ಬಿಎಸ್ ವೈ ಆಡಿಯೋ ಬಾಂಬ್ : ತನಿಖೆ ಯಾರಿಂದ..?

Published : Feb 13, 2019, 07:59 AM IST
ಬಿಎಸ್ ವೈ ಆಡಿಯೋ ಬಾಂಬ್ : ತನಿಖೆ ಯಾರಿಂದ..?

ಸಾರಾಂಶ

ಬಿಎಸ್ ಯಡಿಯೂರಪ್ಪ ಆಪರೇಷನ್ ಕಮಲ ಆಡಿಯೋ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದ್ದು ಇದೀಗ ಯಾರಿಂದ ತನಿಖೆಯಾಗಬೇಕು ಎನ್ನುವುದಷ್ಟೇ ಅಂತಿಮವಾಗಬೇಕಿದೆ. 

ವಿಧಾನಸಭೆ :  ಸಾಕಷು ಕುತೂಹಲ ಕೆರಳಿಸಿರುವ ವಿಧಾನಸಭೆ ಸಭಾಧ್ಯಕ್ಷರ ಬಗೆಗಿನ ‘ಆಡಿಯೋ ಬಾಂಬ್‌’ ಪ್ರಕರಣದ ತನಿಖೆಯನ್ನು ಅಂತಿಮವಾಗಿ ಎಸ್‌ಐಟಿಗೆ ವಹಿಸಲಾಗುತ್ತದೆಯೋ ಅಥವಾ ಪ್ರತಿಪಕ್ಷ ಬಿಜೆಪಿ ಬೇಡಿಕೆಯಂತೆ ಸದನ ಸಮಿತಿ ರಚಿಸಲಾಗುತ್ತದೆಯೋ ಎಂಬುದು ಬುಧವಾರ ನಿರ್ಧಾರವಾಗಲಿದೆ.

ತಮ್ಮ ರೂಲಿಂಗ್‌ ಕುರಿತು ಪುನರ್‌ಪರಿಶೀಲನೆ ನಡೆಸುವ ಸಂಬಂಧ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಮನವಿ ಮೇರೆಗೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ಬುಧವಾರ ಬೆಳಗ್ಗೆ 10.30ಕ್ಕೆ ಸದನ ನಾಯಕರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ತನಿಖೆಯ ಸ್ವರೂಪ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.

ಸರ್ಕಾರ ಎಸ್‌ಐಟಿ ತನಿಖೆಗೆ ಅಂಟಿಕೊಂಡಿರುವುದರಿಂದ ಮತ್ತು ಪ್ರತಿಪಕ್ಷ ಬಿಜೆಪಿ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಉಭಯ ಬಣಗಳಿಗೂ ಸಮ್ಮತವಾಗುವಂಥ ಮಧ್ಯದ ಹಾದಿಯೊಂದನ್ನು ಹುಡುಕುವ ಪ್ರಯತ್ನವನ್ನು ಸ್ಪೀಕರ್‌ ಮಾಡಲಿದ್ದಾರೆ. ಅದು ಯಶಸ್ವಿಯಾದಲ್ಲಿ ಬುಧವಾರ ಸದನದ ಕಲಾಪ ಸುಸೂತ್ರವಾಗಿ ಬಜೆಟ್‌ ಮೇಲಿನ ಚರ್ಚೆ ಕೈಗೆತ್ತಿಕೊಳ್ಳುವ ಸಂಭವವಿದೆ. ಒಂದು ವೇಳೆ ವಿಫಲವಾದಲ್ಲಿ ಬಿಜೆಪಿ ಉಗ್ರ ಹೋರಾಟ ನಡೆಸುವ ಸಾಧ್ಯತೆಯಿದೆ.

ಈಗಾಗಲೇ ಪ್ರಕರಣದ ತನಿಖೆಯನ್ನು ಎಸ್‌ಐಟಿ (ವಿಶೇಷ ತನಿಖಾ ತಂಡ) ಮೂಲಕ ನಡೆಸುವಂತೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ಸೋಮವಾರವೇ ಸಲಹೆ ರೂಪದ ರೂಲಿಂಗ್‌ ನೀಡಿದ್ದಾರೆ. ಅದಕ್ಕೆ ಸರ್ಕಾರವೂ ತಕ್ಷಣವೇ ಒಪ್ಪಿಗೆ ಸೂಚಿಸಿದೆ. ಅದರ ಬೆನ್ನಲ್ಲೇ ಬಿಜೆಪಿ ಸದಸ್ಯರು ಎಸ್‌ಐಟಿ ತನಿಖೆ ನಡೆಸುವುದನ್ನು ತೀವ್ರವಾಗಿ ವಿರೋಧಿಸಿ ಕಟುವಾದ ಪದಗಳಲ್ಲಿ ಖಂಡಿಸಿದ್ದರು. ಮಂಗಳವಾರವೂ ಬೆಳಗ್ಗೆಯಿಂದ ಸಂಜೆವರೆಗೂ ಸದನದಲ್ಲಿ ಇದೇ ವಿಷಯವಾಗಿಯೇ ಚರ್ಚೆ ನಡೆಯಿತು. ಬಿಜೆಪಿ ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ. ಬಿಜೆಪಿ ಸದಸ್ಯರು ಹಾಗೂ ಆಡಳಿತಾರೂಢ ಜೆಡಿಎಸ್‌-ಕಾಂಗ್ರೆಸ್‌ ಸದಸ್ಯರ ನಡುವೆ ಈ ಸಂಬಂಧ ಬಿರುಸಿನ ವಾಗ್ವಾದ, ವಾದ-ಪ್ರತಿವಾದ ನಡೆಯಿತು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್ಸಿನ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರು ಹಾಗೂ ಆಡಳಿತಾರೂಢ ಪಕ್ಷಗಳ ಸದಸ್ಯರು ಎಸ್‌ಐಟಿ ಮೂಲಕವೇ ತನಿಖೆ ನಡೆಯಲಿ, ತಪ್ಪು ಮಾಡಿಲ್ಲ ಎಂದಾದಲ್ಲಿ ಯಾವುದೇ ತನಿಖೆ ಎದುರಿಸಲು ಯಾಕೆ ವಿರೋಧಿಸುತ್ತೀರಿ ಎಂದು ಕುಟುಕಿದರು. ಆದರೂ ಬಿಜೆಪಿ ಮಾತ್ರ ತನ್ನ ಪಟ್ಟನ್ನು ಸಡಿಲಿಸಲಿಲ್ಲ.

ಬಿಎಸ್‌ವೈ ಮನವಿಗೆ ಸ್ಪೀಕರ್‌ ಸ್ಪಂದನೆ:  ಸೋಮವಾರ ಕಲಾಪದಲ್ಲಿ ಮೌನಕ್ಕೆ ಶರಣಾಗಿದ್ದ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರು ಮಂಗಳವಾರ ವಿಧಾನಸಭೆಯಲ್ಲಿ ಪ್ರಕರಣದ ಬಗೆಗಿನ ಚರ್ಚೆ ವೇಳೆ ಮೌನ ಮುರಿದು ಮಾತನಾಡಿದರು.

ಸಾಮಾನ್ಯವಾಗಿ ಸದನದಲ್ಲಿ ಪ್ರಮುಖ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಕಲಾಪಕ್ಕೂ ಮೊದಲು ಸಭಾಧ್ಯಕ್ಷರು ವಿರೋಧಪಕ್ಷದ ನಾಯಕರನ್ನೂ ತಮ್ಮ ಕೊಠಡಿಗೆ ಕರೆಸಿ ಚರ್ಚಿಸುವ ಸತ್‌ಸಂಪ್ರದಾಯ ಇದೆ. ಆದರೆ ಈ ಪ್ರಕರಣದಲ್ಲಿ ಸಭಾಧ್ಯಕ್ಷರು ಏಕಾಏಕಿ ಚರ್ಚೆಗೆ ಅವಕಾಶ ಕಲ್ಪಿಸಿ ಎಸ್‌ಐಟಿ ತನಿಖೆಗೆ ವಹಿಸಿದ್ದೀರಿ. ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿಗಳ ಅಡಿಯಲ್ಲೇ ಬರುವ ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಇದನ್ನು ಪುನರ್‌ಪರಿಶೀಲನೆ ನಡೆಸಬೇಕು ಎಂದು ಒತ್ತಾಯ ಮಾಡಿದರು.

ಪ್ರಕರಣದ ತನಿಖೆಗೆ ಯಾವುದೇ ವಿರೋಧ ವ್ಯಕ್ತಪಡಿಸುತ್ತಿಲ್ಲ. ಸಭಾಧ್ಯಕ್ಷರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಎಸ್‌ಐಟಿ ತನಿಖೆಗೆ ವಹಿಸಲು ಸಭಾಧ್ಯಕ್ಷರಿಗೆ ಅಧಿಕಾರ ಇಲ್ಲ. ಹೀಗಾಗಿ ಸದನ ಸಮಿತಿಗೆ ವಹಿಸಬೇಕು. ಈ ಬಗ್ಗೆ ಸಭಾಧ್ಯಕ್ಷರ ಕೊಠಡಿಯಲ್ಲಿ ಚರ್ಚೆ ನಡೆಯಬೇಕು. ಯಾವುದೇ ಚರ್ಚೆ ನಡೆಸದೆ ಬಲಾತ್ಕಾರವಾಗಿ ಎಸ್‌ಐಟಿ ತನಿಖೆಗೆ ಆದೇಶಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಸ್ಪೀಕರ್‌ ರಮೇಶ್‌ ಕುಮಾರ್‌, ಫೆ.6ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ಕಲಾಪ ಶುರುವಾಗುವ ಮೊದಲು ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಗೆ ತಮ್ಮನ್ನು ಆಹ್ವಾನಿಸಲಾಗಿತ್ತು. ಆದರೆ, ತಮ್ಮ ಪಕ್ಷದ ಮುಖ್ಯ ಸಚೇತಕರು ತಾವು ಬಿಎಸಿಗೆ ಹಾಜರಾಗುವುದಿಲ್ಲ ಎಂಬ ಮಾಹಿತಿ ನೀಡಿದ್ದರು. ಸಂಸದೀಯ ವ್ಯವಸ್ಥೆಯ ಇತಿಹಾಸದಲ್ಲಿ ಬಿಎಸಿ ಬಹಿಷ್ಕರಿಸುವ ಸಂಪ್ರದಾಯವಿಲ್ಲ. ನೀವು ಬಹಿಷ್ಕರಿಸುವ ಮೂಲಕ ಸಭಾಧ್ಯಕ್ಷನಾದ ನನ್ನ ಮನಸಿಗೆ ಘಾಸಿ ಉಂಟುಮಾಡಿದ್ದೀರಿ. ನಾನು ನೋವು ನುಂಗಿಕೊಂಡಿದ್ದೆ. ಅದನ್ನು ಹೇಳಲಾಗಿರಲಿಲ್ಲ. ಹೀಗಾಗಿ ಚರ್ಚೆಗೆ ಕರೆದಿಲ್ಲ ಎಂದು ಸಮರ್ಥಿಸಿಕೊಂಡರು.

ಈ ವೇಳೆ ಮಾತು ಮುಂದುವರೆಸಿದ ಯಡಿಯೂರಪ್ಪ, ನಾವು ಪಕ್ಷದ ವೈಯಕ್ತಿಕ ಕಾರಣಗಳಿಗೆ ಬಿಎಸಿಗೆ ಭಾಗವಹಿಸಿರಲಿಲ್ಲ. ಬಿಎಸಿಗೆ ಭಾಗವಹಿಸದೆ ಇರುವುದಕ್ಕೂ ಈ ಪ್ರಕರಣಕ್ಕೂ ಸಬಂಧವಿಲ್ಲ. ನಮ್ಮನ್ನು ಕರೆದು ಮಾತನಾಡಿ ಸದನ ಸಮಿತಿಗೆ ವಹಿಸಬೇಕು. ಎಸ್‌ಐಟಿಗೆ ವಹಿಸಲು ನಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೀಗಾಗಿ ಸಭಾಧ್ಯಕ್ಷರಾದ ರಮೇಶ್‌ ಕುಮಾರ್‌ ಅವರು ಬುಧವಾರ ಬೆಳಗ್ಗೆ 10.30 ಗಂಟೆಗೆ ಪ್ರಕರಣದ ಬಗ್ಗೆ ಸಭಾಧ್ಯಕ್ಷರ ಕೊಠಡಿಯಲ್ಲಿ ಚರ್ಚೆಗೆ ಸಭೆ ಏರ್ಪಡಿಸುವುದಾಗಿ ಘೋಷಿಸಿದರು. ಜತೆಗೆ ಬೆಳಗ್ಗೆ 11.30 ಗಂಟೆಯಿಂದ ಕಲಾಪ ಶುರುವಾಗಲಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರಲ್ಲಿ ಪಾಸ್‌ಪೋರ್ಟ್ ಮಾಡಲು ಎಲ್ಲೂ ಹೋಗಬೇಕಿಲ್ಲ, ಮನೆ ಬಾಗಿಲಿಗೆ ಬರಲಿದೆ ವ್ಯಾನ್
ಬೆಂಗಳೂರಿನ 2ನೇ ಏರ್‌ಪೋರ್ಟ್‌, ಗುರುತಿಸಿರೋ ಈ 3 ಸ್ಥಳಗಳಲ್ಲಿ ಯಾವುದು ಬೆಸ್ಟ್? ಅಧ್ಯಯನಕ್ಕೆ ಟೆಂಡರ್ ಕರೆದ ಸರ್ಕಾರ!