ಹಾರುವ ವಿಮಾನದಲ್ಲಿ ಹುಟ್ಟಿದ್ರೂ ಚಿಂತೆ: ಆಕಾಶದಲ್ಲಿ ಜನಿಸಿದ ಮಗು ಫಾಂಟಾ ಫೋಟೋ ವೈರಲ್

Published : Feb 25, 2025, 01:10 PM ISTUpdated : Feb 25, 2025, 02:40 PM IST
ಹಾರುವ ವಿಮಾನದಲ್ಲಿ ಹುಟ್ಟಿದ್ರೂ ಚಿಂತೆ: ಆಕಾಶದಲ್ಲಿ ಜನಿಸಿದ ಮಗು ಫಾಂಟಾ ಫೋಟೋ ವೈರಲ್

ಸಾರಾಂಶ

ಗರ್ಭಿಣಿ ಮಹಿಳೆಯೊಬ್ಬರು ಹಾರುತ್ತಿದ್ದ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ್ದು, ಆಕಾಶದಲ್ಲಿ ಜನಿಸಿದ ಮಗು ಫಾಂಟಾ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗರ್ಭಿಣಿ ಮಹಿಳೆಯೊಬ್ಬರು ಹಾರುತ್ತಿದ್ದ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ್ದು, ಆಕಾಶದಲ್ಲಿ ಜನಿಸಿದ ಮಗು ಫಾಂಟಾ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಫ್ರಿಕಾದ ಡಕರ್‌ನಿಂದ ಹೊರಟಿದ್ದ ಬ್ರುಸೆಲ್ಸ್ ಏರ್‌ಲೈನ್ಸ್‌ನ ವಿಮಾನದಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ವಿಮಾನದ ಸಿಬ್ಬಂದಿ ವಿಮಾನದ ಕ್ಯಾಪ್ಟನ್‌ಗೆ ವಿಚಾರ ತಿಳಿಸಿದ್ದಾರೆ. ಹೀಗಾಗಿ ಪೈಲಟ್‌ ವಿಮಾನವನ್ನು ವಾಪಸ್‌ ಡಕರ್‌ಗೆ ತಿರುಗಿಸಲು ನಿರ್ಧರಿಸಿದ್ದಾರೆ. ಆದರೆ ವಿಮಾನವನ್ನು ಮತ್ತೆ ಡಕರ್‌ನತ್ತ ತಿರುಗಿಸುತ್ತಿದಂತೆಯೇ ಮಗು ಆಕಾಶದಲ್ಲಿ ವಿಮಾನ ಹಾರುತ್ತಿದ್ದಾಗಲೇ ತಾಯಿ ಗರ್ಭದಿಂದ ಹೊರಗೆ ಬಂದಿದೆ. ಈ  ಅಪರೂಪದ ಘಟನೆಗೆ ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಸಾಕ್ಷಿಯಾಗಿದ್ದಾರೆ. ವಿಮಾನದ ಕ್ಯಾಬಿನ್‌ನಲ್ಲಿ ಮೊದಲಿಗೆ ಮಗು ಉಸಿರಾಡುತ್ತಿದೆಯೇ ಎಂದು ಚಿಂತೆಗೀಡಾದವರಿಗೆ ಮಗುವಿನ ಮೊದಲ ಅಳು ಮಧುರವಾದ ಸದ್ದಿನಂತೆ ಕೇಳಿಸಿದೆ. 

ಡಕರ್‌ನಿಂದ ಈ ವಿಮಾನ ಬ್ರುಸೆಲ್‌ಗೆ ಹೊರಟಿತ್ತು. ಹೀಗೆ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿಯನ್ನು ಎಂಡೇಯ್ ಎಂದು ಗುರುತಿಸಲಾಗಿದೆ. ಮಧ್ಯ ಆಗಸದಲ್ಲಿ ವಿಮಾನ ಸಂಚರಿಸುತ್ತಿದ್ದಾಗ ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ ಕ್ಯಾಬಿನ್ ಸಿಬ್ಬಂದಿ ಹಾಗೂ ಅದೇ ವಿಮಾನದಲ್ಲಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಇಬ್ಬರು ತಾಯಿ ಮಗುವಿಗೆ ಸಂಬಂಧಿಸಿದ ವೃತ್ತಿ ನಿರ್ವಹಿಸುತ್ತಿದ್ದ ಇಬ್ಬರು ಈ ತಾಯಿಗೆ ಸುಲಭವಾಗಿ ಹೆರಿಗೆಯಾಗಲು ಸಹಾಯ ಮಾಡಿದ್ದಾರೆ. 

ಈ ವಿಚಾರವನ್ನು ಬ್ರುಸೆಲ್ಸ್ ವಿಮಾನ ಯಾನ ಸಂಸ್ಥೆ ತನ್ನ ಸೋಶಿಯಲ್ ಮೀಡಿಯಾ ಲಿಂಕ್ಡಿನ್‌ನಲ್ಲಿ ಪೋಸ್ಟ್ ಮಾಡಿದ್ದು,  ಅದರಲ್ಲಿ ವಿಮಾನದ ಗಗನಸಖಿಯೊಬ್ಬರು ಮಗುವನ್ನು ತಮ್ಮ ತೋಳುಗಳಲ್ಲಿ ಎತ್ತಿಕೊಂಡು ಇರುವ ಫೋಟೋ ಕೂಡ ಇದೆ. 'ಡಾಕರ್‌ನಲ್ಲಿ ಇಳಿಯುವಾಗ ಮಗು ಫ್ಯಾಂಟಾಳನ್ನು ತನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡಿದ್ದನ್ನು ಗಗನಸಖಿ ಜೆನ್ನಿಫರ್ ಎಂದಿಗೂ ಮರೆಯುವುದಿಲ್ಲ. ಈ ರೀತಿಯ ಕಥೆಗಳಿಂದಾಗಿ ಕ್ಯಾಬಿನ್ ಸಿಬ್ಬಂದಿಯಾಗಿರುವುದು ಕೇವಲ ವಿಮಾನದಲ್ಲಿ ಹಾರಾಟಕ್ಕಿಂತ ಹೆಚ್ಚಿನದಾಗಿದೆ . ಇದು ಯಾವುದೇ ಪರಿಸ್ಥಿತಿಯಲ್ಲಿರುವ ಜನರನ್ನು ಚೆನ್ನಾಗಿ ನೋಡಿಕೊಳ್ಳುವ ರೀತಿಯ ಬಗ್ಗೆ ನಮಗೆ ನೆನಪಿಸುತ್ತದೆ' ಬ್ರುಸೆಲ್ಸ್ ಏರ್‌ಲೈನ್ಸ್ ತನ್ನ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.

ವಿಮಾನದ ಸಿಬ್ಬಂದಿ ಹೆರಿಗೆ ನೋವಿನಿಂದ ಕಷ್ಟಪಡುತ್ತಿದ್ದ ನ್ಡೇಯ್‌ಗೆ ಉಸಿರಾಟದ ವ್ಯಾಯಾಮಗಳನ್ನು ಮಾಡಿ ಸಾಂತ್ವನ ಹೇಳಿದರು ಎಂದು ತಿಳಿದು ಬಂದಿದೆ. ಇದರ ಜೊತೆಗೆ ವೈದ್ಯಕೀಯ ಹಿನ್ನೆಲೆ ಹೊಂದಿರುವ ಇಬ್ಬರು ಪ್ರಯಾಣಿಕರು (ವೈದ್ಯರು ಮತ್ತು ನರ್ಸ್) ಗರ್ಭಿಣಿ ಮಹಿಳೆಯ ಹೆರಿಗೆಯಲ್ಲಿ ವಿಮಾನ ಸಿಬ್ಬಂದಿಗೆ ಸಹಾಯ ಮಾಡಿದರು. ಅವರು ಕ್ಯಾಬಿನ್ ಅನ್ನು ತಾತ್ಕಾಲಿಕ ಹೆರಿಗೆ ವಾರ್ಡ್ ಆಗಿ ಪರಿವರ್ತಿಸಿದರು.

ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ವಿಮಾನಯಾನ ಸಂಸ್ಥೆ ತಿಳಿಸಿರುವಂತೆ, 'ವಿಚಾರ ತಿಳಿದು ಕಾಕ್‌ಪಿಟ್‌ಗೆ ಮಾಹಿತಿ ನೀಡಲಾಯಿತು ಮತ್ತು ಪೈಲಟ್‌ಗಳು ಡಾಕರ್‌ಗೆ ಹಿಂತಿರುಗುವ ನಿರ್ಧಾರವನ್ನು ತೆಗೆದುಕೊಂಡರು. ಆದರೆ ಮಗುವಿನ ಯೋಜನೆ ಬೇರೆಯಾಗಿತ್ತು. ವಿಮಾನ ಮಾರ್ಗ ಬದಲಿಸುತ್ತಿದ್ದಂತೆ, ಪುಟ್ಟ ಮಗು ಹಾರಾಟದ ಮಧ್ಯದಲ್ಲಿಯೇ ಹೊರಗೆ ಬಂತು. ಮಗು ಜನಿಸಿದ ಮೊದಲ ಕ್ಷಣಗಳು ಗೊಂದಲದಿಂದ ಕೂಡಿದ್ದವು. ಆಕೆ ಚೆನ್ನಾಗಿದ್ದಾಳಾ? ಉಸಿರಾಡುತ್ತಿದ್ದಾಳಾ? ಎಂಬ ಆತಂಕವಿತ್ತು. ಆದರೆ ಆಕೆಯ ಮೊದಲ ಅಳುವಿನೊಂದಿಗೆ  ಅದೆಲ್ಲಾ ಗೊಂದಲ ನಿವಾರಣೆಯಾಯ್ತು. ಅವಳ ಮೊದಲ ಅಳುವಿನಿಂದ ವಿಮಾನದಲ್ಲಿದ್ದ ವೈದ್ಯರು ಅವಳು ಆರೋಗ್ಯವಾಗಿದ್ದಾಳೆಂದು ದೃಢಪಡಿಸಿದರು ಮತ್ತು ಎಲ್ಲರನ್ನೂ ಸಮಾಧಾನಪಡಿಸಿದರು' ಎಂದು ಬರೆದುಕೊಂಡಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!