
45 ದಿನಗಳ ಮಹಾಕುಂಭ ಮೇಳಕ್ಕೆ ತೆರೆ ಬಿದ್ದಿದೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂಥ ಮಹಾಕುಂಭಮೇಳಕ್ಕೆ ಭಾರತ ಈ ವರ್ಷ ಸಾಕ್ಷಿಯಾಗಿದೆ. 65 ಕೋಟಿಗೂ ಅಧಿಕ ಜನರು ಪುಣ್ಯಸ್ನಾನ ಮಾಡಿದ್ದಾರೆ. ಹಾಗೆ ನೋಡಲು ಹೋದರೆ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಇಡೀ ಅಮೆರಿಕದ ಒಂದೂವರೆ ಪಟ್ಟು ಜನರು ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ಮಹಾಕುಂಭಮೇಳಕ್ಕೆ ಸಾಕ್ಷಿಯಾದರು! ಇದಾಗಲೇ ಹಲವಾರು ವಿಶ್ವ ದಾಖಲೆಗಳನ್ನು ಕುಂಭಮೇಳ ಬರೆದಿದೆ. ಅತ್ಯಧಿಕ ಸಂಖ್ಯೆಯ ಭಕ್ತರು ಆಗಮಿಸಿದ್ದು, ಅತ್ಯಧಿಕ ಶುಚಿತ್ವ ಕಾರ್ಮಿಕರು ಪಾಲ್ಗೊಂಡಿರುವುದು ಸೇರಿದಂತೆ ಹಲವು ದಾಖಲೆಗಳನ್ನು ಕುಂಭಮೇಳ ಬರೆದಿದೆ. ಯಾತ್ರಾ ನಗರಿ ಪ್ರಯಾಗ್‌ರಾಜ್‌ನಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯ ದಾಖಲೆಯನ್ನೂ ಮಾಡಿದೆ. 10 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಕುಂಭಮೇಳದಿಂದ ಸುಮಾರು 3 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿರುವುದಾಗಿ ವರದಿಯಾಗುತ್ತಿದೆ.
ಇಂಥದ್ದೊಂದು ಅದ್ಭುತ ಕ್ಷಣಕ್ಕೆ ಸಾಕ್ಷಿಯಾದವರಲ್ಲಿ ಒಬ್ಬರು ಡಾ.ಬ್ರೋ. ಡಾ.ಬ್ರೋ ಅರ್ಥಾತ್ ಗಗನ್, ಈಗ ಎಲ್ಲರ ಮನೆಮಾತಾಗಿರುವ ಯುವಕ. ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ.
ವಿದೇಶಿಗರಿಗೂ ಅಣ್ಣಮ್ಮದೇವಿಯ ಡಾನ್ಸ್ ಹೇಳಿಕೊಟ್ಟ ಡಾ.ಬ್ರೊ: ಕತ್ತೆ ಕಿರುಬವನ್ನೂ ಬಿಟ್ಟಿಲ್ಲ ಗಗನ್!
ಇದೀಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ, ಅಲ್ಲಿ ಕೆಲವಷ್ಟು ತರ್ಲೆ ಮಾಡಿರುವ ವಿಡಿಯೋ ಶೇರ್ ಮಾಡಿರುವ ಡಾ.ಬ್ರೋ. ತ್ರಿವೇಣಿ ಸಂಗಮದ ಸಮೀಪವೇ ಇರುವ ರಾಜ ಅಕ್ಬರನ ಕೋಟೆಯ ಬಗ್ಗೆ ವಿವರಿಸಿದ್ದಾರೆ. ಭವ್ಯ ಕಲಾಕೃತಿಯನ್ನು ಒಳಗೊಂಡಿರುವ ಈ ಕೋಟೆಯ ಕೆಲವು ಭಾಗಗಳಲ್ಲಿ ಮಾತ್ರ ಯಾತ್ರಿಕರಿಗೆ ಪ್ರವೇಶ ಇದೆ ಎಂಬ ಮಾಹಿತಿ ಕೊಟ್ಟಿದ್ದಾರೆ ಡಾ.ಬ್ರೋ. ಇದನ್ನು ಅಲಹಾಬಾದ್ ಕೋಟೆ ಎಂದೂ ಕರೆಯುತ್ತಾರೆ. ಮೊಘಲ್ ಚಕ್ರವರ್ತಿ ಅಕ್ಬರ್ 1583 ರಲ್ಲಿ ಅಲಹಾಬಾದ್‌ನಲ್ಲಿ ನಿರ್ಮಿಸಿದನು. ಈ ಕೋಟೆಯು ಯಮುನಾ ನದಿಯ ದಡದಲ್ಲಿ, ಗಂಗಾ ನದಿಯ ಸಂಗಮದ ಬಳಿ ಇದೆ. ಇದನ್ನು ಭಾರತೀಯ ಪುರಾತತ್ವ ಸಮೀಕ್ಷೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ವರ್ಗೀಕರಿಸಿದೆ. ಕೋಟೆಯೊಳಗಿನ ಕಲ್ಲಿನ ಶಾಸನವು 1583 ಅನ್ನು ಅಡಿಪಾಯ ವರ್ಷವೆಂದು ವಿವರಿಸುತ್ತದೆ. ಆದರೆ ಈ ಕಲ್ಲಿನ ಶಾಸನವು ಅಶೋಕನಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ.
ಅಕ್ಬರ ತ್ರಿವೇಣಿ ಸಂಗಮದ ಸಮೀಪ ಬಂದು ಕೋಟೆ ಕಟ್ಟಿದ್ದೇಕೆ ಎನ್ನುವ ಬಗ್ಗೆ ಹಲವಾರು ರೀತಿಯ ಪ್ರತೀತಿಗಳಿವೆ. ಈ ಬಗ್ಗೆ ಇತಿಹಾಸದಲ್ಲಿ ವಿಭಿನ್ನ ರೀತಿಯ ಮಾಹಿತಿಗಳೂ ಸಿಗುತ್ತವೆ. ಈ ಕೋಟೆಯು ಎತ್ತರದ ಗೋಪುರಗಳಿಂದ ಸುತ್ತುವರೆದಿರುವ ಮೂರು ಗ್ಯಾಲರಿಗಳನ್ನು ಹೊಂದಿದೆ. ಇತಿಹಾಸಕಾರ ವಿಲಿಯಂ ಫಿಂಚ್ ಪ್ರಕಾರ, ನಲವತ್ತು ವರ್ಷಗಳ ಅವಧಿಯಲ್ಲಿ ವಿವಿಧ ಪಂಗಡಗಳ 5,000 ರಿಂದ 20,000 ಕಾರ್ಮಿಕರು ಈ ಕೋಟೆಯನ್ನು ನಿರ್ಮಿಸಲು ಶ್ರಮಿಸಿದರು ಎಂದು ಹೇಳಲಾಗುತ್ತದೆ. ಇವುಗಳ ಮಾಹಿತಿ ನೀಡಿದ್ದಾರೆ ಡಾ.ಬ್ರೋ.
ನೈಜೇರಿಯಾದಲ್ಲಿ ಡಾ.ಬ್ರೋಗೆ ಚಾಕು ಇರಿದ್ರು, ಬ್ಲೇಡ್ನಿಂದ ಬೆರಳು ಕತ್ತರಿಸಿದ್ರು! ವಿಡಿಯೋ ನೋಡಿ ಫ್ಯಾನ್ಸ್ ಶಾಕ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.