ದೋಸ್ತಿ ಸರ್ಕಾರಕ್ಕೆ ಕಂಟಕವಾಗಲಿದೆಯಾ ಸಿಎಂ ನಿರ್ಧಾರ?

By Web DeskFirst Published Oct 18, 2018, 8:04 AM IST
Highlights

ದೋಸ್ತಿ ಪಕ್ಷಗಳ ನಡುವೆ ಮೊದಲು ಬೆಂಕಿಯ ಜ್ವಾಲೆ ಎಬ್ಬಿಸಿದ್ದ ವರ್ಗಾವಣೆ ತಿಕ್ಕಾಟ ಈಗ ಮತ್ತಷ್ಟುತೀವ್ರ​ಗೊ​ಳ್ಳು​ವಂತಹ ನಿರ್ಧಾ​ರ​ವನ್ನು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಕೈಗೊಂಡಿದ್ದಾರೆ.

ಬೆಂಗಳೂರು :  ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳ ನಡುವೆ ಮೊದಲು ಬೆಂಕಿಯ ಜ್ವಾಲೆ ಎಬ್ಬಿಸಿದ್ದ ವರ್ಗಾವಣೆ ತಿಕ್ಕಾಟ ಈಗ ಮತ್ತಷ್ಟುತೀವ್ರ​ಗೊ​ಳ್ಳು​ವಂತಹ ನಿರ್ಧಾ​ರ​ವನ್ನು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಕೈಗೊಂಡಿದ್ದಾರೆ. ಅದು - ಒಂದು ಬಾರಿ ಮುಖ್ಯ​ಮಂತ್ರಿ ಅಧಿ​ಕಾ​ರಿ​ಯೊ​ಬ್ಬ​ರನ್ನು ವರ್ಗಾ​ವಣೆ ಮಾಡಿ​ದರೆ ಆತ ಮಾತೃ ಇಲಾ​ಖೆಯ ಮರುಸ್ಥಳ ನಿಯು​ಕ್ತಿಯ ಆದೇಶದ ಹಂಗಿ​ಲ್ಲದೇ ವರ್ಗಾ​ವ​ಣೆ​ಯಾದ ಹುದ್ದೆ​ಯನ್ನು ವಹಿ​ಸಿ​ಕೊ​ಳ್ಳಬ​ಹು​ದು.

ಮುಖ್ಯ​ಮಂತ್ರಿ​ಯ​ವ​ರಿಗೆ ಇಂತ​ಹ​ದ್ದೊಂದು ಪರ​ಮಾ​ಧಿ​ಕಾ​ರ​ವನ್ನು ನೀಡು​ವ ಸುತ್ತೋ​ಲೆ​ಯನ್ನು ಮಂಗ​ಳ​ವಾರ ರಾಜ್ಯ ಸರ್ಕಾರ ಹೊರ​ಡಿ​ಸಿದೆ. ಇನ್ನುಮುಂದೆ ಮುಖ್ಯ​ಮಂತ್ರಿ​ಯ​ವರು ಯಾರನ್ನೇ ವರ್ಗಾವಣೆ ಮಾಡಿ ಆದೇಶಿಸಿದರೂ ಅಂತಹ ಅಧಿಕಾರಿ ನೇರವಾಗಿ ಕಾರ್ಯಸ್ಥಳಕ್ಕೆ ವರದಿ (ವ​ರ್ಕ್ ರಿಪೋ​ರ್ಟ್‌) ಮಾಡಿಕೊಳ್ಳಬಹುದು. ಇದಕ್ಕೆ ಮಾತೃ ಇಲಾಖೆಯಿಂದ ಮರುಸ್ಥಳ ನಿಯುಕ್ತಿ ಆದೇಶ ಪಡೆಯುವ ಅಗತ್ಯವಿಲ್ಲ ಎಂದು ಸುತ್ತೋಲೆ ಹೊರ​ಡಿ​ಸ​ಲಾ​ಗಿ​ದೆ.

ಆ ಮೂಲಕ ಕಾಂಗ್ರೆಸ್‌ ಸಚಿವರ ಇಲಾಖೆಗಳಲ್ಲಿನ ಅಧಿಕಾರಿಗಳನ್ನು ತಮ್ಮ ವಿವೇಚನೆಗೆ ಬಂದಂತೆ ವರ್ಗಾವಣೆ ಮಾಡಲು ಇದ್ದ ಅಡ್ಡಿಯನ್ನು ನಿವಾ​ರಿ​ಸಿ​ಕೊಂಡಿ​ದ್ದಾರೆ. ಇದು ಕಾಂಗ್ರೆಸ್‌ ಸಚಿವರ ಕೆಂಗಣ್ಣಿಗೆ ಕಾರಣವಾಗಿದ್ದು, ಮುಂದಿನ ಸಮ​ನ್ವಯ ಸಮಿತಿ ಸಭೆ​ಯಲ್ಲಿ ಈ ವಿಚಾ​ರ​ವನ್ನು ಪ್ರಧಾ​ನ​ವಾಗಿ ಪ್ರಸ್ತಾ​ಪಿ​ಸಲು ನಿರ್ಧ​ರಿ​ಸಿ​ದ್ದಾ​ರೆ.

ಏಕೆ ಈ ಸುತ್ತೋ​ಲೆ:  ಮೊದಲು ಲೋಕೋಪಯೋಗಿ ಸಚಿವರಾದ ಎಚ್‌.ಡಿ.ರೇವಣ್ಣ ಅವರು ಮುಖ್ಯಮಂತ್ರಿಗಳ ಮೂಲಕ ಕಾಂಗ್ರೆಸ್‌ ಸಚಿವರ ವ್ಯಾಪ್ತಿಗೆ ಬರುವ ಅಧಿಕಾರಿಗಳನ್ನು ಏಕಾಏಕಿ ವರ್ಗಾವಣೆ ಮಾಡಿದ್ದರು. ಈ ಮೂಲಕ ದೋಸ್ತಿ ಪಕ್ಷಗಳ ನಡುವೆ ಉಂಟಾದ ವೈಮನಸ್ಸು ಇಂದಿಗೂ ಮುಂದುವರೆದಿದೆ. ಮುಖ್ಯಮಂತ್ರಿಗಳು ಕಾಂಗ್ರೆಸ್‌ ಸಚಿವರ ಗಮನಕ್ಕೆ ತಾರದೆ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಸಂಬಂಧಪಟ್ಟಸಚಿವರು ವರ್ಗಾವಣೆಗೊಂಡ ಸ್ಥಳಕ್ಕೆ ಹೋಗಿ ಕಾರ್ಯ ವರದಿ ಮಾಡಿಕೊಳ್ಳಲು ಅಗತ್ಯವಿರುವ ಮರುಸ್ಥಳ ನಿಯುಕ್ತಿ ಆದೇಶವನ್ನು ಅಧಿ​ಕಾ​ರಿಗೆ ನೀಡುತ್ತಿರಲಿಲ್ಲ. (ಪ್ರಸ್ತುತ ಯಾವುದೇ ಅಧಿ​ಕಾರಿಯನ್ನು ಸಿಎಂ ವರ್ಗಾ​ವಣೆ ಮಾಡಿ, ಅದನ್ನು ಡಿಪಿ​ಆರ್‌ ಮೂಲಕ ಆದೇಶ ಹೊರ​ಡಿ​ಸಿ​ದರೂ ಆತ ಹೊಸ ಹುದ್ದೆ ವಹಿ​ಸಿ​ಕೊ​ಳ್ಳಲು ತಮ್ಮ ಮಾತೃ ಇಲಾ​ಖೆ​ಯಿಂದ ಮರು ನಿಯುಕ್ತಿ ಆದೇಶ ಪಡೆ​ದು​ಕೊಂಡು ಕಾರ್ಯ ವರದಿ ಮಾಡಿ​ಕೊ​ಳ್ಳ​ಬೇ​ಕಿತ್ತು).

ಈ ಅಡ್ಡಿ​ಯನ್ನು ಇದೀಗ ಹೊಸ ಸುತ್ತೋಲೆ ಮೂಲಕ ನಿವಾ​ರಿ​ಸಿ​ಕೊ​ಳ್ಳ​ಲಾ​ಗಿದೆ. ತನ್ಮೂ​ಲಕ ಮುಖ್ಯ​ಮಂತ್ರಿಗೆ ವರ್ಗಾ​ವ​ಣೆಯ ಪರ​ಮಾ​ಧಿ​ಕಾರ ಲಭ್ಯ​ವಾ​ದಂತೆ ಆಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು ಮಂಗಳವಾರ ಹೊರಡಿಸಿರುವ ಈ ಸುತ್ತೋಲೆ ಪ್ರಕಾರ, ವರ್ಗಾವಣೆ ವಿಷಯದಲ್ಲಿ ಯಾರ ಅಂಕೆಯೂ ಇಲ್ಲದೆ ಸರ್ವಾಧಿಕಾರ ಸಾಧಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮುಂದೆ ತಾವು ವರ್ಗಾವಣೆ ಮಾಡಿದ ಯಾವುದೇ ಅಧಿಕಾರಿಯು ನೇರವಾಗಿ ವರ್ಗಾವಣೆಗೊಂಡ ಸ್ಥಳಕ್ಕೆ ಹೋಗಿ ಕಾರ್ಯವರದಿ ಮಾಡಿಕೊಳ್ಳಬಹುದು ಎಂಬ ಅಂಶ ಸುತ್ತೋಲೆಯಲ್ಲಿದೆ.

ಸುತ್ತೋಲೆ ಪ್ರಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಅನುಮೋದನೆ ನೀಡುತ್ತಿದ್ದಾರೆ. ಹೀಗಾಗಿ ವರ್ಗಾವಣೆ ಅಧಿಸೂಚನೆಯ ಆಧಾರದ ಮೇಲೆ ಅಧಿಕಾರಿಗಳು ವರ್ಗಾವಣೆಗೊಂಡ ಸ್ಥಳಕ್ಕೆ ನೇರವಾಗಿ ಕಾರ್ಯವರದಿ ಮಾಡಿಕೊಳ್ಳಬಹುದು. ಇದಕ್ಕೆ ಸಂಬಂಧಪಟ್ಟಇಲಾಖೆಗಳು ಮರುಸ್ಥಳ ನಿಯುಕ್ತಿ ಆದೇಶ ನೀಡುವ ಅಗತ್ಯವಿಲ್ಲ. ಇದರಿಂದ ಮರುಸ್ಥಳ ನಿಯುಕ್ತಿಗೊಳಿಸಲು ಆಗುತ್ತಿದ್ದ ವಿಳಂಬ ಇಲ್ಲದಂತಾಗಲಿದೆ. ಈ ಮೂಲಕ ಅಧಿಕಾರಿಗಳ ಸೇವೆಯನ್ನು ಉಪಯೋಗಿಸಿಕೊಳ್ಳಲು ಇದ್ದ ತೊಡಕು ನಿವಾರಣೆ ಆಗಲಿದೆ ಎಂದು ಹೇಳಲಾಗಿದೆ.

ಏನಿತ್ತು ನಿಯಮ?

ಅಧಿಕಾರಿಗಳ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ ಬಳಿಕ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಪಿಆರ್‌) ವರ್ಗಾವಣೆ ಆದೇಶ ಹೊರಡಿಸುತ್ತಿತ್ತು. ಆ ಬಳಿಕ, ಸಂಬಂಧಪಟ್ಟಇಲಾಖೆಯಿಂದ ನಿಯೋಜನಾ ಪತ್ರ ಪಡೆದು ಅಧಿಕಾರಿಯು ವರ್ಗಾವಣೆಗೊಂಡ ಸ್ಥಳದಲ್ಲಿ ಅಧಿಕಾರ ಸ್ವೀಕರಿಸಬೇಕಿತ್ತು. ಒಂದು ವೇಳೆ, ಸಂಬಂಧಪಟ್ಟಇಲಾಖೆಯ ನೇತೃತ್ವ ವಹಿಸಿದವರಿಗೆ (ಸಚಿವರಿಗೆ) ವರ್ಗಾವಣೆ ತೃಪ್ತಿ ಆಗದಿದ್ದರೆ, ನಿಯೋಜನಾ ಪತ್ರ ನೀಡದೆ ವರ್ಗಾವಣೆ ವಿಳಂಬ ಮಾಡಲು ಅವಕಾಶವಿತ್ತು.

ಬದಲಾವಣೆ ಏನು?

ಇದೀಗ ಡಿಪಿಆರ್‌ನಿಂದ ವರ್ಗಾವಣೆ ಆದೇಶ ಹೊರಟ ಬಳಿಕ ಇಲಾಖೆಯಿಂದ ನಿಯೋಜನಾ ಪತ್ರ ಪಡೆಯುವ ನಿಯಮವನ್ನೇ ರದ್ದುಗೊಳಿಸಲಾಗಿದೆ. ಅಂದರೆ, ಮುಖ್ಯಮಂತ್ರಿ ಸಹಿ ಹಾಗೂ ಡಿಪಿಆರ್‌ ಆದೇಶ ಬಳಿಕ ಅಧಿಕಾರಿ ನೇರವಾಗಿ ನಿಯೋಜಿತ ಸ್ಥಳದಲ್ಲಿ ಅಧಿಕಾರ ವಹಿಸಿಕೊಳ್ಳಬಹುದು. ವರ್ಗಾವಣೆ ವಿಳಂಬ ಮಾಡಲು ಅವಕಾಶವೇ ಇಲ್ಲ.

ಏನು ಪರಿಣಾಮ?

ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆಯನ್ನು ಬೇಕುಬೇಕಾದಂತೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಸಚಿವರು, ನಾಯಕರಿಂದ ಆಕ್ಷೇಪವಿತ್ತು. ಇದೀಗ ಮುಖ್ಯಮಂತ್ರಿಯೇ ಅಂತಿಮ ಎಂದಾಗುವುದರೊಂದಿಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಿಎಂ ನಿರ್ಧಾರವನ್ನು ಸಮನ್ವಯ ಸಮಿತಿಯಲ್ಲಿ ಪ್ರಶ್ನಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

click me!