ಏಕಾಏಕಿ ಲಾಕ್‌ಡೌನ್‌ ತೆರವಾದರೆ ಅಪಾಯ!

By Kannadaprabha NewsFirst Published Apr 23, 2020, 7:53 AM IST
Highlights

ಏಕಾಏಕಿ ಲಾಕ್‌ಡೌನ್‌ ತೆರವಾದರೆ ಅಪಾಯ!| ಮುನ್ನೆಚ್ಚರಿಕೆ ಇಲ್ಲದೆ ಜನ ಜೀವನ ಸಹಜ ಸ್ಥಿತಿಗೆ ಮರಳಿದರೆ ಸಮಸ್ಯೆ ಕಟ್ಟಿಟ್ಟಬುತ್ತಿ| ಐಐಎಸ್ಸಿ, ಟಾಟಾ ಇನ್‌ಸ್ಟಿಟ್ಯೂಟ್‌ ವರದಿ| ನಗರವೊಂದರಲ್ಲೇ 21 ಸಾವಿರ ಮಂದಿ ಸಾಯುವ ಸಾಧ್ಯತೆ| ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ರಾಜಿ ಬೇಡ- ಎಚ್ಚರಿಕೆ

ಬೆಂಗಳೂರು(ಏ.23): ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ಬೆಂಗಳೂರು ಮಹಾನಗರದಲ್ಲಿ ಮೇ 3ರ ಬಳಿಕ ಏಕಾಏಕಿ ಲಾಕ್‌ಡೌನ್‌ ತೆರವುಗೊಳಿಸಿ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಸಹಜ ಜೀವನಕ್ಕೆ ಅವಕಾಶ ನೀಡಿದರೆ 2ನೇ ಹಂತದ ಕೊರೋನಾ ಸೋಂಕಿನ ಹರಡುವಿಕೆ ಶುರುವಾಗಲಿದೆ.

ಅಲ್ಲದೆ, ಮೇ 3ರ ನಂತರ ಲಾಕ್‌ಡೌನ್‌ ತೆರವುಗೊಳಿಸಿ ಯಾವುದೇ ಎಚ್ಚರಿಕೆ ಕ್ರಮ ವಹಿಸದಿದ್ದರೆ ಜುಲೈ ಅಂತ್ಯದ ವೇಳೆಗೆ ಬೆಂಗಳೂರು ನಗರ ಒಂದರಲ್ಲೇ ಸುಮಾರು 21 ಸಾವಿರ ಮಂದಿ ಸಾವಿಗೀಡಾಗುವ ಅಪಾಯ ಇದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಾಗೂ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸಚ್‌ರ್‍ ನಡೆಸಿರುವ ಅಧ್ಯಯನದ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಗರ್ಭಿಣಿಯರಿಗೆ, 5 ವರ್ಷದೊಳಗಿನ ಮಕ್ಕಳಿಗೆ ಇಂದಿನಿಂದ ಚುಚ್ಚುಮದ್ದು

ಹೀಗಾಗಿ ಮೇ 3ರ ಬಳಿಕ ಏಕಾಏಕಿ ಲಾಕ್‌ಡೌನ್‌ ತೆರವುಗೊಳಿಸಬಾರದು. ಹಂತ-ಹಂತವಾಗಿ ಲಾಕ್‌ಡೌನ್‌ ಸಡಿಲಗೊಳಿಸಿದ ಬಳಿಕವೂ ಸೋಂಕಿತರ ಸಂಪರ್ಕಗಳ ಕಟ್ಟುನಿಟ್ಟಿನ ಪತ್ತೆ, ಐಸೊಲೇಷನ್‌, ಕ್ವಾರಂಟೈನ್‌ ಕ್ರಮಗಳನ್ನು ಮುಂದುವರಿಸಬೇಕು. ಸಾಮಾಜಿಕ ಅಂತರ ಕಾಪಾಡುವಲ್ಲಿ ರಾಜಿಯಾಗದೆ, ಹಿರಿಯ ನಾಗರಿಕರ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ಶಾಲಾ-ಕಾಲೇಜುಗಳ ಸ್ಥಗಿತವನ್ನು ಸೂಕ್ತ ಸಮಯದವರೆಗೆ ಮುಂದುವರಿಸಬೇಕು. ತುರ್ತು ಇಲ್ಲದ ಕಚೇರಿಗಳ ಸ್ಥಗಿತ ಇನ್ನಷ್ಟುದಿನ ಮುಂದುವರಿಯಬೇಕು. ಅನಿವಾರ್ಯ ಸೇವೆಗಳಿಗೆ ಸರಿ-ಬೆಸೆ ಮಾದರಿಯಲ್ಲಿ ಅವಕಾಶ ನೀಡಬೇಕು. ಇಲ್ಲದಿದ್ದರೆ ಬೆಂಗಳೂರಿನ ಸೋಂಕು ಹಾಗೂ ಸಾವಿನ ಪ್ರಮಾಣ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದೆ.

ಉಭಯ ಸಂಸ್ಥೆಗಳ 18 ಮಂದಿ ವಿಜ್ಞಾನಿಗಳು ಸಿದ್ಧಪಡಿಸಿರುವ ವರದಿಯಲ್ಲಿ ಮುಂಬೈ ಹಾಗೂ ಬೆಂಗಳೂರಿನ ಕೊರೋನಾ ಸಾವುಗಳ ಭವಿಷ್ಯದ ಬಗ್ಗೆ ಅಂದಾಜಿಸಿದ್ದಾರೆ. ವಿವಿಧ ಮಾನದಂಡಗಳನ್ನು ಆಧರಿಸಿ ಐಐಎಸ್‌ಸಿ ಎಲೆಕ್ಟ್ರಿಕಲ್‌ ಕಮ್ಯುನಿಕೇಷನ್‌ ವಿಭಾಗದ ವಿಜ್ಞಾನಿ ರಾಜೇಶ್‌ ಸುಂದರನ್‌ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಬೆಂಗಳೂರಿನಲ್ಲಿ ಲಾಕ್‌ಡೌನ್‌ ಅನಿರ್ದಿಷ್ಟಾವಧಿಗೆ ಮುಂದುವರಿಸಿದರೆ ಜುಲೈ ವೇಳೆಗೆ 30 ಮಂದಿ ಮಾತ್ರ ಸಾವನ್ನಪಬಹುದು. ಆದರೆ, ಲಾಕ್‌ಡೌನ್‌ ತೆರವುಗೊಳಿಸಿ ಯಾವುದೇ ಎಚ್ಚರಿಕೆ ಕ್ರಮ ಕೈಗೊಳ್ಳದೆ ಸಹಜ ಜೀವನಕ್ಕೆ ಅವಕಾಶ ನೀಡಿದರೆ ಸುಮಾರು 21,200 ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ. ಇದು ಅಂದಾಜು ಮಾತ್ರವೇ ಆಗಿದ್ದು ಪರಿಸ್ಥಿತಿ, ಕ್ರಮಗಳ ಆಧಾರದ ಮೇಲೆ ಸಂಖ್ಯೆ ಬದಲಾಗುತ್ತದೆ. ಹೀಗಾಗಿ ಇದು ಅಂತಿಮವಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.

ಇಂದಿನಿಂದ ಮಾನವನ ಮೇಲೆ ಕೊರೋನಾ ಲಸಿಕೆ ಪ್ರಯೋಗ!

ಅನಿರ್ದಿಷ್ಟಾವಧಿ ಲಾಕ್‌ಡೌನ್‌, ಏ.20ರವರೆಗಿನ ಲಾಕ್‌ಡೌನ್‌ ಹಾಗೂ ಮೇ 3ರವರೆಗಿನ ಲಾಕ್‌ಡೌನ್‌ ಸೇರಿ ಮೂರು ಹಂತದ ಲಾಕ್‌ಡೌನ್‌ನ ಪರಿಣಾಮಗಳನ್ನು ವರದಿಯಲ್ಲಿ ವಿವರಿಸಲಾಗಿದೆ. ಲಾಕ್‌ಡೌನ್‌ ಸೋಂಕಿತರ ಸಂಪರ್ಕಿತರ ಪತ್ತೆ, ಪ್ರತ್ಯೇಕಗೊಳಿಸುವಿಕೆ ಹಾಗೂ ಚಿಕಿತ್ಸಾ ಸಿದ್ಧತೆಗಳಿಗೆ ಸಾಕಷ್ಟುಸಮಯ ನೀಡುತ್ತದೆ. ಹೀಗಾಗಿ ದೇಶದಲ್ಲಿ ಸೋಂಕು ನಿಯಂತ್ರಣದಲ್ಲಿದೆ. ಏಪ್ರಿಲ್‌ 18ರ ವೇಳೆಗೆ ದೇಶದಲ್ಲಿ 12,289 ಮಂದಿಗೆ ಸೋಂಕು ತಗುಲಿದ್ದು 488 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾ.9ರಿಂದಲೇ ಎಲ್‌ಕೆಜಿ-ಯುಕೆಜಿ ಮಕ್ಕಳ ಶಾಲೆ ಸ್ಥಗಿತಗೊಳಿಸಿದ್ದು ಸೇರಿದಂತೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳಲಾಯಿತು. ಶೇ.90ರಷ್ಟುಸೋಂಕಿತರು, ಸಂಪರ್ಕಗಳ ಮೇಲೆ ನಿಗಾ ಇಟ್ಟು ನಿರ್ವಹಣೆ ಮಾಡಲಾಯಿತು.

40 ದಿನ ಲಾಕ್‌ಡೌನ್‌ ಅಗತ್ಯ

ಮೇ 3ರ ಲಾಕ್‌ಡೌನ್‌ ಬಳಿಕ 26 ದಿನಗಳ ಲಾಕ್‌ಡೌನ್‌ ನಡೆಸಿ ಬಳಿಕ ಸಹಜ ಜೀವನಕ್ಕೆ ಮರಳಿದರೂ (ಎಲ್‌ಡಿ26-ಸಿಐ) ಸುಮಾರು 8 ಸಾವಿರ ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ. ಮೇ 3ರ ಬಳಿಕ 40 ದಿನಗಳ ಲಾಕ್‌ಡೌನ್‌ ನಡೆಸಿ ಬಳಿಕ ಸಹಜ ಜೀವನಕ್ಕೆ ಅವಕಾಶ ನೀಡಿ ಪ್ರಕರಣಗಳ ಪ್ರತ್ಯೇಕಿಸುವುದು ಮುಂದುವರಿಸಿದರೆ ಸಾವಿನ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಈ ಮುನ್ನೆಚ್ಚರಿಕೆಗಳನ್ನು ಮಂದುವರೆಸಬೇಕು ಎಂದು ಸಲಹೆ ನೀಡಲಾಗಿದೆ.

ಸಮುದ್ರ ಮಧ್ಯೆ ಅತಂತ್ರ ಸ್ಥಿತಿಯಲ್ಲಿ ಬಾಕಿಯಾಗಿದ್ದ ನೌಕೆ ಮುಂಬೈನಲ್ಲಿ ಲಂಗರು

ಅಧ್ಯಯನದ ಮುಖ್ಯಾಂಶಗಳು

*ಸೋಂಕಿತರ ಸಂಪರ್ಕಗಳ ಕಟ್ಟುನಿಟ್ಟಿನ ಪತ್ತೆ, ಐಸೊಲೇಷನ್‌, ಕ್ವಾರಂಟೈನ್‌ ಅಗತ್ಯ

*ಶಾಲೆ- ಕಾಲೇಜು ತಕ್ಷಣಕ್ಕೆ ತೆರೆಯುವುದು ಬೇಡ

ಅನಗತ್ಯ ಕಚೇರಿಗಳು ಮುಚ್ಚಿರಲಿ

click me!