ವಿಮಾನ ಪ್ರಯಾಣಿಕರಿಗೆ ಕಾದಿದೆ ಶಾಕ್! ಇಂದಿನಿಂದ ಇಂಡಿಗೋ ಟಿಕೆಟ್ ದರ ಭಾರಿ ಏರಿಕೆ: ₹10,000ದವರೆಗೆ ಇಂಧನ ಸರ್ಚಾರ್ಜ್

Published : Oct 06, 2026, 11:07 AM IST
indigo flight fuel surcharge hike 6 october 2026 air fare atf price

ಸಾರಾಂಶ

ವಿಮಾನ ಇಂಧನ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಇಂಡಿಗೋ ಸಂಸ್ಥೆಯು ಅಕ್ಟೋಬರ್ 6 ರಿಂದ ಪ್ರಯಾಣಿಕರಿಗೆ ಇಂಧನ ಶುಲ್ಕ ವಿಧಿಸಲು ನಿರ್ಧರಿಸಿದೆ. ವಿಮಾನದ ಮಾರ್ಗ ಮತ್ತು ದೂರವನ್ನು ಆಧರಿಸಿ 375 ರೂ. ನಿಂದ 10,000 ರೂ. ವರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ದರ ದುಬಾರಿಯಾಗಲಿದೆ.

ನವದೆಹಲಿ: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮಂಗಳವಾರದಿಂದ ಪ್ರಯಾಣಿಕರಿಗೆ ಇಂಧನ ಶುಲ್ಕವನ್ನು ವಿಧಿಸಲು ಮುಂದಾಗಿದೆ ಇದರಿಂದ ಟಿಕೆಟ್‌ ದರದಲ್ಲಿ ಏರಿಕೆಯಾಗಲಿದೆ. ವಿಮಾನ ಇಂಧನ ಬೆಲೆಯಲ್ಲಿನ ಹೆಚ್ಚಳದ ವೆಚ್ಚ ಭರಿಸುವ ಉದ್ದೇಶದಿಂದ, ವಿಮಾನದ ಮಾರ್ಗ ಹಾಗೂ ವಲಯವನ್ನಾಧರಿಸಿ 375 ರು.ನಿಂದ 10000 ರು.ವರೆಗೆ ಇಂಧನ ಸರ್‌ಚಾರ್ಜ್‌ ವಿಧಿಸಲು ಕಂಪನಿ ನಿರ್ಧರಿಸಿದೆ. ಈ ಪರಿಷ್ಕೃತ ಶುಲ್ಕಗಳು ಅಕ್ಟೋಬರ್ 6 ರಿಂದ ಜಾರಿಗೆ ಬರಲಿದ್ದು, ಮುಂಬರುವ ದಿನಗಳಲ್ಲಿ ವಿಮಾನ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ.

ಎಷ್ಟೆಷ್ಟು ಏರಿಕೆ?:

ದೇಶೀಯ ವಿಮಾನಗಳಿಗಾದರೆ, 500 ಕಿ.ಮೀ.ಗಿಂತ ಕಡಿಮೆ ದೂರದ ಪ್ರಯಾಣಕ್ಕೆ ಟಿಕೆಟ್‌ ದರಕ್ಕೆ ಇನ್ನು 425 ರು. ಹೆಚ್ಚು ಪಾವತಿಸಬೇಕಾಗುವುದು. 501-1 ಸಾವಿರ ಕಿ.ಮೀ. ಒಳಗಿನದ್ದಕ್ಕೆ 600 ರು., 1001-1500 ಕಿ.ಮೀ.ಗೆ 900 ರು., 1501-2000 ಕಿ.ಮೀ.ಗೆ 1150 ರು., 2 ಸಾವಿರ ಕಿ.ಮೀ.ಗಿಂತ ದೂರವಾದರೆ 1300 ರು. ಇಂಧನ ಶುಲ್ಕ ವಿಧಿಸಲಾಗುವುದು.

ಅಂತಾರಾಷ್ಟ್ರೀಯ ವಿಮಾನಗಳಲ್ಲಿ, 500 ಕಿ.ಮೀ.ಗಿಂತ ಕಡಿಮೆ ದೂರದಲ್ಲಿರುವ ಸಾರ್ಕ್‌ ರಾಷ್ಟ್ರಗಳಿಗೆ ಹೆಚ್ಚುವರಿ 500 ರು. ಹಾಗೂ ಅದಕ್ಕಿಂತ ಹೆಚ್ಚು ದೂರವಿದ್ದೆ 1 ಸಾವಿರ ರು.. ಬೆಲೆ ತೆರಬೇಕಾಗುವುದು. ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಗಲ್ಫ್‌ ಸಹಕಾರ ಮಂಡಳಿ ಹಾಗೂ ಉತ್ತರ ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳಿಗೆ 5500 ರು., ಆಫ್ರಿಕಾಗೆ 6 ಸಾವಿರ ರು., ಯುರೋಪ್‌ಗೆ 10 ಸಾವಿರ ರು. ಇಂಧನ ಶುಲ್ಕವಿರಲಿದೆ.

ಕಳೆದ ಕೆಲವು ತಿಂಗಳುಗಳಿಂದ ವಿಮಾನಯಾನ ಟರ್ಬೈನ್ ಇಂಧನ (ATF) ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ತಿಂಗಳಿನಿಂದ ತಿಂಗಳಿಗೆ ಇಂಧನದ ದರ ಶೇಕಡಾ 14 ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಪ್ರಸ್ತುತ ಎಟಿಎಫ್ ಬೆಲೆಯು ಕಳೆದ ಒಂದು ದಶಕದಲ್ಲೇ ಅತ್ಯಂತ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಏರ್ ಇಂಡಿಯಾ, ಇಂಡಿಗೋ, ಆಕಾಶ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಮಾರ್ಚ್‌ನಲ್ಲಿ ಇಂಧನ ಶುಲ್ಕವನ್ನು ವಿಧಿಸಿದ್ದವು. ಆದರೆ, ದರಗಳು ಸ್ಥಿರಗೊಂಡಿದ್ದರಿಂದ ಜುಲೈ ಸುಮಾರಿಗೆ ಶುಲ್ಕ ಕಡಿಮೆ ಮಾಡಿದ್ದವು. ಇದೀಗ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೆ ತೀವ್ರಗೊಂಡಿರುವುದರಿಂದ, ಕಚ್ಚಾ ತೈಲ, ಎಲ್‌ಎನ್‌ಜಿ ಮತ್ತು ವಿಮಾನ ಇಂಧನ ದರಗಳಲ್ಲಿ ಏರಿಕೆ ಆಗಿದೆ.

ಆರ್ಥಿಕ ಪರಿಸ್ಥಿತಿ ಮತ್ತು ನಿರ್ವಹಣಾ ವೆಚ್ಚಗಳನ್ನು ಸಮತೋಲನದಲ್ಲಿಡಲು, ಅನಿವಾರ್ಯವಾಗಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಇಂಧನ ಸರ್ಚಾರ್ಜ್ ಅನ್ನು ಪರಿಷ್ಕರಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಕೃತಿ ಪ್ರಿಯರ ಸ್ವರ್ಗ.. ಚೀನಾದ ಈ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರು ಮುಗಿಬೀಳೋದೇಕೆ?
ದಸರಾ ರಜೆಗೆ ಗೋವಾ ಟ್ರಿಪ್ ಪ್ಲಾನ್ ಮಾಡಿದ್ದೀರಾ? ಬೆಂಗಳೂರಿನಿಂದ ಗೋವಾ ಪ್ರಯಾಣದ ಸಂಪೂರ್ಣ ಮಾಹಿತಿ ಇಲ್ಲಿದೆ!