ರಜೆ ಮುಗಿಯಿತು, ನಾಳೆ ಆಫೀಸ್‍ಗೆ ಹೋಗಬೇಕಲ್ಲ ಎಂದು ಕೊರಗುವವರಿಗೆ 9 ಟಿಪ್ಸ್!

By Suvarna News  |  First Published Dec 21, 2019, 12:55 PM IST

ರಜೆ ಅಂದ್ರೆ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟನೇ. ಆದ್ರೆ ರಜೆ ಪ್ರಾರಂಭವಾಗುವಾಗ ಇರುವ ಖುಷಿ ರಜೆ ಮುಗಿಯುವಾಗ ಇರುವುದಿಲ್ಲ. ಮನಸ್ಸಿನಲ್ಲಿ ಏನೋ ಕಳವಳ, ಬೇಸರ ಮನೆ ಮಾಡಿರುತ್ತದೆ. ಇದಕ್ಕೆ ಪೋಸ್ಟ್ ವ್ಯಾಕೇಷನ್ ಬ್ಲ್ಯೂಸ್ ಎನ್ನುತ್ತಾರೆ. ಹೊಸ ವರ್ಷದ ಪ್ರಾರಂಭದಲ್ಲಿ ಅನೇಕರು ಇದನ್ನು ಅನುಭವಿಸುವುದು ಗ್ಯಾರಂಟಿ. ಯಾಕೆ ಅಂತೀರಾ? ನೀವೇ ಓದಿ


ಅಯ್ಯೋ ಒಂದು ವಾರದ ರಜೆ ಇಷ್ಟು ಬೇಗ ಮುಗಿಯಿತಾ? ನಾಳೆ ಆಫೀಸ್‍ಗೆ ಹೋಗಬೇಕಲ್ಲ. ಇನ್ನು ಮತ್ತೆ ಇಂಥ ಲಾಂಗ್ ಲಿವ್ ಸಿಗೋದು ಯಾವಾಗಲೋ ಎಂಬ ಚಿಂತೆ ಸುದೀರ್ಘ ರಜೆಯನ್ನು ಎಂಜಾಯ್ ಮಾಡಿ ಮತ್ತೆ ಕೆಲಸಕ್ಕೆ ಮರಳುವವರ ಮನದಲ್ಲಿ ಮನೆ ಮಾಡಿರುತ್ತದೆ. ಮಕ್ಕಳಿಗೆಲ್ಲ ಕ್ರಿಸ್‍ಮಸ್ ರಜೆ ಈಗಾಗಲೇ ಪ್ರಾರಂಭವಾಗಿದ್ದು, ದೊಡ್ಡವರು ಕೂಡ ಕೆಲಸಕ್ಕೆ ರಜೆ ಹಾಕಿ ಮಸ್ತಿ ಮಾಡುವ ಮೂಡ್‍ನಲ್ಲಿದ್ದಾರೆ.

ವಯನಾಡ್‌ನಲ್ಲಿ ಎರಡು ದಿನದಲ್ಲಿ ಏನೆಲ್ಲ ನೋಡಬಹುದು?

Tap to resize

Latest Videos

ಲಾಂಗ್ ಲೀವ್ ಹಾಕಿ ಜಾಲಿ ಟ್ರಿಪ್‍ಗೆ ಹೋಗಿ ಹೊಸ ವರ್ಷಕ್ಕೆ ಮತ್ತೆ ಆಫೀಸ್‍ಗೆ ಮರಳಲು ನೀವು ಕೂಡ ಈಗಾಗಲೇ ಸಿದ್ಧತೆ ಮಾಡಿಕೊಂಡಿರಬಹುದು. ಈಗೇನೂ ಖುಷಿ ಖುಷಿಯಿಂದ ಹೋಗುತ್ತೀರಿ, ಆದರೆ ಮರಳಿ ಆಫೀಸ್‍ಗೆ ಬರುವಾಗ ರಚ್ಚೆ ಹಿಡಿಯುವ ನಿಮ್ಮ ಮನಸ್ಸನ್ನು ನಿಯಂತ್ರಿಸುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್.

1. ರಜೆ ಮುಗಿಯುವುದಕ್ಕೆ 2 ದಿನ ಮುಂಚಿತವಾಗಿಯೇ ಪ್ರವಾಸದಿಂದ ಮರಳಿ: ಬಹುತೇಕರು ರಜೆ ಹಾಳಾಗಬಾರದು ಎಂಬ ಕಾರಣಕ್ಕೆ ರಜೆ ಪ್ರಾರಂಭವಾಗುವ ದಿನವೇ ಪ್ರವಾಸಕ್ಕೆ ಹೊರಟರೆ ಮತ್ತೆ ಮರಳಿ ಬರುವುದು ರಜೆ ಮುಗಿಯುವ ದಿನವೇ. ಇದರಿಂದ ಪ್ರವಾಸದ ಆಯಾಸವನ್ನು ಕಳೆಯಲು ಹೆಚ್ಚಿನ ವಿಶ್ರಾಂತಿ ಸಿಗುವುದಿಲ್ಲ. ಜೊತೆಗೆ ಪ್ರವಾಸದ ಮೂಡ್‍ನಿಂದ ಮನಸ್ಸು ಇನ್ನೂ ಆಚೆಗೆ ಬಂದಿರುವುದಿಲ್ಲ. ಹೀಗಾಗಿ ಮನಸ್ಸು ನಾಳೆಯ ಬ್ಯುಸಿ ದಿನಚರಿಗೆ ಹೊಂದಿಕೊಳ್ಳಲು ಹಿಂದೇಟು ಹಾಕುತ್ತದೆ. ಅದೇ ನೀವು ರಜೆ ಮುಗಿಯಲು ಎರಡು ದಿನ ಬಾಕಿಯಿರುವಾಗಲೇ ಮನೆಗೆ ಹಿಂತಿರುಗಿದರೆ ಮತ್ತೆ ನಿತ್ಯದ ಬದುಕಿಗೆ ಹೊಂದಿಕೊಳ್ಳಲು ಸಮಯ ಸಿಗುತ್ತದೆ. ಮನಸ್ಸು ಕೂಡ ತಿಳಿಯಾಗುವ ಜೊತೆಗೆ ನಾಳೆಯ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧಗೊಳ್ಳುತ್ತದೆ.

2. ವಿಶ್ರಾಂತಿ ಪಡೆಯಿರಿ: ಸುತ್ತಾಟದಿಂದ ದಣಿದ ದೇಹಕ್ಕೆ ವಿಶ್ರಾಂತಿಯ ಅಗತ್ಯವಿರುತ್ತದೆ. ದೇಹ ದಣಿದಿರುವಾಗ ಮನಸ್ಸು ಪ್ರಫುಲ್ಲತೆಯಿಂದ ಕೂಡಿರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಮನಸ್ಸು ನಾಳೆಯ ಕೆಲಸಕ್ಕೆ ಇಂದೇ ಪ್ರತಿರೋಧವನ್ನೊಡ್ಡುತ್ತದೆ. ಆದಕಾರಣ ಪ್ರವಾಸಕ್ಕೆ ಯೋಜನೆ ರೂಪಿಸುವಾಗ ವಿಶ್ರಾಂತಿಗೂ ಸಮಯ ಮೀಸಲಿಡಬೇಕು. ಪ್ರವಾಸದಿಂದ ಬಂದ ಬಳಿಕ ಚೆನ್ನಾಗಿ ನಿದ್ರೆ ಮಾಡಿ.

ಸಿಂಹಳೀಯರ ನಾಡಲ್ಲಿ ಭಾರತೀಯ ಪತ್ರಕರ್ತರು!

3. ಫೋಟೋಗಳನ್ನು ವೀಕ್ಷಿಸಿ: ಪ್ರವಾಸದ ಫೋಟೋಗಳನ್ನು ವೀಕ್ಷಿಸಿ. ಇದರಿಂದ ನೀವು ಕಳೆದ ಸುಂದರ ಕ್ಷಣಗಳು ಮನಸ್ಸಿನ ಪರದೆಯ ಮೇಲೆ ಮೂಡಿ ಖುಷಿ ನೀಡುತ್ತವೆ. ಮನಸ್ಸು ನಿರಾಳವಾಗುತ್ತದೆ. ಈ ಸುಮಧುರ ನೆನಪುಗಳೊಂದಿಗೆ ಆಫೀಸ್‍ಗೆ ತೆರಳಲು ಸಿದ್ಧತೆ ನಡೆಸಿ.

4. ಬಟ್ಟೆಗಳನ್ನು ಮರಳಿ ವಾರ್ಡ್‍ರೋಪ್‍ಗೆ ಸೇರಿಸಿ: ನೀವು ಪ್ರವಾಸಕ್ಕೆ ಕೊಂಡು ಹೋದ ಬಟ್ಟೆಗಳನ್ನು ಒಗೆದು ಮಡಚಿ ಮರಳಿ ವಾರ್ಡ್‍ರೋಪ್ ಒಳಗಿಡಿ. ಇದು ಸ್ವಲ್ಪ ಕಷ್ಟದ ಕೆಲಸವೆನಿಸಿದರೂ ಮುಗಿದ ಬಳಿಕ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಅಲ್ಲದೆ, ನಾಳೆಯಿಂದ ಪ್ರಾರಂಭವಾಗುವ ಬಿಡುವಿಲ್ಲದ ದಿನಚರಿಯಲ್ಲಿ ಅಗತ್ಯವಾದ ಬಟ್ಟೆಗಳು ಸಿಗದೆ ಕಿರಿಕಿರಿಯಾಗುವುದು ತಪ್ಪುತ್ತದೆ. 

5. ನಾಳೆ ಆಫೀಸ್‍ಗೆ ಹಾಕುವ ಡ್ರೆಸ್‍ಗೆ ಇಸ್ತ್ರಿ ಮಾಡಿ: ನಾಳೆ ಆಫೀಸ್‍ಗೆ ಹಾಕಿಕೊಂಡು ಹೋಗುವ ಡ್ರೆಸ್‍ಗೆ ಇಂದೇ ಇಸ್ತ್ರಿ ಹಾಕಿಡಿ. ಇದರಿಂದ ನಾಳೆ ಬೆಳಗ್ಗೆ ಆಫೀಸ್‍ಗೆ ಹೊರಡುವ ಸಮಯದಲ್ಲಿ ಡ್ರೆಸ್ ಹುಡುಕುವ, ಇಸ್ತ್ರಿ ಹಾಕುವ ಗಡಿಬಿಡಿ ಇರುವುದಿಲ್ಲ.

6. ಬ್ಯಾಗ್ ಸಿದ್ಧಪಡಿಸಿ: ಆಫೀಸ್‍ಗೆ ನೀವು ಕೊಂಡು ಹೋಗುವ ಬ್ಯಾಗ್ ಅನ್ನು ಸಿದ್ಧಪಡಿಸಿಡಿ. ಲ್ಯಾಪ್‍ಟಾಪ್, ಚಾರ್ಜರ್ ಸೇರಿದಂತೆ ನೀವು ಕೊಂಡುಹೋಗುವ ಎಲ್ಲ ವಸ್ತುಗಳನ್ನು ಇದರಲ್ಲಿ ಹಾಕಿಡಿ. ಇದರಿಂದ ಬೆಳಗ್ಗೆ ಎದ್ದು ಆ ವಸ್ತುಗಳು ಎಲ್ಲಿವೆ ಎಂದು ಹುಡುಕಬೇಕಾದ ಅಗತ್ಯವಿರುವುದಿಲ್ಲ.

ಸೌಂದರ್ಯವೇ ಧರೆಗಿಳಿದಂತೆ: ಹಿಮದ ಹೊದಿಕೆ ಹೊದ್ದ ಹಿಮಾಚಲ!

7. ನಾಳೆಯ ತಿಂಡಿಗೆ ಇಂದೇ ಸಿದ್ಧತೆ ಮಾಡಿ: ಮಹಿಳೆಯರು ನಾಳೆ ಬೆಳಗ್ಗೆ ಎದ್ದು ಯಾವ ತಿಂಡಿ ಮಾಡಬೇಕು ಎಂದು ಯೋಚಿಸುತ್ತ ಕೂತರೆ ಆಫೀಸ್‍ಗೆ ತಡವಾಗಬಹುದು. ಹೀಗಾಗಿ ಹಿಂದಿನ ದಿನವೇ ಏನು ತಿಂಡಿ ಮಾಡಬೇಕು ಎಂಬುದನ್ನು ನಿರ್ಧರಿಸಿ ಅದಕ್ಕೆ ಸಿದ್ಧತೆ ಮಾಡಿಟ್ಟರೆ ಬೆಳಗ್ಗೆ ಒತ್ತಡ ಕಡಿಮೆಯಾಗುತ್ತದೆ.

8. ಮುಂದಿನ ರಜೆ ಬಗ್ಗೆ ಯೋಚಿಸಿ: ಮನಸ್ಸು ಆಫೀಸ್‍ಗೆ ಹೋಗಲು ಒಲ್ಲೆ ಎನ್ನುತ್ತಿರುವಾಗ ಅದನ್ನು ದಾರಿಗೆ ತರಲು ಮುಂದಿನ ರಜೆ ಬಗ್ಗೆ ಯೋಚಿಸಿ. ಇನ್ನೇನೂ ನೋಡನೋಡುತ್ತ ಭಾನುವಾರ ಬರುತ್ತದೆ ಎಂದು ಯೋಚಿಸುವುದರಿಂದ ಮನಸ್ಸಿಗೆ ಸ್ವಲ್ಪ ಸಮಾಧಾನವಂತೂ ಆಗಿಯೇ ಆಗುತ್ತದೆ.

9. ಆಫೀಸ್‍ನಲ್ಲಿ ಖುಷಿ ಕೊಡುವ ಸಂಗತಿಗಳ ಬಗ್ಗೆ ಯೋಚಿಸಿ: ಆಫೀಸ್‍ನಲ್ಲಿ ನಿಮಗೆ ಖುಷಿ ಕೊಡುವ ವಿಚಾರಗಳನ್ನು ನೆನಪಿಸಿಕೊಳ್ಳುವುದರಿಂದ ಮನಸ್ಸು ನಿರಾಳವಾಗುತ್ತದೆ. ಆಫೀಸ್‍ಗೆ ತೆರಳಲು ಪ್ರತಿರೋಧ ತೋರುವುದಿಲ್ಲ.

click me!