ರೇಪ್‌ ಪದ ಬಳಕೆ ಬೇಡ: ಕಾಂಗ್ರೆಸ್‌ಗೆ ಬಾಲಚಂದ್ರ ಮನವಿ!

By Kannadaprabha NewsFirst Published Mar 24, 2021, 7:23 AM IST
Highlights

ರೇಪ್‌ ಪದ ಬಳಕೆ ಬೇಡ: ಕಾಂಗ್ರೆಸ್‌ಗೆ ಬಾಲಚಂದ್ರ ಮನವಿ| ಯುವತಿ ಎಲ್ಲಿಯೂ ದೂರು ನೀಡಿಲ್ಲ| ತನಿಖೆ ಮುಗಿಯುವವರಿಗೆ ಸಹಕರಿಸಿ

ಬೆಂಗಳೂರು(ಮಾ.24): ಸಿ.ಡಿ. ಪ್ರಕರಣಕ್ಕೆ ಸಂಬಂಧಪಟ್ಟಂತೆ ರೇಪ್‌ (ಅತ್ಯಾಚಾರ) ಪದವನ್ನು ಬಳಕೆ ಮಾಡದಂತೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ಗೆ ಮನವಿ ಮಾಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿದೆ. ಎಸ್‌ಐಟಿ ತನಿಖೆಯು ಬೇಗ ನಡೆಯಲಿದೆ. ಆದರೆ, ನ್ಯಾಯಾಂಗ ತನಿಖೆ ಸುಮಾರು ಎರಡು ವರ್ಷದವರೆಗೆ ಎಳೆಯಬಹುದು. ಅದಷ್ಟುಬೇಗ ತನಿಖೆ ಮುಗಿದರೆ ಎಲ್ಲರಿಗೂ ಒಳ್ಳೆಯದು. ತನಿಖೆಯಾಗುವವರೆಗೆ ಪ್ರತಿಪಕ್ಷದವರು ಸಹಕರಿಸಬೇಕು. ಅತ್ಯಾಚಾರ ಪದ ಬಳಕೆ ಮಾಡದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೋರುತ್ತೇನೆ ಎಂದರು.

ಯುವತಿ ನೇರವಾಗಿ ಬಂದು ಹೇಳಿಕೆ ನೀಡಬಹುದಿತ್ತು. ತನಗಾದ ಅನ್ಯಾಯದ ಬಗ್ಗೆ ತಿಳಿಸಬಹುದಿತ್ತು. ಆದರೆ, ಕಾಣದ ಸ್ಥಳದಲ್ಲಿ ಕುಳಿತು ಹೇಳಿಕೆ ಬಿಡುಗಡೆ ಮಾಡಲಾಗಿದೆ. ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಯಾರೋ ಬಲವಂತದಿಂದ ವಿಡಿಯೋ ಮಾಡಿರಬಹುದಲ್ಲ. ದೂರುದಾರ ದಿನೇಶ್‌ ಕಲ್ಲಹಳ್ಳಿ ದೂರು ನೀಡಿ ವಾಪಸ್‌ ಪಡೆದುಕೊಂಡರು. ಯುವತಿ ಕೂಡ ಎಲ್ಲಿಯೂ ದೂರು ನೀಡಿಲ್ಲ. ಬಲವಂತದಿಂದ ವಿಡಿಯೋ ಮಾಡಿಸಿರುವ ಸಾಧ್ಯತೆಯೂ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

ಸದನದಲ್ಲಿ ಮಾತನಾಡಬೇಕು ಎಂದು ತೀರ್ಮಾನಿಸಿದ್ದೆ. ಆದರೆ, ಕೆಲವರು ಮಾತನಾಡುವುದು ಬೇಡ ಎಂದು ಸಲಹೆ ನೀಡಿದರು. ಯುವತಿಯ ವಿಡಿಯೋ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದಾರೆ. ಆದರೆ, ಯುವತಿ ಸ್ವಂತ ಇಚ್ಛೆಯಿಂದ ಮಾತನಾಡಿದ್ದಾಳಾ ಅಥವಾ ಒತ್ತಾಯಪೂರ್ವಕವಾಗಿ ಮಾಡಿಸಿದ್ದಾರಾ ಎನ್ನುವುದು ಗೊತ್ತಿಲ್ಲ. ಆ ವಿಡಿಯೋದಲ್ಲಿರುವ ದೃಶ್ಯ ಅಸಲಿಯೋ ನಕಲಿಯೋ ಗೊತ್ತಿಲ್ಲ. ಹೀಗಾಗಿ ಎಸ್‌ಐಟಿ ತನಿಖೆ ಮುಗಿಯುವವರೆಗೆ ಪ್ರತಿಪಕ್ಷದವರು ಸಹ ಸಹಕರಿಸಬೇಕು ಎಂದು ಬಾಲಚಂದ್ರ ಹೇಳಿದರು.

click me!