ಕಾಡು- ಮೇಡು ದಾಟಿ, ಕಡಿದಾದ ಬೆಟ್ಟಹತ್ತಿ ಇಳಿದು ಪ್ರಗತಿ ಶೆಟ್ಟಿ ಪೂಜಿಸಿದ ಈ ಶಿವಲಿಂಗ ಎಲ್ಲಿದೆ ಗೊತ್ತಾ?

Published : Feb 26, 2025, 06:05 PM ISTUpdated : Feb 26, 2025, 07:04 PM IST
ಕಾಡು- ಮೇಡು ದಾಟಿ, ಕಡಿದಾದ ಬೆಟ್ಟಹತ್ತಿ ಇಳಿದು ಪ್ರಗತಿ ಶೆಟ್ಟಿ ಪೂಜಿಸಿದ ಈ ಶಿವಲಿಂಗ ಎಲ್ಲಿದೆ ಗೊತ್ತಾ?

ಸಾರಾಂಶ

ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಮಹಾಶಿವರಾತ್ರಿಯಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಉಚ್ಚಂಗಿ-ಹೇರೂರು ಗ್ರಾಮದಲ್ಲಿರುವ ಗವಿಬೆಟ್ಟದ ಶಿವಲಿಂಗ ದರ್ಶನ ಮಾಡಿದ್ದಾರೆ. ಪಶ್ಚಿಮ ಘಟ್ಟಗಳ ನಡುವೆ ಇರುವ ಈ ಬೆಟ್ಟವು ಪುರಾಣ ಪ್ರಸಿದ್ಧವಾಗಿದ್ದು, ಋಷಿಮುನಿಗಳು ತಪಸ್ಸು ಮಾಡಿದ ಸ್ಥಳವೆಂದು ನಂಬಲಾಗಿದೆ. 

ಕನ್ನಡದ ಜನಪ್ರಿಯ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಇಂದು ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಒಂದು ಸುಂದರವಾದ ತಾಣದ ದರ್ಶನ ಮಾಡಿಸಿದ್ದಾರೆ. ಪ್ರಗತಿ ಶೆಟ್ಟಿ ಕಾಡು-ಮೇಡು ದಾಟಿ, ಕಡಿದಾದ ಬೆಟ್ಟ ಹತ್ತಿ ಇಳಿದು ಶಿವಲಿಂಗ ದರ್ಶನ ಮಾಡಿದ್ದು, ಕಾನನದ ಮಧ್ಯೆ ನೀರವ ಮೌನದಲ್ಲಿ ಕುಳಿತಿರುವ ಈ ತಾಣ ಎಲ್ಲಿದೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ನಿಮಗಾಗಿ ಇಲ್ಲಿದೆ ಆ ತಾಣದ ಕುರಿತು ಸಂಪೂರ್ಣ ಮಾಹಿತಿ. 

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ - ಪ್ರಗತಿ ಆನಿವರ್ಸರಿ ಸೆಲೆಬ್ರೇಶನ್ ಹೇಗಿತ್ತು ನೋಡಿ…

ಪ್ರಗತಿ ಶೆಟ್ಟಿ ಭೇಟಿ ನೀಡಿರುವ ಈ ತಾಣದ ಹೆಸರು ಗವಿಬೆಟ್ಟ (Gavi Betta). ಇಲ್ಲಿಯೇ ಕಾಂತಾರ ಚಾಪ್ಟರ್ 1 ಶೂಟಿಂಗ್ ಕೂಡ ನಡೆಯುತ್ತಿತ್ತು. ಇಲ್ಲಿ ಕಾಂತಾರ ತಂಡ ನಿಯಮ ಉಲ್ಲಂಘನೆ ಮಾಡಿ, ಸಿಡೀಮದ್ದುಗಳನ್ನು ಬಳಸಿತ್ತು ಎನ್ನುವ ಆರೋಪವೂ ಕೇಳಿ ಬಂದಿತ್ತು. ಇದೀಗ ಅದೇ ತಾಣದಲ್ಲಿ ಇರುವ ಗವಿಬೆಟ್ಟದಲ್ಲಿರುವ ಶಿವಲಿಂಗ ದರ್ಶನ ಮಾಡಿ ಬಂದಿದ್ದಾರೆ ಪ್ರಗತಿ ಶೆಟ್ಟಿ. ಕಾನನದ ಮಧ್ಯೆ ಅಡಗಿರುವ ಈ ತಾಣ ಇರೋದು ಹಾಸನ ಜಿಲ್ಲೆಯ ಸಕಲೇಶಪುರ (Sakleshpur) ತಾಲೂಕಿನ ಉಚ್ಚಂಗಿ-ಹೇರೂರು ಗ್ರಾಮದಲ್ಲಿ. ಶನಿವಾರ ಸಂತೆಯಿಂದ 14 ಕಿ.ಮೀ,  ಸಕಲೇಶಪುರದಿಂದ 45 ಕಿ.ಮೀ, ಹಾಸನದಿಂದ 60 ಕಿ.ಮೀ, ಕುಶಾಲನಗರದಿಂದ 49 ಕಿ.ಮೀ. ದೂರದಲ್ಲಿದೆ ಈ ಸುಂದರವಾದ ಹಾಗೂ ದೈವೀಕವಾದ ತಾಣ .ಈ ತಾಣ ಅಂತಿಂಥ ತಾಣ ಅಲ್ಲ, ಇಲ್ಲಿಗೆ ಸಂಬಂಧ ಪಟ್ಟಂತಹ ಪುರಾಣ ಕಥೆಗಳು ಸಹ ಇವೆ. 

ಪಶ್ಚಿಮಘಟ್ಟಗಳ (western ghats) ಸಾಲಿನಲ್ಲಿರುವ ಪುಷ್ಪಗಿರಿ, ಬಿಸಿಲೆ ಹಾಗೂ ಚಾರ್ಮುಡಿ ಬೆಟ್ಟಗಳ ಸಾಲಿನಲ್ಲಿ ಈ  ಹೇರೂರು ಗವಿ ಬೆಟ್ಟ ಮಧ್ಯದಲ್ಲಿ ನಿಂತಿದೆ, ಈ ಬೆಟ್ಟ ಸುಮಾರು 6 ಕಿ.ಮೀ. ಸುತ್ತ ಕೋಟೆಯಂತೆ ಆವರಿಸಿಕೊಂಡಿದ್ದು, ಪ್ರಕೃತಿ ಸೌಂದರ್ಯಕ್ಕೆ ಹೇಳಿ ಮಾಡಿಸಿದ ತಾಣ ಇದಾಗಿದೆ. ಪುರಾಣಗಳ ಪ್ರಕಾರ ಈ ಬೆಟ್ಟಗಳಲ್ಲಿ ಹಿಂದೆ ಋಷಿ ಮುನಿಗಳು ಬಂದು ತಪಸ್ಸು ಮಾಡುತ್ತಿದ್ದರಂತೆ, ಗುಹೆಯಂತಹ ಜಾಗದಲ್ಲಿ ಋಷಿ ಮುನಿಗಳು ತಪಸ್ಸು ಮಾಡಿದುದರಿಂದ ಈ ಬೆಟ್ಟಕ್ಕೆ ಗವಿ ಬೆಟ್ಟ ಎನ್ನುವ ಹೆಸರು ಬಂದಿದೆ. ಈ ಬೆಟ್ಟ ಸಮುದ್ರ ಮಟ್ಟದಿಂದ ಬರೋಬರಿ 6 ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಬೆಟ್ಟದ ಮಧ್ಯದಲ್ಲಿರುವ ಶಿವಲಿಂಗ ದರ್ಶನ ಪಡೆಯಬೇಕಾದರೆ, ನೀವು ಕಡಿದಾದ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿದು, ತೆವಳಿಕೊಂಡು, ಕಡು ಕತ್ತಲೆಯ ಹಾದಿಯಲ್ಲಿ ಟಾರ್ಚ್ ಬೆಳಕು ಹಿಡಿದೇ ಸಾಗಬೇಕು. 

9 ವರ್ಷಗಳ ಹಿಂದೆ ಅಪರಿಚಿತರಾಗಿ ಭೇಟಿ… ಈಗ ನನ್ನ ಎಲ್ಲವೂ ನೀವು… ಎಂದ ರಿಷಭ್ ಶೆಟ್ಟಿ ಪತ್ನಿ

ಗವಿಬೆಟ್ಟ ಅನೇಕ ವೈಶಿಷ್ಟ್ಯತೆಗಳಿಂದ ಕೂಡಿರುವ ದೈವಿಕ ಶಕ್ತಿ ಇರುವಂತಹ ತಾಣವಾಗಿದೆ. ಪ್ರಕೃತಿಯ ಮಧ್ಯೆ ಇರೋದರಿಂದ ಈ ತಾಣ ಯಾವಾಗಲೂ ತಂಪಾಗಿಯೇ ಇರುತ್ತೆ. ಬೆಟ್ಟದಲ್ಲಿ ನಿಂತು ಎತ್ತ ನೋಡಿದರೂ ಸಹ ಪಶ್ಚಿಮ ಘಟ್ಟಗಳ ಹಚ್ಚ ಹಸುರಿನ ತಾಣಗಳೇ ಕಾಣ ಸಿಗುತ್ತೆ. ಈ ಬೆಟ್ಟ ಕೋಟೆಯಂತೆ ಎದ್ದು ನಿಂತಿದೆ, ಇದರ ಸುತ್ತಲೂ ಸಾವಿರಾರು ಅಡಿ ಆಳದ ಪ್ರಪಾತಗಳೂ ಇವೆ. ಎಚ್ಚರ ತಪ್ಪಿದರೆ, ಅಪಾಯ ಖಂಡಿತಾ. ಜೊತೆಗೆ ಇಲ್ಲಿ ಸಣ್ಣದ್ದಾದ ಝರಿಗಳೂ ಇವೆ. ಒಟ್ಟಲ್ಲಿ ಈ ತಾಣ ಚಾರಣ ಪ್ರಿಯರಿಗೆ ಅದ್ಭುತವಾದ ತಾಣ ಅಂದ್ರೆ ತಪ್ಪಾಗಲ್ಲ. 

ಈ ಗವಿಬೆಟ್ಟದ (cave hill) ಹೆಬ್ಬಾಗಿಲು ವಿ ಪಾಯಿಂಟ್ ನಲ್ಲಿದ್ದು, ಬೆಟ್ಟದ ಮಧ್ಯದಲ್ಲಿ ಒಂದು 10 ಅಡಿ ಅಗಲದ ಮತ್ತೊಂದು 20 ಅಡಿ ಅಗಲದ ಎರಡು ಗುಹೆಗಳಿವೆ. ಇಲ್ಲಿಗೆ ಪ್ರವೇಶಿಸಬೇಕಾದರೆ ತೆವಳಿಕೊಂಡೇ ಹೋಗಬೇಕಾಗುತ್ತೆ. ಗುಹೆಯಲ್ಲಿ ಶಿವಲಿಂಗ ಒಂದನ್ನು ಸ್ಥಳೀಯರು ಸ್ಥಾಪಿಸಿದ್ದು, ಇದಕ್ಕೆ ನಿತ್ಯ ಪೂಜೆ ಅರ್ಚನೆಗಳೂ ಸಹ ನಡೆಯುತ್ತೆ. ಈ ಗವಿಯ ಕೆಳಭಾಗದಲ್ಲೊಂದು ಪುಟ್ಟ ಕೆರೆಯೂ ಇದೆ, ಇದನ್ನು ಉದ್ಭವ ತೀರ್ಥ ಎಂದು ಕರೆಯಲಾಗುತ್ತದೆ. ಈ ನೀರು ಸದಾ ತುಂಬಾನೆ ತಂಪಾಗಿರುತ್ತೆ. ಇದನ್ನೆ ತೀರ್ಥವನ್ನಾಗಿ ಇಲ್ಲಿ ಬಳಕೆ ಮಾಡಲಾಗುತ್ತದೆ. ಇನ್ನು ಈ ತಾಣದ ಸುತ್ತಲೂ ಕಾಡು ಪ್ರಾಣಿಗಳು ಸಹ ಇವೆ ಎನ್ನಲಾಗುತ್ತೆ, ಕಾಡಾನೆಗಳು, ಕಾಡು ಕೋಣಗಳು, ವಿಷ ಸರ್ಪಗಳು ಇಲ್ಲಿವೆ ಎನ್ನಲಾಗುತ್ತಿದ್ದು, ಈ ತಾಣಕ್ಕೆ ಚಾರಕ್ಕೆ ಹೋಗುವವರಾದರೆ ಹುಷಾರಾಗಿರಬೇಕು. ಇನ್ನು ಇಲ್ಲಿ ಜಿಗಣೆ ಕಾಟ ಕೂಡ ಹೆಚ್ಚಾಗಿರೋದರಿಂದ ಮಳೆಗಾಲದಲ್ಲಿ ಇಲ್ಲಿಗೆ ತೆರಳದೇ ಇರೋದು ಉತ್ತಮ. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Indian Railways: ಗುಟ್ಕಾ ಪ್ರಿಯರಿಗಾಗಿ ವರ್ಷಕ್ಕೆ 1,200 ಕೋಟಿ ರೂ. ಖರ್ಚು ಮಾಡ್ತಿರೋ ರೈಲ್ವೆ ಇಲಾಖೆ!
ಚೀನಾದಲ್ಲಿ ಡ್ರೋನ್​ ಹಾರಿಸಲು ಹೋಗಿ ಚೀನಿ ಬೆಡಗಿ ಜೊತೆ Bigg Boss ಪ್ರತಾಪನ ಡ್ಯುಯೆಟ್​!