ಕಲಬುರಗಿ ಶಸ್ತ್ರಜ್ಞ ಡಾ. ಶರದ್ ಎಂ ತಂಗಾ, ಬೆಂಗಳೂರಿನ ಡಾ. ಕ್ರಿಸ್ ಲಕ್ಷ್ಮಣ, ಡಾ. ಸತೀಶ, ಅಮೇರಿಕ ಕನ್ನಡಿಗ ಸುರೇಶ ಹೊನ್ನಪ್ಪಗೋಳ, ಹುಬ್ಬಳ್ಳಿಯ ಸ್ಮೃತಿ ಬೆಲ್ಲದ (ಅರವಿಂದ ಬೆಲ್ಲದ ಪತ್ನಿ) ಹಾಗೂ ನಂದಿತಾ ರೆಡ್ಡಿ ಚೀನಾ ಸುತ್ತಿ ಬಂದ ಸಾಹಸಿಗರು. ನಿಧಿ ಎಸ್ ತಂಡದ ನಾಯಕಿ. ಕೋವಿಡ್ ನಂತರ ರಸ್ತೆಗುಂಟ ಪ್ರಯಾಣ ಮಾಡುತ್ತ ಚೀನಾದ ಪ್ರಾದೇಶಿಕ ಗಡಿ ಪ್ರವೇಶಿಸಿದ ಭಾರತ ದೇಶದ ಮೊದಲ ತಂಡವೆಂಬ ಖ್ಯಾತಿ ಇದರದ್ದಾಗಿದೆ.
ಶೇಷಮೂರ್ತಿ ಅವಧಾನಿ
ಕಲಬುರಗಿ(ಸೆ.09): ಕೊರೋನಾ ಕಾಲದಲ್ಲಷ್ಟೇ ಅಲ್ಲ, ಕೊರೋನಾ ನಂತರದಲ್ಲೂ ಚೀನಾ ಸಹವಾಸ ಕಷ್ಟವೆಂಬ ಪರಿಸ್ಥಿತಿ ಇರೋವಾಗ ಕಲಬುರಗಿ, ಹುಬ್ಬಳ್ಳಿ ಹಾಗೂ ಬೆಂಗಳೂರು ಮೂಲದ 6 ಮಂದಿ ಕನ್ನಡಿಗರು ತಾವೇ ವಾಹನ ಚಾಲನೆ ಮಾಡಿಕೊಂಡು ರಸ್ತೆಗುಂಟ ಡ್ರ್ಯಾಗನ್ ದೇಶ ಸುತ್ತಿ ಬಂದು ಸಾಹಸ ಮೆರೆದಿದ್ದಾರೆ.
ಕಲಬುರಗಿ ಶಸ್ತ್ರಜ್ಞ ಡಾ. ಶರದ್ ಎಂ ತಂಗಾ, ಬೆಂಗಳೂರಿನ ಡಾ. ಕ್ರಿಸ್ ಲಕ್ಷ್ಮಣ, ಡಾ. ಸತೀಶ, ಅಮೇರಿಕ ಕನ್ನಡಿಗ ಸುರೇಶ ಹೊನ್ನಪ್ಪಗೋಳ, ಹುಬ್ಬಳ್ಳಿಯ ಸ್ಮೃತಿ ಬೆಲ್ಲದ (ಅರವಿಂದ ಬೆಲ್ಲದ ಪತ್ನಿ) ಹಾಗೂ ನಂದಿತಾ ರೆಡ್ಡಿ ಚೀನಾ ಸುತ್ತಿ ಬಂದ ಸಾಹಸಿಗರು. ನಿಧಿ ಎಸ್ ತಂಡದ ನಾಯಕಿ. ಕೋವಿಡ್ ನಂತರ ರಸ್ತೆಗುಂಟ ಪ್ರಯಾಣ ಮಾಡುತ್ತ ಚೀನಾದ ಪ್ರಾದೇಶಿಕ ಗಡಿ ಪ್ರವೇಶಿಸಿದ ಭಾರತ ದೇಶದ ಮೊದಲ ತಂಡವೆಂಬ ಖ್ಯಾತಿ ಇದರದ್ದಾಗಿದೆ.
ಕಲಬುರಗಿ: ಕಡಿಮೆ ಬೆಲೆಗೆ ಬಂಗಾರ ಮಾರುವುದಾಗಿ ನಂಬಿಸಿ ನಿವೃತ್ತ ಶಿಕ್ಷಕನಿಗೆ ಲಕ್ಷಾಂತರ ರೂ. ವಂಚನೆ
ವಾಂಡರ್ ಬಿಯಾಂಡ್ ಬೌಡರೀಸ್ ಸಂಸ್ಥೆ ಆಯೋಜಿಸಿದ್ದ ಗಡಿಯಾಚೆಗಿನ ಪ್ರಯಾಣ ಆ.2ರಂದು ಮಹಾರಾಷ್ಟ್ರದ ಮುಂಬೈನ ಚರ್ಚ್‌ಗೇಟ್‌ನಿಂದ ಆರಂಭವಾಗಿ ಬರೋಬ್ಬರಿ ಆ. 29 ಕ್ಕೆ ಯಶಸ್ವಿಯಾಗಿ ಬೀಜಿಂಗ್ ತಲುಪಿ ವಾಪಸ್ಸಾಗಿದೆ.
ಮುಂಬೈನಿಂದ ನೇಪಾಳ್, ಟಿಬೆಟ್ ಮೂಲಕ 29 ದಿನಗಳ ಕಾಲ ಸವಾಲಿನ ಚಾಲನೆ ಮಾಡುತ್ತ 8, 000 ಕಿಮೀ ಉದ್ದ ಕ್ರಮಿಸಿ ಬೀಜಿಂಗ್ ತಲುಪಿರುವ ಕನ್ನಡಿಗರು ತಮ್ಮ ಪ್ರಯಾಣದುದ್ದಕ್ಕೂ ಭಾರತೀಯ ವಾಹನ, ಭಾರತೀಯ ಟೈರ್‌ಗಳನ್ನೇ ಬಳಸಿ ಚಾಲನೆ ಮಾಡಿ ಗಮನ ಸೆಳೆದಿದ್ದಾರೆ, ಈ 29 ದಿನಗಳ ಸುದೀರ್ಘ ರೋಡ್ ಟ್ರಿಪ್‌ನ್ನು ಭಾರತೀಯ ತಂತ್ರಜ್ಞರು, ಭಾರತೀಯ ಸಿಬ್ಬಂದಿಯೇ ನಿರೂಪಿಸಿರೋದು ಗಮನಾರ್ಹ.
ಕೋಶ ಓದು- ದೇಶ ಸುತ್ತು
ಕೋಶ ಓದು, ದೇಶ ಸುತ್ತು ಅನ್ನೋ ಗಾದೆಯಂತೆ ರಸ್ತೆಗುಂಟ ಚೀನಾಕ್ಕೆ ಹೋಗಿ ಬರೋದೇ ಸಾಹಗಾಥೆ ಎನ್ನುತ್ತಾರೆ ತಂಡದ ಕಲಬುರಗಿ ವೈದ್ಯ ಡಾ. ಶರದ್ ತಂಗಾ. ಮುಂಬೈ ಚರ್ಚ್‌ಗೇಟ್‌ನ ವೆಸ್ಟರ್ನ್ ಇಂಡಿಯಾ ಆಟೋಮೊಬೈಲ್ ಅಸೋಸಿಯೇಷನ್ ಸಂಸ್ಥೆ ವಾಹನಗಳನ್ನು ವಿದೇಶಕ್ಕೆ ಕೊಂಡೊಯ್ಯಲು ನೀಡುವ ಕಾರ್ನೆಟ್ ಎಂಬ ಪರವಾನಗಿ ಪಡೆದಿತ್ತು.
ಕನ್ನಡಪ್ರಭ ಜೊತೆ ಮಾತನಾಡಿದ ಡಾ. ತಂಗಾ ಭಾರತದಿಂದ ಹೊರಟು, ನೇಪಾಳ್, ಟಿಬೆಟ್‌ನ ಹಿಮಾಚ್ಛಾದಿತ ಕಣಿವೆಗಳು, ಬೆಟ್ಟ ಗುಡ್ಡಗಳ ಮೂಲಕ ಸಾಗುತ್ತ ಡ್ರ್ಯಾಗನ್ ದೇಶ ಚೀನಾ ತಲುಪೋದೇ ಸಾಹಸ. ಇಷ್ಟು ದಿನ ರಸ್ತೆ ಮೇಲಿರೋದು, ವಾಹನ ನಾವೇ ಚಲಾಯಿಸೋದು, ಬೆಟ್ಟ- ಗುಡ್ಡ ಹತ್ತಿ ಇಳಿಯೋದು ಎಲ್ಲವೂ ಸವಾಲಾಗಿದ್ದರೂ ಅವನ್ನೆಲ್ಲ ತಂಡದ ಸ್ಪಿರಿಟ್ ಹಿನ್ನೆಲೆಯಲ್ಲಿ ಯಶಸ್ವಿಯಾಗಿ ನಿಭಾಯಿಸಿರೋದನ್ನ ಹೇಳುತ್ತ ಇಡೀ ಪ್ರವಾಸ ರೋಚಕ, ನೇಪಾಳ, ಟಿಬೆಟ್, ಚೀನಿ ಜನರೊಂದಿಗೆ ಭೇಟಿ, ಮಾತುಕತೆಯೇ ಅವಿಸ್ಮರಣೀಯ ಎಂದರು ತಂಗಾ.
ಎವರೆಸ್ಟ್ ಬೇಸ್ ಕ್ಯಾಂಪ್ ಸವಾಲು!
ಇವರು ಸಾಗಿದ ದಾರಿ ಬೆಟ್ಟ, ಗುಡ್ಡ, ಕಣಿವೆ, ಇಳಿಜಾರುಗಳಿಂದ ಕೂಡಿದ್ದರಿಂದ ಕ್ಷಣಕ್ಷಣಕ್ಕೂ ಸವಾಲುಗಳೇ ಅಲ್ಲಿದ್ದವು. ಡಾ. ತಂಗಾ ಪ್ರಕಾರ ಎವರೆಸ್ಟ್ ಬೇಸ್ ಕ್ಯಾಂಪ್‌ನಿಂದ 16 ಸಾವಿರ ಅಡಿ ಮೇಲೆ ಹತ್ತಿ ಅಷ್ಟೇ ಅಡಿ ಕೆಳಕ್ಕಿಳಿದು ಸಾಗೋದೇ ಮಾನವ ಹಾಗೂ ವಾಹನಗಳೆರಡರ ಆರೋಗ್ಯಕ್ಕೂ ಸವಾಲೊಡ್ಡಿತ್ತಂತೆ. ಮೇಲೆ ಹೋದಂತೆಲ್ಲಾ ಪ್ರಾಣವಾಯು ಕೊರತೆ ಕಾಡಿದರೆ, ಇತ್ತ ವಾಹನ ಅದೆಲ್ಲಿ ಕೈ ಕೊಡುವುದೋ ಎಂಬ ಆತಂಕ, ಇದೆಲ್ಲವನ್ನೂ ನಿಭಾಯಿಸುತ್ತ 16 ಸಾವಿರ ಅಡಿ ಬೆಟ್ಟ ಹತ್ತಿ ಇಳಿದಿದ್ದೇ ರೋಚಕ ಎನ್ನುತ್ತಾರೆ ಡಾ. ತಂಗಾ. ಭಾರತೀಯ ವಾಹನಗಳನ್ನೇ ಬಳಸಿದ್ದಿರಂದ ಇವರಿಗೆ ಟಿಬೆಟ್, ಚೀನಾ ದಾರಿಯಲ್ಲಿ 3 ಕಡೆ ವಾಹನಗಳು ಕೆಟ್ಟುನಿಂತು ಸಮಸ್ಯೆ ಕಾಡಿದಾಗ ಒಮ್ಮೆಯಂತು ಬೀಜಿಂಗ್‌ನಿಂದ ಖಾಟ್ಮಂಡುಗೆ ವಿಮಾನದಲ್ಲಿ ಹೋಗಿಬಂದು ವಾಹನದ ಬಿಡಿಭಾಗ ತಂದದ್ದು ಎಂದೂ ಮರೆಯದ ಪ್ರಸಂಗ ಎಂದರು.
ಚೀನಾಕ್ಕೆ ಮನಸೋತ ಕನ್ನಡಿಗರು
ರಸ್ತೆಗುಂಟ ಹೋಗಿ ಚೀನಾ ಸುತ್ತಾಡಿದವರು ಅಲ್ಲಿನ ಶಿಸ್ತು, ಜನರ ನಡಾವಳಿ, ಪರಿಸರ, ಸಮಯಪ್ರಜ್ಞೆ, ಸ್ವಚ್ಛತೆ, ಮೂಲ ಸವಲತ್ತು ಇತ್ಯಾದಿ ಕ್ಷೇತ್ರಗಳಲ್ಲಿನ ಸಾಧನೆ ಕಂಡು ಬೆರಗಾಗಿದ್ದಾರೆ. ಚೀನಾದಲ್ಲಿ ನಿತ್ಯ ರಾಷ್ಟ್ರಗೀತೆಯೊಂದಿಗೆ ಸರಕಾರಿ ಕಚೇರಿಗಳ ಆರಂಭವಾಗೋದು, ಕಚೇರಿಯಲ್ಲಿನ ಸಮಯ ಪಾಲನೆ, ವಿನಾಕಾರಣ ಕಾಲಹರಣ ಮಾಡದೆ ಜನರ ಕೆಲಸ ಬೇಗ ಮಾಡಿ ಮುಗಿಸುವ ಚಾಕಚಕ್ಯತೆ, ಚೀನಿಯರ ನಾಗರಿಕ ಪ್ರಜ್ಞೆ, ಜನಾರೋಗ್ಯ ಸಂರಕ್ಷಣೆಯ ಯೋಜನೆಗಳ ಅನುಷ್ಠಾನಕ್ಕೆ ಇಡೀ ತಂಡ ಫಿದಾ ಆಯಿತೆಂದು ಡಾ. ತಂಗಾ ಹೇಳುತ್ತಾರೆ.
ಕಲಬುರಗಿ: ಕೆಲಸದಿಂದ ತೆಗೆದು ಹಾಕಲು ಯತ್ನ, ಆತ್ಮಹತ್ಯೆಗೆ ದಿವ್ಯಾಂಗ ವ್ಯಕ್ತಿ ಪ್ರಯತ್ನ
ಖಾಟ್ಮಂಡು ಬಿಡೋವರೆಗೂ ಈ ತಂಡದ ಚೀನಾ ವೀಸಾ ಆಗಿರಲಿಲ್ಲ. ಅಷ್ಟೊತ್ತಿಗಾಗಲೇ ಚೀನಾ ಗಡಿಗೆ ಬಂದೇ ಬಿಟ್ಟಿತ್ತು ತಂಡ. ತಕ್ಷಣ ಚೀನಿಯರಿಗೆ ವಿಷಯ ವಿವಿರಿಸಿದಾಗ ತಂಡದ ಸಾಹಸ ಪ್ರಜ್ಞೆ ಕೊಂಡಾಡಿದ ಚೀನಿ ಅಧಿಕಾರಿಗಳು ಇಡೀ ತಂಡಕ್ಕೇ ಗ್ರುಪ್ ವೀಸಾ ಮಾಡಿಸಿಕೊಟ್ಟರಲ್ಲದೆ ಚೀನಾದಲ್ಲಿಯೂ ಎಲ್ಲೇ ಅಗತ್ಯಬಿದ್ದರೂ ಕೂಡಾ ನೆರವಿನ ಹಸ್ತ ಚಾಚಿದ್ದರು. ಚೀನಿಯರ ಈ ನಡಾವಳಿ ತಂಡದ ಗಮನ ಸೆಳೆಯಿತು. ಸೈಕಲ್ ಬಳಕೆದಾರರು, ಪಾದಚಾರಿಗಳಿಗೆ ಅಲ್ಲಿ ಆದ್ಯತೆ ಎಂದರು ತಂಗಾ.
ಪಬ್ಲಿಕ್ ಯುರಿನಲ್ಸ್‌ಗಳಲ್ಲಿ ಸಾಮೂಹಿಕ ಯೂರೀನ್ ಸ್ಕ್ರೀನಿಂಗ್ ಚೀನಿಯರು ಅಳವಡಿಸಿದ್ದು ಕಂಡು ಬೆರಗಾದೆ. ಚೀನಿಯರು ಜನರ ಆರೋಗ್ಯ ರಕ್ಷಣೆಗಾಗಿ ಅಳವಡಿಸಿದ ಕ್ರಮಗಳಿಗೆ ದಂಗಾದೆ. ಸ್ಟೇಜ್1, ಸ್ಟೇಜ್2, ಸ್ಟೇಜ್ 3 ಎಂದು ಆಸ್ಪತ್ರೆಗಳಿವೆ. ಮಾಸ್ಕ್ ಅಲ್ಲಲ್ಲಿ ಗೋಚರಿಸಿದ್ದು ಬಿಟ್ರೆ ಕೋರೋನಾ ಕಾಲದ ನೋಟಗಳು ಅಲ್ಲೀಗ ಅಗೋಚರ. ಚೀನಿಯರಿಗೆ ಅವರ ಭಾಷೆ ಹೊರತುಪಡಿಸಿದ್ರೆ ಅನ್ಯ ಭಾಷೆಗಳೇ ಗೊತ್ತಿಲ್ಲ. ನಾಗರಿಕ ಪ್ರಜ್ಞೆ, ಸರ್ಕಾರಿ ಕಚೇರಿಯಲ್ಲಿನ ಸಿಬ್ಬಂದಿ ಕಾರ್ಯವೈಖರಿಯಂತಹ ಹಲವು ರಂಗಗಳಲ್ಲಿ ಚೀನಾದಿಂದ ಭಾರತೀಯರು ಕಲಿಯೋದು ಸಾಕಷ್ಟಿದೆ ಎಂದು ಕಲಬುರಗಿ (ಭಾರತ ಟು ಚೀನಾ ರೋಡ್‌ಟ್ರಿಪ್‌ನ ಸದಸ್ಯ) ಶಸ್ತ್ರ ತಜ್ಞ ಡಾ. ಶರದ್ ತಂಗಾ ತಿಳಿಸಿದ್ದಾರೆ.