ನವದೆಹಲಿ(ಮಾ.29): ಕೋವಿಡ್ ಬಳಿಕ ಭಾರತ ಸರ್ಕಾರವು ಅಂತರರಾಷ್ಟ್ರೀಯ ಪ್ರಯಾಣವನ್ನು ಪುನರಾರಂಭಿಸಿದ ನಂತರ ಆಗ್ರಾ ಪ್ರವಾಸೋದ್ಯಮವು ಪುನಶ್ಚೇತನದ ಲಕ್ಷಣಗಳನ್ನು ತೋರಿಸುತ್ತಿದೆ. ಕೋವಿಡ್ -19 ಪ್ರಪಂಚದಾದ್ಯಂತ ವಿನಾಶವನ್ನು ಉಂಟುಮಾಡಿದಂತೆ, ಸಾಂಕ್ರಾಮಿಕ ರೋಗದಿಂದಾಗಿ ವಿಧಿಸಲಾದ ನಿರ್ಬಂಧಗಳು ಆಗ್ರಾದ ಪ್ರವಾಸೋದ್ಯಮದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿತು. ವಿಶ್ವ ಪ್ರಸಿದ್ಧ ತಾಜ್ ಮಹಲ್‌ನ್ನು ಹೊಂದಿರುವ ಉತ್ತರಪ್ರದೇಶದ ಆಗ್ರಾಕ್ಕೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹೀಗಾಗಿ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಿದ್ದರಿಂದ ಈ ನಗರದ ಮೇಲೆ ಭಾರಿ ಪರಿಣಾಮ ಬೀರಿತು. ಆದಾಗ್ಯೂ, ಮಾರ್ಚ್ 27 ರಿಂದ ಸರ್ಕಾರವು ಅಂತರರಾಷ್ಟ್ರೀಯ ಪ್ರಯಾಣವನ್ನು ಪುನರಾರಂಭಿಸಿದೆ. ಹೀಗಾಗಿ ಇಲ್ಲಿ ಪ್ರವಾಸೋದ್ಯಮವೂ ಮತ್ತೆ ಚಿಗುರಿದ ಲಕ್ಷಣಗಳನ್ನು ತೋರಿಸುತ್ತಿದೆ.
ಮಾರ್ಚ್ 2020 ರಲ್ಲಿ ಭಾರತದಲ್ಲಿ ಸಾಂಕ್ರಾಮಿಕ ರೋಗವು ದೇಶವನ್ನು ಆವರಿಸಿದ ನಂತರ, ಸರ್ಕಾರವು ತಕ್ಷಣವೇ ಅಂತರರಾಷ್ಟ್ರೀಯ ಪ್ರಯಾಣವನ್ನು ನಿರ್ಬಂಧಿಸಿತ್ತು. ಇದು ಸೇರಿದಂತೆ ಕೋವಿಡ್ ನಿರ್ಬಂಧಕ್ಕೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಸರ್ಕಾರ ವಿಧಿಸಿತ್ತು. ಪರಿಣಾಮ ಆಗ್ರಾದ ಬಹುತೇಕ ಪಂಚತಾರಾ (Fivestar) ಮತ್ತು ಮೂರು ತಾರಾ (3star) ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ಜೊತೆಗೆ ಪ್ರಮುಖ ಕರಕುಶಲ ಎಂಪೋರಿಯಮ್‌ಗಳನ್ನು ಸಹ ಮುಚ್ಚಲಾಗಿತ್ತು.ಈ ಪ್ರವಾಸೋದ್ಯಮದೊಂದಿಗೆ ಸಂಪರ್ಕ ಹೊಂದಿದ ಕುಶಲಕರ್ಮಿಗಳು ಮತ್ತು ಮಾರಾಟಗಾರರು ಸಂಕಷ್ಟಕ್ಕೊಳಗಾಗಿದ್ದರು. ಜೊತೆಗೆ ಇವರು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ್ದರು, ಇದು ಈಗಲೂ ಮುಂದುವರೆದಿದೆ.
ಚೇತರಿಸುತ್ತಿರುವ ಪ್ರವಾಸೋದ್ಯಮ, ಪ್ರವಾಸಿಗರನ್ನು ಸ್ವಾಗತಿಸುತ್ತಿರುವ ರೆಸಾರ್ಟ್, ಹೋಂ ಸ್ಟೇ ಮಾಲೀಕರು
ಕೆಲ ದಿನಗಳ ಹಿಂದಷ್ಟೇ ಭಾರತ ಸರ್ಕಾರವು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ ನಂತರ, ಆಗ್ರಾದ ಪ್ರವಾಸೋದ್ಯಮ ಉದ್ಯಮವು ಪುನರುಜ್ಜೀವನದ ಭರವಸೆಯನ್ನು ಕಂಡಿದೆ. ವಿದೇಶಿ ಪ್ರವಾಸಿಗರಿಗೆ ಈಗ ಭಾರತಕ್ಕೆ ಪ್ರಯಾಣಿಸಲು ಅನುಮತಿ ನೀಡಿರುವುದರಿಂದ, ಇದು ಆಗ್ರಾದಲ್ಲಿ ವ್ಯಾಪಾರವನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಕೆಲ ಮಾಹಿತಿಯ ಪ್ರಕಾರ, ಕೋವಿಡ್ ಸಾಂಕ್ರಾಮಿಕ ರೋಗ ದೇಶವನ್ನು ಬಾಧಿಸುವುದಕ್ಕೂ ಮೊದಲು ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ಭಾರತೀಯರು ಮತ್ತು ಸುಮಾರು 10 ಲಕ್ಷ ವಿದೇಶಿ ಪ್ರವಾಸಿಗರು ಆಗ್ರಾಕ್ಕೆ ಭೇಟಿ ನೀಡುತ್ತಿದ್ದರು.
ವಿದೇಶಿ ಪ್ರವಾಸಿಗರ ಆಗಮನದಿಂದ ಸ್ಥಳೀಯ ಪ್ರವಾಸೋದ್ಯಮಕ್ಕೆ ಹಲವಾರು ಅನುಕೂಲಗಳಿವೆ ಎಂದು ಆಗ್ರಾ ಟೂರಿಸ್ಟ್ ವೆಲ್ಫೇರ್ ಚೇಂಬರ್ ಕಾರ್ಯದರ್ಶಿ ವಿಶಾಲ್ ಶರ್ಮಾ(Vishal Sharma) ಹೇಳಿದ್ದಾರೆ. ವಿದೇಶಿ ಪ್ರವಾಸಿಗರು ಪ್ರಯಾಣ, ಆತಿಥ್ಯ(hospitality,) ಶಾಪಿಂಗ್ (shopping) ಮತ್ತು ಆಹಾರಕ್ಕಾಗಿ ಹೆಚ್ಚು ಖರ್ಚು ಮಾಡುತ್ತಾರೆ, ಇದು ನಗರದ ಆರ್ಥಿಕತೆಯನ್ನು(economy) ಸುಧಾರಿಸುತ್ತದೆ ಎಂದು ವಿಶಾಲ್ ಶರ್ಮಾ ಹೇಳಿದರು. ಪ್ರಸ್ತುತ ಆಗ್ರಾಕ್ಕೆ ನೇರ ಅಂತಾರಾಷ್ಟ್ರೀಯ ವಿಮಾನ ಸೇವೆ ಇಲ್ಲ ಆದ್ದರಿಂದ ಎಲ್ಲಾ ಪ್ರವಾಸಿಗರು ದೆಹಲಿಗೆ ಬಂದು ಅಲ್ಲಿಂದ ರಸ್ತೆ ಮೂಲಕ ಆಗ್ರಾಕ್ಕೆ ಬರುತ್ತಾರೆ ಎಂದು ಅವರು ತಿಳಿಸಿದರು.
ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಹಂಪಿಯ ಸ್ಪರ್ಶ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶ
ಟ್ರಾವೆಲ್ ಏಜೆನ್ಸಿಯನ್ನು ನಿರ್ವಹಿಸುತ್ತಿರುವ ಅಮೀರ್ ಖುರೇಷಿ(Amir Qureshi) ಮಾತನಾಡಿ, ಎರಡು ವರ್ಷಗಳ ಅಂತರದ ನಂತರ ತಾವು ಅಂತರರಾಷ್ಟ್ರೀಯ ಪ್ರವಾಸಿಗರಿಂದ ಹೊಸ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿರುವುದಾಗಿ ಹೇಳಿದರು. ಸೆಪ್ಟೆಂಬರ್‌ವರೆಗೆ ಮುಂಗಡ ಬುಕಿಂಗ್‌ಗಳು ಬರಲು ಪ್ರಾರಂಭಿಸಿವೆ ಎಂದು ಅವರು ತಿಳಿಸಿದರು. ಆಶಾದಾಯಕವಾಗಿ, ಕೋವಿಡ್ ಸಾಂಕ್ರಾಮಿಕವು ಮತ್ತೆ ಹೆಚ್ಚಾಗದಿದ್ದರೆ, ಕಳೆದ ಎರಡು ವರ್ಷಗಳಲ್ಲಿ ಆಗ್ರಾ ಪ್ರವಾಸೋದ್ಯಮದಿಂದ ಉಂಟಾದ ನಷ್ಟವನ್ನು ಮುಂದಿನ 6 ತಿಂಗಳೊಳಗೆ ಭರಿಸಬಹುದು. ಇದು ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ ಮುಂದಿನ ಪ್ರವಾಸಿ ಋತುವನ್ನು ಸುಧಾರಿಸುತ್ತದೆ ಎಂದು ಅಮೀರ್ ಖುರೇಷಿ ಹೇಳಿದರು