
ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು, ಪ್ರಾಕೃತಿಕ ಸೌಂದರ್ಯ ಸವಿಯುವುದು ಪ್ರತಿಯೊಬ್ಬರಿಗೂ ಅತ್ಯಂತ ಮುಖ್ಯ. ಆದರೆ ಪ್ರವಾಸದ ಖರ್ಚು ವೆಚ್ಚ ನೋಡಿದಾಗ ಹಲವರು ಹಿಂದೇಟು ಹಾಕುತ್ತಾರೆ. ಪ್ರಯಾಣದ ಖರ್ಚು, ಅಲ್ಲಿನ ಹೊಟೆಲ್, ಆಹಾರ ಹೀಗೆ ಎಲ್ಲವು ದುಬಾರಿ. ಆದರೆ ಅತೀ ಹೆಚ್ಚು ಮಂದಿ ಭೇಟಿ ನೀಡುವ ಪ್ರವಾಸಿ ತಾಣದ ಪ್ರಾಕೃತಿಕ ಸೌಂದರ್ಯ ಸವಿಯಲು ಹೆಚ್ಚು ಖರ್ಚು ಮಾಡಬೇಕಿಲ್ಲ. ಕೇವಲ ಒಂದು ಮಸಾಲೆ ದೋಸೆಗಿಂತ ಕಡಿಮೆ ಖರ್ಚಿನಲ್ಲಿ ಈ ತಾಣದಲ್ಲಿ ರೈಲು ಪ್ರಯಾಣ ಮಾಡಬಹುದು. ಅತ್ಯಂತ ಸುಂದರ ತಾಣಗಳ ಮೂಲಕ ರೈಲು ಸಾಗಲಿದೆ. ಹೌದು, ನೀಲಗಿರಿ ಗಿರಿಶಿಖರಗಳ ಪ್ರಯಾಣ ಅತೀ ಕಡಿಮೆ ಖರ್ಚಿನಲ್ಲಿ ಮಾಡಲು ಸಾಧ್ಯವಿದೆ.
ಚಹಾ ತೋಟಗಳ ನಡುವೆ, ಗಿರಿಶಿಖರಗಳ ತಪ್ಪಲಿನ ಮೂಲಕ, ಹಲವು ಸುರಂಗ, ಹಚ್ಚ ಹಸುರಿನ ಪ್ರಾಕೃತಿಕ ಸೌಂದರ್ಯಗಳ ನಡುವೆ ರೈಲು ಪ್ರಯಾಣ ಮಾಡಲು ಯಾರಿಗೆ ಇಷ್ಟವಿಲ್ಲ. ನೀಲಗಿರಿ ಮೌಂಟೇನ್ ರೈಲ್ವೇ ಈ ಸುಂದರ ತಾಣದ ರೈಲು ಪ್ರಯಾಣವನ್ನು ಅತೀ ಕಡಿಮೆ ಖರ್ಚಿನಲ್ಲಿ ನೀಡುತ್ತಿದೆ. ಕೂನೂರ್‌ನಿಂದ ಊಟಿವರೆಗಿನ ಈ ಪ್ರಯಾಣ ಅತ್ಯಂತ ಮುದ ನೀಡಲಿದೆ.
ಕೂನೂರು ಟು ಊಟಿ ಪ್ರಯಾಣ ಅತ್ಯಂತ ಅರಾಮದಾಯಕ. 19 ಕಿಲೋಮೀಟರ್ ದೂರದ ಈ ಪ್ರಯಾಣದ ರೈಲು ಟಿಕೆಟ್ ಬೆಲೆ ಕೇವಲ 85 ರೂಪಾಯಿ ಮಾತ್ರ. ಪ್ರಯಾಣದ ದೂರ 19 ಕಿಲೋಮೀಟರ್ ಆದರೆ ಸಮಯ 1 ಗಂಟೆ 15 ನಿಮಿಷ. ಈ ತಾಣದಲ್ಲಿ ರೈಲು ನಿಧಾನವಾಗಿ ಚಲಿಸಲಿದೆ. ಜೊತೆಗೆ ಪ್ರಯಾಣಿಕರಿಗೆ ಪ್ರಾಕೃತಿಕ ಸೌಂದರ್ಯ ಆಸ್ವಾದಿಸುತ್ತಾ ಸಾಗಲು ಅನುಕೂಲವಾಗಲಿದೆ. ನೀಲಗಿರಿ ಪರ್ವತಗಳು, ಕಾಡು, ಚಹಾ ತೋಟ, 5 ಸುರಂಗ ಮಾರ್ಗ ಸೇರಿದಂತೆ ಹಲವು ತಾಣಗಳ ವೀಕ್ಷಣೆ ಸಾಧ್ಯವಾಗಲಿದೆ.
ವಿಶೇಷ ಅಂದರೆ ನೀಲಗಿರಿ ಮೌಂಟೇನ್ ರೈಲ್ವೇಯ ಆನ್‌ಲೈನ್ ಮೂಲಕ ಟಿಕೆಟ್ ಖರೀದಿಸಿದರೆ 150 ರೂಪಾಯಿ. ಆದರೆ ಆಫ್‌ಲೈನ್ ಮೂಲಕ ಟಿಕೆಟ್ ಖರೀದಿಗೆ ಕೇವಲ 85 ರೂಪಾಯಿ ಮಾತ್ರ. ಇನ್ನು ಫಸ್ಟ್‌ಕ್ಲಾಸ್ ಟಿಕೆಟ್ ಬೆಲೆ 300 ರೂಪಾಯಿ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳು ಲಭ್ಯವಿದೆ.
ನೀಲಗಿರಿ ಮೌಂಟೇನ್ ವಲಯಗಳು ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ತಾಣಗಳು. ಮೆಟ್ಟುಪಾಲಯಂ ಸಮುದ್ರ ಮಟ್ಟದಿಂದ 330 ಮೀಟರ್ ಎತ್ತರದಲ್ಲಿದ್ದರೆ, ಊಟಿ ಸಮುದ್ರ ಮಟ್ಟದಿಂದ 2,200 ಮೀಟರ್ ಎತ್ತರದಲ್ಲಿದೆ. ಮೆಟ್ಟಪಾಲಯಂದಿಂದ ಊಟಿಗೆ 46 ಕಿಲೋಮೀಟರ್ ಪ್ರಯಾಣ. ಇಲ್ಲೂ ಕೂಡ ರೈಲು ಪ್ರಯಾಣದ ಸೌಲಭ್ಯವಿದೆ. 16 ಸುರಂಗ, ಹಲವು ತಿರುವುಗಳ ಮೂಲಕ ಈ ರೈಲು ಸಾಗಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.