆ. ಈ ಎಲ್ಲ ಅರ್ಹತೆಯಿದ್ದರೆ ಮಾತ್ರ ನೀವು ಕೈಲಾಸ ಪರ್ವತಕ್ಕೆ ಯಾತ್ರೆ ಕೈಗೊಳ್ಳಬಹುದಾಗಿದೆ.
ಇಲ್ಲಿವೆ ಶನಿ ಸಾಡೇಸಾತಿಗೆ ಪರಿಣಾಮಕಾರಿ ಪರಿಹಾರ..
ಕೈಲಾಸ ಪರ್ವತ ಯಾತ್ರೆಗೆ ಅರ್ಜಿ ಸಲ್ಲಿಸೋದು ಹೇಗೆ? : ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕೈಲಾಶ್ ಮಾನಸ ಸರೋವರ ಯಾತ್ರಾ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇದು ಆನ್‌ಲೈನ್ ಅರ್ಜಿಯಾಗಿರುತ್ತದೆ. ಅರ್ಜಿಯನ್ನು ಪೂರ್ಣಗೊಳಿಸಿ, ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ವೇಳೆ ಯಾವ ಮಾರ್ಗದಲ್ಲಿ ಸಂಚರಿಸಲು ಬಯಸ್ತೀರಿ ಎಂಬುದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಅರ್ಜಿದಾರರನ್ನು ಗಣಕೀಕೃತ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅರ್ಜಿದಾರರಿಗೆ ಅವರ ನೋಂದಾಯಿತ ಇ-ಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ ಮೂಲಕ ತಿಳಿಸಲಾಗುತ್ತದೆ. ಆಯ್ಕೆಯಾದ ಪ್ರಯಾಣಿಕರು, ದೆಹಲಿಗೆ ಬಂದು ಪ್ರಯಾಣಕ್ಕೆ ಅಗತ್ಯವಾದ ದಾಖಲೆಗಳನ್ನು ನೀಡಿ, ಪರಿಶೀಲನೆಗೆ ಒಳಗಾಗಬೇಕಾಗುತ್ತದೆ.
ಈ ಬಾರಿ ಮತ್ತೆ ಶುರುವಾಗಲಿದೆ ಯಾತ್ರೆ : ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೈಲಾಸ-ಮಾನಸ ಸರೋವರ ಯಾತ್ರೆ ಈ ವರ್ಷ ಆರಂಭವಾಗಲಿದೆ. ಇದಕ್ಕಾಗಿ ಚೀನಾ ವೀಸಾ ನೀಡಲು ಪ್ರಾರಂಭಿಸಿದೆ. ಆದರೆ ಅದೇ ಸಮಯದಲ್ಲಿ ಹಲವು ನಿಯಮಗಳನ್ನು ಬಿಗಿಗೊಳಿಸಿದೆ. ಪ್ರಯಾಣ ಶುಲ್ಕ ಬಹುತೇಕ ದುಪ್ಪಟ್ಟಾಗಿದೆ. ಭಾರತೀಯ ನಾಗರಿಕರು ಈ ಪ್ರಯಾಣಕ್ಕಾಗಿ ಕನಿಷ್ಠ 1.85 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಅನುಕೂಲಕ್ಕಾಗಿ ನೇಪಾಳದ ಕೆಲಸಗಾರ ಅಥವಾ ಸಹಾಯಕರನ್ನು ನೇಮಿಸಿಕೊಂಡ್ರೆ 24 ಸಾವಿರ ರೂಪಾಯಿ ಹೆಚ್ಚುವರಿ ಪಾವತಿಸಬೇಕು.