
ಜಿಟಿಜಿಟಿ ಮಳೆ (Rain), ಹಚ್ಚ ಹಸಿರಾದ ಭೂಮಿ, ತುಂಬಿ ನಿಂತ ಕೆರೆಗಳು ಪ್ರಕೃತಿಯ (Nature) ಈ ಸೊಬಗನ್ನು ಕಣ್ತುಂಬಿಕೊಳ್ಳೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೀಗಾಗಿಯೇ ಜನರು ಮಳೆಗಾಲದಲ್ಲಿ ಹೆಚ್ಚು ಟ್ರಾವೆಲ್ (Travel) ಮಾಡೋಕೆ ಇಷ್ಟಪಡುತ್ತಾರೆ. ಮಳೆಗಾಲದಲ್ಲಿ ಪ್ರವಾಸಿತಾಣಗಳ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ. ಅದರಲ್ಲೂ ಕರ್ನಾಟಕ (Karnataka) ತನ್ನ ಹಲವು ಪ್ರವಾಸಿತಾಣಗಳಿಂದಲೇ ಹೆಸರುವಾಸಿಯಾಗಿದೆ. ಅದರಲ್ಲೂ ಕೆಲವೊಂದು ಪ್ರವಾಸಿ ತಾಣಗಳು ಮಳೆಗಾಲದಲ್ಲಿ ಟ್ರಾವೆಲ್ ಮಾಡೋಕೆ ಬೆಸ್ಟ್. ಅಂಥಾ ಸ್ಥಳಗಳು (Place) ಯಾವುದೆಲ್ಲಾ ?
ಆಗುಂಬೆ
ಆಗುಂಬೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಒಂದು ಊರು. ಇದನ್ನು ದಕ್ಷಿಣ ಭಾರತದ ಚಿರಾಪುಂಜಿ ಎಂದು ಸಹ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಇದು ಕೂಡಾ ಒಂದಾಗಿದೆ. ಈ ಸ್ಥಳವು ಎತ್ತರದ ಜಲಪಾತಗಳು, ಅಳಿವಿನಂಚಿನಲ್ಲಿರುವ ಸಸ್ತನಿಗಳು, ಹಾವುಗಳನ್ನು ಒಳಗೊಂಡಿದೆ. ಪ್ರತ್ಯೇಕವಾಗಿ ಮಳೆಗಾಲದಲ್ಲಿ ನೋಡಲೇಬೇಕಾದ ತಾಣಗಳಲ್ಲಿ ಕರ್ನಾಟಕದ ಆಗುಂಬೆ ಕೂಡ ಒಂದಾಗಿದೆ.
ಬೆಂಗಳೂರಿಗರೇ ಬೀಚ್ ನೋಡಬೇಕಂದ್ರೆ ಈ ಪ್ಲೇಸಿಗೆ ವಿಸಿಟ್ ಮಾಡ್ಬಹುದು!
ಜೋಗ ಜಲಪಾತ
ಜೋಗ ಜಲಪಾತ' ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತವೆಂದು ಸಹ ಕರೆಸಿಕೊಳ್ಳುತ್ತದೆ. ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಸ್ಥಳದಲ್ಲಿದೆ. ಜೋಗ ಜಲಪಾತವನ್ನು ವೀಕ್ಷಿಸುವ ತಾಣ ಜೋಗವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಒಂದು ಪ್ರಮುಖ ಪ್ರವಾಸಿ ತಾಣ. ಜೋಗ ಜಲಪಾತವು ಸುಮಾರು 292 ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿಯೇ ನೋಡಲೇಬೇಕಾದ ತಾಣಗಳಲ್ಲಿ ಜೋಗ್ ಜಲಪಾತವು ಒಂದಾಗಿದೆ. ಇದನ್ನು ರಾಜ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಭಾಗಗಳಾಗಿ ವಿಭಜಿಸಲಾಗಿದೆ.
ಕೂರ್ಗ್
ಕೊಡಗು ಎಂದೂ ಕರೆಯಲ್ಪಡುವ ಮಡಿಕೇರಿ ಕರ್ನಾಟಕದ ಅತ್ಯಂತ ಶ್ರೀಮಂತ ಗಿರಿಧಾಮವಾಗಿದ್ದು, ಇದು ಹಚ್ಚ ಹಸಿರಿನ ಮತ್ತು ಉಸಿರುಕಟ್ಟುವ ವಿಲಕ್ಷಣ ದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಮಳೆಗಾಲದಲ್ಲಿ ಹಚ್ಚ ಹಸಿರಾಗಿದ್ದು, ನದಿ ತೊರೆಗಳು ತುಂಬಿ ಪ್ರಕೃತಿಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿರುತ್ತದೆ.
ಹಂಪಿ
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾದ ಹಂಪಿ ಮಳೆಗಾಲದಲ್ಲಿ ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಹಂಪಿ ಸಾಮಾನ್ಯವಾಗಿ ಇತರ ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆ ಮಳೆಯನ್ನು ಪಡೆಯುತ್ತದೆ ಆದರೆ ಮಾನ್ಸೂನ್ ಸಮಯದಲ್ಲಿ ಈ ಸ್ಥಳವು ಕಡಿಮೆ ಜನಸಂದಣಿಯನ್ನು ಹೊಂದಿರುತ್ತದೆ ಮತ್ತು ಮಳೆಗಾಲದಲ್ಲಿ ಶಾಂತಿಯುತವಾಗಿರುತ್ತದೆ. ಈ ಪುರಾತನ ಪರಂಪರೆಯ ಭೂಮಿಯ ವಾಸ್ತುಶಿಲ್ಪದ ಸೌಂದರ್ಯವನ್ನು ನೀವು ಸ್ವಲ್ಪ ದೂರ ಅಡ್ಡಾಡು ಆನಂದಿಸಬಹುದು.
ಕೇರಳ ಟ್ರಿಪ್ ಹೋಗೋ ಪ್ಲ್ಯಾನ್ ಇದ್ಯಾ? ಮುನ್ನಾರ್‌ನಲ್ಲಿ ಈ ಪ್ಲೇಸ್ ನೋಡಲು ಮರೀಬೇಡಿ!
ಮುಳ್ಳಯ್ಯನಗಿರಿ
ಚಿಕ್ಕಮಗಳೂರಿನಲ್ಲಿರುವ ಈ ಮುಳ್ಳಯ್ಯನಗಿರಿಯು ಸಮುದ್ರ ಮಟ್ಟದಿಂದ ಸುಮಾರು 1930 ಮೀಟರ್ ಎತ್ತರದಲ್ಲಿ ನೆಲೆಸಿದೆ. ದಕ್ಷಿಣ ಭಾರತದ ಅತ್ಯುತ್ತಮವಾದ ಟ್ರೆಕ್ಕಿಂಗ್ ಸ್ಥಳಗಳಲ್ಲಿ ಈ ಸ್ಥಳವು ಒಂದು. ಪ್ರಶಾಂತವಾದ ವಾತಾವರಣದಲ್ಲಿ ಪ್ರಕೃತಿಯ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಈ ಶಿಖರವು ಹಸಿರು ಹುಲ್ಲುಗಾವಲು, ಒರಟಾದ ಬಂಡೆಗಳಿಂದ ಅಲಂಕರಿಸಲ್ಪಟ್ಟಿದೆ. .
ಕೆಮ್ಮಣ್ಣುಗುಂಡಿ ಗಿರಿಧಾಮ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಸುಂದರವಾದ ಗಿರಿಧಾಮವಾಗಿರುವ ಈ ಕೆಮ್ಮಣ್ಣುಗುಂಡಿ ಗಿರಿಧಾಮವು ಅತ್ಯಂತ ಅದ್ಭುತವಾದ ಪ್ರವಾಸಿ ತಾಣವಾಗಿದೆ. ವಿಶೇಷವಾಗಿ ಕೆಮ್ಮಣ್ಣುಗುಂಡಿಯ ಸೌಂದರ್ಯವನ್ನು ಸವಿಯಲು ಮಳೆಗಾಲದಲ್ಲಿ ಭೇಟಿ ನೀಡಲೇಬೇಕು. ಇಲ್ಲಿ ಹಲವಾರು ಆಕರ್ಷಣೆಗಳಿಂದ ತುಂಬಿದೆ. ನೀವು ಸಾಹಸ ಚಟುವಟಿಕೆಗಳ ಜೊತೆಗೆ, ಗುಲಾಬಿ ಉದ್ಯಾನ, ಹೆಬ್ಬೆ ಜಲಪಾತ, ಝಡ್ ಪಾಯಿಂಟ್ ಸೇರಿದಂತೆ ಇನ್ನು ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.