Karnataka Politics : ಅತ್ಯಾಚಾರವನ್ನು ಎಂಜಾಯ್ ಮಾಡಿ ಎಂದ ಕೈ ಶಾಸಕನಿಗೆ ಮಹತ್ವದ ಹೊಣೆ

By Kannadaprabha NewsFirst Published Dec 28, 2021, 9:22 AM IST
Highlights
  • ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ರಮೇಶ್‌ ಅಧ್ಯಕ್ಷ
  •  ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳ ರಚನೆ

 ಬೆಂಗಳೂರು (ಡಿ.28):  ರಾಜ್ಯ ವಿಧಾನ ಮಂಡಲ/ವಿಧಾನಸಭೆಯ (Assembly)  ವಿವಿಧ ಸ್ಥಾಯಿ ಸಮಿತಿಗಳನ್ನು ರಚಿಸಿ, ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ವಿವಿಧ ಜಂಟಿ ಸಮಿತಿಗಳಿಗೆ ಸದ್ಯ ವಿಧಾನ ಸಭೆ ಸದಸ್ಯರನ್ನು ಮಾತ್ರ ನೇಮಕ ಮಾಡಲಾಗಿದೆ. ವಿಧಾನ ಪರಿಷತ್‌ ಸದಸ್ಯರ (MLC)  ನೇಮಕ ಬಾಕಿ ಇದೆ.  ಸಾರ್ವಜನಿಕ ಲೆಕ್ಕಪತ್ರಗಳ ಜಂಟಿ ಸಮಿತಿ (ಪಿಎಸಿ PAC ) ಅಧ್ಯಕ್ಷರನ್ನಾಗಿ ಕಾಂಗ್ರೆಸ್‌ (Congress)  ಸದಸ್ಯ ಕೆ.ಆರ್‌. ರಮೇಶ್‌ ಕುಮಾರ್‌ (KR Ramesh Kumar) , ಸಾರ್ವಜನಿಕ ಉದ್ದಿಮೆಗಳ ಸಮಿತಿ ಅಧ್ಯಕ್ಷರಾಗಿ ಬಿಜೆಪಿ (BJP) ಸದಸ್ಯ ಜಿ.ಎಚ್‌. ತಿಪ್ಪಾರೆಡ್ಡಿ ಹಾಗೂ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಬಿಜೆಪಿ (BJP) ಸದಸ್ಯ ಎಂ.ಪಿ. ಕುಮಾರಸ್ವಾಮಿ (MP Kumaraswamy)  ಅವರನ್ನು ನೇಮಕ ಮಾಡಲಾಗಿದೆ.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಸದಸ್ಯ ಎಸ್‌. ಕುಮಾರ್‌ ಬಂಗಾರಪ್ಪ, ಅಧೀನ ಶಾಸನ ರಚನಾ ಸಮಿತಿ ಅಧ್ಯಕ್ಷರಾಗಿ ಬಿಜೆಪಿಯ ಎಲ್‌.ಎ. ರವಿ ಸುಬ್ರಮಣ್ಯ ಹಾಗೂ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‌ ಸದಸ್ಯ ಸಾ.ರಾ. ಮಹೇಶ್‌ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಕೆ. ಪೂರ್ಣಿಮಾ ಅವರನ್ನು ನೇಮಕ ಮಾಡಲಾಗಿದೆ.

ವಿಧಾನಸಭೆ ಸಮಿತಿಗಳು:  ವಿಧಾನಸಭೆಯ (Karnataka Assembly)  ಅಂದಾಜು ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ (BJP) ಅಭಯ ಪಾಟೀಲ್‌, ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ (BJP)  ಕೆ. ರಘುಪತಿ ಭಟ್‌ ಹಾಗೂ ಗ್ರಂಥಾಲಯ ಸಮಿತಿಯ ಅಧ್ಯಕ್ಷರಾಗಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ (Basavaraj  Horatti)  ಅಧ್ಯಕ್ಷರಾಗಿರುತ್ತಾರೆ.

ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌  ರಾಜ್‌ ಸಂಸ್ಥೆಗಳ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಜಿ. ಸೋಮಶೇಖರ್‌ ರೆಡ್ಡಿ, ಹಕ್ಕು ಬಾಧ್ಯತೆಗಳ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಬಸನಗೌಡ ಆರ್‌. ಪಾಟೀಲ್‌ ಯತ್ನಾಳ, ಖಾಸಗಿ ಸದಸ್ಯರುಗಳ ವಿಧೇಯಕ ನಿರ್ಣಯಗಳ ಸಮಿತಿ, ಅರ್ಜಿಗಳ ಸಮಿತಿ ಹಾಗೂ ವಸತಿ ಸೌಕರ್ಯ ಸಮಿತಿ ಅಧ್ಯಕ್ಷರನ್ನಾಗಿ ವಿಧಾನಸಭೆಯ ಉಪಾಸಭಾಧ್ಯಕ್ಷ ಆನಂದ ಮಾಮನಿ ಅವರನ್ನು ನೇಮಕ ಮಾಡಲಾಗಿದೆ.

ತಮ್ಮ ಹೇಳಿಕೆಗೆ ಕ್ಷಮೆ  ಯಾಚಿಸಿದ ರಮೇಶ್ ಕುಮಾರ್ :  ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ (Belagavi Assembly Session) ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್  (Ramesh Kumar) ಅತ್ಯಾಚಾರವನ್ನು ಸಾಮಾನ್ಯೀಕರಿಸುವ ಹೇಳಿಕೆಯನ್ನು  ನೀಡುವ ಮೂಲಕ ವಿವಾದಕ್ಕೆ ಈಡಾಗಿದ್ದರು. ಇದೀಗ ತನ್ನ ಹೇಳಿಕೆಗೆ ರಮೇಶ್ ಕುಮಾರ್  ಕ್ಷಮೆ ಯಾಚಿಸಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಇನ್ನು ಮುಂದೆ ಇಂತಹ ಪದ ಬಳಸದಂತೆ ಎಚ್ಚರ ವಹಿಸುತ್ತೇನೆ. 'ಅತ್ಯಾಚಾರ!' ಬಗ್ಗೆ ಇಂದಿನ ವಿಧಾನಸಭೆಯಲ್ಲಿ ನಾನು ಮಾಡಿದ ಉದಾಸೀನ ಮತ್ತು ನಿರ್ಲಕ್ಷ್ಯದ ಕಾಮೆಂಟ್ ಗಾಗಿ ಎಲ್ಲರ ಕ್ಷಮೆ ಕೇಳುತ್ತಿದ್ದೇನೆ.  ಲಘುವಾಗಿ ವರ್ತಿಸಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೂ ವಿಷಾದಿಸುವೆ. ದೇಶದ ಮಹಿಳೆಯರ ಭಾವನೆಗಳಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ. ಮುಕ್ತ ಮನಸ್ಸಿನಿಂದ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮಾತ್ರವಲ್ಲ ಈ ಬಗ್ಗೆ ಸದನದಲ್ಲೂ ಶುಕ್ರವಾರ ತಮ್ಮ ಕ್ಷಮೆ ಯಾಚಿಸಿರುವ  ರಮೇಶ್ ಕುಮಾರ್ ಆರಂಭದಲ್ಲೇ ಮಾತು ಶುರು ಮಾಡಿ "ನಿನ್ನೆ ಕಲಾಪ ನಡೆಯುವ ವೇಳೆ ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಗಿತ್ತು. ನಾನೂ ಕೂಡ ಇದನ್ನ ಅನುಭವಿಸ್ತಿದ್ದೇನೆ ಅಂತ ನೋವು ತೋಡಿಕೊಂಡೆ. ನಾನು ಇಂಗ್ಲಿಷ್ ಭಾಷೆಯಲ್ಲಿರೋ ಒಂದು ಮಾತು ಉಲ್ಲೇಖ ಮಾಡಿದೆ ಅಷ್ಟೇ. ಯಾವ ಸಮಯದಲ್ಲಿ ಏನ್ ಹೇಳಿದೆ ಅದು ಹೊರಟು ಹೋಯಿತು. ಹೆಣ್ಣಿಗೆ ಅಪಮಾನ ಮಾಡೋದು ಅಥವಾ ಸದನದ ಗೌರವ ಕಡಿಮೆ ಮಾಡೋದು ನನ್ನ ಉದ್ದೇಶವಾಗಿರಲಿಲ್ಲ. ನನಗೆ ಯಾವುದೇ ಪ್ರತಿಷ್ಠೆ ಇಲ್ಲ. ಕಲಾಪ ನಡೆಯುವಾಗ, ನಾನು ಇಲ್ಲಿ ಉಲ್ಲೇಖ ಮಾಡಿ ಆಡಿದ ಮಾತಿನಿಂದ . ಯಾರಿಗೆ, ಎಲ್ಲೇ ನೋವಾಗಿದ್ರೂ, ಯಾವುದೇ ವರ್ಗದ ಮಹಿಳೆಯರಿಗೆ ನೋವಾಗಿದ್ರೆ, ನಾನು ವಿಷಾಧ ವ್ಯಕ್ತಪಡಿಸುತ್ತೇನೆ. ನಾನು ಕ್ಷಮೆ ಕೇಳುತ್ತೇನೆ" ಎಂದು ಸದನದಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ. 

ನಾವು ಯಾವ ಸನ್ನಿವೇಶದಲ್ಲಿ ಹೇಗೆ ಹೇಳ್ತೀವಿ ಅನ್ನೋದು ನಿರ್ಧಾರವಾಗಲಿದೆ. ನನಗೆ ಯಾರ ಮೇಲೂ ಚಾಲೆಂಜ್ ಮಾಡೋ ಉದ್ದೇಶ ಇಲ್ಲ. ನನ್ನನ್ನು ಸಹ ಅಪರಾಧಿ ಮಾಡಿದ್ದಾರೆ. ನನ್ನಿಂದ ಅಪರಾಧ ಆಗಿದೆ ಅಂತ ತೀರ್ಪೇ ಕೊಟ್ಟಿರೋದ್ರಿಂದ, ನಾನು ಕ್ಷಮೆ ಕೇಳುತ್ತೇನೆ. ಗ್ರಹಚಾರಕ್ಕೆ, ನೀವು ಹೇಳಿದ ಹಾಗೆ ನಾನು ಪ್ರತಿಕ್ರಿಯಿಸಿದೆ. ತಮ್ಮನ್ನೂ ಅಪರಾಧಿ ಮಾಡಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರಿಗೂ ಹೇಳಿದರು.

click me!