
ಮೂಡಬಿದ್ರೆ : ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಅನುಮತಿ ನೀಡಿದರೂ ಕೂಡ ಹಲವು ರೀತಿಯಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಸಾಹಿತಿ ಡಾ. ಮಲ್ಲಿಕಾ ಎಸ್. ಘಂಟಿ ಚಾಟಿ ಬೀಸಿದ್ದಾರೆ.
ಆಳ್ವಾಸ್ ನುಡಿಸಿರಿಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿರುವ ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶಬರಿಮಲೆ ಮಹಿಳಾ ಪ್ರವೇಶದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಿ ನ್ಯಾಯಾಲಯ ಸಂವಿಧಾನದ ಲಿಂಗಸಮಾನತೆ ಎತ್ತಿ ಹಿಡಿದಿದೆ. ಆದರೆ ಇಲ್ಲಿನ ಧಾರ್ಮಿಕ ಸಂವಿಧಾನ ಪ್ರವೇಶಕ್ಕೆ ಅಡ್ಡಿಯಾಗಿದೆ. ಸಮುದಾಯದ ನಂಬಿಕೆ, ಭಾವನೆಗಳು ಇದನ್ನು ವಿರೋಧಿಸಿದಂತೆ ಬಿಂಬಿಸಲಾಗುತ್ತಿದೆ ಎಂದಿದ್ದಾರೆ.
ಅಯ್ಯಪ್ಪ ದೇಗುಲ ಪ್ರವೇಶ ಸಂಪ್ರದಾಯನಿಷ್ಢರ ನಿದ್ದೆಗೆಡಿಸಿದೆ. ಹೀಗಾಗಿ ದೇಶ ಮುನ್ನಡೆಸುವ ಶಕ್ತಿ ಸಂವಿಧಾನಕ್ಕೋ ಅಥವಾ ನಂಬಿಕೆ, ಭಾವನೆಗಳಿಗೋ ಎಂಬ ಪ್ರಶ್ನೆ ಕಾಡುತ್ತಿದೆ. ಋತುಚಕ್ರದ ಕಾರಣಕ್ಕಾಗಿ ಮಹಿಳೆಯರನ್ನು ತಾರತಮ್ಯದಿಂದ ನೋಡುವ ಪುರುಷರು ಋತುಚಕ್ರದ ಅವಧಿಯಲ್ಲಿ ಮಹಿಳೆಯರಿಂದ ದೂರ ಇರಿ ಎಂದು ಹೇಳಿದ್ದಾರೆ.
ಯಾವುದೋ ಕಾಲದ ನಂಬಿಕೆಗಳು ಈ ಕಾಲಕ್ಕೂ ನಿಯಂತ್ರಕಗಳಾಗುವುದರ ಹಿಂದೆ ಬಹುದೊಡ್ಡ ರಾಜಕಾರಣವಿದೆ. ಅದು ಲಿಂಗ ರಾಜಕಾರಣ ಮತ್ತು ಧಾರ್ಮಿಕ ರಾಜಕಾರಣವಾಗಿದೆ. ಋತುಮತಿ ಮಹಿಳೆಯರ ಪ್ರವೇಶದಿಂದ ದೇವಸ್ಥಾನದ ಪಾವಿತ್ರ್ಯತೆ ನಾಶವಾಗುತ್ತದೆ ಎನ್ನುವುದರಲ್ಲಿ ತಾರ್ಕಿಕ ತಾತ್ವಿಕತೆಯಿಲ್ಲ ಎಂದು ಹೇಳಿದ್ದಾರೆ.
ಸಮೂಹ ಸನ್ನಿಗೆ ಒಳಗಾಗುವ ದುರ್ಬಲ ಮನಸ್ಸುಗಳಿಗೆ ಪಕ್ಷಬೇಧ, ಲಿಂಗಬೇಧವಿರುವುದಿಲ್ಲ. ಹೆಂಗಸರು, ಗಂಡಸರು ಗುಡಿ ಪ್ರವೇಶ ವಿರೋಧಿ ಸುವುದರ ಹಿಂದೆ ಕಾಣದ ಕೈಗಳಿರುತ್ತವೆ. ದೇವಾಲಯ, ಚರ್ಚ್, ಮಸೀದಿ ಪ್ರವೇಶ ನಿರಾಕರಣೆ ಪ್ರಜಾಪ್ರಭುತ್ವವನ್ನ ಗೌರವಿಸಿದಂತಾಗುವುದಿಲ್ಲ ಎಂದು ಈ ವೇಳೆ ಚಾಟಿ ಬೀಸಿದ್ದಾರೆ.
ದೇವರುಗಳು, ಧರ್ಮಗಳು ಮುಖವಾಡ ಹಾಕಿಕೊಂಡು ಬೀದಿಯಲ್ಲಿ ಕತ್ತಿ ಮಸೆಯುತ್ತಿರುವುದೇಕೆ..? ಅಮಾಯಕರ ರಕ್ತ ಬೀದಿಯಲ್ಲಿ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ಬರಹಗಾರರ ಮೇಲಿದ್ದು, ಈ ಬಾರಿಯ ನುಡಿಸಿರಿಯ ವಿಶೇಷವೆಂದರೆ ನನ್ನ ಆಯ್ಕೆಯಲ್ಲ, ನನ್ನ ಒಪ್ಪಿಗೆ. ನಾನು ನುಡಿ ಸಿರಿಯಲ್ಲಿ ನಿಂತು ಮಾತನಾಡುತ್ತಿರುವುದಕ್ಕೆ ವಿರೋಧ ಯಾಕೆ ಎಂದು ನಾನು ಕೇಳುವುದಿಲ್ಲ. ಅವರೆಲ್ಲರೂ ನನ್ನ ಸಂಗಾತಿಗಳೇ ಹೀಗಾಗಿ ಅವರನ್ನು ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ