ವಿದೇಶದಲ್ಲಿ ಪ್ರಯಾಣಿಸುವಾಗ ಅಲ್ಲಿಯ ನಿಯಮ ಮತ್ತು ಕಾನೂನುಗಳನ್ನು ಪಾಲನೆ ಮಾಡೋದರ ಜೊತೆಗೆ ಗೌರವಿಸಬೇಕು. ಫ್ಲೈಯಿಂಗ್ ಪಾಸ್‌ಪೋರ್ಟ್ ಕಪಲ್ ಆಶಾ -ಕಿರಣ್ ನಿಯಮ ಉಲ್ಲಂಘನೆಗೆ ಭಾರೀ ಮೊತ್ತದ ದಂಡ ಪಾವತಿಸಿದ್ದಾರೆ.
ಬೆಂಗಳೂರು: ಪ್ರವಾಸಿ ದಂಪತಿ ಆಶಾ ಮತ್ತು ಕಿರಣ್ ವಿದೇಶದಲ್ಲಿ 58 ಸಾವಿರ ರೂಪಾಯಿ ದಂಡ ಪಾವತಿಸಿ, ಅಲ್ಲಿಯ ಪೊಲೀಸರ ಬಳಿ ಕ್ಷಮೆ ಕೇಳಿದ್ದಾರೆ. ಆಶಾ ಮತ್ತು ಕಿರಣ್ ವಿದೇಶ ಪ್ರವಾಸದಲ್ಲಿರುವ ದಂಪತಿ. ಫ್ಲೈಯಿಂಗ್ ಪಾಸ್‌ಪೋರ್ಟ್ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆ ಹೊಂದಿರುವ ಆಶಾ ಮತ್ತು ಕಿರಣ್ ಪ್ರವಾಸದ ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ವಿಡಿಯೋ ಜೊತೆಯಲ್ಲಿ ತಾವು ಭೇಟಿ ನೀಡಿರುವ ಸ್ಥಳದ ಪರಿಚಯವನ್ನು ಆಶಾ-ಕಿರಣ್ ಮಾಡಿಕೊಡಿರುತ್ತಾರೆ. ತಾವು ಭೇಟಿ ನೀಡುವ ಪ್ರತಿ ದೇಶದಲ್ಲಿ ಕನ್ನಡದ ಬಾವುಟ ಹಾರಿಸುವ ಮೂಲಕ ಕನ್ನಡಾಭಿಮಾನವನ್ನು ಮರೆಯುತ್ತಿರುತ್ತಾರೆ. ಸುಮಾರು 200ಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಿರುವ ಆಶಾ ಮತ್ತು ಕಿರಣ್ ಪ್ರವಾಸದ ಪ್ರತಿಯೊಂದು ಕ್ಷಣವನ್ನು ಮುಚ್ಚುಮರೆ ಇಲ್ಲದೇ ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ವಿಮಾನ ನಿಲ್ದಾಣದಲ್ಲಿಯೇ ನಿದ್ದೆ ಮಾಡಿರುವ ವಿಡಿಯೋಗಳನ್ನ ಶೇರ್ ಮಾಡಿಕೊಂಡಿದ್ದರು.
ಇನ್ನು ವಿಶೇಷ ಅಂದ್ರೆ ಆಶಾ ಮತ್ತು ಕಿರಣ್, ಭೇಟಿ ನೀಡುವ ದೇಶದ ಪ್ರವಾಸಿ ತಾಣಗಳ ಜೊತೆಯಲ್ಲಿ ಅಲ್ಲಿಯ ಗ್ರಾಮೀಣ ಬದುಕನ್ನು ಅನಾವರಣಗೊಳಿಸುತ್ತಿರುತ್ತಾರೆ. ಪುಟ್ಟ ಪುಟ್ಟ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಜನರನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಈ ಮೂಲಕ ಕನ್ನಡಿಗರಿಗೆ ವಿದೇಶದ ಮೂಲೆ ಮೂಲೆಯನ್ನು ತೋರಿಸುತ್ತಾರೆ. ಇದೆಲ್ಲದರ ಜೊತೆಯಲ್ಲಿ ಅಲ್ಲಿಯ ಕಾನೂನುಗಳನ್ನು ತಿಳಿಸುತ್ತಿರುತ್ತಾರೆ. ಇದೀಗ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಆಶಾ ಮತ್ತು ಕಿರಣ್ 58 ಸಾವಿರ ರೂಪಾಯಿ ದಂಡ ಪಾವತಿಸಿದ್ದಾರೆ.
ಆಗಸ್ಟ್ ಮೊದಲ ವಾರದಿಂದ ಆಶಾ ಮತ್ತು ಕಿರಣ್ ಐಸ್ಲ್ಯಾಂಡ್‌ಗೆ ಭೇಟಿ ನೀಡಿರುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಐಸ್ಲ್ಯಾಂಡ್‌ನಲ್ಲಿ ಬಾಡಿಗೆ ಕಾರ್ ಪಡೆದುಕೊಂಡು ಕಿರಣ್ ಚಲಾಯಿಸುತ್ತಿದ್ದರು. ನಿಗಧಿತ ಮಿತಿಗಿಂತ ವೇಗವಾಗಿ ವಾಹನ ಚಲಾಯಿಸಿದ್ದರಿಂದ ಪೊಲೀಸರು ಕಾರ್ ನಿಲ್ಲಿಸಿದ್ದಾರೆ. ಐಸ್ಲ್ಯಾಂಡ್‌ನಲ್ಲಿ ಗರಿಷ್ಠ 90 ಕಿಮೀ ವೇಗದಲ್ಲಿ ಮಾತ್ರ ವಾಹನ ಚಲಾಯಿಸಬೇಕು. ಆದ್ರೆ ಕಿರಣ್ ಗಂಟೆಗೆ 105 ರಿಂದ 110 ಕಿಮೀ ವೇಗದಲ್ಲಿ ಕಾರ್ ಚಾಲನೆ ಮಾಡುತ್ತಿದ್ದರು. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ಪಾವತಿಸಿ, ಪೊಲೀಸರ ಬಳಿ ಕ್ಷಮೆಯಾಚಿಸಿ ಅಲ್ಲಿಯ ಕಾನೂನಿಗೆ ಗೌರವ ಸಲ್ಲಿಸಿದ್ದಾರೆ.
ಗಮನಿಸಿ ನೋಡಿ, ಇವರು ಯಾರು ಅಂತ ಗೊತ್ತಾಯ್ತಾ? ಫೇಮಸ್ ಜೋಡಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ
ನಾನೇನು 10 ಸಾವಿರ ರೂಪಾಯಿ ಇರಬೇಕು ಅನ್ಕೊಂಡಿದ್ದೆ. ಇಷ್ಟು ದೊಡ್ಡಮೊತ್ತದ ದಂಡ ಅಂತ ಗೊತ್ತಿರಲಿಲ್ಲ ಎಂದು ಆಶಾ ಹೇಳುತ್ತಾರೆ. ಈ ಜಾಗದಲ್ಲಿಯೂ ಪೊಲೀಸರು ಇರುತ್ತಾರೆ ಎಂದು ನಾನು ಊಹೆ ಸಹ ಮಾಡಿರಲಿಲ್ಲ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು ನಿಜ. ಹಾಗಾಗಿ ದಂಡ ಪಾವತಿಸಿದ್ದೇವೆ ಎಂದು ಕಿರಣ್ ಹೇಳಿದ್ದಾರೆ. ನಂತರ ಮುಂದುವರಿದು ತಾವು ಭೇಟಿ ನೀಡಿದ ಸುಂದರ ಸ್ಥಳದ ಪರಿಚಯ ಮಾಡಿಕೊಟ್ಟಿದ್ದಾರೆ.
ಒಂದು ದಿನಕ್ಕೆ ಇಲ್ಲಿ ವಾಹನ ಪಾರ್ಕಿಂಗ್ 800 ರೂಪಾಯಿ. ಇಡೀ ದಿನ ಇಲ್ಲಿದ್ದು ಏನು ಮಾಡೋದು? ಅಬ್ಬಾಬ್ಬ ಅಂದ್ರೆ ಇಲ್ಲಿ ಎರಡರಿಂದ ಮೂರು ಗಂಟೆ ಕಾಲ ಕಳೆಯಬಹುದು. ಆದ್ರೆ ಪಾರ್ಕಿಂಗ್ ಮಾತ್ರ ದಿನದ ಲೆಕ್ಕದಲ್ಲಿ ತೆಗದುಕೊಳ್ಳುತ್ತಾರೆ ಎಂದು ಕಿರಣ್ ಮಾಹಿತಿ ನೀಡಿದ್ದಾರೆ. ಈ ಹಿಂದೆ ಆಶಾ-ಕಿರಣ್ ಕಾರ್ ಪಾರ್ಕಿಂಗ್ ಮಾಡುವ ಸಮಯದಲ್ಲಿ ಸಣ್ಣ ಅಪಘಾತಕ್ಕೊಳಗಾಗಿತ್ತು. ಈ ಅಪಘಾತದಲ್ಲಿ ಕಾರ್ ಮುಂಭಾಗದಲ್ಲಿ ಹಾನಿಯಾಗಿತ್ತು. ಈ ವಿಡಿಯೋವನ್ನ ಸಹ ತಮ್ಮ ವ್ಲಾಗ್‌ನಲ್ಲಿ ಶೇರ್ ಮಾಡಿಕೊಂಡಿದ್ದರು.