16 ವರ್ಷದಿಂದ ಜೀವವೈವಿಧ್ಯ ಸಮಿತಿ ಇಲ್ಲ!

By Suvarna NewsFirst Published Jun 8, 2020, 3:07 PM IST
Highlights

16 ವರ್ಷದಿಂದ ಜೀವವೈವಿಧ್ಯ ಸಮಿತಿ ಇಲ್ಲ| ವಿಳಂಬ- ಸಮಿತಿ ರಚನೆ ಕಡ್ಡಾಯವಿದ್ದರೂ ರಚನೆಯಾಗಿಲ್ಲ| ಮಾಲಿನ್ಯ ಮಂಡಳಿಗೆ ಮಾಸಿಕ .10 ಲಕ್ಷ ದಂಡ ಕಟ್ಟುತ್ತಿರುವ ರಾಜ್ಯ

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು(ಜೂ.08): ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳ ನಡುವಿನ ಸಮನ್ವ ಕೊರತೆಯಿಂದ ಕಳೆದ 16 ವರ್ಷಗಳಿಂದ ರಾಜ್ಯದಲ್ಲಿ ‘ಜೀವವೈವಿಧ್ಯ ನಿರ್ವಹಣಾ ಸಮಿತಿ’ಗಳು ರಚನೆ ಮಾಡಿಲ್ಲ. ಸರ್ಕಾರದ ಈ ಇಲಾಖೆಗಳ ನಿರ್ಲಕ್ಷ್ಯದ ಪರಿಣಾಮ ಸರ್ಕಾರ ಪ್ರತಿ ತಿಂಗಳು 10 ಲಕ್ಷ ರು.ಗಳಂತೆ ದಂಡ ಪಾವತಿಸ ಬೇಕಾದ ದಂಡನೆಗೆ ಸಿಲುಕಿದೆ.

ಜೈವಿಕ ವೈವಿಧ್ಯ ನಿಯಮ 22(1)ರ ಪ್ರಕಾರ ಎಲ್ಲ ಪಂಚಾಯತ್‌ಗಳಲ್ಲಿ ‘ಜೀವ ವೈವಿಧ್ಯ ನಿರ್ವಹಣಾ ಸಮಿತಿ’ ರಚನೆ ಕಡ್ಡಾಯ. ಅಲ್ಲದೆ, ಈ ಸಂಬಂಧ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ 2004ರ ಏಪ್ರಿಲ್‌ 15ರಂದು ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದೆ. ಅಲ್ಲದೆ, ಈ ಸಂಬಂಧ ಈ ಮಂಡಳಿಯನ್ನು ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ನಿಯಂತ್ರಣ ಹಾಗೂ ಮೇಲ್ವಿಚಾರಣೆ ವಹಿಸಬೇಕಾಗಿದೆ ಎಂದು ಹೇಳಲಾಗಿದೆ. ಆದರೆ, ರಾಜ್ಯ ಈವರೆಗೂ ಸಮಿತಿ ರಚನೆ ಮಾಡಿಲ್ಲ.

ಜೀವವೈವಿಧ್ಯ ನಿರ್ವಹಣಾ ಸಮಿತಿ ರಚನೆ ಮಾಡದ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ. ಸಮಿತಿ ರಚನೆ ವಿಚಾರದದಲ್ಲಿ ಸರ್ಕಾರ ಶೂನ್ಯ ಸಾಧನೆ ಮಾಡಿದೆ. ಈ ನಿರ್ಲಕ್ಷ್ಯ ತೋರಿರುವುದಕ್ಕೆ ಸಮಿತಿ ರಚನೆಯಾಗುವವರೆಗೂ ಪ್ರತಿ ತಿಂಗಳು 10 ಲಕ್ಷ ರು.ಗಳ ದಂಡ ವಿಧಿಸಿದ್ದು, ಈ ದಂಡದ ಮೊತ್ತವನ್ನು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಲು ಸೂಚಿಸಿದೆ.

ಏನಿದು ಜೀವವೈವಿಧ್ಯ ನಿರ್ವಹಣಾ ಸಮಿತಿ?:

ಜೈವಿಕ ವೈವಿಧ್ಯ ಅಧಿನಿಯಮಗಳ ಪ್ರಕಾರ ಪ್ರತಿ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಜೀವವೈವಿಧ್ಯ ನಿರ್ವಹಣಾ ಸಮಿತಿ ರಚನೆಯಾಗಬೇಕು. ಈ ಸಮಿತಿ ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ‘ಜೀವವೈವಿಧ್ಯ ಸಂರಕ್ಷಣೆ, ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಜೀವವೈವಿಧ್ಯ ದಾಖಲಾತಿ ತಯಾರಿಸುವುದು, ಜೀವಿಗಳ ಆವಾಸ ಸ್ಥಾನಗಳ ಗುರುತಿಸುವಿಕೆ ಮತ್ತು ಅವುಗಳ ಸಂರಕ್ಷಣೆ, ಸ್ಥಳೀಯ ವನ್ಯತಳಿ, ನಾಟಿ ತಳಿ, ಕೃಷಿ ತಳಿಗಳ ಸಂರಕ್ಷಣೆ, ಸ್ಥಳೀಯ ಸಾಕು ಪ್ರಾಣಿಗಳ ಸಂರಕ್ಷಣೆ, ಸೂಕ್ಷ್ಮಾಣುಜೀವಿಗಳ ಹಾಗೂ ಜೈವಿಕ ಸಂಪನ್ಮೂಲಗಳ ಸಂಬಂಧಿತ ಜ್ಞಾನ ಮತ್ತು ಮಾಹಿತಿಗಳನ್ನು ದಾಖಲು ಮಾಡಬೇಕು.

ಅಲ್ಲದೆ, ಆಯಾ ಪಂಚಾಯಿತ್‌ ವ್ಯಾಪ್ತಿಗೆ ಬರುವ ಅರಣ್ಯ ಭೂಮಿ, ಕೃಷಿ ಜಮೀನು, ಸಂರಕ್ಷಿತ ಅರಣ್ಯ ಪ್ರದೇಶ, ಅರಣ್ಯ ಸಂಪತ್ತು, ಗಿಡ-ಮರ, ಹುಳು-ಜಂತು, ಪ್ರಾಣಿ-ಪಕ್ಷಿ ಇವುಗಳ ವಿವಿಧ ಪ್ರಬೇಧ ಮತ್ತು ತಳಿಗಳ ಮಾಹಿತಿ, ಔಷಧೀಯ ಗಿಡಮೂಲಿಕೆಗಳ ವಿವರ, ಪಾರಂಪರಿಕ ತಾಣ, ಗುಡಿ-ಗುಂಡಾರಗಳ ಇತಿಹಾಸದ ಜೊತೆಗೆ ಪ್ರಸಕ್ತ ಅಂಕಿ-ಅಂಶಗಳನ್ನು ಈ ದಾಖಲಾತಿ ಮಾಡಬೇಕು.

ಜೊತೆಗೆ, ಈ ಸಮಿತಿ ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ‘ಜನತಾ ಜೀವವೈವಿಧ್ಯ ದಾಖಲಾತಿ (ಪಿಬಿಆರ್‌) ತಯಾರಿಸಬೇಕು. ಇದರಲ್ಲಿ ಆಯಾ ಗ್ರಾಮ ಪಂಚಾಯತ್‌ನ ಜೀವವೈವಿಧ್ಯತೆಯ ಮಾಹಿತಿ ಹಾಗೂ ಅಂಕಿ-ಅಂಶಗಳನ್ನು ನಮೂದಿಸಿರಬೇಕು ಎಂದು ನಿಯಮ ಇದೆ. ಆದರೆ, ಈವರೆಗೂ ಸಮಿತಿ ರಚನೆಯಾಗಿಲ್ಲ.

ಜೀವವೈವಿಧ್ಯ ನಿರ್ವಹಣಾ ಸಮಿತಿ ಕೆಲ ದಿನಗಳಲ್ಲಿ ಮಾಡಿ ಮುಗಿಸಲು ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟುಕಾಲಾವಕಾಶ ಬೇಕು. ಈ ಅಂಶ ನ್ಯಾಯಾಲಯದ ಗಮನಕ್ಕೆ ತರಬೇಕು. ಸಮಿತಿಗಳ ರಚನೆಗೆ ವೇಗ ನೀಡಿದ್ದು, ಮುಂದಿನ ಒಂದು ವರ್ಷದಲ್ಲಿ ಸಮಿತಿಗಳು ರಚನೆಯಾಗಲಿವೆ.

- ಅನಂತ ಹೆಗಡೆ ಆಶೀಸರ, ರಾಜ್ಯ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ

click me!