ಲಿಮಿಟೆಡ್ ಬಜೆಟ್‌ನಲ್ಲಿ ವಿಶ್ವ ಪರ್ಯಟನೆ ಮಾಡುವುದು ಹೇಗೆ?

By Suvarna News  |  First Published Dec 24, 2019, 9:46 AM IST

ಜಗತ್ತನ್ನು ಸುತ್ತುವ, ಹೊಸ ಹೊಸ ಅನುಭವಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಬಯಕೆ ಯಾರಿಗಿರುವುದಿಲ್ಲ ಹೇಳಿ? ಆದರೆ, ಸಮಯ ಹಾಗೂ ಹಣದ ಸಮಸ್ಯೆಯಿಂದಾಗಿ ಬಹುತೇಕರ ಈ ಕನಸು ಕನಸಾಗೇ ಉಳಿಯುತ್ತದೆ. 


ಹೌಸ್ ಸಿಟ್ಟಿಂಗ್ 

ವಿದೇಶಗಳಲ್ಲಿ, ವಿಶೇಷವಾಗಿ ಯೂರೋಪ್‌ನಲ್ಲಿ ಹೌಸ್ ಸಿಟ್ಟಿಂಗ್ ಅಭ್ಯಾಸವಿದೆ. ಇಲ್ಲೆಲ್ಲ ನೀವು ಎಂಥದೇ ಹೋಟೆಲ್‌ನಲ್ಲಿ ಉಳಿದುಕೊಂಡರೂ, ಮತ್ತೊಬ್ಬರೊಂದಿಗೆ ಕೋಣೆಯನ್ನು ಶೇರ್ ಮಾಡಿಕೊಂಡರೂ ಒಂದು ರಾತ್ರಿಗೆ 20 ಡಾಲರ್‌ಗಿಂತ ಕಡಿಮೆ ವೆಚ್ಚ ಮಾಡದಿರಲು ಸಾಧ್ಯವೇ ಇಲ್ಲ. ಅದೇ ಯಾರದ್ದಾದರೂ ಮನೆಯಲ್ಲಿ ಉಳಿದುಕೊಂಡರೆ? ಅರೆ, ಪರಿಚಿತರು ಇರಬೇಕಲ್ಲ ಸ್ವಾಮಿ ಎಂದ್ರಾ? 

Latest Videos

undefined

ಪರಿಚಿತರು ಇರಲೇಬೇಕೆಂದೇನಿಲ್ಲ. ಬದಲಿಗೆ ಯಾರಾದರೂ ಸ್ಥಳೀಯರು ಮನೆಯಿಂದ ಹೊರ ಹೋದಾಗ ಅವರ ಮನೆಯಲ್ಲಿ ಹೌಸ್ ಸಿಟ್ಟಿಂಗ್ ಮಾಡಿದರಾಯಿತು. ಅಂದರೆ, ಅವರ ಮನೆಯಲ್ಲಿ ಉಳಿದುಕೊಂಡು ಅದನ್ನು ನಿಮ್ಮದೇ ಮನೆ ಎಂಬಂತೆ ನೋಡಿಕೊಂಡರಾಯ್ತು. ಇದರಿಂದ ಇಬ್ಬರಿಗೂ ಲಾಭವಿದೆ. ನಿಮಗೆ ಬಿಟ್ಟಿಯಾಗಿ ಉಳಿಯಲು ಸ್ಥಳವಾಯಿತು. ಅದಕ್ಕೆ ಬದಲಾಗಿ  ಅವರಿಗೆ ಕಾವಲಿಗೆ ಜನವೋ ಅಥವಾ ಅವರ ಸಾಕುಪ್ರಾಣಿಗಳನ್ನು ನೋಡಿಕೊಳ್ಳುವುದೋ, ಮನೆಗೆಲಸವನ್ನು ಮಾಡುವುದೋ ಮಾಡಿದರಾಯಿತು. ಕೆಲವರು ಇದಕ್ಕಾಗಿ ಹಣವನ್ನೂ ನೀಡುತ್ತಾರೆ. ಇದು ಸಣ್ಣ ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಬಹಳ ಆರಾಮದಾಯಕವಾಗುತ್ತದೆ. ಇದರಿಂದ ನಿಮ್ಮ ಟ್ರಾವೆಲ್‌ನ ಹೋಟೆಲ್ ಖರ್ಚು ಮಿಗಿಸಬಹುದು. 

ವಾಲಂಟಿಯರಿಂಗ್

ಕೆಲವೊಂದು ಎನ್‌ಜಿಒದ ವಾಲಂಟಿಯರ್ ಆಗಿ ಬೇರೆ ಬೇರೆ ದೇಶಗಳಿಗೆ ಹೋಗಿ ಅಲ್ಲಿನ ಬಡಮಕ್ಕಳಿಗೆ, ಹಿಂದುಳಿದವರಿಗೆ ಸಹಾಯ ಮಾಡುವುದರಿಂದ ನಿಮ್ಮಲ್ಲಿ ಒಂದು ಸಾರ್ಥಕ ಭಾವ ಹುಟ್ಟುತ್ತದಷ್ಟೇ ಅಲ್ಲ, ನಿಮ್ಮ ಆಹಾರ ಹಾಗೂ ವಸತಿ ಖರ್ಚನ್ನು ಸಂಸ್ಥೆಯೇ ಭರಿಸುತ್ತದೆ. ಅಪರೂಪದಲ್ಲಿ ನಿಮ್ಮ ರೌಂಡ್ ಟ್ರಿಪ್ ಟಿಕೆಟನ್ನು ಕೂಡಾ ಸಂಸ್ಥೆಯೇ ಭರಿಸುತ್ತದೆ. ಆದರೆ, ಸಾಮಾನ್ಯವಾಗಿ ಇಂಥ ಆಫರ್ ಪಡೆಯಲು ಕನಿಷ್ಠ ಒಂದೆರಡು  ವರ್ಷಗಳ ಬದ್ಧತೆಯನ್ನು ನೀವು ಆ ಸಂಸ್ಥೆಗೆ ತೋರಿಸಬೇಕು. 

ಡಬ್ಲೂಡಬ್ಲೂಒಒಎಫ್(WWOOF!) 

ವರ್ಲ್ಡ್ ವೈಡ್ ಆಪರ್ಚುನಿಟೀಸ್ ಆನ್ ಆರ್ಗ್ಯಾನಿಕ್ ಫಾರ್ಮ್ಸ್ ಎಂಬುದು ಜಗತ್ತಿನ ರೈತರ ನೆಟ್ವರ್ಕ್. ಇದು ದೈಹಿಕ ಶ್ರಮಕ್ಕಾಗಿ ಜನರನ್ನು ಬೇಡುತ್ತದೆ. ಈ ಕೆಲಸಕ್ಕಾಗಿ ನಿಮಗೆ ಹಣ ನೀಡುವುದಿಲ್ಲವಾದರೂ ನಿಮ್ಮ ಊಟ ವಸತಿಗಳನ್ನು ನೋಡಿಕೊಳ್ಳಲಾಗುತ್ತದೆ. ಈ ರೀತಿ ಟ್ರಾವೆಲ್ ಮಾಡಲು ನಿಮಗೆ ಆಸಕ್ತಿ ಇದ್ದಲ್ಲಿ, ನೀವು ಯಾವ ದೇಶಕ್ಕೆ ಹೋಗಬೇಕೆಂದುಕೊಂಡಿದ್ದೀರೋ ಅಲ್ಲಿಗೆ ಹೋಗಲು WWOOF ಸಂಸ್ಥೆಯನ್ನು ಸಂಪರ್ಕಿಸಿ. 

ಬೇಗ ಬುಕ್ ಮಾಡಿ

ಎಲ್ಲಿಗೇ ಹೋಗುವುದಾದರೂ ಬಹಳ ಮುಂಚಿತವಾಗಿ ಬುಕ್ ಮಾಡಿದಲ್ಲಿ ಸಾಕಷ್ಟು ಹಣ ಉಳಿಸಬಹುದು. ಇನ್ನು ಕಡಿಮೆ ಟಿಕೆಟ್ ದರ ಇರುವ ವಿಮಾನಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಈ ದರ ಇನ್ನಷ್ಟು ಅಗ್ಗವಾಗುತ್ತದೆ. ಕೆಲವೊಮ್ಮೆ ಈ ವಿಮಾನಗಳಲ್ಲಿ ಟಿಕೆಟ್ ದರಕ್ಕಿಂತ ಟ್ಯಾಕ್ಸ್ ದರವೇ ಹೆಚ್ಚಿರುತ್ತದೆ! ಇಂಥದನ್ನು ಬುಕ್ ಮಾಡಿಕೊಂಡರೆ ಟಿಕೆಟ್ ದರದಲ್ಲಿ ಅರ್ಧದಷ್ಟು ಉಳಿಸಬಹುದು.

ತಾಜ್‌ ಮಹಲ್ ಆಯ್ತು ಈಗ ವೈಟ್‌ಹೌಸ್‌ ರಹಸ್ಯವೂ ಬಯಲಾಯ್ತು!

ಕೌಚ್‌ ಸರ್ಫಿಂಗ್

ಇತ್ತೀಚಿನ ವರ್ಷಗಳಲ್ಲಿ ಇದು ದೊಡ್ಡ ಟ್ರೆಂಡ್ ಆಗುತ್ತಿದೆ. ಇದರಲ್ಲಿ ಯಾರು ಬೇಕಿದ್ದರೂ ಟ್ರಾವೆಲ್ಲರ್‍‌ಗಳು ತಮ್ಮ ಮನೆಗೆ ಬಂದು ಉಳಿಯಬಹುದೆಂದು ರಿಜಿಸ್ಟರ್ ಮಾಡಬಹುದು. ಇದೇ ಕಾರಣಕ್ಕಾಗಿಯೇ ಕೌಚ್‌ಸರ್ಫಿಂಗ್ ವೆಬ್‌ಸೈಟ್ ವಿನ್ಯಾಸಪಡಿಸಲಾಗಿದೆ. ಇದರಲ್ಲಿ ಯಾರೊಬ್ಬರೂ ಯಾರಿಗೂ ಹಣ ನೀಡಬೇಕಾಗಿಲ್ಲ. ಹೊಸ ಹೊಸ ಜನರನ್ನು ಭೇಟಿಯಾಗುವ ಬಯಕೆ ಇರುವವರು ಹೀಗೆ ರಿಜಿಸ್ಟರ್ ಮಾಡುತ್ತಾರೆ. 

ನಿಧಾನವೇ ಪ್ರಧಾನ

ನೀವು ಎಷ್ಟು ನಿಧಾನವಾಗಿ ಟ್ರಾವೆಲ್ ಮಾಡುತ್ತೀರೋ ಅಷ್ಟು ಖರ್ಚು ಕಡಿಮೆಯಾಗುತ್ತದೆ. ಅಂದರೆ ನಡೆದುಕೊಂಡು ಹೋಗುವುದು ಸಂಪೂರ್ಣ ಫ್ರೀ. ಬುಲೆಟ್ ಟ್ರೇನ್ ಬದಲು ಲಾಂಗ್ ಬಸ್ ತೆಗೆದುಕೊಂಡರೆ ಮತ್ತಷ್ಟು ಕಡಿಮೆಯಾಗುತ್ತದೆ. ವಿಮಾನದ ಬದಲು ರೈಲನ್ನು ಆರಿಸಿಕೊಂಡರೆ ಖರ್ಚು ಕಡಿಮೆಯಾಗುತ್ತದೆ. ವಿಮಾನದಲ್ಲಿ ಒಂದು ಅತ್ಯುತ್ತಮ ಡೀಲ್ ಸಿಗದ ಹೊರತು ಸ್ವಲ್ಪ ನಿಧಾನದ ವಾಹನ ಆಯ್ಕೆ ಮಾಡಿಕೊಳ್ಳಬಹುದು. ನಿರ್ಧಾರ ತೆಗೆದುಕೊಳ್ಳುವಾಗ ಹೆಚ್ಚು ಸ್ಮಾರ್ಟ್ ಆಗಿರಿ. 

ಹಣದ ಮೌಲ್ಯ ಕಡಿಮೆ ಇರುವಲ್ಲಿ ಹೋಗಿ

ಥೈಲ್ಯಾಂಡ್‌ನಲ್ಲಿ ನೂರು ಡಾಲರ್‌ಗೆ ಇರುವಷ್ಟು ಬೆಲೆ ಬ್ರಿಟನ್‌ನಲ್ಲಿ ಇರುವುದಿಲ್ಲ. ಹಾಗಾಗಿ, ಎಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚನ್ನು ನಿಭಾಯಿಸಬಹುದೋ ಅಂಥ ದೇಶಗಳನ್ನು ಆಯ್ಕೆ ಮಾಡಿಕೊಳ್ಳಿ. 

click me!