ಪ್ರೊ ಕಬಡ್ಡಿ 2019: ಬೆಂಗಳೂರು ಬಳಿಕ ತೆಲುಗು ಟೈಟಾನ್ಸ್ ಪಂದ್ಯವೂ ಶಿಫ್ಟ್?

By Web DeskFirst Published Oct 10, 2018, 10:28 AM IST
Highlights

ಪ್ರೊ ಕಬ್ಡಡಿ 6ನೇ ಆವೃತ್ತಿ ಟೂರ್ನಿ ಹಲವು ಅಡೆ ತಡೆ ಎದುರಾಗಿದೆ. ಬೆಂಗಳೂರು, ಜೈಪುರ ಬಳಿಕ ಇಜೀಗ ಹೈದರಾಬಾದ್ ಚರಣವೂ ಶಿಫ್ಟ್ ಆಗಿದೆ. ಇಷ್ಟೇ ಅಲ್ಲ  ಪ್ಲೇ-ಆಫ್ ಪಂದ್ಯಗಳ ವೇಳಾಪಟ್ಟಿಯಲ್ಲೂ ಬದಲಾವಣೆಯಾಗೋ ಸಾಧ್ಯತೆ ಹೆಚ್ಚಿದೆ.

ಚೆನ್ನೈ(ಅ.10): ಪ್ರೊ ಕಬಡ್ಡಿ,ಭಾರತದಲ್ಲಿ ಕಬಡ್ಡಿ ಕ್ರೀಡೆಗೆ ಹೊಸ ರೂಪ ಕೊಟ್ಟ ಪಂದ್ಯಾವಳಿ. ಕಬಡ್ಡಿ ಜನಪ್ರಿಯತೆ ಹೆಚ್ಚಿದ್ದೆ ಪ್ರೊ ಕಬಡ್ಡಿಯಿಂದ. ಹೆಚ್ಚು ಸಮಸ್ಯೆಯಿಲ್ಲದೆ ಮೊದಲ 5 ಆವೃತ್ತಿಗಳನ್ನು ಕಂಡ ಪ್ರೊ ಕಬಡ್ಡಿ ಲೀಗ್‌ಗೆ 6ನೇ ಆವೃತ್ತಿಯಲ್ಲಿ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿದೆ. 

ಪ್ರಮುಖವಾಗಿ ಆತಿಥ್ಯ ವಹಿಸುವ ನಗರಗಳು ಪದೇ ಪದೇ ಬದಲಾಗುತ್ತಿದ್ದು, ಆಯೋಜಕರು ಹಾಗೂ ಫ್ರಾಂಚೈಸಿಗಳ ತಲೆಬಿಸಿಗೆ ಕಾರಣವಾಗಿದೆ. ಅ.5ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯಾವಳಿ ತಾಂತ್ರಿಕ ಸಮಸ್ಯೆಗಳಿಂದಾಗಿ ಅ.7ಕ್ಕೆ ಆರಂಭಗೊಂಡಿತು. ಆರಂಭದಿಂದಲೇ ಲೀಗ್‌ಗೆ ಸಮಸ್ಯೆ ಎದುರಾಗಿದೆ. 

ಹೈದರಾಬಾದ್ ಚರಣವೂ ಶಿಫ್ಟ್!: ಡಿ.7ರಿಂದ ಹೈದರಾಬಾದ್‌ನ ಗಾಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ತೆಲುಗು ಟೈಟಾನ್ಸ್‌ನ ತವರಿನ ಚರಣ ನಡೆಯಬೇಕಿತ್ತು. ಆದರೆ ಡಿ.7ರಂದೇ ತೆಲಂಗಾಣದಲ್ಲಿ ಚುನಾವಣೆ ನಡೆಯಲಿರುವ ಕಾರಣ, ಭದ್ರತಾ ದೃಷ್ಟಿಯಿಂದ ಚರಣವನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. 

ತಂಡದ ಮೂಲ ವಿಶಾಖಪಟ್ಟಣವೇ ಆದರೂ, ಹೈದರಾಬಾದ್‌ನಲ್ಲಿ ತಂಡಕ್ಕೆ ಸಿಗುವಷ್ಟು ಅಭಿಮಾನಿಗಳ ಬಲ ವಿಶಾಖಪಟ್ಟಣದಲ್ಲಿ ದೊರೆಯುವ ಬಗ್ಗೆ
ಅನುಮಾನಗಳಿವೆ. ಈಗಾಗಲೇ ಜೈಪುರ ಪಿಂಕ್ ಪ್ಯಾಂಥರ್ಸ್‌ನ ತವರು ಪಂದ್ಯಗಳು ಜೈಪುರದಿಂದ ಹರ್ಯಾಣದ ಪಂಚಕುಲಕ್ಕೆ ಸ್ಥಳಾಂತರಗೊಂಡಿದೆ. ಕಳೆದ ಬಾರಿ ನಾಗ್ಪುರವನ್ನು ತವರಾಗಿ ಸ್ವೀಕರಿಸಿದ್ದ ಬೆಂಗಳೂರು ಬುಲ್ಸ್, ಈ ಬಾರಿ ಪುಣೆ ಯಲ್ಲಿ ತವರು ಪಂದ್ಯಗಳನ್ನು ಆಡಲಿದೆ ಎನ್ನಲಾಗಿದೆ.

ಪ್ಲೇ-ಆಫ್ ಪಂದ್ಯಗಳು ಎಲ್ಲಿ?: ಡಿ.20ರಿಂದ ಜ.5ರ ವರೆಗೂ ಪ್ಲೇ-ಆಫ್ ಪಂದ್ಯಗಳು ನಡೆಯಲಿವೆ. ಈ ಮೊದಲು ಪಂದ್ಯಗಳು ಕೊಚ್ಚಿ ಹಾಗೂ ಮುಂಬೈನಲ್ಲಿ ನಿಗದಿಯಾಗಿದ್ದವು. ಆದರೀಗ ತಾಂತ್ರಿಕ ಸಮಸ್ಯೆಯಿಂದ ಪ್ಲೇ-ಆಫ್ ಪಂದ್ಯಗಳು ಸಹ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಪ್ರೊ ಕಬಡ್ಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಥಳಗಳು ಇನ್ನೂ ನಿರ್ಧಾರವಾಗಿಲ್ಲ ಎಂದು ಪ್ರಕಟಿಸಲಾಗಿದೆ. 

ಪರಿಣಾಮವೇನು? : ಕಬಡ್ಡಿ ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರೂ, ಪ್ರತಿ ತಂಡಕ್ಕೆ ತನ್ನ ತವರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿರುತ್ತಾರೆ. ಪ್ರತಿ ವರ್ಷ ತವರು ಬದಲಿಸುತ್ತಿದ್ದರೆ ಅಭಿಮಾನಿಗಳ ಸಂಖ್ಯೆ ಖಂಡಿತವಾಗಿಯೂ ಇಳಿಮುಖಗೊಳ್ಳಲಿದೆ. ಜತೆಗೆ ಫ್ರಾಂಚೈಸಿಗಳಿಗೆ ಸ್ಥಳೀಯ ಪ್ರಾಯೋಜಕರ ಕೊರತೆ ಎದುರಾಗಲಿದೆ. 

ಹಾಗೇ ತವರಿನ ಅಭಿಮಾನಿಗಳ ಎದುರು ಆಡುವುದಕ್ಕೂ ಮತ್ತೊಂದು ನಗರವನ್ನು ತನ್ನ ತವರಾಗಿ ಸ್ವೀಕರಿಸಿ ಅಲ್ಲಿ ಆಡುವುದಕ್ಕೂ ಬಹಳ ವ್ಯತ್ಯಾಸವಿದೆ. ಬೆಂಗಳೂರು ಬುಲ್ಸ್ ಕಳೆದ ಆವೃತ್ತಿಯಲ್ಲಿ ಈ ಸಮಸ್ಯೆ ಎದುರಿಸಿತ್ತು.

ಸ್ಪಂದನ್ ಕಣಿಯಾರ್
ಕನ್ನಡಪ್ರಭ ವಾರ್ತೆ ಚೆನ್ನೈ

click me!