
ನವದೆಹಲಿ (ಮಾ.11): ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದೆ. ಇದರ ನೇರ ಪರಿಣಾಮ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಮೇಲೆ ಬಿದ್ದಿದ್ದು, ರೈಲುಗಳಲ್ಲಿ ಫುಡ್ ಕ್ಯಾಟರಿಂಗ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಎಲ್‌ಪಿಜಿ ಅಭಾವದ ಹಿನ್ನೆಲೆಯಲ್ಲಿ ಐಆರ್‌ಸಿಟಿಸಿ ತನ್ನ ಅಡುಗೆ ಗುತ್ತಿಗೆದಾರರಿಗೆ ತುರ್ತು ಸೂಚನೆಯನ್ನು ನೀಡಿದೆ. ಮಾರ್ಚ್ 10ರಂದು ಹೊರಡಿಸಲಾದ ಪತ್ರದಲ್ಲಿ, ರೈಲ್ವೆ ನಿಲ್ದಾಣಗಳಲ್ಲಿರುವ ಫುಡ್ ಪ್ಲಾಜಾಗಳು, ರಿಫ್ರೆಶ್‌ಮೆಂಟ್ ರೂಮ್‌ಗಳು ಮತ್ತು ಜನ ಆಹಾರ ಕೇಂದ್ರಗಳು ಅನಿಲದ ಕೊರತೆಯಾದಲ್ಲಿ ತಕ್ಷಣವೇ ಅಡುಗೆ ಮಾಡಲು ಪರ್ಯಾಯ ವಿಧಾನಗಳನ್ನು (Alternative Methods) ಬಳಸುವಂತೆ ನಿರ್ದೇಶಿಸಿದೆ.
News18 ವರದಿ ಮಾಡಿರುವಂತೆ, ಎಲ್‌ಪಿಜಿ ಕೊರತೆಯು ಐಆರ್‌ಸಿಟಿಸಿಯ 'ಬೇಸ್ ಕಿಚನ್'ಗಳ ಮೇಲೆ ಭಾರಿ ಪರಿಣಾಮ ಬೀರಿದೆ. ರೈಲುಗಳ ಪ್ಯಾಂಟ್ರಿ ಕಾರ್‌ಗಳಿಗೆ ಇಲ್ಲಿಂದಲೇ ಊಟವನ್ನು ತಯಾರಿಸಿ ರವಾನಿಸಲಾಗುತ್ತದೆ. "ತಡೆರಹಿತ ಕಾರ್ಯಾಚರಣೆಯನ್ನು ನಿರ್ವಹಿಸಲು ಈ ಕೆಳಗಿನ ಕ್ರಮಗಳನ್ನು ತಕ್ಷಣವೇ ಜಾರಿಗೆ ತರಲು ನಿಮಗೆ ನಿರ್ದೇಶಿಸಲಾಗಿದೆ" ಎಂದು ಐಆರ್‌ಸಿಟಿಸಿ ಸಲಹೆಯಲ್ಲಿ ತಿಳಿಸಿದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ ಸರಪಳಿ ಹದಗೆಡುವ ಆತಂಕ ಎದುರಾಗಿರುವುದರಿಂದ ಈ ಎಚ್ಚರಿಕೆ ನೀಡಲಾಗಿದೆ.
ರೈಲ್ವೆ ಅಧಿಕಾರಿಗಳ ಮಾಹಿತಿಯ ಪ್ರಕಾರ, ಐಆರ್‌ಸಿಟಿಸಿ ತನ್ನ ಬೇಸ್ ಕಿಚನ್ ಮತ್ತು ಆನ್‌ಬೋರ್ಡ್ ಕ್ಯಾಟರಿಂಗ್ ಸೇವೆಗಳ ಮೂಲಕ ಪ್ರತಿದಿನ ದೇಶಾದ್ಯಂತ ಸುಮಾರು 17 ಲಕ್ಷ ಊಟಗಳನ್ನು ಪೂರೈಸುತ್ತದೆ. ಇಷ್ಟು ದೊಡ್ಡ ಪ್ರಮಾಣದ ಊಟಕ್ಕೆ ಎಲ್‌ಪಿಜಿ ಕೊರತೆಯಾದರೆ ಪ್ರಯಾಣಿಕರಿಗೆ ಭಾರಿ ಅನಾನುಕೂಲವಾಗಲಿದೆ. ಒಂದು ವೇಳೆ ಎಲ್‌ಪಿಜಿ ಪೂರೈಕೆ ಸ್ಥಗಿತಗೊಂಡರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕ್ಯಾಟರರ್‌ಗಳಿಗೆ ಸೂಚಿಸಲಾಗಿದೆ.
ಟಿಕೆಟ್ ಬುಕ್ ಮಾಡುವಾಗಲೇ ಊಟಕ್ಕೆ ಮುಂಗಡ ಹಣ ಪಾವತಿಸಿರುವ (Pre-booked) ಪ್ರಯಾಣಿಕರಿಗೆ ಯಾವುದೇ ಆರ್ಥಿಕ ನಷ್ಟವಾಗುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. "ಎಲ್‌ಪಿಜಿ ಕೊರತೆಯಿಂದಾಗಿ ಕ್ಯಾಟರಿಂಗ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡರೆ, ಮುಂಗಡವಾಗಿ ಕಾಯ್ದಿರಿಸಿದ ಊಟದ ವೆಚ್ಚವನ್ನು ಪ್ರಯಾಣಿಕರಿಗೆ ಮರುಪಾವತಿ ಮಾಡಲಾಗುವುದು" ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.