ಐಷಾರಾಮಿ ಹೋಟೆಲ್‌ಗಿಂತಲೂ ಚಂದ ಈ ರೈಲ್ವೆ ಸ್ಟೇಷನ್ ವಾಸ್ತವ್ಯ! ನೀಲಗಿರಿ ತಪ್ಪಲಿನಲ್ಲಿ 'ರಾಜಮನೆತನದ' ಅನುಭವ!

Published : Feb 25, 2026, 05:42 PM IST
UNESCO Heritage coonoor railway station

ಸಾರಾಂಶ

ಯುನೆಸ್ಕೋ ಪಾರಂಪರಿಕ ತಾಣವಾದ ನೀಲಗಿರಿ ಮೌಂಟೇನ್ ರೈಲ್ವೆಯ ಭಾಗವಾಗಿರುವ ಕೂನೂರು ರೈಲ್ವೆ ನಿಲ್ದಾಣ ಈಗ ಪ್ರವಾಸಿಗರಿಗೆ ವಿಶೇಷ ವಾಸ್ತವ್ಯದ ಅನುಭವ ನೀಡುತ್ತಿದೆ. ಇಲ್ಲಿನ ಬ್ರಿಟಿಷ್ ಕಾಲದ ರಿಟೈರಿಂಗ್ ರೂಮ್‌ಗಳನ್ನು ನವೀಕರಿಸಿ, ಪ್ರಕೃತಿಯ ಮಡಿಲಲ್ಲಿ ಕಡಿಮೆ ದರದಲ್ಲಿ ಉಳಿದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ರೈಲ್ವೆ ನಿಲ್ದಾಣ ಎಂದರೆ ಕೇವಲ ಟ್ರೇನ್‌ಗಾಗಿ ಕಾಯುವ ಜಾಗ ಎನ್ನುವ ಕಾಲ ಈಗ ಮರೆಯಾಗಿದೆ. ಈ ರೈಲ್ವೆ ನಿಲ್ದಾಣವು ಇಂದು ಪ್ರವಾಸಿಗರಿಗೆ ಕೇವಲ ಪ್ರಯಾಣದ ಕೊಂಡಿಯಲ್ಲ, ಬದಲಾಗಿ ಒಂದು ಅದ್ಭುತ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿರುವ 'ನೀಲಗಿರಿ ಮೌಂಟೇನ್ ರೈಲ್ವೆ'ಯ ಭಾಗವಾಗಿರುವ ಈ ನಿಲ್ದಾಣದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಬ್ರಿಟಿಷ್ ಕಾಲದ ಭವ್ಯತೆ ಮತ್ತು ಆಧುನಿಕ ಸೌಲಭ್ಯ:

ತಮಿಳುನಾಡಿನ ನೀಲಗಿರಿ ಬೆಟ್ಟಗಳ ನಡುವೆ ಇರುವ ಕೂನೂರು ರೈಲ್ವೆ ನಿಲ್ದಾಣವು ಅರ್ಧ ದಿನದ ವಾಸಕ್ಕೆ ಭಾರೀ ಪ್ರಸಿದ್ಧಿ ಆಗುತ್ತಿದೆ. 19ನೇ ಶತಮಾನದ ಬ್ರಿಟಿಷ್ ವಾಸ್ತುಶಿಲ್ಪದ ವೈಭವವನ್ನು ಇಂದಿಗೂ ಉಳಿಸಿಕೊಂಡಿರುವ ಕೂನೂರು ನಿಲ್ದಾಣವು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಮರದ ಪ್ಯಾನೆಲ್‌ಗಳು, ಹಳೆಯ ಕಾಲದ ವೇಟಿಂಗ್ ರೂಮ್‌ಗಳು ಮತ್ತು ಪುರಾತನ ರೈಲ್ವೆ ಯಾರ್ಡ್ ಇಲ್ಲಿನ ವಿಶೇಷ ಆಕರ್ಷಣೆ. ಈ ನಿಲ್ದಾಣದ ಹಳೆಯ ರಿಟೈರಿಂಗ್ ರೂಮ್‌ಗಳನ್ನು (Retiring Rooms) ಈಗ ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಪ್ರವಾಸಿಗರಿಗೆ ಅತ್ಯಂತ ಆರಾಮದಾಯಕ ಅನುಭವ ನೀಡುತ್ತಿದೆ. ಇಲ್ಲಿನ ಕೊಠಡಿಗಳಲ್ಲಿ ಐಷಾರಾಮಿ ಸೌಕರ್ಯಗಳಿಗಿಂತ ಹೆಚ್ಚಾಗಿ, ಸ್ವಚ್ಛತೆ ಮತ್ತು ಬೆಟ್ಟದ ಸಾಂಪ್ರದಾಯಿಕ ಸೊಗಡಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಏಕಾಂತ ಬಯಸುವವರಿಗೆ ಸ್ವರ್ಗ:

ಸಂಜೆ 4 ಗಂಟೆಗೆ ಕೊನೆಯ ಟ್ರೇನ್ ಹೊರಟು ಹೋದ ನಂತರ, ಇಡೀ ರೈಲ್ವೆ ನಿಲ್ದಾಣವು ಸ್ಮಶಾನ ಮೌನಕ್ಕೆ ಜಾರುತ್ತದೆ. ನಗರದ ಗದ್ದಲ, ಹಾರ್ನ್ ಸದ್ದು ಯಾವುದೂ ಇಲ್ಲದೆ, ಕೇವಲ ಹಕ್ಕಿಗಳ ಚಿಲಿಪಿಲಿ ಮತ್ತು ಬೆಟ್ಟಗಳ ತಣ್ಣನೆಯ ಗಾಳಿಯನ್ನು ಆಸ್ವಾದಿಸಲು ಈ ವಾಸ್ತವ್ಯಕ್ಕಿಂತ ಉತ್ತಮ ಜಾಗ ಮತ್ತೊಂದಿಲ್ಲ. ಮರುದಿನ ಬೆಳಗ್ಗೆ 7 ಗಂಟೆಯ ಟಾಯ್ ಟ್ರೇನ್ (Toy Train) ಹಿಡಿಯಬೇಕಾದ ಪ್ರವಾಸಿಗರಿಗೆ ಈ ನಿಲ್ದಾಣದ ವಾಸ್ತವ್ಯವು ಸಮಯ ಉಳಿತಾಯದ ಜೊತೆಗೆ ಬೆಳ್ಳಂಬೆಳಗ್ಗಿನ ಅದ್ಭುತ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಹಾಯ ಮಾಡುತ್ತದೆ.

ಇದು 'ಭಾರತದ ಪುಟ್ಟ ಇಂಗ್ಲೆಂಡ್', ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿದೆ

ಬುಕಿಂಗ್ ಮಾಡುವುದು ಹೇಗೆ?

ಈ ಸುಂದರ ಸೌಲಭ್ಯವನ್ನು ಪಡೆಯಲು ಕೆಲವು ನಿಯಮಗಳಿವೆ. ಕೂನೂರಿಗೆ ಬರುವ ಅಥವಾ ಅಲ್ಲಿಂದ ಹೊರಡುವ ಕನ್ಫರ್ಮ್ ಆದ ಟ್ರೇನ್ ಟಿಕೆಟ್ ನಿಮ್ಮ ಬಳಿ ಇರಲೇಬೇಕು. ಬುಕಿಂಗ್ ಸಮಯದಲ್ಲಿ 10-ಅಂಕಿಯ PNR ಸಂಖ್ಯೆ ಕಡ್ಡಾಯ. ಕನಿಷ್ಠ 3 ಗಂಟೆಯಿಂದ ಗರಿಷ್ಠ 48 ಗಂಟೆಗಳವರೆಗೆ ಇಲ್ಲಿ ಉಳಿದುಕೊಳ್ಳಲು ಅವಕಾಶವಿದೆ. ಚೆಕ್-ಇನ್ ಮಾಡುವಾಗ ಆಧಾರ್ ಕಾರ್ಡ್‌ನಂತಹ ಸರ್ಕಾರಿ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು.

ರೈಲ್ವೆ ನಿಲ್ದಾಣದಲ್ಲಿ ಉಳಿಯಲು ಬೆಲೆ ಎಷ್ಟು?

ನೀಲಗಿರಿಯ ದುಬಾರಿ ಹೋಟೆಲ್‌ಗಳಿಗೆ ಹೋಲಿಸಿದರೆ ಇಲ್ಲಿನ ವಾಸ್ತವ್ಯದ ದರ ತೀರಾ ಕಡಿಮೆ. ರೂಮ್‌ಗಳ ದರ್ಜೆಗೆ ಅನುಗುಣವಾಗಿ 12 ಗಂಟೆಗಳಿಗೆ ಸುಮಾರು ₹100 ರಿಂದ ₹800 ಮತ್ತು 24 ಗಂಟೆಗಳಿಗೆ ₹1500 ರವರೆಗೂ ದರವಿರುತ್ತದೆ. ಇನ್ನು ಡಾರ್ಮಿಟರಿ ಬೆಡ್‌ಗಳು ಕೇವಲ ₹50 ರಿಂದ ₹300 ದರದಲ್ಲಿ ಲಭ್ಯವಿವೆ.

 

ನೀಲಗಿರಿ ಟಾಯ್ ಟ್ರೇನ್‌ಗೆ ಅಪಾರ ಬೇಡಿಕೆ ಇರುವುದರಿಂದ, ನೀವು ಪ್ರಯಾಣಕ್ಕೆ ಕನಿಷ್ಠ 1 ರಿಂದ 2 ತಿಂಗಳು ಮುಂಚಿತವಾಗಿ ಟಿಕೆಟ್ ಮತ್ತು ರೂಮ್‌ಗಳನ್ನು ಬುಕ್ ಮಾಡುವುದು ಉತ್ತಮ. ನಿಮ್ಮ ಟ್ರೇನ್ ಟಿಕೆಟ್ ರದ್ದಾದರೆ ರೂಮ್ ಬುಕಿಂಗ್ ಕೂಡ ರದ್ದಾಗುತ್ತದೆ ಎಂಬುದನ್ನು ನೆನಪಿಡಿ. ಪ್ರಕೃತಿಯ ಮಡಿಲಲ್ಲಿ, ಇತಿಹಾಸದ ಸುವಾಸನೆಯೊಂದಿಗೆ ರಾತ್ರಿ ಕಳೆಯಲು ಇಚ್ಛಿಸುವ ಪ್ರವಾಸಿಗರಿಗೆ ಕೂನೂರು ರೈಲ್ವೆ ನಿಲ್ದಾಣದ ಈ ವಾಸ್ತವ್ಯ ಒಂದು ಮರೆಯಲಾಗದ ನೆನಪಾಗಲಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Masan Holi: ಕಾಶಿಯಲ್ಲಿ ನಡೆಯುತ್ತೆ ಚಿತಾ ಭಸ್ಮದ ಹೋಳಿ… ಈ ಸ್ಮಶಾನ ಹೋಳಿಯ ರಹಸ್ಯ ಏನು?
ಇದು 'ಭಾರತದ ಪುಟ್ಟ ಇಂಗ್ಲೆಂಡ್', ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿದೆ