Cyclist Complaint against Coach: ಪತ್ನಿಯಂತೆ ಒಟ್ಟಿಗೇ ಇರು, ನನ್ನ ಜೊತೆ ಮಲಗು ಎಂದ ಕೋಚ್‌!

By Kannadaprabha NewsFirst Published Jun 9, 2022, 8:49 AM IST
Highlights

* ಸೈಕ್ಲಿಂಗ್ ಕೋಚ್ ಮೇಲೆ ಗಂಭೀರ ಆರೋಪ ಮಾಡಿದ ಭಾರತದ ತಾರಾ ಸೈಕ್ಲಿಸ್ಟ್

* ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾಗಿ ಸಾಯ್‌ಗೆ ದೂರು ಸಲ್ಲಿಸಿದ ಸೈಕ್ಲಿಸ್ಟ್

* ಶರ್ಮಾ ತಮ್ಮನ್ನು ಒಂದೇ ಕೋಣೆಯಲ್ಲಿ ಒಟ್ಟಿಗೇ ಮಲಗಲು ಬಲವಂತ ಮಾಡುತ್ತಿದ್ದಾರೆಂದು ಆರೋಪ

ನವದೆಹಲಿ(ಜೂ.09): ವಿದೇಶದಲ್ಲಿ ತರಬೇತಿಗೆ ತೆರಳಿದ್ದ ವೇಳೆ ರಾಷ್ಟ್ರೀಯ ತಂಡದ ಕೋಚ್‌ ಆರ್‌.ಕೆ. ಶರ್ಮಾ (RK Sharma) ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ, ಒಟ್ಟಿಗೇ ಮಲಗಲು ಒತ್ತಾಯಿಸಿದ್ದರು ಎಂದು ತಾರಾ ಸೈಕ್ಲಿಸ್ಟ್‌ ಪಟುವೊಬ್ಬರು ಗಂಭೀರ ಆರೋಪ (Cyclist Complaint against Coach) ಮಾಡಿದ್ದಾರೆ. ಈ ಬಗ್ಗೆ ಸೋಮವಾರ ಭಾರತೀಯ ಸೈಕ್ಲಿಂಗ್‌ ಫೆಡರೇಷನ್‌ಗೆ (ಸಿಎಫ್‌ಐ) ದೂರು ಸಲ್ಲಿಸಿದ್ದಾರೆ.

ತಾರಾ ಸೈಕ್ಲಿಸ್ಟ್‌ ಪಟು ಸಲ್ಲಿಸಿದ್ದ ದೂರಿನಲ್ಲಿ, ‘ಶರ್ಮಾ ತಮ್ಮನ್ನು ಒಂದೇ ಕೋಣೆಯಲ್ಲಿ ಒಟ್ಟಿಗೇ ಮಲಗಲು ಬಲವಂತ ಮಾಡುತ್ತಿದ್ದಾರೆ. ಪತ್ನಿಯಂತೆ ಯಾವಾಗಲೂ ಜೊತೆಗೆ ಇರು ಎಂದು ಹೇಳಿದ್ದರು. ಜೊತೆಗೆ ಮಲಗದಿದ್ದರೆ ರಾಷ್ಟ್ರೀಯ ಕೌಶಲ್ಯ ಕೇಂದ್ರ(ಎನ್‌ಸಿಒಇ)ದಿಂದ ಹೊರಹಾಕುವುದಾಗಿಯೂ ಬೆದರಿಸಿದ್ದರು’ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬಳಿಕ ತನಿಖೆಗೆ ಸಮಿತಿ ರಚಿಸಿದ ಭಾರತೀಯ ಕ್ರೀಡಾ ಪ್ರಾಧಿಕಾರ, ಬುಧವಾರ ಎಲ್ಲಾ ಅಥ್ಲೀಟ್‌ಗಳನ್ನು ಸ್ಲೊವೇನಿಯಾದಿಂದ ತರಬೇತಿ ರದ್ದುಗೊಳಿಸಿ ವಾಪಸ್‌ ಬರುವಂತೆ ಹೇಳಿದೆ. ಅಲ್ಲದೇ, ಶರ್ಮಾ ಅವರೊಂದಿಗಿನ ಒಪ್ಪಂದ ಕೊನೆಗೊಳಿಸಿದೆ.

ಸೈಕ್ಲಿಸ್ಟ್ ದೂರು ನೀಡಿದ ಬೆನ್ನಲ್ಲೇ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌)ಮತ್ತು ಸಿಎಫ್‌ಐ ತನಿಖೆಗೆ ಸಮಿತಿಯನ್ನು ನೇಮಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಸಾಯ್‌, ‘ಸ್ಲೊವೇನಿಯಾದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾಗ ಕೋಚ್‌ ಶರ್ಮಾ ಅವರು ತಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಮಹಿಳಾ ಸೈಕ್ಲಿಸ್ಟ್‌ ದೂರು ನೀಡಿದ್ದಾರೆ’ ಎಂದಿದೆ. ಶರ್ಮಾರನ್ನು ಸಿಎಫ್‌ಐ ಶಿಫಾರಸಿನಂತೆ ಕೋಚ್‌ ಅಗಿ ನೇಮಿಸಲಾಗಿತ್ತು ಎಂದು ಸಾಯ್‌ ಹೇಳಿಕೆ ನೀಡಿದೆ.

ಪ್ರೊ ಲೀಗ್‌: ಬೆಲ್ಜಿಯಂಗೆ ಪ್ರಯಾಣಿಸಿ ಭಾರತ ತಂಡ

ಬೆಂಗಳೂರು: ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ಪುರುಷ ಹಾಗೂ ಮಹಿಳಾ ತಂಡಗಳ ಆಟಗಾರರು ಬುಧವಾರ ಬೆಲ್ಜಿಯಂನ ಬ್ರಸ್ಸೆಲ್ಸ್‌ಗೆ ಪ್ರಯಾಣ ಬೆಳೆಸಿದರು. ಉಭಯ ತಂಡಗಳೂ ಜೂನ್‌ 11 ಮತ್ತು 12ರಂದು ಬೆಲ್ಜಿಯಂ ತಂಡದ ವಿರುದ್ಧ ಸೆಣಸಾಡಲಿದೆ. ಪುರುಷರ ತಂಡ ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ನೆದರ್ಲೆಂಡ್ಸ್‌ ತಂಡ ಮೊದಲ ಸ್ಥಾನ ಕಾಯ್ದುಕೊಂಡಿದೆ. ಮಹಿಳಾ ತಂಡ 8 ಪಂದ್ಯಗಳಲ್ಲಿ 22 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಅರ್ಜೆಂಟೀನಾ ಹಾಗೂ ನೆದೆರ್ಲೆಂಡ್ಸ್ ಮೊದಲೆರಡು ಸ್ಥಾನಗಳಲ್ಲಿವೆ.

ಇಂಡೋನೇಷ್ಯಾ ಮಾಸ್ಟ​ರ್ಸ್‌: ಸಿಂಧು, ಸೆನ್‌ ಶುಭಾರಂಭ

ಪ್ಯಾರಾ ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ 2ನೇ ಚಿನ್ನದ ಪದಕ

ನವದೆಹಲಿ: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದುಕೊಂಡಿದೆ. ಬುಧವಾರ ಶ್ರೀಹರ್ಷ ದೇವರೆಡ್ಡಿ ರಾಮಕೃಷ್ಣ ಅವರು ಮಿಶ್ರ 10 ಮೀ. ಏರ್‌ ರೈಫಲ್‌ನಲ್ಲಿ 253.1 ಅಂಕದೊಂದಿಗೆ ಬಂಗಾರದ ಪದಕ ತಮ್ಮದಾಗಿಸಿಕೊಂಡರು. ಇದರೊಂದಿಗೆ ಅವನಿ ಲೇಖರಾ ಬಳಿಕ 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಎರಡನೇ ಭಾರತೀಯ ಎನಿಸಿಕೊಂಡರು. ಲೇಖರಾ ಅವರು ಮಂಗಳವಾರ ಮಹಿಳೆಯರ 10 ಮೀ. ಏರ್‌ ರೈಫಲ್‌ನಲ್ಲಿ 250.6 ಅಂಕ ಗಳಿಸಿ ತಮ್ಮದೇ ಹೆಸರಲ್ಲಿದ್ದ ಟೋಕಿಯೋದಲ್ಲಿ ನಿರ್ಮಿಸಿದ್ದ 249.6 ಅಂಕಗಳ ವಿಶ್ವ ದಾಖಲೆಯನ್ನು ಮುರಿದಿದ್ದರು.

click me!